ಕೊಕ್ಕಡ : ಶ್ರೀ ಕ್ಷೇತ್ರ ಸೌತಡ್ಕದಲ್ಲಿ ‘ಸೇವಾಧಾಮ’ ಉದ್ಘಾಟನೆ

 

ಕನ್ಯಾಡಿಯ ಸೇವಾಭಾರತಿ ಸಂಸ್ಥೆಯ ಅಂಗ ಸಂಸ್ಥೆಯಾಗಿ,  ಬೆನ್ನು ಮೂಳೆ ಮುರಿತಕ್ಕೊಳಗಾದವರಿಗೆ ಸಾಮಾಜಿಕ ಪುನಶ್ಚೇತನ ಕೇಂದ್ರವಾದ “ಸೇವಾಧಾಮ” ಇದರ ಉದ್ಘಾಟನೆಯು ಕೊಕ್ಕಡದ ಶ್ರೀಕ್ಷೇತ್ರ ಸೌತಡ್ಕ ದೇವಸ್ಥಾನದ ಎದುರಿನಲ್ಲಿರುವ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಕಟ್ಟಡದಲ್ಲಿ ಸೆ.16 ರಂದು ಉದ್ಘಾಟನೆಗೊಂಡಿತು.
ಮಿಸ್ ವೀಲ್ ಚೆಯರ್ ಇಂಡಿಯಾ 2014 ಸಂಸ್ಥೆಯ ದಂತ ವೈದ್ಯರಾದ ಡಾ| ರಾಜಲಕ್ಷ್ಮಿ ಸೇವಾಧಾಮವನ್ನು ಉದ್ಘಾಟಿಸಿ ಮಾತನಾಡಿ, ಕಷ್ಟಗಳು ಮನುಷ್ಯ ಜೀವನದಲ್ಲಿ ಎದುರಾದಾಗ ಅದನ್ನು ಬಗೆಹರಿಸುವ ಬಗ್ಗೆ ಯೋಚಿಸಬೇಕೆ ವಿನಃ ಕಷ್ಟಗಳ ಬಗ್ಗೆ ಚಿಂತಿಸುತ್ತ ಕೊರಗಬಾರದು. ಸೇವಾಭಾರತಿ ಸಂಸ್ಥೆಯ ಮೂಲಕ ಸಮಾಜದಲ್ಲಿರುವ ಬೆನ್ನುಮೂಳೆ ಮುರಿತಕ್ಕೊಳಗಾಗಿ ಮಲಗಿದಲ್ಲೇ ಇರುವ ಅಶಕ್ತರಿಗಾಗಿ ಸೇವಾಧಾಮವನ್ನು ಇಂದು ಇಲ್ಲಿ ಆರಂಭಿಸುತ್ತಿರುವುದು ಅವರ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸುವಂತಾಗಿದೆ ಎಂದರು.
ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲ್ ರವರು ವಸತಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಭವಿಷ್ಯತ್ ಕಾಲದ ನಿರ್ಮಾಣವನ್ನು ಮಾಡುವ ಕಾರ್ಯವನ್ನು ಸೇವಾಭಾರತಿ ಸಂಸ್ಥೆ ಮಾಡುತ್ತಿದೆ. ತ್ಯಾಗ ಸೇವಾ ಮನೋಭಾವದಿಂದ ಕೂಡಿದ ಸೇವೋಹೀ ಪರಮೋಧರ್ಮ ಅನ್ನುವ ತತ್ವದಡಿಯಲ್ಲಿ ಸ್ವಾರ್ಥರಹಿತ ಚಿಂತನೆಗಳೊಂದಿಗೆ ಬೆನ್ನುಮೂಳೆ ಮುರಿದವರ ಬಾಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಸೇವಾಭಾರತಿ ಸಂಸ್ಥೆಯು ಸೌತಡ್ಕದಂತಹ ಪುಣ್ಯ ಭೂಮಿಯಲ್ಲಿ ಸೇವಾ ಕಾರ್ಯದಂತಹ ಪುಣ್ಯ ಕಾರ್ಯಗಳನ್ನು ನಡೆಸಿ ಮಾದರಿಯಾಗಿದೆ ಎಂದರು.
ಕರ್ನಾಟಕ ಸರಕಾರದ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಫಿಸಿಯೋಥೆರಪಿ ವಿಭಾಗ ಉದ್ಘಾಟಿಸಿ ಮಾತನಾಡಿ ವಿನಾಯಕ ರಾವ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಇಂತಹ ಸೇವಾಕಾರ್ಯಗಳು ದೇವರಿಗೆ ಪ್ರೀತಿ ತರುವ ಪುಣ್ಯ ಕಾರ್ಯಗಳಾಗಿ ರೂಪುಗೊಂಡಿದೆ. ಈ ಭಾಗದ ಹಲವು ಜಿಲ್ಲೆಗಳ ಬೆನ್ನು ಮೂಳೆ ಮುರಿತಕ್ಕೊಳಗಾದ ಸಂತ್ರಸ್ಥರಿಗೆ ಈ ಕೇಂದ್ರವು ಆಸರೆಯಾಗಲಿದೆ ಅನ್ನುವುದೇ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯಾಗಿದೆ ಎಂದರು.
ಕನ್ಯಾಡಿಯ ಸೇವಾಭಾರತಿ ಸಂಸ್ಥೆಯ ವಿನಾಯಕ ರಾವ್ ಕನ್ಯಾಡಿ ಪ್ರಾಸ್ತಾವಿಕ ಮಾತನಾಡಿ ತ್ಯಾಗ ಮತ್ತು ಸೇವೆ ಭಾರತದ ಆತ್ಮ ಎನ್ನುವ ವಿವೇಕಾನಂದರ ನುಡಿಯ ಆಶಯಗಳನ್ನು ಅಳವಡಿಸಿಕೊಂಡು ಹಲವು ಸಂಘಟನೆಗಳ ಒಗ್ಗೂಡುವಿಕೆಯಿಂದ ಈ ಐದಾರು ಜಿಲ್ಲೆಗಳ ಸುಮಾರು ೨೦೦೦ ಕ್ಕಿಂತಲೂ ಹೆಚ್ಚಿನ ಬೆನ್ನುಮೂಳೆ ಮುರಿತಕ್ಕೊಳಗಾದವರ ಆತ್ಮ ಸ್ಥೈರ್ಯ ಹಾಗೂ ಧೈಹಿಕ ಸಾಮಾರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಸೇವಾಧಾಮವನ್ನು ಸೌತಡ್ಕದಲ್ಲಿ ಆರಂಭಿಸಲಾಗುತ್ತಿದೆ. ಈ ಸಂಸ್ಥೆಯಲ್ಲಿ ಹಲವು ತರಬೇತಿಗಳ ಮೂಲಕ ಸಂತ್ರಸ್ಥರಿಗೆ ಸಶಕ್ತವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಈ ಸಂಸ್ಥೆಯ ಮೂಲಕ ಪ್ರೇರಣೆಯನ್ನು ನೀಡಲಾಗುತ್ತದೆ. ಈ ಸಂಸ್ಥೆಯು ಇಲ್ಲಿ ಕಾರ್ಯನಿರ್ವಹಿಸಲು ನಮ್ಮ ಸೇವಾಭಾರತಿಯೊಂದಿಗೆ ಇನ್ನಿತರ ಹತ್ತಾರು ಸಂಘ ಸಂಸ್ಥೆಗಳು ಕೈಜೋಡಿಸಿರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಸೌತಡ್ಕದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಫಿಸಿಯೋಥೆರಪಿ ವಿಭಾಗದ ಡಾ. ಸೆಂಥಿಲ್ ಕುಮಾರ್ , ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಕೃಷ್ಣ ಭಟ್ , ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ಉಪಸ್ಥಿತರಿದ್ದರು.
ಪುರಂದರ ರಾವ್ ಸ್ವಾಗತಿಸಿದರು. ಹರೀಶ್ ರಾವ್ ವಂದಿಸಿದರು. ಡಾ. ಎ. ಜಯರಾಮ ಶೆಟ್ಟಿ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.