ಜಮ್ಮುವಿನಲ್ಲೊಂದು ಸಾಯಿ ಮಂದಿರ

ಜಮ್ಮುವಿನಿಂದ ಕಾಟ್ರಾದ ಕಡೆಗೆ 30 ಕಿಲೋ ಮೀಟರ್ ದೂರದಲ್ಲಿ ಸಿಗುವ ಸ್ಥಳವೇ ಸಾಕೇತಕ್. ಪುಟ್ಟ ಪ್ರದೇಶವಾದರೂ ಸಾಯಿ ಮಂದಿರದ ಬಳಿ ನಿಲ್ಲಿಸಿ ಎಂದರೆ ಬಸ್ಸಿನವರು ಅಲ್ಲೆ ನಿಲ್ಲಿಸುತ್ತಾರೆ. ಈ ಸಾಯಿ ಮಂದಿರ ಅಷ್ಟು ಪರಿಚಿತ. ಈ ಮಂದಿರವನ್ನು ಸ್ಥಾಪಿಸಿದವರು ಕನ್ನಡತಿ ಸುಶೀಲಾ ಮಾತಾಜಿ. ಮೂಲತ; ಕೇರಳದ ಕುಬಣೂರಿನವರು. ಮುಂದೆ ಮದುವೆಯಾಗಿ ಕಾಂಜಂಗಾಡಲ್ಲಿ ಇದ್ದರು. ಇವರಿಗೆ ಒಬ್ಬಾಕೆ ಮಗಳು ಇದ್ದಾರೆ. ಪತಿಯನ್ನು ಕಳಕೊಂಡ ನಂತರ ಸಂಸಾರದಲ್ಲಿ ವಿರಕ್ತಿ ಉಂಟಾಗಿ ಕಡುಬಡತನದಿಂದಾಗಿ ಜೀವನ ನಿರ್ವಹಣೆಗೆ ಬೇಕಾಗಿ ಊರೂರು ಸುತ್ತಿ, ಮಹಾರಾಷ್ಟ್ರದ ಪೂನಾದವರೇಗೂ ತಲುಪಿದರು. ಅಲ್ಲಿ ಅಡುಗೆ ಕೆಲಸ ಸಹಾಯಕರಾಗಿ ದುಡಿದು ಜೀವನ ನಿರ್ವಹಿಸುತ್ತಿದ್ದರು. ಶಿರಡಿ ಸಾಯಿಬಾಬಾರ ಭಕ್ತೆಯಾಗಿದ್ದ ಈಕೆಗೆ ಶಿರ್ಡಿಯಲ್ಲಿ ಇದ್ದಾಗ ಕನಸಿನಲ್ಲಿ ನೀನು ಕಾವಿ ಬಟ್ಟೆ ಉಟ್ಟುಕೋ ಸನ್ಯಾಸಿನಿ ಯಾಗು ಎಂದು ಅಭಯವಾಯಿತಂತೆ. ಅಲ್ಲಿಂದ ದೆಹಲಿ ಮಾರ್ಗವಾಗಿ ಜಮ್ಮುವಿಗೆ ತಲುಪಿದ ಸುಶೀಲಮ್ಮ ಸ್ಥಳೀಯರ ನೆರವಿಂದ ಸಾಕೇತಕ್ ಎಂಬ ಪುಟ್ಟ ಹಳ್ಳಿಯಲ್ಲಿ ಸಾಯಿಬಾಬಾರ ಗುಡಿಯೊಂದನ್ನು ನಿರ್ಮಿಸಿ ಮಾತಾಜೀ ಎಂದೇ ಖ್ಯಾತರಾದರು. ಪ್ರಕೃತ ಆರು ಅಡಿ ಎತ್ತರದ ಬಾಬಾರ ಮೂರ್ತಿ, ಅಮ್ಮನವರ ವಿಗ್ರಹ, ನವಗ್ರಹಗಳು, ಶಿವನ ಸಾನ್ನಿಧ್ಯ ಎಲ್ಲವನ್ನೂ ಸ್ಥಾಪಿಸಿದ್ದಾರೆ. ಸುತ್ತಮುತ್ತಲಿನ ಭಕ್ತ ಸಮುದಾಯ ಈ ಕ್ಷೇತ್ರಕ್ಕೆ ಅಗಮಿಸಿ ಪ್ರಾರ್ಥಿಸಿದರೆ ತಮ್ಮ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆಯಿಂದ ನೂರಾರು ಮಂದಿ ಆಗಮಿಸಿ ಕೃತಾರ್ಥರಾಗುತ್ತಾರೆ. ಸಾಮಾನ್ಯ ಕನ್ನಡತಿಯೊಬ್ಬಳು ದಕ್ಷಿಣದ ಕಾಸರಗೋಡಿನಿಂದ ತೆರಳಿ ಉತ್ತರದ ಜಮ್ಮುವಿನಲ್ಲಿ ಸಾಧ್ವಿಯಾಗಿ, ಮಾತಾಜಿಯಾಗಿ ಸುತ್ತಮುತ್ತಲಿನವರಿಗೆ ಧರ್ಮ ಪ್ರಸಾರ ಕಾರ್ಯ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆ.
ಈ ವರುಷ ಅಮರನಾಥ ಯಾತ್ರೆಗೆ ಶಂಕರ ಟೀವಿಯ ವರದಿಗಾರರಾದ ವೆಂಕಟೇಶ ಬೆಂಡೆಯವರ ಸಾರಥ್ಯದಲ್ಲಿ ಪ್ರವಾಸ ಹೋದಾಗ ಜಮ್ಮುವಿನಲ್ಲಿ ತಂಗಲು ಅನುವು ಮಾಡಿಕೊಟ್ಟವರು ಈ ಮಾತಾಜಿಯ ಮಗಳು ಚಂದ್ರಿಕಾ. ಹೀಗೆ ಪ್ರವಾಸದ ನೆಪದಲ್ಲಿ 3-4 ದಿನ ಈ ಸಾಯಿ ಮಂದಿರದಲ್ಲಿ ತಂಗುವ ಭಾಗ್ಯ ಲಭಿಸಿದ್ದು, ಅಲ್ಲಿಯ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುವ ಸೌಭಾಗ್ಯವೂ ನಮಗೆ ಲಭಿಸಿತ್ತು. ಪ್ರಕೃತ ನಮ್ಮ ತಂಡದಲ್ಲಿದ್ದ ಹರಿಪ್ರಸಾದ್ ಇರ್ವತ್ರಾಯರ ನೇತೃತ್ವದಲ್ಲಿ ಮದ್ದಡ್ಕದಲ್ಲಿ ಜರಗುವ ಸಾರ್ವಜನಿಕ ಗಣೇಶೋತ್ಸವಕ್ಕೆ ಅಮ್ಮನನ್ನು ಆಹ್ವಾನಿಸಿ ಮತ್ತೆ ನಮಗೆಲ್ಲಾ ಮಾತಾಜಿ ದರ್ಶನ ಭಾಗ್ಯವನ್ನು ಒದಗಿಸಿದ್ದಾರೆ.
ಸಾಮಾನ್ಯ ಕನ್ನಡತಿಯೊಬ್ಬರು ದೂರದ ಜಮ್ಮುವಿನಲ್ಲಿ ಅಸಾಮಾನ್ಯ ಧರ್ಮಪ್ರಸಾರ ಕಾರ್ಯ ನಡೆಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ.

-ನಾರಾಯಣ ಫಡ್ಕೆ ಮುಂಡಾಜೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.