ಶಿಶಿಲದಲ್ಲಿ ಶಿವರಾಮ ಶಿಶಿಲ 75 ರ ಸಂಭ್ರಮ ಕಾರ್ಯಕ್ರಮ

ಬೆಳ್ತಂಗಡಿ: ಶಿಕ್ಷಕ ಕೇವಲ ಪಾಠ-ಪ್ರವಚನಗಳಿಗೆ ಮಾತ್ರ ಸೀಮಿತವಾಗದೆ ಸಮಾಜದ ಆಗು ಹೋಗುಗಳ ಬಗ್ಗೆ ನಿಗಾವಹಿಸಿ ಸಾಮರಸ್ಯ ಮೂಡುವಂತೆ ಮಾಡಬೇಕು. ಕೇವಲ ಶಿಕ್ಷಣ ನೀಡುವವ ಶಿಕ್ಷಕನಾಗುತ್ತಾನೆ. ಆದರೆ ಬದುಕಿನ ಗುರಿ ತೋರಿಸುವವ ಗುರುವಾಗಿ ಹೊರಹೊಮ್ಮುತ್ತಾನೆ. ಅಂತಹ ಗುರುವಿನ ಸ್ಥಾನದಲ್ಲಿ ನಿಂತು ಕ್ರಿಯಾತ್ಮಕತೆಯನ್ನು ರೂಢಿಸಿಕೊಂಡಿರುವ ಶಿವರಾಮ ಶಿಶಿಲರು ಯೋಗ್ಯರೆನಿಸಿಕೊಂಡು ಸರ್ವಾಧರಣೆಗೆ ಪಾತ್ರರಾಗಿದ್ದಾರೆ ಎಂದು ಯಕ್ಷಗಾನ ಕಲಾವಿದ, ಖ್ಯಾತ ಸಂಘಟಕ ಎಸ್.ಎನ್. ಪಂಜಾಜೆ ಅಭಿಪ್ರಾಯಪಟ್ಟರು.
ಶಿಶಿಲದ ದ.ಕ. ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯಲ್ಲಿ ಸೆ. 8 ರಂದು ನಡೆದ ಶ್ರೀ ಶಿವರಾಮ ಶಿಶಿಲ-75 ಗುರುವಂದನಾ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.
ಒಂದು ಶಾಲೆ ಮಾತ್ರವಲ್ಲ ಶಿಶಿಲದ ಸರ್ವತೋಮುಖ ಅಭಿವೃದ್ದಿಯಲ್ಲಿ ಶಿವರಾಮರ ಪಾತ್ರ ಹಿರಿದು. ಅಧ್ಯಯನ, ಅಧ್ಯಾಪನ ಇದು ಶಿಕ್ಷಕ ವೃತ್ತಿಯಲ್ಲಿರುವ ಬದ್ಧತೆ. ಈ ಬದ್ಧತೆಯನ್ನು ಅಕ್ಷರಶಃ ಇಟ್ಟುಕೊಂಡವರು ಶಿಶಿಲರು. ಪಟ್ಟಣದಲ್ಲಿ ನಮಗೆ ಕಾಣುವ ಪ್ರಶಸ್ತಿಗಳ ವಶೀಲಿಬಾಜಿಯಲ್ಲಿ ನಿರತರಾದ ಶಿಕ್ಷಕರ ಮಧ್ಯೆ ಶಿವರಾಮರು ಭಿನ್ನವಾಗಿ ನಿಲ್ಲುತ್ತಾರೆ. ಇವರ ೩೪ ವರ್ಷಗಳ ಸೇವೆಯಲ್ಲಿ ಶಾಲೆಯಲ್ಲಿ ನಡೆಯುತ್ತಿದ್ದ ವಾರ್ಷಿಕೋತ್ಸವಗಳ, ಶಿಕ್ಷಣದ ಸೊಗಸೇ ಬೇರೆ ಇರುತ್ತಿತ್ತು ಎಂದರು. ಶಿಶಿಲರನ್ನು ಸರಕಾರ ನಾಲ್ಕು ಬಾರಿ ವರ್ಗಾವಣೆ ಮಾಡಲು ಪ್ರಯತ್ನಿಸಿತ್ತು. ಆದರೆ ಊರಿನವರ ಒತ್ತಡದಿಂದಾಗಿ ಅವರು ಇಲ್ಲಿಯೇ ಇರುವಂತಾದರು. ಕವಿ, ನಾಟಕಕಾರ, ಚಿತ್ರ, ಯಕ್ಷಗಾನ ಕಲಾವಿದ, ಲೇಖಕರಾಗಿದ್ದ ಶಿವರಾಮ ಶಿಶಿಲರಿಗೆ ರಾಷ್ಟ್ರಪ್ರಶಸ್ತಿ ಸಂದುದು ಯೋಗ್ಯವಾಗಿಯೇ ಇದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಯುಗಪುರುಷ ಕಿನ್ನಿಗೊಳಿ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ, ಶಿವರಾಮ ಶಿಶಿಲ ಹಾಗೂ ಕಲ್ಯಾಣಿ ಶಿವರಾಮ ಅವರನ್ನು ಸಮ್ಮಾನಿಸಿದರು.
ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ವಹಿಸಿ ಮಾತನಾಡಿ, ಇಂದು ಗುರುಗಳ ಮೇಲಿನ ಗೌರವ ಕಡಿಮೆಯಾಗಿರುವುದರಿಂದ ಸಮಾಜದಲ್ಲಿ ಸಂಸ್ಕಾರ ಮತ್ತು ಮೌಲ್ಯಗಳು ಕುಸಿದಿರುವುದನ್ನು ಕಾಣುತ್ತಿದ್ದೇವೆ. ಶಾಲೆಯ ಪರೀಕ್ಷೆ ಜೀವನದ ಪರೀಕ್ಷೆಯೆದುರು ಕಿರಿದಾದುರು ಎಂದರು.
ಶಕ್ತಿಪ್ರಸಾದ ಅಭ್ಯಂಕರ ನಿರ್ದೇಶಿಸಿ ಪ್ರಸ್ತುತ ಪಡಿಸಿದ ಶಿವರಾಮ ಶಿಶಿಲರ ಬದುಕು ಬರಹ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದ ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಸಹಪ್ರಾಧ್ಯಾಪಕ ಚೇತನ್ ಸೋಮೇಶ್ವರ ಸಂದರ್ಭೋಚಿತವಾಗಿ ಮಾತನಾಡಿದರು. ಶಿಶಿಲರ ೭೫ರ ಕಾರ್ಯಕ್ರಮಕ್ಕೆ ತಾಲೂಕಿನಿಂದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ದೂರದ ಬೆಂಗಳೂರಿನಿಂದಲೂ ಅವರ ಶಿಷ್ಯರು ಆಗಮಿಸಿದ್ದರು. ಶಿಶಿಲದ ಪ್ರತಿಯೊಂದು ಮನೆಯವರೂ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದರು. ಶಾಲಾ ಆವರಣದಲ್ಲಿ ಕಾರ್ಯಕ್ರಮ ವೀಕ್ಷಿಸಲು ಟಿವಿ ಯನ್ನು ಅಳವಡಿಸಲಾಗಿತ್ತು.
ಬೆಂಗಳೂರಿನ ಬಾಷ್ ಕಂಪೆನಿಯ ಅಧಿಕಾರಿ ಗಜಾನನ ಗೋಖಲೆ, ಸಾಹಿತಿ ಡಾ| ಪ್ರಭಾಕರ ಶಿಶಿಲ, ಹಾಪ್‌ಕಾಮ್ಸ್‌ನ ನಿರ್ದೇಶಕಿ ಗಂಗಾ ರಾನಡೆ, ಶಿಶಿಲ ಶಾಲಾ ಮುಖ್ಯೋಪಾಧ್ಯಾಯ ಜೋಸೇಫ್ ಪಿರೇರಾ ಅನಿಸಿಕೆ ವ್ಯಕ್ತಪಡಿಸಿದರು.
ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ ಮೂಡೆತ್ತಾಯ, ಉಪಾಧ್ಯಕ್ಷ ಕುಶಾಲಪ್ಪ ಗೌಡ ಬದ್ರಿಜಾಲು, ದಿನಕರ ಬರ್ಗುಳ, ಗಿರಿಜಾ ಎಸ್. ಕೆದಿಲ್ಲಾಯ, ಅಧ್ಯಾಪಕಿ ಸುಗುಣ, ಖಜಾಂಜಿ ರಾಧಾಕೃಷ್ಣ ದಾಮಲೆ, ಯು. ರಾಘವೇಂದ್ರ ನಾಯಕ್, ಎಸ್‌ಡಿಎಂಸಿ ಅಧ್ಯಕ್ಷ ತನಿಯಪ್ಪ ಕೊಳಕ್ಕೆಬೈಲು, ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಭಿನಂದನಾ ಸಮಿತಿ ಕಾರ್ಯದರ್ಶಿ ಬಿ. ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿದರು. ಅಧ್ಯಕ್ಷ ಮನೋಹರ ಎಂ.ಗೋಖಲೆ ಪ್ರಸ್ತಾವಿಸಿದರು. ಶಾಲಾ ಶಿಕ್ಷಕ ಪ್ರಸನ್ನ ಕುಮಾರ್ ವಂದಿಸಿದರು. ಸೂರ್ಯನಾರಾಯಣ ರಾವ್ ಮತ್ತು ದಿನಕರ ಕುರೂಪ್ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.