ಮೂಡಬಿದ್ರೆ ಸುದರ್ಶನ್ ಜೈನ್ ಕೊಲೆ ಪ್ರಕರಣ: ಆರಂಬೋಡಿಯ ಪ್ರಭಾಕರ್ ಶೆಟ್ಟಿ ಬಂಧನ.

ಬೆಳ್ತಂಗಡಿ: ಎರಡು ವಾರದ ಹಿಂದೆ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಹಣದಾಸೆಗೆ ತಮ್ಮನೋರ್ವ ತನ್ನ ಸ್ನೇಹಿತರೊಂದಿಗೆ ಸೇರಿ ಒಡಹುಟ್ಟಿದ ಸಹೋದರರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ವಾಹನ ಚಾಲಕ ಆರಂಬೋಡಿಯ ಪ್ರಭಾ ಯಾನೆ ಪ್ರಭಾಕರ ಶೆಟ್ಟಿ ರವರನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಜವುಳಿ ಅಂಗಡಿಯ ಉದ್ಯೋಗಿಯಾಗಿದ್ದ ಹೊಸಬೆಟ್ಟು ಕಡಂಬರಗುತ್ತು ಸುದರ್ಶನ್ ಜೈನ್ ರವರು ಆ.೧೧ ರಂದು ರಾತ್ರಿ ಕೆಲಸ ಮುಗಿಸಿ ತನ್ನ ತಮ್ಮ ಸುಧೀರ್ ಜೈನ್ ರವರ ಜೊತೆ ಬೈಕ್‌ನಲ್ಲಿ ಮನೆಕಡೆ ಹೊರಟಿದ್ದರು. ಮನೆ ಹತ್ತಿರ ತಲುಪುವಾಗ ಬೈಕ್ ಕೆಟ್ಟುಹೋಗಿದೆ ಎಂದು ಸುಳ್ಳು ಹೇಳಿ ಅಣ್ಣನ್ನನ್ನು ಬೈಕ್‌ನಿಂದ ಇಳಿಸಿ, ಹತ್ತಿರದಲ್ಲಿ ನಿಂತಿದ್ದ ಕಾರಿನೊಳಗೆ ಕರೆದುಕೊಂಡು ಹೋಗಿದ್ದು, ಅದರಲ್ಲಿದ್ದ ಸುಧೀರ್ ಸ್ನೇಹಿತರು ಕಾರನ್ನು ಬೇರೆಡೆಗೆ ಕೊಂಡೊಯ್ದು, ಸುದರ್ಶನ್ ರವರಿಗೆ ಮಾರಕಾಯುಧದಿಂದ ಇರಿದು, ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ ಬಳಿಕ ಶವವನ್ನು ಪುಚ್ಚೆಮೊಗರು ಪಲ್ಗುಣಿ ನದಿಗೆ ಎಸೆದಿದ್ದರು.
ಆ.17 ರಂದು ಸುದರ್ಶನ್‌ರವರ ಮೃತದೇಹವು ಮರವೂರು ಡ್ಯಾಂ ನಲ್ಲಿ ಪತ್ತೆಯಾಗಿತ್ತು. ಆರೋಪಿ ಪ್ರಭಾಕರರವರು ಪ್ರಕರಣದಲ್ಲಿ ಬಳಕೆಯಾಗಿದ್ದ ಬೊಲೆರೋ ಕಾರಿನ ಚಾಲಕರಾಗಿದ್ದರು. ಈ ಕಾರನ್ನು ಆರಂಬೋಡಿ ವ್ಯಕ್ತಿಯಿಂದ ಬಾಡಿಗೆಗೆಂದು ಪಡೆದುಕೊಂಡಿದ್ದು, ಆತನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.
ಆರೋಪಿಗೆ ನ್ಯಾಯಾಲಯವು ಸೆ.6 ರವೆರೆಗೆ ಪೊಲೀಸ್ ಕಸ್ಡಡಿ ವಿಧಿಸಿದೆ. ಈತನ ಬಂಧನದೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.