ಮಡಂತ್ಯಾರು: ಶೈಕ್ಷಣಿಕ ಸಮಾವೇಶ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

Advt_NewsUnder_1
Advt_NewsUnder_1

ಮಡಂತ್ಯಾರು: ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಮಂಗಳೂರು ಹಾಗೂ ಸೇಕ್ರೆಡ್‌ಹಾರ್ಟ್ ಪದವಿ ಪೂರ್ವ ಕಾಲೇಜು ಮಡಂತ್ಯಾರು ಇವರ ಜಂಟಿ ಆಶ್ರಯದಲ್ಲಿ `ಶೈಕ್ಷಣಿಕ ಸಮಾವೇಶ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಕಾರ್ಯಕ್ರಮ ಆ.27 ರಂದು ಸೇ.ಹಾ. ಸಭಾಭವನದಲ್ಲಿ ಜರುಗಿತು.
ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ಅವರು ಮಾತನಾಡಿ, ವೇತನ ಪರಿಷ್ಕರಣೆ ಸೇರಿದಂತೆ ಶಿಕ್ಷಕರಿಗೆ ವಿವಿಧ ಸವಲತ್ತುಗಳು
ಸಂವಿಧಾನತ್ಮಕವಾಗಿ ದೊರೆಯಬೇಕು. ಇದಕ್ಕಾಗಿ ಶಿಕ್ಷಕರು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ನೋವಿನ ಸಂಗತಿ. ಎಲ್ಲಾ ಸರಕಾರಗಳು ಈ ವಿಷಯದಲ್ಲಿ ಎಡವಿದೆ ಎಂದು ತಿಳಿಸಿದರು.
ಶಿಕ್ಷಕರು, ಉಪನ್ಯಾಸಕರು, ಎಷ್ಟೇ ನೋವಿದ್ದರೂ, ಕರ್ತವ್ಯದಲ್ಲಿ ಲೋಪ ಆಗದಂತೆ ಕೆಲಸ ಮಾಡಿದ್ದಾರೆ. ವೇತನ ಪರಿಷ್ಕರಣೆ ಸರಕಾರದ ಸಂವಿಧಾನ ಬದ್ಧ ಕರ್ತವ್ಯ, ನ್ಯಾಯಾಲಯಗಳ ನ್ಯಾಯಾಧೀಶರುಗಳಿಗೆ ವೇತನ ದುಪ್ಪಟ್ಟು ಜಾಸ್ತಿಯಾಗುತ್ತದೆ. ಲೋಕಸಭೆ, ವಿಧಾನ ಸಭಾ ಸದಸ್ಯರಿಗೆ ವರ್ಷಕ್ಕೆ ಮೂರು ಬಾರಿ ವೇತನ ಜಾಸ್ತಿಯಾಗುತ್ತದೆ. ಇದರ ಬಗ್ಗೆ ಎಲ್ಲಿಯೂ ಚರ್ಚೆ ನಡೆಯುವುದಿಲ್ಲ. ಆದರೆ ಶಿಕ್ಷಕರು ವೇತನ ಪರಿಷ್ಕರಣೆಯೂ ಇಲ್ಲದೆ ನಿವೃತ್ತಿಯಾಗುತ್ತಿದ್ದಾರೆ. ಸಿಗಬೇಕಾದ ಸೌಲಭ್ಯವೂ ದೊರೆಯುವುದಿಲ್ಲ ಇದು ದುರದೃಷ್ಟಕರ ಎಂದರು.
ಶಾಲೆಗಳಲ್ಲಿ ಸರಕಾರ ಮೀಸಲಾತಿ ಆಧಾರದಲ್ಲಿ ಸವಲತ್ತು ನೀಡುತ್ತಿದೆ. ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಸಲ್ಲದು, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಐ.ಎ.ಎಸ್, ಸರಕಾರದ ಮುಖ್ಯ ಕಾರ್ಯದರ್ಶಿಗಳು ಯಾವುದೇ ಸುತ್ತೋಲೆಯನ್ನು ಹೊರಡಿಸುವ ಮೊದಲು ಅದನ್ನು ಜನಪ್ರತಿನಿಧಿಗಳ, ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಜಾರಿಮಾಡಲಿ. ಶಿಕ್ಷಣದಲ್ಲಿ ಅವೈಜ್ಞಾನಿಕ ತೀರ್ಮಾನ ಸರಿಯಲ್ಲ ಎಂದು ಹೇಳಿದರು.
ವೇತನ ಪರಿಷ್ಕರಣೆ ಸೇರಿದಂತೆ ಶಿಕ್ಷಕರ ಸಮಸ್ಯೆಗಳ ಕುರಿತು ಉನ್ನತ ಶಿಕ್ಷಣ ಸಚಿವರು, ಅಧಿಕಾರಿಗಳ ಜೊತೆ ಸೆ.೧ಕ್ಕೆ ಸಭೆ ನಡೆಸಿ ಚರ್ಚೆ ನಡೆಸುತ್ತೇನೆ. ಕಾಲ್ಪನಿಕ ವೇತನ, ಎನ್‌ಪಿಎಸ್ ಬಗ್ಗೆಯೂ ಚರ್ಚಿಸುತ್ತೇನೆ. ಬಳಿಕ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ವರದಿ ನೀಡುತ್ತೇನೆ. ಕಾನೂನಾತ್ಮಕ ಹೋರಾಟಕ್ಕೂ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ- ಬೋಜೇ ಗೌಡ ಶಾಸಕರು (ವಿಧಾನ ಪರಿಷತ್)
ಸಮಾರಂಭದ ಅಧ್ಯಕ್ಷತೆಯನ್ನು ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ ವಹಿಸಿ, ಪದವಿ ಪೂರ್ವ ಕಾಲೇಜುಗಳಲ್ಲಿ ೧೭೫ ಹುದ್ದೆಗಳು ಹಲವು ವರ್ಷಗಳಿಂದ ಖಾಲಿಯಾಗಿ ಉಳಿದಿದ್ದು, ಸರಕಾರ ಇದರ ನೇಮಕವನ್ನು ಮಾಡಬೇಕು ಎಂದು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಕುಮಾರ ಮಗದ ಅವರು ಶಾಲೆಗಳಲ್ಲಿ ವಿವಿಧ ಶಿಕ್ಷಣಗಳನ್ನು ನೀಡಲಾಗುತ್ತದೆ. ಆದರೆ ಪ್ರೌಢಾವಸ್ಥೆಗೆ ಬಂದ ವಿದ್ಯಾರ್ಥಿಗಳಿಗೆ ಪ್ರೀತಿ ಮತ್ತು ಮಾನವೀಯ ಸಂಬಂಧದ ಶಿಕ್ಷಣ ನೀಡುವುದಿಲ್ಲ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಈ ಸಂಸ್ಕಾರವನ್ನು ನೀಡುವ ಅಗತ್ಯತೆ ಇದೆ. ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಮಡಂತ್ಯಾರು ಸೇ.ಹಾ. ವಿದ್ಯಾಸಂಸ್ಥೆಗಳ ಸಂಚಾಲಕ ವಂ.ಫಾ. ಬೇಸಿಲ್‌ವಾಸ್ ಶುಭಸಂಶನೆಗೈದರು. ದ.ಕ. ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷೆ ಎಲ್ವಿರಾ ಫಿಲೋಮಿನಾ, ಕೋಶಾಧಿಕಾರಿ ಗಂಗಾಧರ ಆಳ್ವ, ಕಾರ್ಯದರ್ಶಿ ಡಾ| ಕಿಶೋರ್ ಕುಮಾರ್ ರೈ, ಮಂಗಳೂರು ಬಿ.ಜಿ.ಎಸ್. ಕಾಲೇಜಿನ ಪ್ರಾಚಾರ್ಯ ಡಾ| ಸುಲತಾ ರಾಜಾರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇ.ಹಾ. ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನಾ ನೃತ್ಯದ ಬಳಿಕ ಕಾಲೇಜಿನ ಪ್ರಾಂಶುಪಾಲ ಫಾ| ಜೆರೋಮ್ ಡಿಸೋಜಾ ಸ್ವಾಗತಿಸಿದರು. ದ.ಕ. ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷೆ ಶ್ರೀಮತಿ ಎಲ್ವಿರಾ ಫಿಲೋಮಿನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಾ| ಕಿಶೋರ್ ಕುಮಾರ್ ರೈ ನಿರೂಪಿಸಿ ಕುಂಬ್ರ ಪ.ಪೂ. ಕಾಲೇಜಿನ ಪ್ರಾಚಾರ್ಯ ದುಗ್ಗಪ್ಪ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.