ಸೆ.2-3: ರಾಷ್ಟ್ರೀಯ ಧರ್ಮ ಸಂಸದ್ ಮೂಲಕ ಧರ್ಮ ಸಾಮ್ರಾಜ್ಯವಾಗಲಿದೆ ಶ್ರೀರಾಮ ಕ್ಷೇತ್ರ

Advt_NewsUnder_1
Advt_NewsUnder_1

ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿ ಪಡೆದಿರುವ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರದಲ್ಲಿ ಸೆ. 2-3 ರಂದು ನಡೆಯುವ ದೇಶದುಗ್ಗಲದ ಸಂತರ ಐತಿಹಾಸಿಕ ಬೃಹತ್ ಅಧಿವೇಶನ “ರಾಷ್ಟ್ರೀಯ ಧರ್ಮ ಸಂಸದ್” ಶ್ರೀ ಕ್ಷೇತ್ರವನ್ನು ಧರ್ಮ ಸಾಮ್ರಾಜ್ಯವಾಗಿ ಪರಿವರ್ತನೆಗೊಳಿಸಲಿದೆ.
ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್‌ನ ಸದ್ಗುರು ಪಟ್ಟಾಭಿಷಿಕ್ತರಾಗಿರುವ ಜಗದ್ಗುರು ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಬಿಷೇಕ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ನಡೆಯುವ ಮಹಾ ಧರ್ಮ ಅಧಿವೇಶನ ದೇಶದ ಧರ್ಮಜಿಜ್ಞಾಸುಗಳ ಗಮನ ಇತ್ತ ಸೆಳೆದಿದೆ.
ದೇಶದ ಹತ್ತು ಭಾಗ ಮತ್ತು ಹತ್ತಾರು ರಾಜ್ಯಗಳಿಂದ ಶ್ರೀ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಸಂತರು, ಮಂಡಲಾಧೀಶರು, ನಾಗಾಸಾಧುಗಳು, ನಾತೂಜಿಗಳು, ಪಂಚಾಕ್ಷರಿ ಬಾಬಾಗಳು, ಅಘೋರಿಗಳು, ಆಕಾರ ಪರಿಶತ್ತು ಮತ್ತು ಎಲ್ಲ ಪಂಥಗಳ ಸಾಧಕರುಗಳು, ಶ್ರೀರಾಮ ಕ್ಷೇತ್ರ ಕಟ್ಟಿ ಬೆಳಗಿಸಿದ ಪುಣ್ಯಪ್ರಾಪ್ತ ಅಸಾಮಾನ್ಯ ಆಧ್ಯಾತ್ಮ ಸಾಧಕ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಹೆಸರಿನ ವೇದಿಕೆಯಲ್ಲಿ ಸಂಗಮಿಸಲ್ಪಟ್ಟು ಭಕ್ತಿಭಾವ ಸಾಮ್ರಾಜ್ಯವನ್ನೇ ಸೃಷ್ಟಿಸಲಿದ್ದಾರೆ. ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಆಸ್ತಿಕ ಬಂಧುಗಳು ತುದಿಗಾಲಲ್ಲಿ ನಿಂತು ಕಾತರಪಡುತ್ತಿದ್ದಾರೆ.
ಸಂತರ ಮಹಾ ಸಂಗಮ:
ನೇಪಾಳ, ಜಮ್ಮು ಕಾಶ್ಮೀರ, ಹರಿದ್ವಾರ, ಋಷಿಕೇಶ, ನೀಲಕಂಠ, ಇಲಹಾಬಾದ್, ಪ್ರಯಾಗ, ವಾರಣಾಸಿ, ಉಜ್ಜಯಿನಿ, ನಾಸಿಕ್, ತ್ರಯಂಬಕೇಶ್ವರ, ಸೋಲಾಪುರ, ಕನ್ಯಾಕುಮಾರಿ, ಪುರಿ ಜಗನ್ನಾಥ್, ಒರಿಸ್ಸಾ, ಪಂಜಾಬ್, ಸಿಮ್ಲಾ, ನಾತೂಜಿಗಳು, ಸೀತಾರಾಮ ಪರಂಪರೆಗೆ ಸೇರಿದವರು ಇತ್ಯಾಧಿಯಾಗಿ ಭಾರತದ ಮೂಲೆ ಮೂಲೆಗಳಿಂದ ಸ್ವಾಮೀಜಿಗಳು, ಆಧ್ಯಾತ್ಮ ಅಪೂರ್ವ ಸಾಧಕರುಗಳು ಆಗಮಿಸಲಿದ್ದಾರೆ. ಅಯೋಧ್ಯೆಯಿಂದಲೇ ಸುಮಾರು 500 ರಷ್ಟು ಸಂತರುಗಳು ಆಗಮಿಸಲಿದ್ದಾರೆ. ಸಂತರ ತುತ್ತತುದಿಯ ಅಧಿಕಾರಿಗಳಾದ ಮಹಾಮಂಡಲಾಧೀಶರುಗಳು, ಕಠಿಣ ಆಧ್ಯಾತ್ಮ ಹಾದಿಯಲ್ಲಿದ್ದು ವಸ್ತ್ರ ತ್ಯಾಗ ಸಹಿತ ಸರ್ವಸಂಗ ಪರಿತ್ಯಾಗಿಗಳಾಗಿರುವ ನಾಗಾ ಸಾಧುಗಳು ಸೇರಿ ಸುಮಾರು 2 ರಿಂದ 2 ಸಾವಿರದಷ್ಟು ಸ್ವಾಮೀಜಿಗಳು ಮತ್ತು ಟಿಬೆಟ್‌ನ ಸನ್ಯಾಸಿಗಳೂ ಒಳಗೊಂಡಿರುತ್ತಾರೆ.
ವಿಮಾನ, ರೈಲು, ವಿಶೇಷ ವಾಹನಗಳಲ್ಲಿ ಆಗಮನ:
ಆ. 28 ರಿಂದಲೇ ಈ ಎಲ್ಲಾ ಸಾಧು ಸಂತರುಗಳು ವಿಮಾನ, ರೈಲು ಮಾರ್ಗವಾಗಿ ಮತ್ತು ವಿಶೇಷ ವಾಹನಗಳ ಮೂಲಕ ತಮ್ಮ ತಂಡದೊಂದಿಗೆ ಕ್ಷೇತ್ರದತ್ತ ಆಗಮಿಸಲಿದ್ದಾರೆ. ಇವರೆಲ್ಲರಿಗೂ ವಾಸ್ತವ್ಯಕ್ಕಾಗಿ
ಕ್ಷೇತ್ರದ ಅನ್ನಛತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸೆ.1 ರಂದು ಇನ್ನೂ ಸಂಖ್ಯೆಯಲ್ಲಿ ಎಲ್ಲರ ಆಗಮನ ಆದ ಬಳಿಕ ಕನ್ಯಾಡಿ, ಧರ್ಮಸ್ಥಳದಲ್ಲಿ ೧೦ರಷ್ಟು ಲಾಡ್ಜ್‌ಗಳನ್ನು ಕಾದಿರಿಸಲಾಗಿದೆ. ಒಂದೊಂದು ತಂಡವನ್ನು ನೋಡಿಕೊಳ್ಳಲು ಭಾಷಾ ಜ್ಞಾನ ಇರುವ ಹತ್ತತ್ತು ಮಂದಿ ಸ್ವಯಂ ಸೇವಕರ ತಂಡ ಇರಲಿದೆ. ಹೀಗೆ ಕಾರ್ಯಕ್ರಮದಲ್ಲಿ ಒಟ್ಟು 1 ಸಾವಿರದಷ್ಟು ಸ್ವಯಂ ಸೇವಕರು ತೊಡಗಿಸಿಕೊಳ್ಳಲಿದ್ದಾರೆ. ಆಯಾಯ ಸ್ವಾಮೀಜಿಗಳ ಆಹಾರ ಪರಂಪರೆಗೆ ಅನುಗುಣವಾಗಿ ಪಾಕಗಳನ್ನು ಮಾಡಲು ಅವರ ಕಡೆಯಿಂದಲೇ ಪಾಕತಜ್ಞರು ಆಗಮಿಸಲಿದ್ದಾರೆ. ಬೇಕಾದ ವಸ್ತುಗಳನ್ನು ಈಗಲೇ ಸಂಗ್ರಹಿಸಿಡಲಾಗಿದ್ದು ಸ್ಥಳೀಯ ಪಾಕತಜ್ಞರು ಸಹಕರಿಸಲಿದ್ದಾರೆ.
ಅವರವರ ಧರ್ಮಪೀಠದ ಪೂಜಾ ವಿಧಿಗಳನ್ನು ನಡೆಸಲು ಮಂಚಗಳು, ಶೃಂಗಾರ, ನಿತ್ಯ ತ್ರಿಕಾಲ ಪೂಜೆ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಂವಹನ ಮತ್ತು ಸಂತ ನಿರ್ವಹಣೆ ಮಂಡಳಿ ಅನುಭವಿ ಪ್ರವೀಣ್ ವಾಲ್ಕೆ ನೇತೃತ್ವದಲ್ಲಿ ಕೆಲಸ ಮಾಡಲಿದೆ.
ಆಗಮಿತ ಸಂತರಿಗೆ ಸಕಲ ಧಾರ್ಮಿಕ ರಕ್ಷೆ ನೀಡಲಿದ್ದು 5 ಮೀಟರ್ ಉದ್ದದ ಬಟ್ಟೆ, ಪಂಚೆ, ದೋತಿ, ಶಾಲು, ಜೋಳಿಗೆ ಕ್ಷೇತ್ರದಿಂದ ನೀಡಲಾಗುತ್ತದೆ.
ಲೋಕಕಲ್ಯಾಣ ಮಂಚ್ ಸ್ಥಾಪನೆ ಬಗ್ಗೆ ಮಹತ್ವದ ನಿರ್ಣಯ:
ನೈತಿಕ ಮೌಲ್ಯ ಪ್ರತಿಪಾದನೆ, ಶಿಕ್ಷಣ ಕ್ರಮದಲ್ಲಿ ಆಧ್ಯಾತ್ಮಿಕತೆಯ ಕಂಪು ಪಸರಿಸುವಿಕೆ, ಪ್ರಸ್ತುತ ಶಾಲಾ ಪಠ್ಯ ಕ್ರಮದಲ್ಲಿ ಇರುವ ಕ್ರಾಂತಿಗಳ ಅಧ್ಯಯನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿಮರ್ಷೆ, ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಆರಂಭಿಸಲು ಹಕ್ಕುಪ್ರತಿಪಾದನೆ, ಜಾತೀಯತೆಯ ಎಲ್ಲೆ ಮೀರಿರುವ ಭಾರತದ ಶ್ರೇಷ್ಠ ಸನಾತನ ಧರ್ಮ ಉಳಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಯ ಉದ್ಧಾರಕ್ಕಾಗಿ ಪಣತೊಡಲು ದೇಶದ ಉದ್ದಗಲದ 150 ರಷ್ಟು ಆಯ್ದ ಮಂಡಲಾಧೀಶರಗಳು ಹಾಗೂ ಮಹಾ ಸಂತರುಗಳ ಸೇರುವಿಕೆಯೊಂದಿಗೆ ಸೆ. 2 ರಂದು ರಾತ್ರಿ ವಿಶೇಷ ಬೈಠಕ್ ನಡೆಯಲಿದೆ. ಇದರಲ್ಲಿ ರಾಷ್ಟ್ರೀಯ ಧರ್ಮಸಂಸದ್‌ನ ನಿರ್ಣಯಗಳು ರೂಪುಗೊಳ್ಳಲಿದೆ. ಲೋಕಲ್ಯಾಣ ಮಂಚ್ ಸ್ಥಾಪನೆಯ ಬಗ್ಗೆಯೂ ಈ ಬೈಠಕ್‌ನಲ್ಲಿ ನಿರ್ಧಾರ ಪ್ರಕಟಗೊಳ್ಳಲಿದೆ.
25 ಸಾವಿರ ಮಂದಿ ನಿರೀಕ್ಷೆ:
ರಾಷ್ಟ್ರೀಯ ಧರ್ಮ ಸಂಸದ್ ಮಹಾ ಸಂತ ಅಧಿವೇಶನಕ್ಕೆ ಶ್ರೀ ರಾಮ ಕ್ಷೇತ್ರದ ಆವರಣದಲ್ಲಿ ಬೃಹತ್ ಚಪ್ಪರ ಹಾಕಲಾಗುತ್ತಿದ್ದು 25 ಸಾವಿರ ಮಂದಿಗೆ ಆಸನ ವ್ಯವಸ್ಥೆ ಬರಲಿದೆ. ಮುಖ್ಯ ವೇದಿಕೆಯಲ್ಲಿ 108 ಮಹಾಮಂಡಲಾಧೀಶರು ಹಾಗೂ ಆಯ್ದ ಮಹಾ ಸಂತರಿಗೆ, ಮುಖ್ಯಮಂತ್ರಿ, ಕೇಂದ್ರದ ಮಂತ್ರಿಗಳ ಆದಿಯಾಗಿ ಆದ್ಯ ಗಣ್ಯ ಮಹನೀಯರಿಗೆ ಆಸನ ಇರಲಿದೆ.300 ರಷ್ಟು ಗಣ್ಯರಿಗೆ ಕುಳಿತುಕೊಳ್ಳಲು ವಿಐಪಿ ವೇದಿಕೆ ನಿರ್ಮಾಣವಾಗುತ್ತಿದೆ. ರಾಜ್ಯದ ಉತ್ತರ ಭಾಗದ ಸ್ವಾಮೀಜಿಗಳು, ಕರಾವಳಿ ಜಿಲ್ಲೆಯ ಯತಿಗಳೂ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಒಟ್ಟು 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಅನ್ನಛತ್ರದ ಮುಂದಿನ ಮೈದಾನ, ಶ್ರೀ ಕ್ಷೇತ್ರದ ಸುತ್ತಲಿನ ಅಂಗಣ, ಪಕ್ಕದ ವಸತಿಗೃಹದ ಹೊರಾಂಗಣದಲ್ಲಿ ಚಪ್ಪರ ವ್ಯವಸ್ಥೆ, ಆಗಮಿತ ಭಕ್ತಾಧಿಗಳಿಗೆ ಪ್ರಸಾದ ಭೋಜನಕ್ಕೆ ಕನ್ಯಾಡಿ ಶಾಲಾ ಅಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಕಡೆ ಎಲ್‌ಇಡಿ ಪರದೆ ಮೂಲಕ ಕಾರ್ಯಕ್ರಮ ನೇರ ವೀಕ್ಷಣೆಗೆ ಅವಕಾಶವಿದೆ. ವಾಹನ ನಿಲುಗಡೆಗೆ ಉಜಿರೆ ಅಜ್ಜರಕಲ್ಲು ಮೈದಾನ ಹಾಗೂ ಕೆಲವು ಜಾಗಗಳನ್ನು ಗುರುತಿಸಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆ ಮತ್ತು ವಿವಿಧ ಸರಕಾರಿ ಅಧಿಕಾರಿಗಳ ಮೂರು ಸುತ್ತಿನ ಸಭೆ ನಡೆದಿದೆ. ಸ್ವಚ್ಚತೆ ಮತ್ತು ಆರೋಗ್ಯದ ಕಡೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಸೆ. ೧ ರಿಂದಲೇ ಕ್ಷೇತ್ರದಲ್ಲಿ ಆರೋಗ್ಯ ತಪಾಸಣೆಗೆ ತಜ್ಞ ವೈದ್ಯರ ವಿಶೇಷ ಸೇವಾ ಕೌಂಟರ್ ಲಭ್ಯತೆ ಇರುತ್ತದೆ.
ಸಂತರ ಶೋಭಾ ಯಾತ್ರೆ, ಮಹಾ ಅಧಿವೇಶನ:
ತಾಲೂಕಿನ ಮೂಲೆ ಮೂಲೆಗಳಿಂದ ಜನರನ್ನು ತೊಡಗಿಸಿಕೊಳ್ಳುವ ದೃಷ್ಟಿಯಿಂದ ಮತ್ತು ಈ ಮಹಾಕಾರ್ಯದಲ್ಲಿ ಅವರ ಸೇವೆಯನ್ನೂ ನಿರೀಕ್ಷಿಸಿ ಹೊರೆ ಕಾಣಿಕೆ ಸಮರ್ಪಣೆ ವ್ಯವಸ್ಥೆ ಮಾಡಲಾಗಿದೆ. ಆ. 30 ರಂದು ತಾಲೂಕಿನ ವಿವಿಧ ದಿಕ್ಕಿನಿಂದ ಆಗಮಿಸುವ ಹೊರೆಕಾಣಿಕೆ ಸ್ವೀಕಾರ ಕಾರ್ಯ ಅದ್ದೂರಿಯಾಗಿ ನಡೆಯಲಿದೆ. ಸೆ.2 ರಂದು ಸಂಜೆ ಮಳೆಯ ವಾತಾವರಣ ನೋಡಿಕೊಂಡು ಎಲ್ಲಾ ಸಂತರ ಒಟ್ಟುಸೇರುವಿಕೆಯೊಂದಿಗೆ ಉಜಿರೆಯಿಂದ ನಾಗಾ ಸಾಧುಗಳ ತಲವಾರು ಕಸರತ್ತು ಇತ್ಯಾಧಿ ಸಾಹಸಮಯ ವಿವಿಧ ಕವಾಯತುಗಳನ್ನೊಳಗೊಂಡ ಸಂತರ ಪಾದಯಾತ್ರೆ ನಡೆಯಲಿದೆ. ಕಾರ್ಯಕ್ರಮ ಸಂಚಾಲನಾ ಸಮಿತಿ, ಟ್ರಾಫಿಕ್ ವ್ಯವಸ್ಥೆ, ಅತಿಥಿಗಳ ಸ್ವಾಗತಿಸುವಿಕೆ, ಚಪ್ಪರ ಮತ್ತು ಅಲಂಕಾರ, ಕಾರ್ಯಕ್ರಮ ನಿರ್ವಹಣೆ, ಧ್ವನಿ ಬೆಳಕು ಸಂಯೋಜನೆ, ಸ್ವಚ್ಚತೆ ಮತ್ತು ಸ್ವಯಂ ಸೇವೆ ನಿರ್ವಹಣೆ, ಪುರಮೆರವಣಿಗೆ, ವಸತಿ ಸೌಲಭ್ಯ ಹೀಗೆ ಎಲ್ಲದಕ್ಕೂ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದ್ದು ಇದರಲ್ಲಿ ಜವಾಬ್ಧಾರಿಗಳನ್ನು ಹೊತ್ತಿರುವ 700 ಕ್ಕೂ ಅಧಿಕ ಮಂದಿ ತಮ್ಮನ್ನು ಧರ್ಮಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.