ಕೊಕ್ಕಡ: ಧರ್ಮಸ್ಥಳ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಐತ್ತೂರು ಗ್ರಾಮದ ಕಲ್ಲಾಜೆ ಸೇತುವೆ ಬಳಿ ಕೊಕ್ಕಡ ಪರಿಸರದ ಕಾಂಕ್ರೀಟ್ ಕೆಲಸದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮವಾಗಿ ಲಾರಿಯಲ್ಲಿದ್ದ ಕಾಂಕ್ರೀಟ್ ಮಿಲ್ಲರ್ನಡಿಗೆ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು 14 ಮಂದಿ ಗಾಯಗೊಂಡ ಘಟನೆ ಆ.9 ರಂದು ನಡೆದಿದೆ.
ಘಟನೆಯಿಂದ ಕೌಕ್ರಾಡಿ ಗ್ರಾಮದ ಪಾರ್ಪಿಕಲ್ ಬದಿಯಡ್ಕ ನಿವಾಸಿ ದಿ.ಮುತ್ತಪ್ಪ ಗೌಡರ ಪತ್ನಿ ಚಿನ್ನಮ್ಮ (55 ವ.) ಹಾಗೂ ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ನೂಜಿಲ ದಿ.ಬಾಬು ಆಚಾರಿ ಅವರ ಪುತ್ರ ಹರೀಶ್ ಆಚಾರಿ (35 ವ.) ಮೃತಪಟ್ಟವರು.
ವಿಶ್ವನಾಥ, ಕಿರಣ್, ಜಾನಕಿ, ಗೀತಾ, ನಿತೇಶ್, ಹೇಮಾವತಿ, ರಾಜು, ನವೀನ್, ಮುತ್ತಪ್ಪ, ಭವಿತ್, ಪೊಡಿಯ, ರೂಪೇಶ್, ವಸಂತ, ಜಿಮ್ಮಿ ಯಾನೆ ಶ್ಯಾಮ್ ಅವರು ಗಾಯಗೊಂಡವರು.
ಬಿಳಿನೆಲೆ ಗ್ರಾಮದ ಕೈಕಂಬ ಚೇರುವಿನಲ್ಲಿ ಮನೆಯೊಂದರ ಕಾಂಕ್ರೀಟ್ ಸ್ಲ್ಯಾಬ್ ಕೆಲಸಕ್ಕಾಗಿ ಕೊಕ್ಕಡದ ಕಾಂಕ್ರೀಟ್ ಕೆಲಸದ ಗುತ್ತಿಗೆದಾರರ ಜೊತೆಗೆ ತಂಡವಾಗಿ ಮಿನಿ ಲಾರಿಯಲ್ಲಿ ಹೋಗುತ್ತಿದ್ದ ವೇಳೆ ಇಚ್ಲಂಪಾಡಿ-ಮರ್ದಾಳ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಐತ್ತೂರು ಗ್ರಾಮದ ಕಲ್ಲಾಜೆ ಸೇತುವೆಗಿಂತ ಸ್ವಲ್ಪ ಮುಂಭಾಗದಲ್ಲಿ ಈ ಅವಘಡ ಸಂಭವಿಸಿತ್ತು. ಮೃತರ ಪೈಕಿ ಹರೀಶ್ ಆಚಾರಿ ಅವರು ಇಂದಬೆಟ್ಟುವಿನವರಾಗಿದ್ದು ಅವಿವಾಹಿತರಾಗಿರುವ ಅವರು ಕಳೆದ ಕೆಲವು ವರ್ಷಗಳಿಂದ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲಿನಲ್ಲಿರುವ ತನ್ನ ಬಾವ (ತಂಗಿಯ ಗಂಡ) ವಸಂತ ಆಚಾರಿ ಅವರ ಮನೆಯಲ್ಲಿ ವಾಸ್ತವ್ಯವಿದ್ದರು. ಪುತ್ತೂರು ಎಎಸ್ಪಿ ಶ್ರೀನಿವಾಸ್ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಗೋಪಾಲ ನಾಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.