HomePage_Banner_
HomePage_Banner_
HomePage_Banner_

ಜಡಿ ಮಳೆ – ಗಾಳಿಗೆ ತಾಲೂಕು ತತ್ತರ

Advt_NewsUnder_1

 ಭಾರೀ ಮಳೆಯ ಪರಿಣಾಮ ನಗರ ಪಂಚಾಯತ್ ವ್ಯಾಪ್ತಿಯ ಕಲ್ಕಣಿ ಪರಿಶಿಷ್ಟ ಜಾತಿ ಕಾಲೋನಿಯ ನಿವಾಸಿ ಕೃಷ್ಣ ಅವರ ಮನೆಯ ಒಂದು ಪಾರ್ಶ್ವದ ಗೋಡೆಯ ಕುಸಿದು ನಷ್ಟ ಉಂಟಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿ ದ್ದಾರೆ. ದಲಿತ ಮುಖಂಡ ವಸಂತ ಬಿ.ಕೆ. ಅವರು ಸ್ಥಳಕ್ಕೆ ತೆರಳಿ ಸಂಬಂಧಪಟ್ಟವರಿಗೆ ವಿಚಾರ ಮುಟ್ಟಿಸಿ ಅಗತ್ಯ ಕ್ರಮ ಆಗುವಲ್ಲಿ ಸಹಕಾರ ನೀಡಿದ್ದಾರೆ. ಈ ವೇಳೆ ರಮೇಶ್ ಕಲ್ಕಣಿ, ಕೃಷ್ಣಪ್ಪ ಕಲ್ಕಣಿ ಜೊತೆಗಿದ್ದರು.

ಸವಣಾಲು : ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ಸಂಪರ್ಕಿಸುವ ವಿದ್ಯುತ್ ಕಂಬಗಳು ಉರುಳಿ ಬಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾದ ಬಗ್ಗೆ ಸವಣಾಲು ಗ್ರಾಮದಿಂದ ವರದಿಯಾಗಿದೆ.
ಶತಮಾನಗಳಿಂದ ವಿದ್ಯುತ್ ಸಂಪರ್ಕದಿಂದ ವಂಚಿತಗೊಂಡಿದ್ದ ಮಲೆಕುಡಿಯ ಸಮುದಾಯ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಇಲಾಖೆಯ ಪರವಾನಗಿ ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಕಳೆದ ವರ್ಷವಷ್ಟೇ ಇಲ್ಲಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿತ್ತು. ಇದೀಗ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಮರಗಳು ಲೈನ್‌ಗಳ ಮೇಲೆ ಬಿದ್ದು ಸವಣಾಲು ಗ್ರಾಮದ ಜಾಲಾಡೆ, ಪಿಲಿಕಲ, ಕಂಬುಜೆ ಮೊದಲಾದೆಡೆಗಳಲ್ಲಿ ಸುಮಾರು 25 ರಿಂದ 30 ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿವೆ.
ಈ ಪ್ರದೇಶವು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಂದಾಯ ಜಮೀನಿನಲ್ಲಿ ಇದ್ದು, ಕಳೆದ ವರ್ಷ ವಿದ್ಯುತ್ ಸಂಪರ್ಕ ಮಾಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಪಾಯಕಾರಿ ಮರಗಳ ತೆರವಿಗೆ ನಿರಾಕರಿಸಿತ್ತು. ಇಂದಿನ ಈ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿ ಕಾರಣ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಸಂಘಟನೆ ಸಂಚಾಲಕ ಜಯಾನಂದ ಪಿಲಿಕಲ ಆರೋಪಿಸಿದ್ದಾರೆ. ತಕ್ಷಣ ಅರಣ್ಯ, ಮೆಸ್ಕಾಂ ಇಲಾಖೆಗಳು ಕಾರ್ಯ ಪ್ರವೃತ್ತಗೊಂಡು ಈ ಭಾಗಕ್ಕೆ ಮತ್ತೆ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಉಜಿರೆ: ಇಲ್ಲಿಯ ಚಾರ್ಮಾಡಿ ರಸ್ತೆಯು ಹಳ್ಳಿಮನೆ ರೆಸ್ಟೋರೆಂಟ್ ಎದುರು ಇರುವ ಯೋಗೀಶ್ ಆಚಾರ್ಯರವರ ವಾಸ್ತವ್ಯದ ಹಂಚಿನ ಮನೆಯು ಆ.೧೩ ರಂದು ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದೆ.
ಯೋಗೀಶ್ ಆಚಾರ್ಯರ ತಾಯಿ ಶ್ರೀಮತಿ ರತ್ನಾ(40.ವ) ವಯೋವೃದ್ಧೆ, ಪತ್ನಿ ಶ್ರೀಮತಿ ಗಾಯತ್ರಿ ,ಮಕ್ಕಳಾದ ಅಪರ್ಣ ಪದವಿ ಶಿಕ್ಷಣ ಪೂರೈಸಿದ್ದು, ವಿಶಾಕ್ ದ್ವಿತೀಯ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೀವ್ರ ಬಡತನವಿರುವುದರಿಂದ ಇವರಿಗೆ ವಾಸಮಾಡಲು ಬಾಡಿಗೆ ಮನೆಯೇ ಆಸರೆಯಾಗಿದೆ.
ಇದೀಗ ಅಕ್ಕಪಕ್ಕದ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಮನೆಗೆ ಕಂದಾಯ ಇಲಾಖೆ ಗ್ರಾ.ಪಂ ನಿಂದ ಭೇಟಿ ನೀಡಿ ತಕ್ಷಣ ಪರಿಹಾರ ನೀಡುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಕವಿತಾ ಮನೆ
ಕುಲ್ಸುಮ್ಮ ಮನೆ
ಜೈನಾಬ್ ಮನೆ
ನಸೀಮ ಮನೆ

ತೆಕ್ಕಾರು: ಈ ಬಾರಿಯ ಗಾಳಿ ಮಳೆಗೆ ತಾಲೂಕಿನ ಅನೇಕ ಭಾಗಗಳಲ್ಲಿ ಭಾರೀ ಪ್ರಮಾಣದ ಕಷ್ಟ ನಷ್ಟಗಳು ಉಂಟಾದುದಲ್ಲದೆ ತೆಕ್ಕಾರು, ಬಾರ್ಯ, ಮರಮ ಮುಂತಾದ ಪ್ರದೇಶದಲ್ಲೇ ಸುಮಾರು 13 ಮನೆಗಳಿಗೆ ಹಾನಿಯುಂಟಾಗಿದೆ. ಈ ಪೈಕಿ ಕೆಲವು ಮನೆಗಳ ಮೇಲ್ಚಾವಣಿ ಒಂದೆರಡು ಸಿಮೆಂಟ್ ಶೀಟ್, ಹೆಂಚುಗಳು ಹಾರಿ ಹೋದರೆ ಕೆಲವು ಮನೆಗಳದ್ದು ಪೂರ್ತಿ ಹೋಗಿದೆ.
ಜೈನಾಬಿ ಬಾಜಾರ ಜನತಾ ಕಾಲನಿ, ಲೆತೀಫ್, ಜೈನಾಬು ಉಮರಬ್ಬ ಬಾಜಾರ, ಇಲ್ಯಾಸ್ ಬಾಜಾರ, ಸುಲೈಮಾನ್ ಬಾಜಾರ, ಕುಲ್ಸುಮ್ಮ ತೆಕ್ಕಾರು ದಂಬೆತ್ತಡಿ, ಅಬ್ದುಲ್ ರಹಿಮಾನ್ ತೆಕ್ಕಾರು, ಹೈದರ್ ಕಾಫಿಗುಡಿ, ಸುನಂದ ಚಂದ್ರ ಮೂಲ್ಯ, ಮುಂತಾದವರ ಮನೆಗಳಿಗೆ ಗಾಳಿ ಮಳೆಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ತೆಕ್ಕಾರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್, ಪಿಡಿಒ ಉಸ್ಮಾನ್ ಪೆರ್ನೆ ಇವರು ಭೇಟಿ ಮಾಡಿ ತುರ್ತು ಸಹಾಯ ಮಾಡಿದ್ದಾರೆ.ಕಂದಾಯ ಇಲಾಖೆಯವರನ್ನೂ ಸ್ಥಳಕ್ಕೆ ಕರೆಸಿ ನಷ್ಟದ ವರದಿ ತಯಾರಿಸುವಂತೆ ಮಾಡಿದ್ದು, ಸಂತ್ರಸ್ತರಾದವರು ಇದೀಗ ಸೂಕ್ತ ಪರಿಹಾರದ ಭರವಸೆಯಲ್ಲಿದ್ದಾರೆ.

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿಯ ಕವಿತಾ ಬಾಬು ಅವರ ಹೊಸ ಮನೆಯ ಮೇಲೆ ಪಕ್ಕದ ಗುಡ್ಡ ಜರಿದು ಭಾರೀ ನಷ್ಟ ಉಂಟಾಗಿದೆ. ಮನೆಯ ಒಂದು ಪಾರ್ಶ್ವ ಪೂರ್ತಿ ಧರೆಯ ಮಣ್ಣು ಬಂದು ಗೋಡೆಗೊರಗಿ ನಿಂತಿದ್ದು ಧರೆಯಿಂದ ಬಂದ ನೀರು ಪೂರ್ತಿ ಅವರ ಮನೆಗೆ ನುಗ್ಗಿದೆ. ಬೋವಿ ಜನಾಂಗಕ್ಕೆ ಸೇರಿದ ಕವಿತಾ ಮತ್ತು ಮೇಸ್ತ್ರಿ ಕೆಲಸ ಮಾಡುತ್ತಿರುವ ಬಾಬು ಅವರು ಕಷ್ಟಪಟ್ಟು ಕನಸಿನ ಮನೆ ನಿರ್ಮಿಸಿಕೊಂಡಿದ್ದರು. ಇದೀಗ ಇದೇ ಮನೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದ್ದು ಕುಟುಂಬವನ್ನು ಕಂಗಾಲಾಗಿಸಿದೆ.
ಅರಣ್ಯ ಇಲಾಖೆಯ ವತಿಯಿಂದ ಬೀಳುವ ಹಂತದಲ್ಲಿರುವ ಮರಗಳನ್ನು ಕಡಿಯದಂತೆ ಮೌಖಿಕ ಆದೇಶ ನೀಡಲಾಗಿದೆ. ಗ್ರಾಮಕರಣಿಕರು ಸ್ಥಳಕ್ಕೆ ಆಗಮಿಸಿದ್ದು, ಮೇಲಾಧಿಕಾರಿಗಳಿಗೆ ವರದಿ ನೀಡುವ ಭರವಸೆ ನೀಡಿದ್ದಾರೆ.

ಲಾಯಿಲ ಗ್ರಾಮದ ಲಾಯಿಲಬೈಲು ಎಂಬಲ್ಲಿ ಭಾರೀ ಮಳೆಗೆ ಗುಡ್ಡವೊಂದು ಕುಸಿದು ಹಳ್ಳವೊಂದಕ್ಕೆ ಬಿದ್ದ ಪರಿಣಾಮ ಹಳ್ಳದ ನೀರು ಪಥ ಬದಲಿಸಿ ಪಕ್ಕದ ಕೃಷಿ ತೋಟಗಳಿಗೆ ನುಗ್ಗಿದ ಘಟನೆ ಆ. 14 ರಂದು ನಡೆಯಿತು. ಇದರಿಂದಾಗಿ ಪರಿಸರದ ಕೃಷಿಕರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಚಿತ್ತರಂಜನ್ ಹೆಗ್ಡೆ ಎಂಬವರ ಜಾಗದ ಬಳಿ ಈ ಘಟನೆ ನಡೆದಿದೆ. ಕಳೆದ ಬೇಸಿಗೆಯಲ್ಲಿ ಗುಡ್ಡದ ಕೆಳಗಿನ ಮಣ್ಣನ್ನು ತೆಗೆಯಲಾದುದರ ಪರಿಣಾಮ ಈ ಅವಘಡ ಆಗಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಇದೀಗ ಗುಡ್ಡ ಕುಸಿತದ ಪರಿಣಾಮ ಗದ್ದೆಯ ಅಂಚು ಒಡೆದು ಅಡಿಕೆ ತೆಂಗು ತೋಟಗಳಿಗೆ ನೀರುನುಗ್ಗಿ ಬಹುತೇಕ ಜಲಾವೃತಗೊಂಡ ದೃಶ್ಯ ಕಂಡುಬಂದಿದೆ.

ತೋಟತ್ತಾಡಿ ಗ್ರಾಮದ ಅರಂತಬೈಲು ಶ್ರೀ ಉಳ್ಳಾಲ್ತಿ ಭಜನಾ ಮಂದಿರದ ಹಿಂಬದಿ ಹಾರಗಂಡಿ ಹಳ್ಳ ವಿಪರೀತ ಗಾಳಿ ಮಳೆಗೆ ಗುಡ್ಡ ಜರಿದು ಪಕ್ಕದ ಮನೆಗಳು ಅಪಾಯದ ಹಂತದಲ್ಲಿದೆ. ಹಳ್ಳ ಕೊರೆತಕ್ಕೊಳಗಾಗಿದೆ. ತಡೆ ನಿರ್ಮಾಣಕ್ಕಾಗಿ ಸ್ಥಳೀಯ ಗ್ರಾಮಸ್ಥರು ಕಂದಾಯ ಇಲಾಖೆಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

ತೆಕ್ಕಾರು: ಇಲ್ಲಿನ ತೆಕ್ಕಾರು ಗ್ರಾಮದ ಪಿಡಿಂಕಲ್ಲು ಎಂಬಲ್ಲಿನ ಕಿರು ಸೇತುವೆಯೊಂದು ಬಿರುಕು ಬಿಟ್ಟಿದ್ದು ಕುಸಿಯುವ ಎಲ್ಲಾ ಮನ್ಸೂಚನೆ ನೀಡಿದೆ.
ಕಳೆದ 2 ವರ್ಷಗಳ ಹಿಂದೆಯೇ ಬಿರುಕು ಬಿಟ್ಟು ಸೇತುವೆಯ ತಡೆಬೇಲಿ ಕುಸಿದು ಬಿದ್ದಿರುತ್ತದೆ. ಮಳೆಗಾಲದಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಾರಣ ಕೆಲವೊಂದು ಸಂದರ್ಭದಲ್ಲಿ ಈ ಸೇತುವೆಯು ಮುಳುಗಡೆಯಾಗುತ್ತದೆ. ಈ ಸೇತುವೆ ಮೂಲಕ ಪ್ರತಿದಿನ ನೂರಾರು ವಾಹನಗಳು, ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು ಯಾವ ಸಂದರ್ಭದಲ್ಲಾದರೂ ಅಪಾಯ ಕಾದಿದೆ. ಈ ಬಗ್ಗೆ ಗ್ರಾಮ ಸಭೆಗಳಲ್ಲಿ ಮತ್ತು ಇಂಜಿನಿಯರಿಂಗ್ ಇಲಾಖೆ ಜೊತೆ ನಿರ್ಣಯ ಹಾಗೂ ಪತ್ರದ ಮೂಲಕ ತಿಳಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಜರುಗಿಲ್ಲ ಎಂದು ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್ ಅವರು ದೂರಿದ್ದು, ಇದೀಗ ಜಿಲ್ಲಾಧಿಕಾರಿಗಳಿಗೆ ನೇರ ಪತ್ರ ಬರೆದು ಸೂಕ್ತ ನ್ಯಾಯಯುತ ಪರಿಹಾರ ಕ್ರಮಕ್ಕೆ ಆಗ್ರಹಿಸಿದ್ದಾರೆ. 

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.