HomePage_Banner_
HomePage_Banner_
HomePage_Banner_

ಕುಟುಂಬ ಸಮೇತರಾಗಿ ಧರ್ಮಸ್ಥಳ ಭೇಟಿ ನೀಡಿದ ಹೆಚ್.ಡಿ.ಕೆ.

ಧರ್ಮಸ್ಥಳ : ಕರಾವಳಿ ಜಿಲ್ಲೆಗಳೂ ಸೇರಿದಂತೆ ಈ ಬಾರಿ ರಾಜ್ಯದ ನಾನಾ ಕಡೆಗಳಲ್ಲಿ ಪ್ರಮಾಣಕ್ಕಿಂತ ಹೆಚ್ಚು ಮಳೆಯಾಗಿದ್ದು ಈ ಸಂದರ್ಭ ಉಂಟಾಗಿರುವ ಭಾರೀ ಪ್ರಮಾಣದ ಆಸ್ತಿಪಾಸ್ತಿ ನಷ್ಟಕ್ಕೆ ಪರಿಹಾರ ನೀಡುವಲ್ಲಿ ಸರಕಾರದಲ್ಲಿ ಅನುದಾನದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕುಟುಂಬ ಸಮೇತರಾಗಿ ಆ.13 ರಂದು ರಾತ್ರಿ ಭೇಟಿ ನೀಡಿದ ಅವರು ಶ್ರೀ ಮಂಜುನಾಥ ದೇವರ ದರ್ಶನ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರನ್ನುದ್ಧೇಶಿಸಿ ಅವರು ಮಾತನಾಡಿದರು.
ಮೇ ಅಂತ್ಯದಲ್ಲೆ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಬೇಕೆಂದು ಉದ್ಧೇಶಿಸಿದ್ದರೂ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನೀತಿ ಸಂಹಿತೆ ಜಾರಿಯಾದುದರಿಂದ ಸಾಧ್ಯವಾಗಿಲ್ಲ. ಚುನಾವಣೆ ಮುಕ್ತಾಯವಾಗುವಂತೆ ಎಲ್ಲೆಲ್ಲಾ ಮಳೆಹಾನಿಗಳು ಸಂಭವಿಸಿದೆಯೋ ಆ ಜಿಲ್ಲೆಗಳಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದೇನೆ. ಮಳೆಯ ಕಾರಣದಿಂದ ಅತೀ ಹೆಚ್ಚು ಹಾನಿಗೊಳಗಾಗಿರುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಹಿಂದೆಲ್ಲಾ ಮಳೆಗಾಲವೆಂದರೆ ಭಾರೀ ಮಳೆಯಾಗುತ್ತಿತ್ತು. ಈಗಿನ ಕಾಲದಲ್ಲಿ ನಾವೆಲ್ಲಾ ಅದನ್ನು ಮರೆತುಬಿಟ್ಟಿದ್ದೆವು. ಈ ವರ್ಷ ಆ ನೆನಪು ಮರುಕಳಿಸುವ ರೀತಿಯಲ್ಲಿ ಮಳೆಯಾಗಿದೆ. ಮಳೆಯಿಂದ ಸಾವು ನೋವು ಆದವರಿಗೆ ಈಗಾಗಲೇ ಪರಿಹಾರ ಒದಗಿಸಲಾಗಿದೆ. ನಿರಂತರವಾಗಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದಲೇ ಮಾಹಿತಿ ಪಡೆಯಲು ನಿರ್ದೇಶಿಸಿದ್ದೇನೆ ಎಂದರು. ಈಗಾಗಲೇ ಕೊಡಗು ಜಿಲ್ಲೆಯ ಮಳೆಹಾನಿ ಪರಿಹಾರಕ್ಕೆ 100ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದು ಆ ಪೈಕಿ ೨೦ ಕೋ ರೂ. ಬಿಡುಗಡೆ ಕೂಡ ಮಾಡಲಾಗಿದೆ ಎಂದರು.
ತೆರಿಗೆ ಸಂಗ್ರಹದಲ್ಲಿ 32.7 ಪ್ರಗತಿ:
ಕಳೆದ ವರ್ಷ ಕ್ಕೆ ಹೋಲಿಸಿದರೆ ಈ ಬಾರಿ 1100 ಕ್ಕೂ ಅಧಿಕ ಕೋಟಿ ರೂ. ತೆರಿಗೆ ಸಂಗ್ರಹ ಈ ಮೂರು ತಿಂಗಳಲ್ಲಿ ಆಗಿದೆ.
32.7 ತೆರಿಗೆ ಸಂಗ್ರಹ ದಲ್ಲಿ ದಾಖಲೆ ಪ್ರಗತಿಯಾಗಿದೆ. ಅಬಕಾರಿ, ನೊಂದಣಿ, ವಾಣಿಜ್ಯ ತೆರಿಗೆಯಲ್ಲಿ ಅಪಾರ ಸಾಧನೆಯಾಗಿದೆ ಎಂದರು. ಸಾಲಮನ್ನಾದ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದು ಕೊಂಡಿದ್ದು ಸಹಕಾರಿ ಬ್ಯಾಂಕ್‌ಗಳಿಗೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆ ನಡೆಸಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಕೃಷಿ ಸಾಲ ಮನ್ನಾದ ಕುರಿತು ಕ್ರಮಕೈಗೊಳ್ಳಲಿದ್ದೇನೆ.
ಪ್ರಧಾನಿ ಮಾಡಿದ ದುಂದುವೆಚ್ಚದ ಬಗ್ಗೆ ಯಾಕೆ ಯಾರೂ ಮಾತನಾಡುವುದಿಲ್ಲ?
ಮುಖ್ಯಮಂತ್ರಿ ಪ್ರಮಾಣ ವಚನ ಸಂದರ್ಭದಲ್ಲಿ ಅತಿಥಿಗಳಿಗೆ ದುಂದುವೆಚ್ಚ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರ ಸ್ವಾಮಿ, 2014 ರಲ್ಲಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸಂದರ್ಭದಲ್ಲಿ ಬೇರೆ ಬೇರೆ ದೇಶದ ಪ್ರಧಾನಿಗಳೇ ಬಂದಿದ್ದು ಆ ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಗಿದೆ ಎಂದು ಯಾಕೆ ಯಾರೂ ಮಾತನಾಡುತ್ತಿಲ್ಲ. ಅಲ್ಲದೆ ಯಡಿಯೂರಪ್ಪ ಅವರ ಪ್ರಮಾಣವಚನ ಸಂದರ್ಭವೂ ಎಷ್ಟು ಖರ್ಚಾಗಿದೆ ಎಂದು ಯಾರಾದರೂ ಮಾಹಿತಿ ಕೇಳಿದ್ದಾರಾ?ನನ್ನ ಪ್ರಮಾಣ ವಚನ ಕಾರ್ಯಕ್ರಮದ ವೇಳೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬಂದಿದ್ದು ಅವರ ರಕ್ಷಣೆಯ ಶಿಷ್ಟಾಚಾರದ ಕಾರ್ಯಗಳನ್ನಷ್ಟೇ ಅಧಿಕಾರಿಗಳು ಮಾಡಿದ್ದಾರೆ. ಅಲ್ಲದೆ ಸಿಎಂ ಆದ ಬಳಿಕ ಸರಕಾರಿ ಕೆಲಸಗಳಿಗಾಗಿ ಮೂರು ಬಾರಿ ದೆಹಲಿಗೆ ಹೋಗಿಬಂದಿದ್ದು ಈ ವೇಳೆ ವಿಶೇಷ ವಿಮಾನ ಬಳಸದೆ ಸಾಮಾನ್ಯ ವಿಮಾನದಲ್ಲೇ ಪ್ರಯಾಣಿಸಿದ್ದೇನೆ. ದುಂದುವೆಚ್ಚಕ್ಕೆ ಆದಷ್ಟು ಕಡಿವಾಣ ಹಾಕಿದ್ದೇನೆ ಎಂದರು.
ಶಿರಾಡಿ ಬದಲು ಧರ್ಮಸ್ಥಳ ಮಾರ್ಗ ಬದಲಿಸಿ ಬಂದ ಮಾಜಿ ಪ್ರಧಾನಿ, ಹಾಲಿ ಮುಖ್ಯಮಂತ್ರಿ;
ಧಾರ್ಮಿಕ ಕ್ಷೇತ್ರಗಳ ಭೇಟಿಯ ಹಿನ್ನೆಲೆಯಲ್ಲಿ ಕುಟುಂಬ ಸಹಿತ ದ.ಕ. ಜಿಲ್ಲೆಗೆ ಆಗಮಿಸಿದ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಶಿರಾಡಿ ಮೂಲಕ ಬರಬೇಕಾದವರು ಕೊನೆ ಗಳಿಗೆಯಲ್ಲಿ ರಸ್ತೆ ಬದಲಿಸಿ ಚಾರ್ಮಾಡಿ ಘಾಟ್ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದರು. ಸಂಜೆ 7.30 ಕ್ಕೆ ಧರ್ಮಸ್ಥಳ ಸನ್ನಿಧಿ ಅತಿಥಿಗೃಹಕ್ಕೆ ತಲುಪಿದರೂ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಆಗಮಿಸುವಷ್ಟರಲ್ಲಿ ರಾತ್ರಿ 9.05 ಆಗಿತ್ತು. ಸಿ.ಎಂ. ಜೊತೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ತಾಯಿ ಚೆನ್ನಮ್ಮ ಇದ್ದರು. ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಕ್ಷೇತ್ರದ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು.
ಜೊತೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇ ಗೌಡ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್‌ಕುಂಞಿ, ಮಾಜಿ ಅಧ್ಯಕ್ಷ ಎಂ.ಬಿ. ಸದಾಶಿವ, ಜಿಲ್ಲಾ ಉಪಾಧ್ಯಕ್ಷ ಜಗನಾಥ ಗೌಡ ಅಡ್ಕಾಡಿ, ತಾಲೂಕು ಅಧ್ಯಕ್ಷ ಪ್ರವೀಣಚಂದ್ರ ಜೈನ್, ಯುವ ಜನತಾದಳ ಅಧ್ಯಕ್ಷ ಸೂರಜ್ ವಳಂಬ್ರ, ಪಕ್ಷದ ಪ್ರಮುಖರಾದ ಎಚ್.ಎನ್. ನಾಗರಾಜ್, ರಾಮ ಆಚಾರಿ, ಮೊದಲಾದವರು ಉಪಸ್ಥಿತರಿದ್ದರು.
ಧರ್ಮಸ್ಥಳದಲ್ಲೇ ವಾಸ್ತವ್ಯ
ಸಿಎಂ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿ, ಬಳಿಕ ಸುಬ್ರಹ್ಮಣ್ಯಕ್ಕೆ ತೆರಳಿ ವಾಸ್ತವ್ಯ ಹೂಡ ಬೇಕಿತ್ತಾದರೂ ಕೊನೆಗಳಿಗೆಯಲ್ಲಿ ವ್ಯಾಸ್ತವ್ಯ ಸ್ಥಳವನ್ನು ಬದಲಿಸಿ ಧರ್ಮಸ್ಥಳದಲ್ಲೇ ತಂಗಿದರು. ಇಲ್ಲಿಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ, ತಾಲೂಕಿನ ಅಡಿಕೆ ಬೆಳೆಗಾರರಿಗೆ ಕೊಳೆ ರೋಗ ನಷ್ಟ ಪರಿಹಾರ ಬಿಡುಗಡೆ, ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು ವಸ್ತುನಿಷ್ಠ ವರದಿ ತಯಾರಿಸಿ ಕೇಂದ್ರಕ್ಕೆ ಆ. ೨೫ರೊಳಗೆ ಅಭಿಪ್ರಾಯ ಮಂಡನೆ, ಎಂಡೋ ಪೀಡಿತರಿಗೆ ಮೂಲಭೂತ ಸೌಕರ್ಯ ಒದಗಿಸಲು ಮತ್ತು ಮಳೆಪರಿಹಾರಕ್ಕೆ 1ಸಾವಿರ ಕೋಟಿ ರೂ. ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಮನವಿ ನೀಡಿದರು. ಅಪರ ಜಿಲ್ಲಾಧಿಕಾರಿ ಎಸ್. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ, ಬೆಳ್ತಂಗಡಿ ತಹಶೀಲ್ದಾರ್ ಮದನ್ ಮೋಹನ್, ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ ಎಸ್.ಐ ಅವಿನಾಶ್ ಸಹಿತ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಜೊತೆಗಿದ್ದರು.
ಗೌರವ ರಕ್ಷೆ:
ಆ. 14ರಂದು ಬೆಳಗ್ಗೆ ಶಿಷ್ಟಾಚಾರದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವರಿಗೆ ಜಿಲ್ಲಾ ವಿಶೇಷ ಪೊಲೀಸ್ ದಳದಿಂದ ಗೌರವ ರಕ್ಷೆ ಸಲ್ಲಿಸಲಾಯಿತು. ಬಳಿಕ ಅವರು ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಉಪ್ಪಿನಂಗಡಿ ಮೂಲಕವಾಗಿ ಕುಟುಂಬ ಸಮೇತ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಿದರು. ಅಲ್ಲಿ ವಿಶೇಷ ಪೂಜಾದಿಗಳಲ್ಲಿ ಭಾಗಿಯಾಗಿ ತುರ್ತು ಕಾರ್ಯದ ನಿಮಿತ್ತ ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡರು ಮಧ್ಯಾಹ್ನವೇ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರು ಪ್ರಯಾಣಿಸಿದ್ದರೆ, ಸಿ.ಎಂ. ಅವರು ಪತ್ನಿ, ತಾಯಿ ಸಮೇತರಾಗಿ ಆ. 14 ರಂದು ಸಂಜೆ 5 ಗಂಟೆಗೆ ಮತ್ತೆ ಬೆಳ್ತಂಗಡಿ ಮೂಲಕ ಬಂದು ಚಾರ್ಮಾಡಿ ರಸ್ತೆಯಲ್ಲಿ ಹಾಸನಕ್ಕೆ ನಿರ್ಗಮಿಸಿದರು.
ಜಿಲ್ಲಾ ಪೊಲೀಸ್ ವತಿಯಿಂದ ಸಿ.ಎಂ. ಭದ್ರತೆಯ ಜೊತೆಗೆ ಮಾಜಿ ಪ್ರಧಾನಿಯವರ ಭದ್ರತೆ ಕೂಡ ಒದಗಿಸಿದ್ದರಿಂದ ರಸ್ತೆ ಪ್ರಯಾಣದ ವೇಳೆ ಮತ್ತು ಇತರ ಕಡೆಗಳಲ್ಲಿ ಸಹಜವಾಗಿಯೇ ಜನರಿಗೆ ಕೊಂಚಮಟ್ಟಿನ ತೊಂದರೆಗಳು ಉಂಟಾಗಿತ್ತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.