ಸಾಲುಮರ ತಿಮ್ಮಕ್ಕನ ಹೆಸರಿನಲ್ಲಿ ಟ್ರೀ ಪಾರ್ಕ್.

ಬೆಳ್ತಂಗಡಿ: ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ವಿನಾಶದಂಚಿಗೆ ತಲುಪುತ್ತಿರುವ ಸಸ್ಯ ಸಂಕುಲಗಳು ಹಾಗೂ ಔಷಧಿ ಗಿಡಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದರ ಜೊತೆಗೆ ಗ್ರಾಮೀಣ ಜೀವನ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ವೃಕ್ಷ ಉದ್ಯಾನವನ (ಟ್ರೀ ಪಾರ್ಕ್) ಕಾಮಗಾರಿ ಬೆಳ್ತಂಗಡಿ ನಗರದ ಸಮೀಪ ಭರದಿಂದ ಸಾಗುತ್ತಿದೆ.
ಬೆಳ್ತಂಗಡಿ ನಗರದಿಂದ ಅರ್ಧ ಕಿ.ಮೀ ದೂರದ ಕಲ್ಲಗುಡ್ಡೆ ಸಮೀಪ ಲಾಯಿಲ ಅರಣ್ಯ ಬ್ಲಾಕ್‌ನಲ್ಲಿ ಸುಮಾರು 10 ಹೆಕ್ಟೇರ್ (25.ಎಕ್ರೆ) ಪ್ರದೇಶವನ್ನು ಈ ಉದ್ದೇಶಕ್ಕೆ ಮೀಸಲಾಗಿ ಇಡಲಾಗಿದ್ದು, ಸಾಲುಮರ ತಿಮ್ಮಕ್ಕನ ಹೆಸರಿನಲ್ಲಿ ಈ ವೃಕ್ಷ ಉದ್ಯಾವನ (ಟ್ರೀ ಪಾರ್ಕ್) ಆಕರ್ಷಣೆಯ ಪ್ರವಾಸಿ ಕೇಂದ್ರವಾಗಿ ಮಾರ್ಪಾಡಿಸಲು ಅರಣ್ಯ ಇಲಾಖೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
ಆರಂಭಿಕ ಹಂತದಲ್ಲಿ ಈಗಾಗಲೇ ಸರಕಾರ ಈ ಉದ್ಯಾನವನ ನಿರ್ಮಾಣಕ್ಕೆ ರೂ.50 ಲಕ್ಷ ಅನುದಾನ ಮಂಜೂರುಗೊಳಿಸಿದ್ದು, ಕಾಮಗಾರಿ ಆರಂಭಗೊಂಡಿದೆ. ವನದ ಸುತ್ತಾ ಸಿಮೆಂಟ್ ಕಂಬಗಳನ್ನು ಹಾಕಿ, ಚೈನ್‌ಲಿಂಕ್ ಬೇಲಿ ನಿರ್ಮಾಣದ ಕೆಲಸ ಪೂರ್ತಿಗೊಂಡಿದೆ. ಜಾಗದ ಸುತ್ತಾ ಓಡಾಟಕ್ಕೆ ಮಣ್ಣಿನ ರಸ್ತೆಯನ್ನು ರಚನೆ ಮಾಡಲಾಗಿದ್ದು ಮುಂದೆ ಇದಕ್ಕೆ ಡಾಮರು ಹಾಕುವ ಕೆಲಸ ನಡೆಯಲಿದೆ. ಕೊಳವೆ ಬಾವಿ ರಚನೆ, ಶೌಚಾಲಯ ನಿರ್ಮಾಣ ಮಾಡಲಾಗಿದೆ. ವಾಚ್ ಟವರ್, ಆಕರ್ಷಕ ಪ್ರವೇಶ ದ್ವಾರ ಕಾಮಗಾರಿ ನಡೆಯುತ್ತಿದೆ.
ಟ್ರೀ ಪಾರ್ಕ್‌ನಲ್ಲಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಪ್ಯಾರಗೋಲ, ಮಕ್ಕಳ ಪ್ಲೇ ಪಾರ್ಕ್, ವಾಯು ವಿಹಾರಕ್ಕಾಗಿ ವಾಕ್ ಪಾತ್, ಹ್ಯಾಂಪಿ ಥೀಯೆಟರ್, ಅರಳೀಕಟ್ಟೆ, ಸಿಮೆಂಟ್ ಬೆಂಚ್ ನಿರ್ಮಾಣ ಕಾರ್ಯ ಇನ್ನಷ್ಟೇ ನಡೆಯಬೇಕಾಗಿದೆ. ಔಷಧಿ ವನ ನಿರ್ಮಾಣಕ್ಕೆ ಬೇಕಾದ ಜಾಗದ ಸಮತಟ್ಟು ಮಾಡುವ ಕಾರ್ಯ ಈಗಾಗಲೇ ನಡೆದಿದೆ. ಪೂರ್ತಿ 25 ಎಕ್ರೆಯಲ್ಲಿಯೂ ಸಸಿಗಳನ್ನು ನಾಟಿ ಮಾಡುವ ಕಾರ್ಯ ಆರಂಭಗೊಂಡಿದೆ.
ಹಣ್ಣಿನ ವನ, ನಕ್ಷತ್ರ ವನ, ರಾಶಿವನ, ಸಾರ್ವಜನಿಕರು ಸವಿನೆನಪಿಗಾಗಿ ಗಿಡ ನೆಡುವ ಸ್ಮತಿವನ, ಸುತ್ತಾ ಪರಿವೀಕ್ಷಣಾ ಪಥ ನಿರ್ಮಿಸುವ ಯೋಜನೆ ಮುಂದೆ ನಡೆಯಲಿದೆ. ಉದ್ಯಾನವನದಲ್ಲಿ ಅಳಿವಿನಂಚಿನಲ್ಲಿರುವ ವಿವಿಧ ಸಸ್ಯಗಳನ್ನು ನಾಟಿ ಮಾಡಲಾಗುತ್ತಿದೆ. ಅಲ್ಲದೆ ವಿವಿಧ ಜಾತಿಗಳ ಔಷಧಿ ಸಸ್ಯಗಳನ್ನು ಇಲ್ಲಿ ನಾಟಿ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಸ್ವಚ್ಛ ಪರಿಸರ, ಹೂ ತೋಟಗಳು ಮುಂದೆ ರಚನೆ ಮಾಡುವುದು ಯೋಜನೆಯಲ್ಲಿ ಸೇರಿದೆ.
ಉದ್ಯಾನವನದ ಒಳಗೆ ಮುಂದೆ ತುಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿಗಳನ್ನು ಇಡುವ ಬಗ್ಗೆಯೂ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಜೊತೆಗೆ ಪರಿಸರ ಸಂಬಂಧಿ ಫಲಕಗಳು, ಸಸ್ಯಗಳ ಹೆಸರಿನ ನಾಮಫಲಕಗಳು ಆಗಮಿಸುವ ಜನರಿಗೆ ಸಸ್ಯಗಳ ಪರಿಚಯ ಮಾಹಿತಿಯನ್ನು ಒದಗಿಸಲಿದೆ. ಪ್ರತಿ ತಾಲೂಕಿನಲ್ಲಿ ಒಂದು ಟ್ರೀ ಪಾರ್ಕ್ ನಿರ್ಮಿಸಬೇಕೆಂಬ ಸರಕಾರದ ಯೋಜನೆಯನ್ವಯ ಬೆಳ್ತಂಗಡಿ ನಗರ ಪಕ್ಕದಲ್ಲೇ ಇದರ ನಿರ್ಮಾಣ ಕಾರ್ಯ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.