ಕುದ್ರಾಯದಲ್ಲಿ ನದಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಆರೋಪ : ತನಿಖೆಗೆ ಗ್ರಾಮಸ್ಥರ ಆಗ್ರಹ.

Advt_NewsUnder_1
Advt_NewsUnder_1

ನಿಡ್ಲೆ : ನಿಡ್ಲೆ ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ ಶುಭಾ ದೇವಧರ್ ಇವರ ಅಧ್ಯಕ್ಷತೆಯಲ್ಲಿ ಜು.30 ರಂದು ಹಿ.ಪ್ರಾ. ಶಾಲೆ ನಿಡ್ಲೆಯಲ್ಲಿ ಜರುಗಿತು.
ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ. ಸದಸ್ಯೆ ಶ್ರೀಮತಿ ಸುಶೀಲ, ನೋಡೆಲ್ ಅಧಿಕಾರಿ ಬೆಳ್ತಂಗಡಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಿದಾನಂದ ಹೂಗಾರ್, ಗ್ರಾ.ಪಂ. ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ಪಂಚಾಯತದ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಾಜೀವಿ ಕೆ. ಶೆಟ್ಟಿ ಸ್ವಾಗತಿಸಿ, ಗತ ಸಭೆಯ ವರದಿ, ಜಮಾ-ಖರ್ಚು ಹಾಗೂ ವಾರ್ಡ್ ಸಭೆಯ ವರದಿ ವಾಚಿಸಿದರು.
ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಬಗ್ಗೆ ಗ್ರಾಮ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು. ಈ ಕಟ್ಟಡದ ಎದುರಿಗೆ ಇದ್ದ ಬಸ್ಸುತಂಗುದಾಣವನ್ನು ಪಂ. ನಿರ್ಣಯ ಮಾಡದೆ ಕೆಡವಲಾಗಿದೆ. ನೂತನ ಕಟ್ಟಡ ನಿರ್ಮಿಸುವಾಗ ನದಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಅಲ್ಲದೆ ಸಿದ್ಧಪ್ಪ ಗೌಡರ ಮನೆಗೆ ಹೋಗುವ ದಾರಿಯನ್ನು ಬಂದ್ ಮಾಡಲಾಗಿದೆ. ಪಂಚಾಯತು ಅನುಮತಿ ಇಲ್ಲದೆ ಮೇಲಿನ ಅಂತಸ್ತು ನಿರ್ಮಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಬಗ್ಗೆ ಚರ್ಚೆ ನಡೆದಾಗ ಮಾತನಾಡಿದ ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿಯವರು ಬಸ್ಸುತಂಗುದಾಣ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಬರುತ್ತದೆ. ಇದನ್ನು ಕೆಡವಿದ ನಂತರ ಪರ್ಯಾಯವಾಗಿ ಬದಲಿ ಬಸ್ಸುತಂಗುದಾಣ ನಿರ್ಮಿಸಿ ಕೊಟ್ಟಿದ್ದಾರೆ. ಸಿದ್ಧಪ್ಪ ಗೌಡರ ಮನೆಗೆ ಹೋಗಲು ಅಲ್ಲಿಯೇ ಸ್ವಲ್ಪ ಈಚೆಗೆ ರಸ್ತೆ ಇದೆ ಎಂದು ತಿಳಿಸಿ, ಇಲ್ಲಿ 94 ಸಿಯಲ್ಲಿ ಜನರ ಆಕ್ಷೇಪ ಇದ್ದರೂ ಶೇಂದಿ ಅಂಗಡಿ ಜಾಗವನ್ನು ಮಂಜೂರಾತಿ ಮಾಡಲಾಗಿದೆ ಎಂದು ಆಪಾದಿಸಿದರು.
ಪಂಚಾಯತು ಅನುಮತಿ ಇಲ್ಲದೆ ಬಸ್ಸುತಂಗುದಾಣ ಕೆಡವಿರುವುದು ಸರಿಯಲ್ಲ ಇದರ ಹಣವನ್ನು ಆಗಿನ ಪಿಡಿಒಯವರಿಂದ ವಸೂಲಿಗೆ ಬರೆಯಿರಿ ಎಂದು ಕೊರಗಪ್ಪ ನಾಯ್ಕ ಸಲಹೆಯಿತ್ತರು. ಪಂಚಾಯತು ಅನುಮತಿ ಇಲ್ಲದೆ ಕಟ್ಟಡ ನಿರ್ಮಿಸಿರುವುದಕ್ಕೆ ಕಾರ್ಯನಿರ್ವಾಹಣಾಧಿಕಾರಿ ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಬರೆಯಲು ಗ್ರಾಮಸ್ಥರ ಆಗ್ರಹದಂತೆ ನಿರ್ಣಯಿಸಲಾಯಿತು. ಈ ಸಂದರ್ಭ ಗ್ರಾಮಕರಣಿಕರು ಮಾತನಾಡಿ 292/1 ಜಾಗ ಕನ್ವರ್ಷನ್ ಆಗಿದೆ. ಈ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದಾರೆ. ನದಿಯಿಂದ ೨೫ ಲಿಂಕ್ ಬಿಟ್ಟು ಕಟ್ಟಡ ನಿರ್ಮಿಸಬೇಕು ಇಲ್ಲಿ ನದಿ ಒತ್ತುವರಿಯಾಗಿದೆ ಎಂಬ ದೂರಿನ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ನಿಡ್ಲೆ ಗ್ರಾಮದ ಬೂಡುಜಾಲು ಸ.ನಂ. 253 ರಲ್ಲಿ ಗೋಮಾಳ ಜಾಗವಿದ್ದು, ಇದರಲ್ಲಿ ಮೂರು ಮಂದಿಗೆ ೯೪ಸಿಯಲ್ಲಿ ಹಕ್ಕುಪತ್ರ ನೀಡಲಾಗಿದೆ ಎಂದು ಗ್ರಾಮಕರಣಿಕರು ತಿಳಿಸಿದರು. ಈ ಜಾಗವನ್ನು ಡೈರಿಯವರು ಕೇಳಿದ್ದಾರೆ ಅವರಿಗೆ ನೀಡುವಂತೆ ನಾಗರಿಕರು ಬೇಡಿಕೆ ಸಲ್ಲಿಸಿದರು. ನಿಡ್ಲೆ ಗ್ರಾಮದ ಬಾವಲಿ, ನೀರುತಪಳಿಕೆ, ಕುರುಂಜ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವುದು, ಬೂಡುಜಾಲಿನಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವುದು, ಗ್ರಾ.ಪಂ. ವ್ಯಾಪ್ತಿಯಲ್ಲಿ ಡಿ.ಸಿ. ಮನ್ನಾ ಜಾಗದ ಸರ್ವೆ ಮಾಡುವುದು, ಬೂಡುಜಾಲು ಅರ್ಧದಲ್ಲಿ ನಿಂತ ರಸ್ತೆಯನ್ನು ಪೂರ್ತಿಗೊಳಿಸುವುದು, ಮಡೆಂಗಲ್ಲು ಎಸ್.ಸಿ. ಕಾಲನಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಬೇಡಿಕೆ ಮಂಡಿಸಿದರು.
ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಅವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಗೆ ಜನರು ಸಹಕಾರ ನೀಡಿದರೆ ಮಾತ್ರ ಒಳ್ಳೆಯ ಕೆಲಸ ಮಾಡಬಹುದು. ಸ್ವಚ್ಛಗ್ರಾಮ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿ ತನ್ನ ನಿಧಿಯಿಂದ ಹಮ್ಮಿಕೊಂಡ ಕಾಮಗಾರಿಗಳ ವಿವರ ನೀಡಿದರು. ತಾ.ಪಂ. ಸದಸ್ಯೆ ಸುಶೀಲ ತನ್ನ ತಾ.ಪಂ. ನಿಧಿಯ ಕಾಮಗಾರಿಗಳ ವಿವರ ನೀಡಿದರು.
ಗ್ರಾ.ಪಂ. ಅಧ್ಯಕ್ಷೆ ಶುಭ ದೇವಧರ್ ಮಾತನಾಡಿ ಪಂಚಾಯತಕ್ಕೆ ಸರಕಾರದಿಂದ ಬರುವ ಅನುದಾನವನ್ನು ಎಲ್ಲಾ ವಾರ್ಡ್‌ಗಳಿಗೂ ಸಮಾನವಾಗಿ ಹಂಚಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರ ಪೂರ್ಣ ಸಹಕಾರ ಅಗತ್ಯ ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿ ಧನ್ಯವಾದವಿತ್ತರು.

ಗ್ರಾಮಸ್ಥರು ಬೇಡಿಕೆಗಳು
ನಿಡ್ಲೆ, ಹಿರ್ತಡ್ಕ, ಬಾವಲಿ ರಸ್ತೆಯನ್ನು ಅಭಿವೃದ್ಧಿ ಪಡಿಸುವುದು. ಪಿಲಿಕಜೆ, ಮಾಪಲಾಜೆ, ಬಾವಲಿ ಪ್ರದೇಶಕ್ಕೆ ನೀರಿನ ಟ್ಯಾಂಕ್. ಶೇಡಿ ಎಸ್.ಸಿ. ಕಾಲನಿ ರಸ್ತೆಯ ಕಾಂಕ್ರಿಟೀಕರಣ. ಬೂಡುಜಾಲು ರಸ್ತೆಯ ಕಾಮಗಾರಿ ಪೂರ್ತಿಗೊಳಿಸುವುದು. ಸನಿಲ ಕಾಲು ದಾರಿಯನ್ನು ಅಗಲಗೊಳಿಸಿ ಸರಿಪಡಿಸುವುದು. ಅಬಕಾರಿ, ಆಹಾರ ಇಲಾಖೆಯವರು ಗ್ರಾಮ ಸಭೆಗೆ ಬರಬೇಕು.
ಬೂಡುಜಾಲಿನಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.