HomePage_Banner_
HomePage_Banner_
HomePage_Banner_

ಶಾಲಾ ಶಿಕ್ಷಣದ ಜೊತೆಗೆ ಆಂತರಿಕ ವಿದ್ಯಾಭ್ಯಾಸ ಮುಖ್ಯ: ಸ್ವಾಮಿ ಜಿತಕಾಮಾನಂದಜಿ ಮಹಾರಾಜ್.

Advt_NewsUnder_1

ಧರ್ಮಸ್ಥಳ: ಜೀವನದಲ್ಲಿ ಯಶಸ್ಸು ಸಾಧಿಸಲು ಶಾಲಾ ಶಿಕ್ಷಣದಿಂದ ಮಾತ್ರ ಸಾಧ್ಯವಿಲ್ಲ. ಜೊತೆಗೆ ಆಂತರಿಕ ವಿದ್ಯಾಭ್ಯಾಸದ ಬಗ್ಗೆ ತಿಳಿದು ಆತ್ಮಸ್ಥೈರ್ಯ ಬೆಳೆಸಿಕೊಳ್ಳುವಲ್ಲಿ ಹಾಗೂ ನಮ್ಮ ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಏಕಾಗ್ರತೆ ಸಾಧಿಸಲು ನೈತಿಕ ಮೌಲ್ಯಾಧಾರಿತ ಪುಸ್ತಕಗಳು ಪ್ರಯೋಜನಕಾರಿಯಾಗುತ್ತದೆ ಎಂದು ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಪೂಜ್ಯ ಸ್ವಾಮಿ ಜಿತಕಾಮಾನಂದಜಿ ಮಹರಾಜ್ ನುಡಿದರು.
ಶ್ರೀ ಕ್ಷೇತ್ರದ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಜು. 31 ರಂದು, ಶಾಂತಿವನ ಟ್ರಸ್ಟ್ ಧರ್ಮಸ್ಥಳ, ಶ್ರೀ. ಧ. ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ “ಜ್ಞಾನ ಗಂಗೆ” ಮತ್ತು “ಜ್ಞಾನ ತುಂಗೆ” 2018 ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಸುಖಃ ಮತ್ತು ದುಃಖ ಎರಡೂ ಕೂಡ ಮನಸ್ಸಿನಲ್ಲೇ ಆಗುತ್ತದೆ. ಆದ್ದರಿಂದ ನಮ್ಮ ಜೀವನದ ಯಶಸ್ಸಿಗೆ ನಾವು ಮೊದಲು ಮಾಡಿಕೊಳ್ಳಬೇಕಾದ ಕೆಲಸ ಮನಸ್ಸನ್ನು ಸರಿಪಡಿಸಿಕೊಳ್ಳುವಂತಹದ್ದು. ನಮ್ಮ ಜೀವನಕ್ಕೆ ಶೈಕ್ಷಣಿಕ ವಿದ್ಯಾಭ್ಯಾಸ ಮತ್ತು ಆಂತರಿಕ ವಿದ್ಯಾಭ್ಯಾಸ ಬಲಕೊಡುತ್ತದೆ. ಯಾರೇ ಆದರೂ ತಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಏಕಾಗ್ರತೆ, ಮುಟ್ಟಿದ ಕೆಲಸ ಪೂರ್ತಿಗೊಳಿಸುವ ಅಚಲ ನಿರ್ಧಾರ, ಮಾಡುವ ಕೆಲಸವನ್ನು ಸಂತೋಷಪೂರ್ವಕವಾಗಿ ಮಾಡುವುದು, ಮತ್ತು ಭಗವಂತನಿಗೆ ಪಾರ್ಥನೆ ಸಲ್ಲಿಸುವುದು ಈ ನಾಲ್ಕು ಸೂತ್ರಗಳಿಂದ ಮಾಡಬೇಕು ಎಂದು ಬೋಧನೆ ನೀಡಿದರು. ಏಕಾಗ್ರತೆಯಿಂದ ಮಾಡುವ ಯಾವುದೇ ಕೆಲಸ ಕಷ್ಟವಾಗಲು ಸಾಧ್ಯವೇ ಇಲ್ಲ ಎಂದ ಅವರು ಮಕ್ಕಳಿಗೆ ಪಾಠದ ಶೈಲಿಯಲ್ಲಿ ಉದಾಹರಣೆಗಳ ಸಹಿತ ವಿವರಿಸಿದರು. ಏಕಾಗ್ರತೆ ಮತ್ತು ಮನಸ್ಸನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಅವರು ಪ್ರಾತ್ಯಕ್ಷಿಕೆ ಸಹಿತ ಪ್ರಸ್ತುತಿ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಾಲಾ ಶಿಕ್ಷಣದಲ್ಲಿ ರ್‍ಯಾಂಕ್ ಪಡೆದಿರುವವರೂ ಕೆಲವೊಮ್ಮೆ ಜೀವನದ ಸಣ್ಣ ಪ್ರಶ್ನೆಗಳಿಗೂ ಉತ್ತರ ನೀಡಲಾಗದೆ ಚಡಪಡಿಕೆಗೊಳಗಾಗಬಹುದು. ಆದ್ದರಿಂದ ಜೀವನದಲ್ಲಿ ಯಶಸ್ಸುಗಳಿಸಲು ಪರೀಕ್ಷೆ ಬೇರೆಯೇ ಇದೆ. ಶಾಂತಿವನದಿಂದ ಪ್ರಕಟಿಸಲಾಗುವ ನೈತಿಕ ಮೌಲ್ಯಾಧಾರಿತ ಪುಸ್ತಕಗಳಲ್ಲಿ ಸಾರ್ಥಕ ಬದುಕಿನ ಮೌಲಿಕ ಸಂದೇಶ ಅಡಕಗೊಳಿಸಲಾಗಿದೆ ಎಂದರು.
ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ಹೇಮಾವತಿ ವಿ ಹೆಗ್ಗಡೆ, ಡಿ ಹರ್ಷೇಂದ್ರ ಕುಮಾರ್, ಸುಪ್ರೀಯಾ ಹರ್ಷೇಂದ್ರ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್. ಗುರುಪ್ರಸಾದ್, ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತಾರಾಮ ತೋಲ್ಪಡಿತ್ತಾಯ ಉಪಸ್ಥಿತರಿದ್ದರು.
ಕಾವ್ಯಶ್ರೀ ಅಡಿಗ ಅಜೇರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆ ನಡೆಸಿಕೊಟ್ಟರು. ಯೋಗ ನಿರ್ದೇಶಕ ಡಾ. ಐ. ಶಶಿಕಾಂತ ಜೈನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ. ಜಿಲ್ಲಾ ಸಂಘಟಕ ಶೇಖರ ಕಡ್ತಲ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಸಂಘಟಕ ಅಶೋಕ ಸಿ. ಪೂಜಾರಿ ವಂದಿಸಿದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.