ಕರಾವಳಿ ಮಂದಿ ಸ್ವಾಭಿಮಾನ ಎಲ್ಲಿ ಪಣಕ್ಕಿಟ್ಟಿದ್ದಾರೆ…?

Advt_NewsUnder_1
Advt_NewsUnder_1
Advt_NewsUnder_1
ಸಿನಾನ್ ಇಂದಬೆಟ್ಟು

ಕೆಸರಿನಲ್ಲಿ ಮಲಗಿರುವ ಎಮ್ಮೆಯನ್ನು ಎಬ್ಬಿಸಲು ಎರಡೇಟು ಬಿಗಿದರೆ, ಎಲ್ಲೋ ದೂರದಲ್ಲಿ ಯಾರಿಗೋ ಹೊಡೆಯುವ ಶಬ್ದ ಕೇಳುತ್ತಿದೆಯಲ್ಲಾ ಎಂದು ಸುಮ್ಮನಿರುತ್ತದೆಯಂತೆ. ಇನ್ನೆರಡೇಟು ಬಿಗಿದರೆ ಇಲ್ಲೇ ಎಲ್ಲೋ ಹತ್ತಿರದಲ್ಲಿ ಶಬ್ದ ಕೇಳಿಸುತ್ತಿದೆಯಲ್ಲಾ ಎಂದು ಸುತ್ತಮುತ್ತ ನೋಡುತ್ತದೆಯಂತೆ!. ಇನ್ನೂ ನಾಲ್ಕೇಟು ಜೋರಾಗಿ ಬಾರಿಸಿದರೆ, ಹೋ ನನಗೇ ಬಾರಿಸುತ್ತಿದ್ದಾರೆ ಎಂದು ಕೆಸರಿನಿಂದ ಎದ್ದು ಓಡುತ್ತದೆಯಂತೆ. ಹೀಗೊಂದು ಕತೆ ಶಾಲೆಯಲ್ಲಿ ಓದುತ್ತಿರುವಾಗ ಶಿಕ್ಷಕರು ಹೇಳಿದ್ದರು.
ಈ ಕತೆ ಕರಾವಳಿ ಮಂದಿಗೆ ಅಕ್ಷರಶಃ ಹೇಳಿ ಮಾಡಿಸಿದಂತಿದೆ. ಕೆಸರಿನಲ್ಲಿ ಬಿದ್ದ ಎಮ್ಮೆ ಮೂರನೇ ಬಾರಿಗೆ ಪೆಟ್ಟು ಬಿದ್ದಾಗ ಎದ್ದು ಓಡುತ್ತದೆ. ಆದರೆ ಬುದ್ಧಿವಂತರೆನಿಸಿಕೊಂಡ ಕರಾವಳಿಗರು ಬಿದ್ದಲ್ಲಿ ನಾಲ್ಕು ಏಟು ಜಾಸ್ತಿ ತಿನ್ನುವರೇ ಹೊರತು ಎದ್ದು ಓಡುವುದು ಅಥವಾ ಪ್ರತಿರೋಧ ತೋರಿಸುವುದೇ ಇಲ್ಲ. ಇದು ಕರಾವಳಿಯವರ ಜಾಯಮಾನವೋ, ನಿರ್ಲಕ್ಷ್ಯವೋ ಗೊತ್ತಿಲ್ಲ. ಎಲ್ಲಿ ಏನಾದರೂ ಸರಿಯೇ, ಕರಾವಳಿ ಮಂದಿ ಮಾತ್ರ ಏನೂ ಆಗಿಲ್ಲ ಎಂಬಂತೆ ತಾವಾಯಿತು, ತಮ್ಮ ಪಾಡಾಯಿತು ಎಂದು ಸುಮ್ಮನಿದ್ದು ಬಿಡುತ್ತಾರೆ.
ಇತ್ತೀಚೆಗೆ ಕೈ-ದಳ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಿದರು. ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ, ಹಾಸನ ಹಾಗೂ ರಾಮನಗರ ಜಿಲ್ಲೆಗಳಿಗೆ ಕುಮಾರಣ್ಣ ಮೊಗೆದು ಮೊಗೆದು ಕೊಟ್ಟಿದ್ದರು. ಮುಂಬೈ-ಕರ್ನಾಟಕ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಹಾಗೂ ಮಲೆನಾಡನ್ನು ಸಂಪೂರ್ಣವಾಗಿ ಕಡೆಗಣಿಸಿದರು. ತಮಗೆ ಓಟು ನೀಡಿದ ಹಳೆ ಮೈಸೂರು ಭಾಗಗಳನ್ನು ಮಾತ್ರ ಗಮನ ದಲ್ಲಿರಿಸಿಕೊಂಡು ಮಂಡಿಸಿದ ಬಜೆಟ್‌ಗೆ ಭಾರಿ ವಿರೋಧ ಕೂಡ ವ್ಯಕ್ತವಾಯಿತು. ಪ್ರತಿಪಕ್ಷದ ನಾಯಕರು ಇದನ್ನು ಕೇವಲ ಹಾಮರಾ (ಹಾಸನ, ಮಂಡ್ಯ, ರಾಮನಗರ) ಬಜೆಟ್ ಎಂದು ಟೀಕಿಸಿದರು. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಶಾಸಕರೇ ಸರಕಾರದ ವಿರುದ್ಧ ಸಿಡಿದೆದ್ದರು. ಸಾಲ ಮನ್ನಾ ಕೇವಲ ದಕ್ಷಿಣ ಕರ್ನಾಟಕವನ್ನು ಮಾತ್ರ ದೃಷ್ಠಿಯಲ್ಲಿಟ್ಟುಕೊಂಡು ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂತು. ಉ-ಕ ಪ್ರತ್ಯೇಕ ರಾಜ್ಯ ಬೇಕು ಎಂಬ ಕೂಗು ಮತ್ತೆ ಪ್ರತಿಧ್ವನಿಸಿತು. ಅಲ್ಲಿನ ಜನರು ಒಟ್ಟಾಗಿ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ಒಟ್ಟಿನಲ್ಲಿ ಉ-ಕಕ್ಕೆ ಅನ್ಯಾಯವಾದಾಗ ಆಡಳಿತ, ವಿರೋಧ ಪಕ್ಷದ ಶಾಸಕರು ಒಟ್ಟಾಗಿ ನಿಂತರು.
ಕರಾವಳಿ ಭಾಗದ ಜನ ಹಾಗೂ ಜನಪ್ರತಿನಿಧಿಗಳೋ? ತಮಗೇನೂ ಆಗದಂತೆ ಸುಮ್ಮನಿದ್ದರು. ಮಾಧ್ಯಮಗಳ ಮುಂದೆ ನಾಲ್ಕು ಮಾತುಗಳಿಗೆ ಮಾತ್ರ ತಮ್ಮ ಪ್ರತಿರೋಧವನ್ನು ಸೀಮಿತ ವಾಗಿಟ್ಟರು. ಬಜೆಟ್‌ನಲ್ಲಿ ತಮಗೆ ಘೋರ ಅನ್ಯಾಯವಾಗಿದ್ದರೂ, ಅದರ ಬಗ್ಗೆ ಜನರಿಗೆ ತಿಳಿಸುವುದು, ಜನರನ್ನು ಒಗ್ಗೂಡಿಸುವ ಕೆಲಸವನ್ನು ಯಾವ ಜನಪ್ರತಿನಿಧಿಯೂ ಮಾಡಲಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಮಂಗಳೂರು ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೂ ಯಾವ ಪ್ರತಿಭಟನೆಯೂ ವ್ಯಕ್ತವಾಗಲಿಲ್ಲ. ಬಜೆಟ್ ಮೇಲಿನ ಚರ್ಚೆಯಲ್ಲೂ ಕರಾವಳಿ ಭಾಗದ ಶಾಸಕರು ತುಟಿ ಪಿಟಿಕ್ ಅನ್ನಲಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ತಮ್ಮ ದೋಸ್ತಿ ಸರಕಾರ ಮಂಡಿಸಿದ ಬಜೆಟ್ ಪರವಾಗಿ ಮಾತನಾಡಿದರು. ಕರಾವಳಿ ಭಾಗಕ್ಕೆ ಅನ್ಯಾಯವಾಗಿಲ್ಲ ಎಂದು ಬೆಣ್ಣೆ ಹಚ್ಚಿದರು. ಉಳಿದ ಶಾಸಕರೂ ಸುಮ್ಮನಾದರು. ಜನಪ್ರತಿನಿಧಿಗಳೇ ಸುಮ್ಮನಿದ್ದರೆ ಇನ್ನು ಜನಸಾಮಾನ್ಯರು ಮಾತನಾಡುತ್ತಾರೆಯೇ? ಮೊದಲೇ ತಮಗೆ ಪೆಟ್ಟು ಬಿದ್ದರೂ ಸುಮ್ಮನಿರುವ ಕರಾವಳಿಗರಿಗೆ ಅಂಥ ಜನಪ್ರತಿನಿಧಿಗಳೇ ಸಿಕ್ಕಿದ್ದು ಭಂಗಿ ದೇವರಿಗೆ ಹೆಂಡಗುಡುಕ ಪೂಜಾರಿ ಸಿಕ್ಕಿದ ಹಾಗೆ ಆಗಿದೆ.
ಕೇವಲ ಬಜೆಟ್ ವಿಷಯದಲ್ಲಿ ಮಾತ್ರವಲ್ಲ. ಪ್ರತಿ ಬಾರಿಯೂ ಕರಾವಳಿಗೆ ಅನ್ಯಾಯವಾದಾಗ ಯಾವ ಜನಪ್ರತಿನಿಧಿಗಳು, ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುವುದೇ ಇಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಸುಮ್ಮನಾಗಿ ಬಿಡುತ್ತಾರೆ!. ಯಾರಿಗೆ ಏನಾದ್ರೆ ಏನು, ನಾವು ಚೆನ್ನಾಗಿದ್ದರೆ ಸಾಕು ಎನ್ನುವ ಸ್ವಾರ್ಥ ಮನೋಭಾವ ಕರಾವಳಿಗರದ್ದು. ಉತ್ತರ ಕರ್ನಾಟಕದ ಮಂದಿಗೆ ತಮ್ಮ ಭಾಷೆ, ನೆಲದ ಮೇಲಿರುವ ಅಭಿಮಾನ ಕರಾವಳಿಗರಿಗಿಲ್ಲ. ತಮಗೆ ಅನ್ಯಾಯವಾದಾಗ ಪ್ರತಿಭಟಿಸುವ ಛಾತಿ, ತಮ್ಮ ಅಸ್ಮಿತೆಗೆ ಧಕ್ಕೆ ಬಂದಾಗ ಸೆಟೆದು ನಿಲ್ಲುವ ಒಗ್ಗಟ್ಟು ಇನ್ನೂ ಕರಾವಳಿಗರಿಗೆ ಬಂದಿಲ್ಲ. ಕರಾವಳಿಯ ಈ ಹಿಂದಿನ ವಿದ್ಯಮಾನಗಳನ್ನು ನೋಡಿದರೆ ಈ ವಿಷಯ ವೇದ್ಯವಾಗುತ್ತದೆ. ಕರಾವಳಿಯನ್ನು ಕಡೆಗಣಿಸಿದಾಗ ಜನಸಾಮಾನ್ಯರು ಹಾಗೂ ಜನಪ್ರತಿನಿಧಿಗಳು ಸುಮ್ಮನಿದ್ದಿದ್ದರಿಂದಲೇ ಯಾವ ಸರಕಾರವೂ ಕರಾವಳಿಯನ್ನು ಕೇರೇ ಮಾಡುತ್ತಿಲ್ಲ. ಬಹುಶಃ ಕರಾವಳಿಗರಿಗೂ ಅದು ಬೇಡ ಎಂದು ಕಾಣುತ್ತದೆ.
ಕೆಲ ವರ್ಷಗಳ ಹಿಂದೆ ಕೇಂದ್ರ ಸರಕಾರ ಕರಾವಳಿ ಜಿಲ್ಲೆಗಳಿಗೆ ಮಾರಕವಾಗುವ ಕಸ್ತೂರಿ ರಂಗನ್ ಯೋಜನೆ ಜಾರಿಗೊಳಿಸುವುದರ ಬಗ್ಗೆ ಪ್ರಸ್ತಾಪಿಸಿದಾಗ ನಾಲ್ಕೈದು ಸಭೆ ಸಮಾರಂಭ ಮಾಡಿ, ಜನಪ್ರತಿನಿಧಿಗಳು ಭಾಷಣಗೈದಿದ್ದು ಬಿಟ್ಟರೆ ಇನ್ಯಾವ ಪ್ರಬಲ ಆಕ್ರೋಶ ಹಾಗೂ ಪ್ರತಿಭಟನೆ ಆಗಲಿಲ್ಲ. ಎತ್ತಿನ ಹೊಳೆ ಯೋಜನೆ ಜಾರಿಗೆ ರಾಜ್ಯ ಸರಕಾರ ಮುಂದಾದಾಗಲೂ ಅಷ್ಟೇ, ನಾಲ್ಕೈದು ಮಂದಿ ವಿರೋಧಿಸಿ ಪ್ರತಿಭಟಿಸಿದ್ದು ಬಿಟ್ಟರೆ ಕರಾವಳಿಯಲ್ಲಿ ಆಕ್ರೋಶದ ಅಲೆ ಕಂಡುಬರಲಿಲ್ಲ. ಸರಕಾರ ಏನೇ ಮಾಡಿದರೂ ನಮ್ಮ ಕರಾವಳಿಗರು ಮಾತ್ರ ವಿಶಾಲ ಹೃದಯಿಗಳು. ಎಲ್ಲವನ್ನೂ ಸಹಿಸಿಕೊಂಡು ನಮ್ಮದು ಬುದ್ಧಿವಂತರ ಜಿಲ್ಲೆ ಎಂದು ಮತ್ತೆ ಮತ್ತೆ ನಿರೂಪಿಸುತ್ತಿದ್ದಾರೆ.
ಈ ವಿಷಯದಲ್ಲಿ ಉತ್ತರ ಕರ್ನಾಟಕದ ಮಂದಿಯನ್ನು ಮೆಚ್ಚಲೇಬೇಕು. ತಮಗೆ ಅನ್ಯಾಯವಾದಾಗ ಜಾತಿ, ಮತ, ಪಕ್ಷ ಹಾಗೂ ಪಂಗಡ ನೋಡದೆ ಸಿಡಿದೆದ್ದರು. ಅಲ್ಲಿನ ಜನ ಪ್ರತಿನಿಧಿಗಳು ನಾಯಕಯತ್ವ ವಹಿಸಿಕೊಂಡರು. ಬಜೆಟ್‌ನಲ್ಲಿ ಅನ್ಯಾಯವಾದಾಗ ಬಿಜೆಪಿ ನಾಯಕ ಶ್ರೀರಾಮುಲು ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕೆಂದು ಸದನದಲ್ಲಿ ಧ್ವನಿ ಎತ್ತಿದರು. ಪಕ್ಷಾತೀತವಾಗಿ ರಾಮುಲು ಹೇಳಿಕೆಗೆ ಉ-ಕ ಭಾಗದ ಎಲ್ಲ ಶಾಸಕರು ಹಾಗೂ ಸಚಿವರು ಬೆಂಬಲ ಸೂಚಿಸಿದರು. ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆ ಆಯಿತು. ಅಲ್ಲಿನ ಜನರೂ ಬೀದಿಗಿಳಿದರು. ಇತ್ತೀಚೆಗೆ ದೋಸ್ತಿ ಸರಕಾರದ ಸಚಿವ ಸಂಪುಟ ರಚನೆ ಮಾಡುವಾಗಲೂ ಉತ್ತರ ಕರ್ನಾಟಕದ ಮಂದಿ, ನಮ್ಮ ಭಾಗದ ಶಾಸಕರಿಗೆ ಹೆಚ್ಚಿನ ಮಂತ್ರಿಗಿರಿ ಕೊಡಬೇಕು ಎಂದು ಆಗ್ರಹಿಸಿ, ಮೇಲುಗೈ ಸಾಧಿಸಿದರು. ಉಪ-ಮುಖ್ಯಮಂತ್ರಿ ಸ್ಥಾನ ಉತ್ತರ ಕರ್ನಾಟಕಕ್ಕೆ ಬೇಕು ಎಂದು ಪಟ್ಟು ಹಿಡಿದರು. ಅದು ಸಾಧ್ಯವಾಗದಿದ್ದರೂ ಅವರ ಹೋರಾಟ, ಕಿಚ್ಚು ಮಾತ್ರ ಮೆಚ್ಚುವಂಥದ್ದು. ಆದರೆ ಕರಾವಳಿಗೆ ಅದ್ಯಾವುದೂ ಬೇಡ. ಕೇವಲ ಒಂದೇ ಒಂದು ಮಂತ್ರಿ ಸ್ಥಾನ ಸಿಕ್ಕರೂ ಖುಷಿ ಪಡು ಎಂಬ ಸೂತ್ರವನ್ನು ಅಳವಡಿಸಿಕೊಂಡು ದೀರ್ಘ ಮೌನಕ್ಕೆ ಜಾರಿದ್ದಾರೆ.
ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಉ-ಕ ಮಂದಿ ಪ್ರತಿಭಟನೆ ನಡೆಸಿದಾಗ ಇಡೀ ರಾಷ್ಟ್ರದ ಗಮನ ಸೆಳೆಯಿತು. ಹಲವು ಬಾರಿ ಕರ್ನಾಟಕ ಬಂದ್ ಆಯಿತು. ಕರ್ನಾಟಕದಿಂದ ಗೋವಾಗೆ ಹೋಗುವ ಎಲ್ಲ ವಸ್ತುಗಳನ್ನು ತಡೆಯಲಾಯಿತು. ಕರ್ನಾಟಕ-ಗೋವಾ ಸಂಪರ್ಕವೂ ಕೆಲದಿನ ನಿಂತು ಹೋಯಿತು. ಆದರೆ ಕರಾವಳಿಗರು ಕಸ್ತೂರಿ ರಂಗನ್, ಎತ್ತಿನಹೊಳೆ, ಎಂಡೋಸಲ್ಫಾನ್, ಕಂಬಳ ನಿಷೇಧ ಮುಂತಾದ ತಮ್ಮ ಅಸ್ಮಿತೆಗೆ ಧಕ್ಕೆ ಬರುವಂತಹ ಯೋಜನೆ, ಕಾನೂನು ಬಂದಾಗ ಪ್ರತಿಭಟಿಸುವ ಧೈರ್ಯ ತೋರಲಿಲ್ಲ. ಪ್ರತಿಭಟಿಸಲಿಲ್ಲ ಎಂದಲ್ಲ. ಆದರೆ ಉತ್ತರ ಕರ್ನಾಟಕದ ಮಂದಿಯ ಕಿಚ್ಚು, ಪ್ರತಿಭಟಿಸುವ ಪರಿ, ಸರಕಾರಕ್ಕೆ ಬಿಸಿ ಮುಟ್ಟುವ ಹಾಗೆ ಬೀದಿಗಿಳಿಯಲು ಯಾರೂ ಮುಂದೆ ಬರಲಿಲ್ಲ. ಮುಂದೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ.
ಕರಾವಳಿಯಲ್ಲಿ ಕೋಮು ಪ್ರಚೋದಿತ ಘಟನೆಗಳಾದಾಗ, ಶಾಸಕರು, ಸಚಿವರು, ಸಂಸದರು ಸಹಿತ ಎಲ್ಲರೂ ಬೀದಿಗಿಳಿಯುತ್ತಾರೆ. ತಮ್ಮ ತಮ್ಮ ಧರ್ಮದವರ ಪರವಾಗಿ ಮಾತನಾಡಿ ಉರಿಯುತ್ತಿರುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಾರೆ. ಒಂದೆರಡು ತಲೆ ಉರುಳಿದ ಬಳಿಕ, ರಕ್ತದ ಕೋಡಿ ಹರಿದ ಬಳಿಕ ಕರಾವಳಿ ತಣ್ಣಗಾಗುತ್ತದೆ. ಅಷ್ಟೊತ್ತಿಗೆ ಬೇಳೆ ಬೇಯಿಸಬೇಕಾದವರ ಎಲ್ಲ ಕೆಲಸಗಳೂ ಸಲೀಸಾಗಿ ನಡೆದಿರುತ್ತದೆ. ಹೌದು, ಕರಾವಳಿಯ ಜನಸಾಮಾನ್ಯರಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಕೋಮು ದ್ವೇಷದಲ್ಲಿ ಇರುವಷ್ಟು ಆಸಕ್ತಿ, ದರ್ದು, ಕಾಳಜಿ ಅಭಿವೃದ್ಧಿ ವಿಷಯದಲ್ಲಿ ಯಾಕೆ ಇಲ್ಲ? ಅಭಿವೃದ್ಧಿ ವಿಷಯದಲ್ಲಿ ಅನ್ಯಾಯವಾದಾಗ ಅಲ್ಲಿನ ಜನರಿಗೆ ಹಾಗೂ ರಾಜಕಾರಣಿಗಳು ಯಾಕೆ ಬೀದಿಗಿಳಿದು ಪ್ರತಿಭಟಿಸುವುದಿಲ್ಲ? ಬುದ್ಧಿವಂತರ ಜಿಲ್ಲೆಯ ಜನರು ಅಷ್ಟೊಂದು ಆಲಸಿಗಳೇ? ಜಡವಂತರೇ? ಅಥವಾ ನಿರ್ಲಕ್ಷ್ಯವೇ?
ಕರಾವಳಿ ಜಿಲ್ಲೆಗಳಲ್ಲಿ ಮೂಲಸೌಕರ್ಯ, ಸವಲತ್ತುಗಳಿಗೆ ಯಾವುದೇ ಕೊರತೆ ಇಲ್ಲ. ಬೇಕಾದಷ್ಟು ಸಂಪನ್ಮೂಲಗಳೂ ಇವೆ. ಕೈಗಾರಿಕೆ, ಉದ್ಯಮ, ಐಟಿ-ಬಿಟಿಗೆ ಪೂರಕವಾದ ಸೌಕರ್ಯಗಳು ಇವೆ. ಎಲ್ಲ ಮಾದರಿಯ ಸಾರಿಗೆ ವ್ಯವಸ್ಥೆ ಕೂಡ ಇದೆ. ತಜ್ಞರ ಪ್ರಕಾರ ಮಂಗಳೂರನ್ನು ಬೆಂಗಳೂರಿಗೆ ಸರಿ ಸಮಾನವಾಗಿ ಅಭಿವೃದ್ಧಿ ಪಡಿಸಬಹುದು. ಆದರೆ ಅಲ್ಲಿನ ಕೋಮು ಕಲಹಗಳಿಂದಾಗಿ ಯಾವ ಉನ್ನತ ಕಂಪನಿಗಳು ಮಂಗಳೂರನ್ನು ಮೂಸಿಯೂ ನೋಡುತ್ತಿಲ್ಲ. ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದಾಗಿ ಬೆಳವಣಿಗೆ ಕುಂಠಿತವಾಗಿದೆ. ಅಲ್ಲಿನ ಜನರಿಗೂ ತಮಗೆ ಬೇಕಾದುದ್ದನ್ನು ಪ್ರತಿಭಟಿಸಿ ಪಡೆದುಕೊಳ್ಳುವ ಛಾತಿ ಇಲ್ಲ. ತಮ್ಮ ನೆಲ, ಜಲ, ಸ್ವಾಭಿಮಾನ, ಅಸ್ಮಿತೆ ಬಗ್ಗೆ ಕರಾವಳಿಗರಿಗೆ ಯಾವಾಗ ಜ್ಞಾನೋದಯವಾಗುತ್ತೋ ದೇವರಿಗೇ ಗೊತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.