ಅಪಾಯಕ್ಕೀಡಾಗಿಸಬಹುದು ಆನ್‌ಲೈನ್ ಆತ್ಮೀಯತೆ.

ನಾನು ಕ್ಷೇಮ, ನೀನೂ ಕ್ಷೇಮವೆಂದು ಭಾವಿಸುತ್ತೇನೆ. ಹೀಗೆ ಸುಂದರವಾಗಿ ಒಕ್ಕಣೆಯಿರಿಸಿ ಶುರುವಾಗುವ ಪತ್ರ ಸಂಭಾಷಣೆಗಳು, ಅಂದಿನವರ ಸ್ನೇಹ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದವು. ಓದಿದಷ್ಟೂ ಕುತೂಹಲ ಕೆರಳಿಸುವ ಪತ್ರಗಳಿಗಾಗಿ ದಿನಗಟ್ಟಲೆ ಕಾಯುವ ಮಜ ಏನೆಂಬುದು, ಪತ್ರ ವ್ಯವಹಾರ ನಡೆಸಿದವರಿಗಷ್ಟೇ ಗೊತ್ತು. ಅಂಚೆಯಣ್ಣ ಹೊತ್ತು ತರುತ್ತಿದ್ದ ಹುಟ್ಟು-ಹಬ್ಬಗಳ ಶುಭಾಶಯ, ಮದುವೆ-ಮುಂಜಿಯ ಕರೆಯೋಲೆ, ರಕ್ಷಾಬಂಧನ, ಅಷ್ಟೇ ಯಾಕೆ.. ನಲ್ಲ-ನಲ್ಲೆಯರ ಪಿಸು ಮಾತುಗಳೂ ಅಂಚೆ ಲಕೋಟೆಯೊಳಗೆ ಅಡಗಿ ಕೈ ತಲುಪುವ ಭಾವುಕ ಸನ್ನಿವೇಶ ಕಾಳಿದಾಸನ ಮೇಘ ಸಂದೇಶದಷ್ಟೇ ಕೌತುಕವನ್ನು ಸೃಷ್ಟಿಸುತ್ತಿತ್ತು. ಅದೆಷ್ಟೇ ಉದ್ವೇಗವಿದ್ದರೂ, ಕಳುಹಿಸಿದ ಸಂದೇಶಕ್ಕೆ ಪ್ರತ್ಯುತ್ತರ ಬರಲು ದಿನಗಟ್ಟಲೆ ಕಾಯಲೇ ಬೇಕಾದ ಅನಿವಾರ್ಯತೆ. ಹಾಗಾಗಿಯೇ ಅಂದಿನವರ ಸಂಬಂಧಗಳೂ ಶಾಶ್ವತವಾಗಿರುತ್ತಿತ್ತೆಂದು ಅನ್ನಿಸುತ್ತದೆ. ಆ ಕಾಲದ ಸ್ನೇಹ-ಸಂಬಂಧಗಳು ನಿಜವಾಗಿಯೂ ಅದ್ಭುತವಾಗಿದ್ದವು. ಬಾಲ್ಯದಿಂದ – ಮುಪ್ಪಿನವರೆಗೆ ಜೊತೆಗೂಡಿ ಬೆಳೆದವರೇ ಸ್ನೇಹಿತರಾಗಿರುತ್ತಿದ್ದರು. ಕೇವಲ ಸಂಭ್ರಮಗಳಿಗೆ ಮೀಸಲಾಗದ ಸ್ನೇಹಿತರು ದುಃಖದಲ್ಲೂ ಪಾಲುದಾರರಾಗಿ, ಕಣ್ಣೀರು ಒರೆಸುವ ಕೈಗಳಾಗಿ ಸಾಂತ್ವನ ನೀಡುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿ ಅದಕ್ಕೆ ತದ್ವಿರುದ್ಧ. ಬದುಕು ಆಧುನೀಕರಣಗೊಂಡಂತೆ, ಸಂಬಂಧಗಳೂ ಯಾಂತ್ರಿಕವಾಗುತ್ತಿದೆ. ಸದಾ ಹೊಸತನಕ್ಕೆ ಹಪಹಪಿಸುವ ಯುವ ಜನಾಂಗ, ಗಂಟೆಗೊಬ್ಬರಂತೆ ಸ್ನೇಹಿತರನ್ನು ಬದಲಾಯಿಸುತ್ತಿದ್ದಾರೆ. ಗೊತ್ತು-ಗುರಿಯಿಲ್ಲದವನು ಕೆಲವೇ ಕ್ಷಣಗಳಲ್ಲಿ ಆತ್ಮೀಯನೆನಿಸಿಕೊಂಡು, ತಮ್ಮ ಖಾಸಗಿ ವಿಷಯಗಳೆಲ್ಲವನ್ನೂ ಅವರ ಮುಂದೆ ಒದರಿ ಬಿಡುವಷ್ಟು ಸ್ನೇಹ- ಸಂಬಂಧಗಳು ಜಿಡ್ಡುಗಟ್ಟಿವೆ.
ಇಂದಿನ ಸ್ನೇಹ-ಸಂಬಂಧಗಳು ಹೇಳಿ-ಕೇಳಿ ಹುಟ್ಟಿಕೊಳ್ಳುವಂತವುಗಳಲ್ಲ. ಯಾರು-ಯಾರಿಗೆ-ಎಲ್ಲಿ ಗಂಟು ಬೀಳುತ್ತಾರೆ ಎಂಬುದನ್ನು ನಿಖರವಾಗಿ ಹೇಳತೀರದು. ಅದರಲ್ಲೂ ನಾವಿಂದು ೪ಉ ಯುಗದಲ್ಲಿ ಬದುಕುತ್ತಿದ್ದೇವೆ. ಸ್ನೇಹ ಸಂಪಾದಿಸಲು ಕಾರಣಗಳೇ ಬೇಕಿಲ್ಲ. ಸಾಮಾಜಿಕ ಜಾಲತಾಣ ಗಳಲ್ಲಿ ಬೇಕಾಬಿಟ್ಟಿ ಗೆಳೆಯರು ಸಿಗುತ್ತಾರೆ. ನಮ್ಮ ಪೋಸ್ಟ್‌ಗಳಿಗೆ ತಪ್ಪದೇ ಲೈಕ್‌ಕೊಟ್ಟು, ಕಮೆಂಟ್ ಹೊಡೆಯುವವನು ನಮಗೆ ಆಪ್ತನೆನಿಸಿಬಿಡುತ್ತಾನೆ. ಹಾಯ್-ಬಾಯ್ನಿಂದ ಆರಂಭವಾಗುವ ಮೆಸೇಜ್‌ಗಳು ಬೈ-ಟು ಕಾಫಿ ಕುಡಿಯುವ ಮಟ್ಟಿಗೆ ಸಂಬಂಧಗಳು ಅಗ್ಗವಾಗಿಬಿಟ್ಟಿದೆ ಎಂಬುದು ಕಣ್ಣಮುಂದಿರುವ ಸತ್ಯ.
ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಸಾಕಷ್ಟು ಪ್ರಯೋಜನಕಾರಿ ಮಾಧ್ಯಮವಾಗಿ ಬೆಳೆಯುತ್ತಿದೆ. ಮಾಹಿತಿಗಳ ಭಂಡಾರವೇ ಆಗಿರುವ ಇವುಗಳು ಸಮಾನ ಮನಸ್ಕರನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ವಿಷಯವೇ. ಆರೋಗ್ಯಕರ ವಿಚಾರ-ವಿನಿಮಯಗಳಿಗೆ, ಚರ್ಚೆಗಳಿಗೆ ಸಾಮಾಜಿಕ ಜಾಲತಾಣಗಳು ಮುಕ್ತವಾದ ಅವಕಾಶವನ್ನು ನೀಡುತ್ತಿದೆ. ಆದರೆ ಇಂದಿನ ಯುವ ಜನಾಂಗ ಅವೆಲ್ಲವನ್ನೂ ಮೀರಿ, ಮನರಂಜನೆ, ಮೋಜು-ಮಸ್ತಿಗಳಿಗಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿರುವುದು ಖೇದಕರ ಸಂಗತಿ. ದಿನಪೂರ್ತಿ ಆನ್‌ಲೈನ್‌ನಲ್ಲಿ ಹರಟುವ ಯುವ ಸಮೂಹ ಹೊಸ-ಹೊಸ ಸ್ನೇಹಿತರಿಗಾಗಿ ಜಾಲತಾಣಗಳನ್ನೇ ಜಾಲಾಡಿಬಿಡುತ್ತಿದೆ. ಗುರುತು-ಪರಿಚಯ ಇಲ್ಲದವರ ಜೊತೆಗೆ ಅತಿಯಾಗಿ ಸಲುಗೆ ಬೆಳೆಸಿಕೊಂಡು, ಪಾರ್ಕು, ಸಿನಿಮಾ ಅಂತೆಲ್ಲಾ ಅಡ್ಡಾಡಿ, ಕೊನೆಗೆ ಪಂಗನಾಮ ಹಾಕಿಸಿಕೊಂಡಾಗಲೆ ವಾಸ್ತವಾಂಶ ಅರಿವಿಗೆ ಬರುವುದು. ಆ ಹೊತ್ತಿಗಾಗಲೆ ಕಾಲ ಮಿಂಚಿ ಹೋಗಿರುತ್ತದೆ.
ಆನ್‌ಲೈನ್‌ನಲ್ಲಿ ಅದೆಷ್ಟೋ ಗೋಮುಖ ವ್ಯಾಘ್ರಗಳು ಹೊಂಚು ಹಾಕಿ ಕಾದು ಕುಳಿತಿರುತ್ತಾರೆ. ಒಡನಾಟವೇ ಇಲ್ಲದ ಅಪರಿಚಿತ ವ್ಯಕ್ತಿಯ ಮೋಡಿಯ ಮಾತುಗಳು ನಮ್ಮನ್ನು ಸಹಜವಾಗಿಯೇ ಆಕರ್ಷಿತರನ್ನಾಗಿಸುತ್ತದೆ. ಪೂಸಿ ಹೊಡೆದು ನೈಸಾಗಿ ಮಾತನಾಡುವ ಇಂತವರ ಬಗ್ಗೆ ನಾವು ಸದಾ ಎಚ್ಚರದಿಂದಿರಬೇಕು. ಅದರಲ್ಲೂ ಮಹಿಳೆಯರು ಅಪರಿಚಿತರ ಬಗ್ಗೆ ತೀರಾ ನಿಗಾವಹಿಸಿಕೊಂಡೇ ವ್ಯವಹರಿಸಬೇಕು.
ತೀರಾ ಆತ್ಮೀಯರಂತೆ ನಟಿಸುವ ಸಮಯ ಸಾಧಕರು, ನಮ್ಮ ಖಾಸಗಿ ವಿಚಾರಗಳನ್ನು ತಿಳಿದುಕೊಂಡು ಮುಂದೆ ಅದನ್ನೇ ಬಂಡವಾಳವಾಗಿರಿಸಿಕೊಂಡು ನಮ್ಮನ್ನು ಬ್ಲಾಕ್‌ಮೇಲ್ ಮಾಡಿ ತಮಗೆ ಬೇಕೆನಿಸಿದನ್ನು ಮಾಡಿಸಿಕೊಳ್ಳುವ ಲಂಪಟರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊರತೆಯೇನಿಲ್ಲ. ಅದರಲ್ಲೂ ಪ್ರೀತಿ ಪ್ರೇಮದ ವಿಷಯದಲ್ಲಿ ಆನ್‌ಲೈನ್ ಅಪರಿಚಿತರನ್ನು ನಂಬಲೇಬಾರದು. ಹಣಕ್ಕಾಗಿ ಕಾಡುವ, ಕಾಮಕ್ಕಾಗಿ ಹೊಂಚು ಹಾಕುವ ಮೋಸಗಾರರು, ನಯವಿನಯತೆಗಳಿಂದಲೆ ಪ್ರೀತಿ-ಪ್ರೇಮದ ಸುಳಿಯಲ್ಲಿ ಬೀಳಿಸಿಕೊಳ್ಳಲು ಖೆಡ್ಡಾ ಸಿದ್ಧಪಡಿಸಿಕೊಂಡಿರುತ್ತಾರೆ. ಇಂತಹ ಸನ್ನಿವೇಶಗಳಿಂದ. ಮುಗ್ದ ಜೀವಗಳು ಪ್ರಾಣಕಳೆದುಕೊಂಡ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿದ್ದರೂ, ನಾವು ಮತ್ತೆ ಇಂತವುಗಳ ಹಿಂದೆ ಹೋಗಿ ಮೂರ್ಖರಾಗುತ್ತಿದ್ದೇವೆ.
ಖಾಸಗಿ ವಿಚಾರಗಳನ್ನು ಆನ್‌ಲೈನ್ ಆಪ್ತರ ಜೊತೆ ಹಂಚಿಕೊಳ್ಳುವುದರಿಂದಾಗುವ ಅನಾಹುತಗಳು ಅಷ್ಟಿಷ್ಟಲ್ಲ. ಕಳ್ಳತನ, ದರೋಡೆ, ಮಾರಣಾಂತಿಕ ಹಲ್ಲೆ, ಆಕ್ರಮಣದಂತಹ ದುರ್ಘಟನೆಗಳಿಗೆ ಆನ್‌ಲೈನ್-ಆಪ್ತರು ಕಾರಣರಾಗುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಜಗತ್ತಿನ ಅದ್ಯಾವುದೋ ಮೂಲೆಯಲ್ಲಿ ಕುಳಿತವನು ನಮ್ಮ ದಿನಚರಿ, ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಕಾಳಜಿ ವಹಿಸಿ ವಿಷಯ ಸಂಗ್ರಹಣೆ ಮಾಡಿಕೊಂಡು, ಕೊನೆಗೊಂದು ದಿನ ನಮ್ಮನ್ನು ದೋಚಿ ಅಸಲಿ ಮುಖವನ್ನು ತೋರಿಸಿಯೇ ಬಿಡುತ್ತಾನೆ. ನಾವೇ ಸೃಷ್ಟಿಸಿಕೊಳ್ಳುವ ಇಂತಹ ಅವಾಂತರಗಳಿಗೆ ಯಾರ್‍ಯಾರನ್ನೋ ದೂರಿ ಏನು ಪ್ರಯೋಜನ?. ಸಾಮಾಜಿಕ ಜಾಲತಾಣಗಳು ಅದೆಷ್ಟೇ ಉಪಯುಕ್ತವೆನಿಸಿದರೂ, ಅದರಿಂದಾಗುವ ಅನಾಹುತಗಳು ಅದಕ್ಕಿಂತಲೂ ದುಪ್ಪಟ್ಟು. ಮಾಹಿತಿಯ ಸಾಗರವೇ ಆಗಿರುವ ಸಾಮಾಜಿಕ ಜಾಲತಾಣಗಳು ಆರೋಗ್ಯಕರ ಚರ್ಚೆಗೆ, ಮಾಹಿತಿ ಸಂಗ್ರಹಣೆಗೆ ಉಪಯುಕ್ತವಾದರಷ್ಟೇ ಒಳ್ಳೆಯದು. ಇನ್ನು ಆನ್‌ಲೈನ್‌ನಲ್ಲಿ ಗೆಳೆಯರನ್ನು ಸಂಪಾದಿಸುವುದು ಕೆಟ್ಟ ಹವ್ಯಾಸವೇನಲ್ಲ. ಹೊಸ ಪರಿಚಯಗಳು ಹೊಸ ಅನುಭವ ನೀಡಬಹುದು.
ಹಾಗಂದ ಮಾತ್ರಕ್ಕೆ ಬೋರು ಕಳೆಯುವ ಸೋಗಿನಲ್ಲಿ ಒಡನಾಟವೇ ಇಲ್ಲದವರನ್ನು, ಆತ್ಮೀಯರನ್ನಾಗಿ ಮಾಡಿಕೊಳ್ಳುವುದೂ, ಉರಿಯುವ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡ ಹಾಗೆ. ಯಾವಾಗ ನಮ್ಮನ್ನು ಅಪಾಯಕ್ಕೆ ದೂಡುತ್ತದೆ ಎಂಬುದನ್ನು ಹೇಳಲಸಾಧ್ಯ. ಹುಟ್ಟು ರಕ್ತ-ಸಂಬಂಧಿಗಳೇ ದಾಯಾದಿಗಳಾಗುತ್ತಿರುವ ಈ ಸನ್ನಿವೇಶದಲ್ಲಿ ಅಪರಿಚಿತರನ್ನು ಮನಸ್ಸಿಗೆ ಹಚ್ಚಿಕೊಳ್ಳುವುದು ಮೂರ್ಖತನವಾಗಿಬಿಡುತ್ತದೆ. ಆನ್‌ಲೈನ್ ಸ್ನೇಹ ವಿಚಾರ ವಿನಿಮಯಗಳಿಗಷ್ಟೇ ಸೀಮಿತವಾಗಿರಲಿ, ವೈಯಕ್ತಿಕ ವಿಚಾರ ಹಂಚಿಕೆಗಲ್ಲ, ಎಂಬುದನ್ನು ನಮ್ಮ ಯುವ ಜನತೆ ಅರಿತುಕೊಳ್ಳಬೇಕಾಗಿದೆ.

  • ಗುರು ಗೇರುಕಟ್ಟೆ, ಅಂಚೆ ಪಾಲಕರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.