ಘನತ್ಯಾಜ್ಯದ ವಿಕೋಪ ನಾಳೆಗಳು.

ವಿಶ್ವನಾಥ ಭಟ್ ಸಹಾಯಕ ಪ್ರಾಧ್ಯಾಪಕ ಉಜಿರೆ

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಏರಿಕೆಯಿಂದ ಸುಸ್ಥಿರ ಅಭಿವೃದ್ಧಿ ಇಂದಿಗೂ ಕಣ್ಣಾಮುಚ್ಚಾಲೆಯಾಟವೇ ಆಗಿದೆ. ಏರುತ್ತಿರುವ ಜನಸಂಖ್ಯೆಯು ಮಾನವ ಸಂಪನ್ಮೂಲಗಳನ್ನು ಒದಗಿಸಿ ಕೈಗಾರಿಕೋದ್ಯಮಗಳಿಗೆ ಸಹಕಾರಿ ಯಾದರೆ, ಆರ್ಥಿಕತೆಯ ಅಭಿವೃದ್ಧಿ ಯಿಂದುಂಟಾಗುವ ನಗರೀಕರಣ, ಮುಂದುವರಿದು ಜನರ ವಾಸ್ತವ್ಯದ ಗುಣಮಟ್ಟದ ಹೆಚ್ಚಳದಿಂದ ಹೊರಸೂಸುವ ತ್ಯಾಜ್ಯಗಳ ನಿರ್ವಹಣೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ವೈವಿಧ್ಯತೆಗಳನ್ನು ಹೊಂದಿರುವ ಭಾರತದಲ್ಲಿ ಪರಿಸರ ಹಾಗೂ ಆರ್ಥಿಕತೆಯ ಸುಧಾರಣೆಗಳು ಅಲ್ಲಲ್ಲಿ ಕಂಡರೂ, ತ್ಯಾಜ್ಯಗಳ ವಿಲೇವಾರಿಯು ಅಯಾಚಿತವಾಗಿ ಸಮಸ್ಯೆಯಾಗಿಯೇ ಮುಂದುವರಿದಿದೆ.
ಭಾರತದಲ್ಲಿ ಸರಿಸುಮಾರು 377 ದಶಲಕ್ಷ ನಗರವಾಸಿಗಳು 7935 ಪಟ್ಟಣ ಪ್ರದೇಶಗಳಲ್ಲಿ ವಾಸಿಸಿ, 62 ದಶಲಕ್ಷ ಟನ್ ಗಳಷ್ಟು ವಾರ್ಷಿಕ ಘನ ತ್ಯಾಜ್ಯವನ್ನು ಸಮೀಕರಿಸುತ್ತಿದ್ದಾರೆ. ಇದರಲ್ಲಿ 43 ದಶಲಕ್ಷ ಟನ್ನುಗಳು ವಿಲೇವಾರಿಗೆ ದೊರೆತರೆ, ವಿಲೇವಾರಿಗೊಳಪಟ್ಟ 11.9 ದಶಲಕ್ಷ ಟನ್ನುಗಳು ಪ್ರಕ್ರಿಯೆಗೊಳಗಾಗಿ ಆನಂತರ ನಗರದ ಹೊರವಲಯದ ಯಾವುದೋ ಪ್ರದೇಶದಲ್ಲಿ ಭೂ ಭರ್ತಿಯ ಪರಿಹಾರಕ್ಕೊಳಪಟ್ಟಿವೆ. ಘನತ್ಯಾಜ್ಯ ನಿರ್ವಹಣೆಯು ಸ್ಥಳೀಯ ನಗರಾಡಳಿತಗಳು ಕೊಡುವ ಮೂಲಭೂತ ಸೌಕರ್‍ಯಗಳಲ್ಲಿ ಒಂದಾಗಿದೆ. ಆದರೆ, ವೈಜ್ಞಾನಿಕವಾಗಿ ಈ ತ್ಯಾಜ್ಯಗಳು ವಿಲೇವಾರಿಗೊಳಪಡದೇ, ತ್ಯಾಜ್ಯರಾಶಿಗಳ ಕೃತಕ ಶಿಖರಗಳು ನಗರದ ಹೊರವಲಯದಲ್ಲಿ ನಿರ್ಮಾಣವಾಗಿ, ಅದರಿಂದ ದ್ರವಿಸಿದ ನೀರು (leachate) ಮತ್ತೆ ನದಿಯನ್ನು ಸೇರಿ, ಜನವಸತಿಗೆ ಅನಾನುಕೂಲವನ್ನೇ ಉಂಟುಮಾಡುತ್ತಿವೆ.
ತ್ಯಾಜ್ಯದುತ್ಪತ್ತಿಯ ದರಗಳು ಜನಸಂಖ್ಯೆಯ ಸಾಂದ್ರತೆ, ಆರ್ಥಿಕ ಅಂತಸ್ತು-ಸ್ಥಾನಮಾನ, ಆ ಭಾಗದ ವಿತ್ತೀಯ ವ್ಯವಹಾರಗಳು ಮತ್ತು ಸಾಂಸ್ಕೃತಿಕ ಸನ್ನಿವೇಶಗಳನ್ನು ಅವಲಂಬಿಸಿರುತ್ತವೆ. ಈ ತಿಳುವಳಿಕೆಯ ಆಧಾರದಲ್ಲಿ ರಾಜ್ಯಗಳನ್ನು ನೋಡಿದಾಗ ದಿನವೊಂದಕ್ಕೆ ಉತ್ಪತ್ತಿಯಾಗುವ ಬಹುಪಾಲು-ಮಹಾರಾಷ್ಟ್ರ, ಉತ್ತರಪ್ರದೇಶ, ತಮಿಳುನಾಡು, ಪ.ಬಂಗಾಳ, ಮಧ್ಯಪ್ರದೇಶಗಳಿಂದಲೇ ಆಗಿರುತ್ತವೆ. ಕರ್ನಾಟಕವೂ ಈ ವಿಷಯದಲ್ಲಿ ಹಿಂದಿಲ್ಲ! ತ್ಯಾಜ್ಯಗಳನ್ನು ಉತ್ಪತ್ತಿ ಮಾಡುವ ನಾಲ್ಕನೇ ದರ್ಜೆಯ ರಾಜ್ಯಗಳಿಗೆ ಸೇರುತ್ತದೆ. ಕರ್ನಾಟಕದಲ್ಲಿ ದಿನವೊಂದಕ್ಕೆ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಸರಿಸುಮಾರು 7600 ಟನ್ನುಗಳು.
ಭಾರತ ಸರಕಾರವು ಮಹಾನಗರಗಳ ವ್ಯಾಪ್ತಿಗೆ ಬರುವಂತೆ ತ್ಯಾಜ್ಯಗಳ ನಿರ್ವಹಣೆಗಾಗಿ ನಿಯಮಗಳ ಗುಚ್ಛವೊಂದನ್ನು 2000 ದಲ್ಲಿ ತಯಾರಿಸಿತ್ತು. ಅದಾದ ನಂತರ,16 ವರ್ಷಗಳ ಬಳಿಕ ಕೇಂದ್ರೀಯ ಪರಿಸರ ಹಾಗೂ ಹವಾಗುಣ ಬದಲಾವಣೆಯ ಸಚಿವಾಲಯ 2016 ರಲ್ಲಿ ನಿರ್ವಹಣೆಗೆ ಸಂಬಂಧಪಟ್ಟ ಹೊಸ ನಿಯಮಾವಳಿ ಗಳನ್ನು ತಯಾರಿಸಿತು. ಈ ನಿಯಮಾವಳಿಗಳು ತ್ಯಾಜ್ಯದ ವರ್ಗೀಕರಣವನ್ನು6 ವಿಭಾಗಗಳನ್ನಾಗಿ ಮಾಡಿದೆ. ಅವು ಯಾವುವೆಂದರೆ: ಪ್ಲಾಸ್ಟಿಕ್, ಇ-ತ್ಯಾಜ್ಯ, ಔಷಧೀತ್ಯಾಜ್ಯ, ಅಪಾಯಕಾರೀ-ವಿಷಯುಕ್ತ, ಕಟ್ಟುವಣ ತ್ಯಾಜ್ಯ ಮತ್ತು ಉರುಳಿಸುವಿಕೆ ಯಿಂದಾದ ತ್ಯಾಜ್ಯ. ಈ ಹೊಸ ನಿಯಮಾವಳಿಗಳು ನಗರಪಾಳಿಕೆಗಳ ಹೊರತಾಗಿ ಬೃಹನ್ನಗರಗಳ, ಕೈಗಾರಿಕಾ ಪಟ್ಟಣಗಳ, ವಿಶೇಷ ವಿತ್ತವಲಯ, ರೈಲ್ವೇ-ವಿಮಾನನಿಲ್ದಾಣಗಳ, ಪ್ರವಾಸೀ ತಾಣಗಳ ಧಾರ್ಮಿಕ ಕೇಂದ್ರಗಳ ವ್ಯಾಪ್ತಿಯನ್ನೂ ಆವರಿಸುತ್ತವೆ. ಹೊಸನಿಯಮಾವಳಿಗಳು ತ್ಯಾಜ್ಯದ ಮರುಬಳಕೆಯಿಂದ ಸಂಪತ್ತಾಗಿ ಪರಿವರ್ತಿಸುವ ಧ್ಯೇಯವನ್ನು ಹೊಂದಿದೆ. ಇಲ್ಲಿಹೇಳಿದಂತೆ, ಪ್ರತೀ ಮನೆಯಿಂದಲೂ, ಬೀದಿ ವ್ಯಾಪಾರ-ಸಂತೆ ಇನ್ನಿತರ ಮಾರುಕಟ್ಟೆಗಳಿಂದ, 5000 ಚ.ಮೀ.ಗಳಿಗಿಂತ ಹೆಚ್ಚು ಜಾಗವನ್ನು ಹೊಂದಿದ ಘಟಕಗಳು ಮತ್ತು ಹೊಟೇಲುಗಳೇ ತ್ಯಾಜ್ಯದ ಪ್ರಮುಖ ಉತ್ಪಾದಕರು. ಈ ನಿಯಮಗಳ ಹೆಚ್ಚುವರಿ ಹೊಣೆಯೆಂದರೆ-ಉತ್ಪಾದಕರೇ ತ್ಯಾಜ್ಯವನ್ನು ಮೂರು ವಿಭಾಗಗಳಾಗಿ-ಕೊಳೆಯಬಹುದಾದ, ಒಣ ಮತ್ತು ಮನೆಬಳಕೆಯ (ಪ್ಲಾಸ್ಟಿಕ್, ಪೇಪರ್, ಲೋಹಗಳು ಇತ್ಯಾದಿ), ಅಪಾಯಕರ (ನ್ಯಾಪ್ಕಿನ್, ಸೊಳ್ಳೆಬತ್ತಿ) ತ್ಯಾಜ್ಯಗಳೆಂದು ವಿಂಗಡಿಸಬೇಕಾಗುತ್ತದೆ. ಇದರೊಂದಿಗೆ ಯಾವುದೇ ಸಾರ್ವಜನಿಕ ಅಥವಾ ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ-ಪಾಲ್ಗೊಂಡವರ ಸಂಖ್ಯೆ ನೂರಕ್ಕಿಂತ ಹೆಚ್ಚಾದಲ್ಲಿ, ಸಂಘಟಕರೇ ತ್ಯಾಜ್ಯವನ್ನು ವರ್ಗೀಕರಿಸಿ ಕೊಡುವ ಹೊಣೆ ಹೊರಬೇಕಾಗುತ್ತದೆ. ಈ ನಿಯಮಗಳು ಮಾರುಕಟ್ಟೆಗೂ ಸೇರಿದಂತೆ 5000 ಚ.ಮೀ.ಗಿಂತ ವಿಸ್ತೀರ್ಣದ ಉಳಿದ ವಾಣಿಜ್ಯ ವ್ಯವಹಾರಗಳಿಗೂ ಅನ್ವಯಿಸುತ್ತವೆ. ಉಪಭೋಕ್ತಾ ಶುಲ್ಕ ಮತ್ತು ಸ್ಥಳದಲ್ಲಿಯೇ ವಿಧಿಸುವ ದಂಡಗಳೂ ಈ ನಿಯಮದ ಹೊಸ ವಿಚಾರಗಳು. ಹೊಸ 2016 ರ ನಿಯಮಗಳು ವಿಲೇವಾರಿಯಲ್ಲದೇ ನೆಲಭರ್ತಿಯ ನಿವೇಶನಗಳನ್ನು ಕನಿಷ್ಟ 100 ಮೀ. ನದಿಯ ಹರಿವಿನಿಂದ, 200 ಮೀ. ಕೆರೆಗಳಿಂದ, 500 ಮೀ. ಹೆದ್ದಾರಿಗಳಿಂದ, ಮತ್ತು 20 ಕಿ.ಮೀ. ವಿಮಾನ ನಿಲ್ದಾಣಗಳಿಂದ ದೂರಕ್ಕೆ ಸರಿಸುವಯೋಜನೆಯನ್ನು ಹೊಂದಿದೆ. ಭೂಭರ್ತಿಯ ಕೆಲಸಗಳಿಗೆ ಗುಡ್ಡಗಾಡು ಪ್ರದೇಶಗಳನ್ನು ನಿರ್ಬಂಧಿಸಿದೆ.
ಶೇ. ೭೪ ಸಾಕ್ಷರತೆಯನ್ನು ಹೊಂದಿರುವ ದೇಶದಲ್ಲಿ ಜಾಗೃತಿಯೆಂಬ ಕಲ್ಪನೆ ಸುಲಭ ಸುಲಭ ಮಾರ್ಗವಾಗ ಬೇಕಾಗಿದ್ದುದು, ಅದು ಮಗ್ಗುಲ ಮುಳ್ಳಾಗಿಯೇ ಇದೆ. ಈ ಸುಶಿಕ್ಷಿತತೆಯ ಕಲ್ಪನೆಯು ವಾಮಮಾರ್ಗಗಳ ಅನುಸಂಧಾನಕ್ಕೇ ಮೀಸಲಾಗಿರುವುದು ಇಂದಿನ ದುರ್ದೆಶೆ. ಘನತ್ಯಾಜ್ಯ ನಿರ್ವಹಣೆಯಂತಹ ಸಮಸ್ಯೆಗಳ ಪರಿಹಾರೋಪಾಯಗಳು ಸಮುದಾಯದ ಪಾಲುದಾರಿಕೆಯನ್ನ ಅವಲಂಬಿಸಿರುತ್ತವೆ. ಜನಜಾಗೃತಿ ಗಳು ಸಮುದಾಯಕ್ಕೆ ಹೆಚ್ಚು ಪ್ರಭಾವ ಬೀರಬಲ್ಲದು. ಸಾಮಾಜಿಕ ಮಾಧ್ಯಮಗಳಲ್ಲೇ ವ್ಯವಹರಿಸುವ ಇಂದಿನ ಯುಗಪುರುಷರಿಗೆ ನೆಲಮಟ್ಟದ ವಿದ್ಯಮಾನಗಳು ಅಗೋಚರವೇ. ಸಾಮಾಜಿಕ ಮಾಧ್ಯಮಗಳ ಆದರ್ಶ ಪುರುಷರು ಸಮಾಜದಲ್ಲಿ ವ್ಯವಹರಿಸುವ ರೀತಿಯೂ ಖೇದಕರ. ಘನತ್ಯಾಜ್ಯದ ಸಮಸ್ಯೆಗಳು ಇಂದಿಗೆ ಮುಗಿಯುವುದಲ್ಲ, ಮುಂದಿಗೂ ಬೆಂಬಿಡದೆ ಕಾಡುವವು. ಪರಿಸರದ ಜೈವಿಕಕ್ರಿಯೆಯ ಸರಪಳಿಯಲ್ಲಿ ತ್ಯಾಜ್ಯಗಳು ಆಗಂತುಕತೆಯನ್ನೇ ಒಡ್ಡಿ, ಕೊನೆಗೆ ಪರಿಸರಮಾಲಿನ್ಯಕ್ಕೆ ಬಹುದೊಡ್ಡ ಕೊಡುಗೆಯನ್ನೀಡುತ್ತಿವೆ. ತ್ಯಾಜ್ಯಗಳ ವಿಲೇವಾರಿಯೇ ಸಮಸ್ಯೆಯ ಕಟ್ಟಕಡೆಯ ಪರಿಹಾರವಲ್ಲ, ಅವುಗಳ ಭೂಭರ್ತಿಯ ವೈಜ್ಞಾನಿಕತೆಯ ವಿಚಾರಗಳೂ ಸುಲಭದ್ದೇನಲ್ಲ. ಸಮಸ್ಯೆಯ ಮೂಲ ಅಡಗಿರುವುದು ಉಪಭೋಗಿಗಳ ಅಗತ್ಯತೆ ಮತ್ತು ಅನುಕೂಲಗಳಲ್ಲಿ. ಇಪ್ಪತ್ತನೇ ಶತಮಾನದ ಅಪೂರ್ವ ಆವಿಷ್ಕಾರವಾದ ಪ್ಲಾಸ್ಟಿಕ್, ಧಾರಕವಾಗಿಯೂ ಸುಧಾರಿಸಿ ಮಾರಕವಾಗುವ ಮಟ್ಟಿಗೆ ಬೆಳೆದು ನಿಂತಿದೆ. ಪರಿಸರದ ಜೈವಿಕ ಕ್ರಿಯೆಗಳಲ್ಲಿ ಭಾಗವಾಗುತ್ತಿದ್ದ ಮನೆಯ-ದಿನಬಳಕೆಯ ತ್ಯಾಜ್ಯಗಳು, ಇಂದು ಹಳ್ಳಿಯಿಂದ ದಿಲ್ಲಿಯವರೆಗೂ ವಿಲೇವಾರಿ ಮಾಡುವ ಏಕಮೇವ ಉಪಾಯವನ್ನೇ ನೆಚ್ಚಿಕೊಂಡಿವೆ. ನಿಯಮಗಳಿರುವುದು ಉಲ್ಲಂಘನೆಗೆಂದೇ ತಿಳಿದಿರುವ ಇಂದಿನ ಸಮಾಜ ಮಾಧ್ಯಮಮುಖೀ ಮಾನವ, ತನ್ನ ವೈಯಕ್ತಿಕ ಮಟ್ಟದಲ್ಲಿಯೇ ಉತ್ತರವಿರುವುದನ್ನು ಹುಡುಕಬೇಕಾಗಿದೆ. ಮನೆಯಲ್ಲೇ ಕಸ ಬೇರ್ಪಡಿಸಿ, ಜೈವಿಕಕಸವನ್ನು ಕೈ ತೋಟಕ್ಕೆ ಬಳಸಿ, ಆದಷ್ಟು ಕಡಿಮೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರಸೂಸೋಣ. ಕೃತಕ ಬುದ್ಧಿಮತೆ, ಯಂತ್ರಾವ ಲೋಕನದಂತಹ ಅನೂಹ್ಯ ತಂತ್ರಜ್ಞಾನಗಳನ್ನು ಬೇಧಿಸಿ, ಪೋಷಿಸುತ್ತಿರುವ ಮಾನವ ಪ್ರಜ್ಞಾವಂತನಾಗಿ ಪ್ರಕೃತಿಯೆಡೆಗೂ ಇನಿತು ದೃಷ್ಟಿಯನ್ನು ಹರಿಸುವುದು ಯೋಗ್ಯ-ಅದು ವರ್ತಮಾನದ ತಲ್ಲಣವೂ ಹೌದು.

ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ, ಭಾರತವು ಇ-ತ್ಯಾಜ್ಯಗಳನ್ನು ಹೊರಸೂಸುವ ಐದನೇ ದೊಡ್ಡರಾಷ್ಟ್ರ. ಇದರಏರಿಕೆ ವರ್ಷವೊಂದಕ್ಕೇ ಶೇ. 5 ರಷ್ಟು. ಘನತ್ಯಾಜ್ಯಗಳ ಹೊಸ ನಿಯಮಾವಳಿಗಳು ಇಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದಕರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದೆ. ಇದನ್ನು ಉತ್ಪಾದಕರ ವಿಸ್ತರಿತ ಜವಾಬ್ದಾರಿ ಯೆಂದೂ, ಈ ಉತ್ಪನ್ನಗಳು ಮುಂದೆ ತ್ಯಾಜ್ಯಗಳಾದಾಗ ಅವುಗಳ ಮರುಬಳಕೆಗೂ ಅವಕಾಶವನ್ನು ನೀಡುವ ಅಂಶವನ್ನು ಒತ್ತಿ ಹೇಳಿದೆ. ಇನ್ನೊಂದೆಡೆ ಔಷಧಿಗಳ ತ್ಯಾಜ್ಯದ ಪ್ರಮಾಣವೂ ಕಡಿಮೆಯೇನಿಲ್ಲ; ದೇಶದಲ್ಲಿ ದಿನವೊಂದಕ್ಕೆ ಉತ್ಪತ್ತಿಯಾಗುವ ಔಷಧಿಗಳ ಮತ್ತು ಆರೋಗ್ಯ ಕೇಂದ್ರಗಳ ತ್ಯಾಜ್ಯಗಳ ಪ್ರಮಾಣ ಸರಿಸುಮಾರು ೪೮೪ ಟನ್ನುಗಳು. ಹೀಗೆ ಘನತ್ಯಾಜ್ಯ ನಿರ್ವಹಣೆಯ 2016ರ ಕಾನೂನು ಇನ್ನೂ ಹಲವಾರು ಅಂಶಗಳ ಬಗ್ಗೆ ಬೆಳಕನ್ನು ಚೆಲ್ಲುತ್ತದೆ. ಈ ನಿಯಮಾವಳಿಗಳ ಪಾಲನೆಯು ಭವಿಷ್ಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ವಿಲೇವಾರಿಯ ಸಾಪೇಕ್ಷ ದೃಶ್ಯವನ್ನು ಭೂತಗನ್ನಡಿಯಲ್ಲಿ ಹಿಡಿದಿದೆ. ಇವೆಲ್ಲದರಾಚೆ ನಮ್ಮ ಮುಂದಿರುವ ಪ್ರಶ್ನೆ- ಇವುಗಳನ್ನು ಪಾಲಿಸುವವರಾರು?

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.