ಪುರಾಣ ವಾಚನ-ಪ್ರವಚನ ಪ್ರಾರಂಭ.

ಉಜಿರೆ: ಕಾವ್ಯ ವಾಚನ ಕಲ್ಯಾಣ ಕ್ರಿಯೆಯಾಗಿದ್ದು ಕಾವ್ಯದಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ಮತ್ತು ಆನಂದ ಸಿಗುತ್ತದೆ. ರಸಿಕರಿಗೆ ಗಮಕ ವಾಚನ ಕಾವ್ಯದ ಅಮೃತ ಧಾರೆಯನ್ನು ನೀಡುತ್ತದೆ. ಗಮಕಿಗಳಿಗೆ ರಾಗ, ಭಾವ ಮತ್ತು ಸಾಹಿತ್ಯದ ಪ್ರಜ್ಞೆ ಇರಬೇಕು ಎಂದು ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.
ಅವರು ಜು.17 ರಂದು ಧರ್ಮಸ್ಥಳದಲ್ಲಿ ತುರಂಗ ಭಾರತ ವಾಚನ – ಪ್ರವಚನ ಕಾರ್ಯಕ್ರಮಕ್ಕೆ ಚಾನೆ ನೀಡಿ ಮಾತನಾಡಿದರು.
ಬುದ್ಧಿ ಪ್ರಧಾನವಾದಾಗ ಭಾವ ಜಡವಾಗುತ್ತದೆ. ಇಂದು ಬುದ್ಧಿವಂತರಾದವರು ಭಾವನೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಗಮಕ ವಾಚನದಿಂದ ಬುದ್ಧಿ ಮತ್ತು ಭಾವಗಳು ಸೇರಿ ಏಕಕಾಲಕ್ಕೆ ಬೆಳಗುತ್ತವೆ, ಬೆಳೆಯುತ್ತವೆ. ಹೃದಯವನ್ನು ಅರಳಿಸುತ್ತವೆ, ಕೆರಳಿಸುವುದಿಲ್ಲ. ಆದುದರಿಂದ ಸಾಹಿತಿಗಳ ಸಾಮಿಪ್ಯ, ಸಂವಾದ, ಸಲ್ಲಾಪ ಮತ್ತು ಸಂವರ್ಧನದಿಂದ ನಾವು ತಲ್ಲೀನರಾಗಿ ಮೈಮರೆಯುತ್ತೇವೆ. ಕಾವ್ಯಸಿದ್ಧಿಯನ್ನು ನಾವು ಪಡೆಯಬೇಕು. ಎರಡು ತಿಂಗಳು ನಡೆಯುವ ಪುರಾಣ ವಾಚನ – ಪ್ರವಚನ ಅಪೂರ್ವ ಜ್ಞಾನಯಜ್ಞವಾಗಿದೆ ಎಂದು ಅವರು ಶ್ಲಾಘಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಗವಂತನ ಸಾನ್ನಿಧ್ಯವನ್ನು ಗುರುತಿಸಿ ಆತನ ಸಾಕ್ಷಾತ್ಕಾರಕ್ಕಾಗಿ ನಾವು ವಿವಿಧ ಸೇವೆಗಳನ್ನು ಅರ್ಪಿಸುತ್ತೇವೆ. ಧರ್ಮಸ್ಥಳದ ಪರಂಪರೆಯನ್ನು ಉಳಿಸಿಕೊಂಡು ವಿಶಿಷ್ಠತೆಯೊಂದಿಗೆ ಪುರಾಣ ವಾಚನ – ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಧರ್ಮಸ್ಥಳದ ದಿವಾಕರ ಆಚಾರ್ ತುರಂಗ ಭಾರತ ವಾಚನ ಮಾಡಿದರೆ, ಉಜಿರೆ ಅಶೋಕ ಭಟ್ ಪ್ರವಚನ ನೀಡಿದರು. ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.