ಪಟ್ಟಾ ಜಾಗದ ಕನ್ವರ್ಷನ್ ತಹಶೀಲ್ದಾರರಿಗೆ ಅಧಿಕಾರ .

ಬೆಳ್ತಂಗಡಿ : ರಾಜ್ಯ ಸರಕಾರ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಟ್ಟಾ ಜಮೀನುಗಳ ಭೂ ಪರಿವರ್ತನೆ ಪ್ರಕರಣಗಳಿಗೆ ಹಿಂಬರಹ ಕೊಡುವ ಅಧಿಕಾರವನ್ನು ತಾಲೂಕು ತಹಶೀಲ್ದಾರರಿಗೆ ವಹಿಸಿ ಆದೇಶಿಸಿರುವುದಾಗಿ ವರದಿಯಾಗಿದೆ.
ಉಭಯ ಜಿಲ್ಲೆಗಳಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರಡಿ ಪಟ್ಟಾ ಜಮೀನುಗಳಿಗೆ ಸಂಬಂಧಿಸಿ ಈ ಹಿಂದೆ ತಹಶೀಲ್ದಾರ್ ಹಿಂಬರಹ ನೀಡುತ್ತಿದ್ದರು. ಆದರೆ ಭೂ ಪರಿವರ್ತನೆಯ ಹೊಸ ತಂತ್ರಾಂಶದಲ್ಲಿ (ಸಾಫ್ಟ್‌ವೇರ್) ಇದಕ್ಕೆ ಅವಕಾಶ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆ ಕಾಡಿತ್ತು.
ಈ ಹಿಂದೆ ಪಟ್ಟಾ ಸ್ಥಳಗಳಿಗೆ ತಹಶೀಲ್ದಾರರು ಸಕಾಲ ತಂತ್ರಾಂಶದ ಮೂಲಕ ಭೂ ಪರಿವರ್ತನೆಗೆ ಆದೇಶ ಹೊರಡಿಸುತ್ತಿದ್ದರು. ಭೂ ಸುಧಾರಣಾ ಕಾಯಿದೆಯ ಪ್ರಕಾರ ಆದೇಶವಾದಂತಹ ಸ್ಥಳಗಳನ್ನು ಜಿಲ್ಲಾಧಿಕಾರಿಯವರು ಪಿ.ಎಲ್.ಒ ತಂತ್ರಾಂಶದಂತೆ ಭೂ ಪರಿವರ್ತನೆಗೆ ಆದೇಶವನ್ನು ಹೊರಡಿಸುತ್ತಿದ್ದರು. ಇದರಿಂದ ಸಾರ್ವಜನಿಕರು ತಮ್ಮ ವ್ಯಾಪ್ತಿಯ ತಾಲೂಕು ಕಚೇರಿಯಲ್ಲೇ ಭೂ ಪರಿವರ್ತಿಸಬಹುದಿತ್ತು. ಆದರೆ ಮಾ.೧ರಿಂದ ಕಾಯ್ದೆ ಕಲಂ 95(3)ರ ಪ್ರಕಾರ ಕೃಷಿ ಭೂಮಿಯನ್ನು ಕೃಷಿಯೇತರ ಉದೇಶಕ್ಕಾಗಿ ಪರಿವರ್ತಿಸುವ ಆದೇಶಗಳ ಮೇಲೆ ಕಡ್ಡಾಯವಾಗಿ ಡಿಜಿಟಲ್ ಸಹಿ ಮಾಡುವಂತೆ ಸೂಚಿಸಲಾಯಿತು. ಇದರಿಂದ ಪ್ರತ್ಯೇಕ ತಂತ್ರಾಂಶ ಸಿದ್ಧಪಡಿಸಿ ಜಿಲ್ಲಾಡಳಿತದ ಮೂಲಕವೇ ನಿರ್ವಹಿಸಬೇಕಾದ್ದರಿಂದ ಗ್ರಾಮೀಣ ಭಾಗದ ಜನರು ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಜಿಲ್ಲೆಯ ಜನರ ವ್ಯಾಪಕ ದೂರಿನ ಹಿನ್ನಲೆಯಲ್ಲಿ ಈ ಬಗ್ಗೆ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪರಿಹಾರ ಸೂತ್ರವೊಂದನ್ನು ರಚಿಸಿ ಸರಕಾರಕ್ಕೆ ಕಳುಹಿಸಲಾಗಿದ್ದು, ಸರಕಾರ ಇದಕ್ಕೆ ಸಮ್ಮತಿ ಸೂಚಿಸಿ, ತಹಶೀಲ್ದಾರ್ ಹಂತದಲ್ಲೇ ನಿರ್ವಹಿಸಲು ಸೂಚನೆ ನೀಡಿದೆ. ಪ್ರಕರಣಗಳ ನಿರ್ವಹಣೆ ಕುರಿತು ತಹಶೀಲ್ದಾರ್‌ಗೆ ಬೆಂಗಳೂರಿನ ಭೂಮಿ ಉಸ್ತುವಾರಿ ಕೋಶದಿಂದ ಅವಕಾಶ ನೀಡಿ, ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್‌ಗಳನ್ನು ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಅಳವಡಿಸಿ, ಭೂಪರಿವರ್ತನೆ ಅರ್ಜಿಗಳಲ್ಲಿ ಸ್ವೀಕರಿಸಲು ಹೇಳಲಾಗಿದೆ. ಭೂಪರಿವರ್ತನೆ ಕಡತಗಳನ್ನು ಹೊಸ ತಂತ್ರಾಂಶದಲ್ಲಿ ನಿರ್ವಹಿಸಲು ಜಿಲ್ಲೆಯ ಎಲ್ಲ ತಹಶೀಲ್ದಾರ್, ಉಪತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ವಿಷಯ ನಿರ್ವಾಹಕರಿಗೆ ತರಬೇತಿ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.