ಬಾರ್‍ಯ: ಅನಾರೋಗ್ಯದ ಚಿಂತೆ-ವೃದ್ಧ ದಂಪತಿ ಆತ್ಮಹತ್ಯೆ.

Advt_NewsUnder_1
Advt_NewsUnder_1
ಸಂಜೀವ ಪೂಜಾರಿ                                    ಸೀತಾ

ಬಾರ್ಯ: ಇಲ್ಲಿಗೆ ಸಮೀಪದ ಬಾರ್‍ಯ ಗ್ರಾಮದ ಪೆರಿಯೊಟ್ಟು ಎಂಬಲ್ಲಿ ಜು. 16 ರಂದು ಮಧ್ಯಾಹ್ನ ವೃದ್ಧ ದಂಪತಿಗಳು ತನ್ನ ಮನೆಯ ಕೋಣೆಯೊಳಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಬಾರ್‍ಯ ಗ್ರಾಮದ ಪೆರಿಯೊಟ್ಟು ನಿವಾಸಿ ಸಂಜೀವ ಪೂಜಾರಿ (60ವ.) ಮತ್ತು ಅವರ ಪತ್ನಿ ಶ್ರೀಮತಿ ಸೀತಾ (57. ವ.) ಆತ್ಮಹತ್ಯೆ ಮಾಡಿಕೊಂಡವರು.

ಇವರು ಮನೆಯೊಳಗೆ ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೀವ ಪೂಜಾರಿ ಮನೆಯಲ್ಲೇ ಮೃತಪಟ್ಟಿದ್ದು, ಪತ್ನಿ ಸೀತ ಜೀವನ್ಮರಣ ಹೋರಾಟದಲ್ಲಿ ಇದ್ದವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟರೆನ್ನಲಾಗಿದೆ.
ಸಂಜೀವ ಪೂಜಾರಿಯವರು ಕೆಲ ಸಮಯದಿಂದ ಅಸ್ತಮಾ ಮತ್ತು ಹೃದಯ ಖಾಯಿಲೆಯಿಂದ ಬಳಲುತ್ತಿದ್ದು, ಕೂಲಿ ಕೆಲಸಕ್ಕೆ ಹೋಗುತ್ತಿದ್ದವರು ಕೆಲ ಸಮಯದಿಂದ ಹೋಗುತ್ತಿರಲಿಲ್ಲ. ಈ ಮಧ್ಯೆ ಪತ್ನಿ ಸೀತ ಅವರ ಆರೋಗ್ಯವೂ ಸರಿ ಇರಲಿಲ್ಲ, ಹೀಗಾಗಿ ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ದಂಪತಿಗೆ ವಾರಿಜಾ ಮತ್ತು ಮೋಹಿನಿ ಎಂಬ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ ಜನಾರ್ದನ ಹೀಗೆ 3 ಮಕ್ಕಳಿದ್ದು, ಇಬ್ಬರು ಪುತ್ರಿಯರನ್ನು ಮದುವೆ ಮಾಡಿ ಕೊಟ್ಟಿದ್ದರು. ಪುತ್ರನಿಗೂ ಮದುವೆಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುವ ಇವರು ಜೊತೆಯಾಗಿ ಒಂದೇ ಮನೆಯಲ್ಲಿ ವಾಸವಿದ್ದು, ಘಟನೆ ನಡೆಯುವಾಗ ಸಂಜೀವ ಪೂಜಾರಿ ಸೊಸೆ ಮೋಹಿನಿ ಮನೆಯಲ್ಲಿದ್ದರು.
ನರಳಾಟ ಕೇಳಿ ನೋಡುವಾಗ ಹೀಗಾಗಿತ್ತು: ಮಾವ ಅನಾರೋಗ್ಯದ ಕಾರಣ ಕೋಣೆಯೊಳಗೆ ಇರುತ್ತಿದ್ದರು. ಕೆಲವೊಮ್ಮೆ ಅತ್ತೆಯೂ ಅಲ್ಲೇ ಇರುತ್ತಿದ್ದರು. ಇಂದು ಮಧ್ಯಾಹ್ನದ ಹೊತ್ತಿಗೆ ಅಲ್ಲೇ ಇದ್ದರು. ಕೆಲ ಹೊತ್ತಿನ ಬಳಿಕ ಕೋಣೆಯ ಒಳಗಡೆಯಿಂದ ನರಳಾಟ ಕೇಳಿಸಿತು. ಬಾಗಿಲ ಬಳಿ ಬಂದು ನೋಡುವಾಗ ಒಳಗಡೆಯಿಂದ ಚಿಲಕ ಹಾಕಿತ್ತು. ಆ ಬಳಿಕ ನಾನು ಅಟ್ಟಕ್ಕೆ ಏರಿ ನೋಡುವಾಗ ಇಬ್ಬರೂ ನರಳಾಡಿಕೊಂಡಿದ್ದರು. ಬಳಿಕ ಪಕ್ಕದ ಮನೆಯವರನ್ನು ಕರೆದು ಬಾಗಿಲ ಚಿಲಕ ಮುರಿದು ಬಾಗಿಲು ತೆಗೆದು ನೋಡುವಾಗ ಮಾವ ಮೃತಪಟ್ಟಿದ್ದರು. ಅತ್ತೆ ನರಳಾಡಿಕೊಂಡಿದ್ದರು ಎಂದು ಸಂಜೀವ ಪೂಜಾರಿ ಸೊಸೆ, ಜನಾರ್ದನರವರ ಪತ್ನಿ ಸ್ಥಳಕ್ಕೆ ಭೇಟಿ ನೀಡಿದ್ದ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಜೊತೆಯಾಗಿಯೇ ಸಾಯುವು ದಾಗಿ ಹೇಳುತ್ತಿದ್ದರು: ಕೆಲವೊಮ್ಮೆ ಸಂಜೀವ ಪೂಜಾರಿಯವರು ತುಂಬಾ ಆರೋಗ್ಯ ಕೆಟ್ಟಾಗ ಪತ್ನಿಯೊಂದಿಗೆ ಮಾತನಾಡುತ್ತಾ ಸಾಯುವುದಾದರೆ ನಾವಿಬ್ಬರೂ ಜೊತೆಯಾಗಿಯೇ ಸಾಯುವುದು ಎಂದು ಹೇಳಿಕೊಳ್ಳುತ್ತಿದ್ದರೆನ್ನಲಾಗಿದೆ. ಆದರೆ ಮನೆಯವರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಎಸ್.ಐ. ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಜೀವ ಪೂಜಾರಿ ಪುತ್ರ ಜನಾರ್ದನ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.