ಗುರುವಾಯನಕೆರೆ: ‘ಹಸಿರೇ ಉಸಿರು’ ವನಮಹೋತ್ಸವ ಕಾರ್ಯಕ್ರಮ

ಗುರುವಾಯನಕೆರೆ: ಸರಕಾರಿ ಪ್ರೌಢಶಾಲೆ ಗುರುವಾಯನಕೆರೆಯಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಹಾಗೂ ಬೆಳ್ತಂಗಡಿ ಗೃಹರಕ್ಷಕ ದಳದ ಸಹಯೋಗದಲ್ಲಿ ಹಸಿರೇ ಉಸಿರು ವನಮಹೋತ್ಸವ ಕಾರ್ಯಕ್ರಮವು ಜು.13 ರಂದು ಜರುಗಿತು.
ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಮುರಳಿಮೋಹನ ಚೂಂತಾರು ರವರು ಉದ್ಘಾಟಿಸಿ, ಸ್ವಾರ್ಥ ರಹಿತ ಸೇವೆ ನೀಡಿದಾಗ, ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬುದಕ್ಕೆ ಗುರುವಾಯನಕೆರೆ ಪ್ರೌಢಶಾಲೆಯೇ ಸಾಕ್ಷಿ. ಇಲ್ಲಿನ ಶಿಕ್ಷಕರು, ಆಡಳಿತ ಮಂಡಳಿ ಇಡೀ ರಾಜ್ಯಕ್ಕೆ ಮಾದರಿ. ಸರಕಾರಿ ಶಾಲೆಯಾದರೂ ಸತತ 7 ವರ್ಷಗಳಿಂದ ಶೇ.100 ಫಲಿತಾಂಶ ಪಡೆಯುತ್ತಿದೆ ಎಂದರೆ ಅದು ಅಸಾಮಾನ್ಯ ಸಾಧನೆ. ಇಲ್ಲಿನ ಮಕ್ಕಳ ಶಿಸ್ತು, ಶಾಲೆಯ ಗೋಡೆಗಳ ಚಿತ್ರಗಳು ಅನುಕರಣೀಯ ಎಂದರು. ಅವರು ಶಾಲಾ ವಾಚನಾಲಯಕ್ಕೆ ಉಚಿತ ಗ್ರಂಥಗಳ ಕೊಡುಗೆ ನೀಡಿ, ಶಾಲೆಯ ಅಭಿವೃದ್ಧಿಗೆ ಪ್ರತಿಷ್ಠಾನ ಸಹಕಾರ ನೀಡುತ್ತದೆ ಎಂದರು.
ಬೆಳ್ತಂಗಡಿ ಹಿರಿಯ ವಕೀಲರ ಸಮಿತಿಯ ಅಧ್ಯಕ್ಷ ಶಶಿಕಿರಣ್ ಜೈನ್ ಮಾತನಾಡಿ, ಶಾಲಾ ಮಕ್ಕಳು ಶಾಲಾ ಜೀವನದಲ್ಲಿಯೇ ಪರಿಸರ ಪ್ರೇಮವನ್ನು ಬೆಳೆಸಿಕೊಂಡರೆ ಮುಂದೆ ಅವರಿಗೆ ಪರಿಸರದ ಕುರಿತು ಕಾಳಜಿ ಹೆಚ್ಚಾಗುತ್ತದೆ. ಶಾಲಾ ಪರಿರದಲ್ಲಿ ಗಿಡ-ಮರ ಬೆಳೆಸಿದರೆ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿರು.
ಜಿ.ಪಂ ಸದಸ್ಯೆ ಮಮತಾ ಶೆಟ್ಟಿ, ತಾ.ಪಂ ಸದಸ್ಯ ಗೋಪಿನಾಥ ನಾಯಕ್, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ ಕೋಟ್ಯಾನ್, ಉದ್ಯಮಿ ಅಲ್ಫೋನ್ಸ್ ಫ್ರಾಂಕೋ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸದಸ್ಯ ಅಬ್ದುಲ್ ಲತೀಫ್, ಗೃಹ ರಕ್ಷಕ ದಳದ ಅಧಿಕಾರಿ ಜಯಾನಂದ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಸ್ವಾಗತಿಸಿ, ಶಿಕ್ಷಕ ಯೋಗೀಶ್ ವಂದಿಸಿದರು. ವಿದ್ಯಾರ್ಥಿನಿಯರಾದ ತೇಜಸ್ವಿ ಹಾಗೂ ಭವಿಷ್ಯಾ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.