ಬೆಳ್ತಂಗಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಮೇ.28 ರಂದು ನೀಡಿರುವ ರಾಜ್ಯ ಬಂದ್ಗೆ ಬೆಳ್ತಂಗಡಿ ತಾಲೂಕಿನಾದ್ಯಂತ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳ್ತಂಗಡಿ, ಉಜಿರೆ, ಮಡಂತ್ಯಾರು ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದು ವ್ಯವಹಾರ ನಡೆಸುತ್ತಿದೆ. ಖಾಸಗಿ-ಬಸ್ ಹಾಗೂ ರಿಕ್ಷಾ ಇತರ ವಾಹನಗಳ ಓಡಾಟ ಎಂದಿನಂತಿದೆ.
ಬೆಳ್ತಂಗಡಿಯ ಜೈನಪೇಟೆ ಮತ್ತು ಹಳೆಕೋಟೆಯಲ್ಲಿ ಯಾರೋ ಕಿಡಿಗೇಡಿಗಳು ರಸ್ತೆಯಲ್ಲಿ ಟಯರ್ಗೆ ಬೆಂಕಿ ಹಚ್ಚಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಅದನ್ನು ನಂದಿಸಿದರು. ಬೆಳ್ತಂಗಡಿ ನಗರದಲ್ಲಿ ಅಂಗಡಿಗಳನ್ನು ಬಂದ್ ಮಾಡುವಂತೆ ಅಂಗಡಿ-ಅಂಗಡಿಗಳಿಗೆ ಹೋಗಿ ಮನವಿ ಮಾಡುತ್ತಿದ್ದ ರೈತ ಸಂಘದ ಕಾರ್ಯಕರ್ತರನ್ನು ತಡೆದ ಎಸ್.ಐ.ಗಿರೀಶ್ ಕುಮಾರ್ ಯಾರನ್ನೂ ಬಲಾತ್ಕಾರವಾಗಿ ಬಂದ್ ಮಾಡಿಸದಂತೆ ಮನವರಿಕೆ ಮಾಡಿದ್ದರಿಂದ ಅವರು ಬಂದ್ ಮನವಿಯನ್ನು ನಿಲ್ಲಿಸಿ ತೆರಳಿದರು.
ಬೆಳ್ತಂಗಡಿ ಮೂರು ಮಾರ್ಗದ ಬಳಿ ಮದ್ಯಾಹ್ನ 12.00 ಗಂಟೆಗೆ ಸಾಂಕೇತಿಕವಾಗಿ ರಸ್ತೆ ತಡೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ನೀಡುವ ಕಾರ್ಯಕ್ರಮವನ್ನು ಬಿಜೆಪಿ ಹಮ್ಮಿಕೊಂಡಿದೆ.