HomePage_Banner_
HomePage_Banner_

‘ ಬೆಳ್ತಂಗಡಿ ಮುಂದೆ ಹೇಗಿರಬೇಕು?’ -‘ಶಾಸಕರಿಂದ ನಿಮ್ಮ ನಿರೀಕ್ಷೆ ಏನು?’ ಅಭಿಪ್ರಾಯ.

ರಾಷ್ಟ್ರದ ಬಗ್ಗೆ ಎಲ್ಲರದ್ದೂ ಪ್ರಥಮ ಆದ್ಯತೆ ಇರುವಂತೆ ಪ್ರೇರೇಪಣೆ ನೀಡಬೇಕಿದೆ:

 

ಚುನಾವಣೆ ಮುಗಿದ ನಂತರ ಆಯ್ಕೆಯಾದವರು ಎಲ್ಲರ ಪ್ರತಿನಿಧಿ. ಯಾವುದೇ ಜಾತಿ, ಮತದ, ಪಕ್ಷಗಳ ಬೇಧ ವಿಲ್ಲದೆ ಎಲ್ಲರ ಒಳಿತಿಗಾಗಿ ದುಡಿಯಬೇಕು. ವೈಯುಕ್ತಿಕ ಪ್ರಯೋಜನಕ್ಕಿಂತ, ಇಡೀ ಸಮುದಾಯದ, ಸಮಾಜದ, ಕ್ಷೇತ್ರದ ಲಾಭಕ್ಕೆ ಆದ್ಯತೆ ತಂತ್ರ ಇರಲಿ. ಆರ್ಥಿಕವಾಗಿ ಅಬಲರಾಗಿರುವವರಿಗೆಲ್ಲ ಹೆಚ್ಚಿನ ಶಕ್ತಿ ನೀಡುವ ಕೆಲಸ ಆಗಬೇಕು. ರಾಮಾಯಣದ ವಾಕ್ಯದಂತೆ ಅತೀ ಸ್ವರ್ಣ ಮಯೀ ಲಂಕ… ನಮೇ ರೋಚತಿ ಲಕ್ಷ್ಮಣ… ಜನನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ… ರಾಷ್ಟ್ರದ ಬಗ್ಗೆ ಎಲ್ಲರದ್ದೂ ಪ್ರಥಮ ಆಧ್ಯತೆ ಇರುವಂತೆ ಪ್ರೇರೇಪಣೆ ನೀಡಬೇಕಿದೆ.
-ಎನ್.ಎಸ್. ಗೋಖಲೆ ಹಿರಿಯ ಸಹಕಾರಿಗಳು ಮುಂಡಾಜೆ.


ಮಾನವ ಸಂಪನ್ಮೂಲವಾಗಿ ವಿಕಾಸ ಹೊಂದಬೇಕು:

ರಾಮಕೃಷ್ಣ ಭಟ್ ಚೊಕ್ಕಾಡಿ, ಬೆಳಾಲು

ತಳಮಟ್ಟದ ಅಭಿವೃದ್ಧಿಯ ದೃಷ್ಟಿಕೋನವೆಂದರೆ ಮೇಲ್‌ಸ್ತರದ ಅಭಿವೃದ್ಧಿ ದೃಷ್ಟಿಕೋನವೂ ಆಗಿರುತ್ತದೆ. ಹಾಗಾಗಿ ತಳಹಂತದ ಅಭಿವೃದ್ಧಿಯೇ ಅತ್ಯಂತ ಮುಖ್ಯವೆಂದು ನನ್ನ ಅಭಿಪ್ರಾಯ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕರೆಂಟು, ಮೋರಿ, ಸೇತುವೆ, ಕಟ್ಟಡ, ನಗರ, ಸಾರಿಗೆ-ಸಂಪರ್ಕ ಇತ್ಯಾದಿ ಮೂಲಭೂತ ಅವಶ್ಯಕತೆಗಳ ಪೂರೈಕೆಗಳನ್ನೇ ಕೇಂದ್ರೀಕರಿಸಿ ನಡೆಯುವ ಕಾಮಗಾರಿಗಳು ಮಾತ್ರ ಅಲ್ಲ. ಅದರ ಜೊತೆಗೆ ಮತ್ತು ಅಷ್ಟೇ ಮುಖ್ಯವಾದ್ದು ಜನರ ಸುಖ-ಸಂತೃಪ್ತಿಯ ಮಟ್ಟವನ್ನು ಕಾಯ್ದುಕೊಳ್ಳುವುದು ಹಾಗೂ ನಿರಂತರತೆಯನ್ನು ನೀಡಬಲ್ಲ ಪರಿಸರ ಸಮತೋಲನ.
ದೈಹಿಕ-ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವಿಕೆ, ಹಳ್ಳಿಗರ ಸ್ವಾವಲಂಬಿ ಬದುಕಿನ ಮೂಲ ಆಶಯಗಳ ಈಡೇರಿಕೆ, ಸಾಂಸ್ಕೃತಿಕ ವಿಶೇಷತೆಗಳ ರಕ್ಷಣೆ-ಪ್ರಸಾರ, ಕೃಷಿಕರ ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ನಿರತರಾಗುವವರಿಗೆ ಆರ್ಥಿಕ ಬಲ ಸಿಗಬೇಕು. ಯಾವುದೇ ಕಚೇರಿ ಕೆಲಸಗಳು ಗ್ರಾಮದಲ್ಲೇ ಆಗುವಂತಾಗಬೇಕು. ಪೇಟೆ-ಪೇಟೆ ಅಲೆದಾಡುವ ಪರಿಸ್ಥಿತಿ ಕಡಿಮೆಯಾಗಬೇಕು. ಬದುಕನ್ನು ಕಟ್ಟಿಕೊಳ್ಳಲು ಮತ್ತು ಸಾಧಿಸಲು ಹಳ್ಳಿಯೂ ಒಂದೇ ಪೇಟೆಯೂ ಒಂದೆ ಎಂಬ ವ್ಯವಸ್ಥೆ ರೂಪುಗೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕ ಅಭಿವೃದ್ಧಿಯ ಜೊತೆಗೆ ಮಾನವ ಸಂಪನ್ಮೂಲವಾಗಿ ಗುಣಾತ್ಮಕ ವಿಕಾಸವನ್ನು ಹೊಂದುವಂತಾಗಬೇಕು.


ಆಡಳಿತದಲ್ಲಿ ಡಿಜಿಟಲೀಕರಣ ಅಳವಡಿಕೆಯಾಗಲಿ:

ರಾಜೇಶ್ ಪೈ          ಸಂಧ್ಯಾ ಟ್ರೇಡರ್‍ಸ್,          ಹರೀ ಟ್ರೇಡರ್‍ಸ್ ಉಜಿರೆ.

ಪ್ರಧಾನಿ ನರೇಂದ್ರ ಮೋದಿಯವರ ಆಲೋಚನೆ ಮತ್ತು ಕಲ್ಪನೆಯಂತೆ ತಾಲೂಕಿನ ಆಡಳಿತಕ್ಕೂ ಡಿಜಿಟಲೀಕರಣ ಆಗಬೇಕು. ತಾಲೂಕಿನದ್ದೇ ಒಂದು ವೆಬ್‌ಸೈಟ್ ರಚಿಸಿ ಅದರಲ್ಲಿ ಸರಕಾರದ ಎಲ್ಲಾ ಇಲಾಖೆಗಳ ಸೇವಾ ಸೌಲಭ್ಯಗಳ ಮಾಹಿತಿಗಳು, ಖಾಸಗಿ ಮಾಹಿತಿ- ಸೇವೆಗಳೂ ಕೂಡ ಒಂದೇ ಸೂರಿನಡಿ ಸಿಗುವಂತೆ ಮಾಡಬೇಕು. ಪ್ರವಾಸಿ ತಾಣಗಳನ್ನು ಸಾಂಪ್ರದಾಯಿಕವಾಗಿ ಅಭಿವೃದ್ಧಿಪಡಿಸಿ ತಾಲೂಕನ್ನು ಪ್ರವಾಸಿ ತಾಲೂಕಾಗಿ ಪರಿವರ್ತಿಸುವ ಕೆಲಸ ಆಗಬೇಕು.
ಜನರು ಶಾಸಕರಿಗೆ ಸಿಗುವ ಬದಲು ಶಾಸಕರು ಜನರಿಗೆ ಸಿಗುವಂತೆ ಬದಲಾವಣೆಯ ಶೈಲಿ ಅಳವಡಿಸಿಕೊಳ್ಳಬೇಕು.
ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಗೆ ಕಿವಿಯಾ ಗುವುದು, ಪಂಚಾಯತ್‌ಗಳಿಗೆ ಭೇಟಿ ಮೂಲಕ ಕುಂದುಕೊರತೆ ನಿವಾರಣೆ, ಸರಕಾರಿ ಶಾಲೆಗಳಲ್ಲಿರುವ ಮಕ್ಕಳೇ ಮುಂದಿನ ಸಮಾಜವಾಗಿರುವುದರಿಂದ ಅವರ ಕುಂದುಕೊರತೆಗಳ ಬಗ್ಗೆ ವಿಶೇಷ ಆಸಕ್ತಿವಹಿಸುವುದು, ಕೃಷಿಗೆ ಬೇಕಾದ ಸೌಲಭ್ಯಗಳು ಸಾಕಷ್ಟು ಇದ್ದರೂ ಅದರ ಮಾಹಿತಿ ಕೊರತೆ ಇರುವುದರಿಂದ ಈ ಬಗ್ಗೆ ಸಮಗ್ರ ಕ್ರಮ, ತಾಲೂಕಿನ ಅಧಿಕಾರಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮೂಲಕ ಆಗಬೇಕಾದ ಕೆಲಸಗಳನ್ನು ನಿಯಮಿತವಾಗಿ ಜಾರಿ ಮಾಡಿ ಎಲ್ಲೂ ಜಿಡ್ಡು ಹಿಡಿದ ಆಡಳಿತ ಆಗದಂತೆ ನೋಡಿಕೊಳ್ಳಬೇಕು.
ಅತೀ ಮುಖ್ಯವಾಗಿ ಉಜಿರೆ ಮೊದಲಾದ ಬೆಳೆಯುತ್ತಿರುವ ಪಟ್ಟಣದಲ್ಲಿ ಟ್ರಾಫಿಕ್ ನಿಯಂತ್ರಣ, ಸಮಗ್ರ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಸಮಾಧಾನಕರ ರೀತಿಯಲ್ಲಿ ಮಾದರಿಯಾಗಿ ಜಾರಿಗೆ ತರಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ದಿ ಸಹಿತ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಯಾವುದೇ ಬೇಧ ಮಾಡದೆ ಎಲ್ಲರೂ ನನ್ನ ಮತದಾರರೇ ಎಂದು ತಿಳಿದು ಕೆಲಸ ಮಾಡುತ್ತಾ ಎಲ್ಲರನ್ನೂ ಸಮಾನತೆಯಿಂದ ಒಟ್ಟಿಗೆ ಕೊಂಡೋಗುವ ಕೆಲಸ ನೂತನ ಶಾಸಕರಿಂದ ಆಗಬೇಕು.


ಯುವಜನತೆಗೆ ಏನು ಬೇಕೆಂದು ಅವರೇ ತಿಳಿದು ಕೆಲಸ ಮಾಡಲಿ:

ನಾಮದೇವ ರಾವ್ ಸಂಚಾಲಕರು ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘ ಮುಂಡಾಜೆ.

ನೂತನ ಶಾಸಕರಾಗಿ ಆರಿಸಿ ಬಂದಿರುವ ಹರೀಶ್ ಪೂಂಜ ಅವರು ಓರ್ವ ಯುವಕನಾಗಿ ಯುವಜನತೆಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕು. ಸರಕಾರದ ಯುವಜನ ಇಲಾಖೆ ಪುನಶ್ಚೇತನಕ್ಕೆ ಅವರದೇ ಆದ ಶೈಲಿಯಲ್ಲಿ ಅವರು ಪ್ರಯತ್ನ ಮಾಡಬೇಕು.
ಯುವಕರು ಬೇಕೆಂದು ಅವರಿಗೆ ಜನಾದೇಶ ಬಂದಿದೆ. ಆದ್ದರಿಂದ ಯುವಜನತೆಗೆ ಏನು ಬೇಕು? ಏನು ಮಾಡಬೇಕು ಎಂಬುದನ್ನು ಅವರೇ ಅರಿತು ಕ್ರಿಯಾಯೋಜನೆ ಮಾಡಬೇಕು. ಅಭಿವೃದ್ಧಿ ಬಗ್ಗೆ ಹೇಳೂದಾದರೆ ಈ ಮೊದಲಿನ ಶಾಸಕ ವಸಂತ ಬಂಗೇರ ಅವರು ಸಾಕಷ್ಟು ಕೆಲಸಗಳನ್ನು ಕ್ಷೇತ್ರಾಧ್ಯಂತ ಮಾಡಿದ್ದಾರೆ. ಇವರು ಅವರಿಗಿಂತ ಹೆಚ್ಚು ಮಾಡಿದರೆ ಇವರ ಹೆಸರು ಉಳಿಯುತ್ತದೆ. ಆ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಮುಖ್ಯವಾಗಿ ಈ ತಾಲೂಕಿನ ಶಾಂತಿ, ಸುವ್ಯವಸ್ಥೆ, ಸಾಮರಸ್ಯ ಕಾಪಾಡಲು ಅವರು ಪ್ರಯತ್ನ ಮಾಡಲಿ.

 

 

 


ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು:

ಪುಪ್ಪರಾಜ ಶೆಟ್ಟಿ, ಉದ್ಯಮಿ ಬೆಳ್ತಂಗಡಿ

ಮುಂದಿನ ಬೆಳ್ತಂಗಡಿ ಹೇಗಿರಬೇಕೆಂದರೆ ನಗರ ಸೌಂದರ್ಯಕ್ಕೆ ಹೆಚ್ಚಿನ ಗಮನ ಕೊಡಬೇಕು, ವಿದ್ಯುತ್, ರಸ್ತೆ, ನೀರು, ಆರೋಗ್ಯ ಎಲ್ಲಾ ಗ್ರಾಮಗಳಿಗೆ ಮುಟ್ಟುವಂತಾಗಿರಬೇಕು. ಹಾಗೆಯೇ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಮುಂದಿನ ದಿನಗಳಲ್ಲಿ ಜನ ತಾಲೂಕಿನಲ್ಲಿ ಬದಲಾವಣೆ ಕಾಣುವ ಹಾಗೇ ಆಗಬೇಕು. ಸರಕಾರಿ ಕಛೇರಿಗಳಲ್ಲಿ ಸಾಮಾನ್ಯ ನಾಗರಿಕರು ಕೆಲಸ ಮಾಡಿಕೊಂಡು ಬರುವ ವ್ಯವಸ್ಥೆ ನಿರ್ಮಾಣವಾಗಬೇಕು. ಶಾಸಕರು ದಿನಕ್ಕೆ ಕನಿಷ್ಟ ೬ ಗಂಟೆ ತಾಲೂಕು ಮುಖ್ಯ ಸ್ಥಳದಲ್ಲಿ ಜನರಿಗೆ ಸಿಗುವಂತಾಗಬೇಕು. ಗ್ರಾಮ ವಾಸ್ತವ್ಯ ಮಾಡಿದರೆ ಉತ್ತಮ. ಎಲ್ಲಾ ಧರ್ಮದ ಜನರನ್ನು ವಿಶ್ವಾಸಕ್ಕೆ ಪಡೆದು ಯಾವುದೇ ಅಹಿತಕರ ಘಟನೆ ನಡೆಯದ ಹಾಗೇ ಮುತುವರ್ಜಿ ವಹಿಸುವುದು ಉತ್ತಮ ಅದು ಅಭಿವೃದ್ಧಿ ಪೂರಕವೂ ಹೌದು.

 

 


ಉದ್ಯೋಗ, ನೆಮ್ಮದಿ, ಸೌಹಾರ್ದತೆ ಸೃಷ್ಟಿ ಮಾಡಬೇಕು:

ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ.

ಜಾತಿರಾಜಕಾರಣವೇ ಮೇಳೈಸಿರುವ ಈ ಕಾಲಘಟ್ಟದಲ್ಲಿ ನೂತನ ಶಾಸಕರಿಂದ ಅದನ್ನು ಮೆಟ್ಟಿನಿಲ್ಲುವ ನಡೆಯನ್ನು ನಾನು ನಿರೀಕ್ಷಿಸುತ್ತೇನೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಇತ್ಯಾದಿಯಾಗಿ ಯಾರನ್ನೂ ವಿಂಗಡಿಸದೆ, ಪ್ರಜಾಪ್ರಭುತ್ವ ನೆಲೆಯಲ್ಲಿ ಹಕ್ಕುದಾರರು ಎಂಬುದನ್ನು ತಿಳಿದು ಎಲ್ಲರೂ ಮೆಚ್ಚುಂತೆ ನಡೆದುಕೊಳ್ಳಬೇಕು. ನಿಗಧಿತ ದಿನಗಳಲ್ಲಿ ಒಂದು ಕಡೆ ಅವರು ಎಲ್ಲರಿಗೂ ಸುಲಭದಲ್ಲಿ ದೊರೆಯುವಂತಾಗಿ ಜನರ ಅಹವಾಲುಗಳಿಗೆ ಅವರೇ ಧ್ವನಿಯಾಗಿ ಕೆಲಸ ಮಾಡಬೇಕು. ಈ ತಾಲೂಕಿನಲ್ಲಿ ಅದೆಷ್ಟೋ ಐತಿಹಾಸಿಕ ಪರಂಪರೆಯುಳ್ಳ ಪ್ರವಾಸಿ ತಾಣಗಳಿದ್ದು ಅವುಗಳ ಸಮಗ್ರ ಅಭಿವೃದ್ಧಿ ಮಾಡಿ ನಮ್ಮ ತಾಲೂಕನ್ನು ಜನಾಕರ್ಷಣೆಯ ತಾಲೂಕಾಗಿ ಮಾರ್ಪಡಿಸಬೇಕು. ಆ ಮೂಲಕ ಉದ್ಯೋಗ ಸೃಷ್ಟಿ ನೆಮ್ಮದಿ ಸೃಷ್ಠಿ ಉಂಟು ಮಾಡಬೇಕು.

 

 


ತಾಲೂಕು ಕಚೇರಿ ಭ್ರಷ್ಟಾಚಾರ ಅಳಿಯಲಿ:

ಅಬ್ಬೋನು ಮದ್ದಡ್ಕ, ಸಮಾಜ ಸೇವಕರು

ತಾಲೂಕಿನ ಹಳ್ಳಿಗಳಲ್ಲಿ ಇಂದಿಗೂ ಮೂಲಭೂತ ಸೌಕರ್ಯ ಭಾರೀ ಕಡಿಮೆ ಇದೆ. ಗ್ರಾಮೀಣ ಭಾಗಕ್ಕೆ ಸರಕಾರದಿಂದ ಏನೂ ಸಿಕ್ಕಿಲ್ಲ, ಉದಾಹರಣೆಗೆ ಪಿಲಿಚಂಡಿಕಲ್ಲು ಭಾಗದ ಒಳಪ್ರದೇಶಕ್ಕೆ ಹೋದರೆ ನಮಗೆ ತಿಳಿಯುತ್ತದೆ. ಅಲ್ಲಿ ಯಾವ ಕೆಲಸವೂ ಆಗಿಲ್ಲ. ಪದ್ಮುಂಜ ಕಡೆ ಹೋಗುವ ರಸ್ತೆ ಪ್ರಾರಂಭದಿಂದಲೇ ಭಾರೀ ಹೊಂಡಗುಂಡಿಗಳಿಂದ ಕೂಡಿದೆ.94 ಸಿ ಕಡತಕ್ಕೆ ತಾಲೂಕು ಕಚೇರಿಯಲ್ಲಿ 25 ಸಾವಿರ ರೂ.ವರೆಗೆ ಲಂಚ ನಡೆಯುತ್ತಿದೆ. ಅಲ್ಲಿನ ಎಲ್ಲಾ ಭ್ರಷ್ಟಾಚಾರ ಅಳಿಯಬೇಕು, ಬ್ರೋಕರ್‌ಗಳ ಹಾವಳಿ ಸಂಪೂರ್ಣ ನಿಲ್ಲಬೇಕು. ವಾರಕ್ಕೆ 2 ಬಾರಿಯಾದರೂ ಶಾಸಕರು ಮಿನಿ ವಿಧಾನ ಸೌಧದಲ್ಲಿ ಕುಳಿತು ಜನರ ಅಹವಾಲುಗಳಿಗೆ ಸ್ಪಂದಿಸುವಂತಾಗಬೇಕು. 81 ಗ್ರಾಮಗಳಿರುವ ಈ ವಿಶಾಲ ತಾಲೂಕಿನ ಸೌಲಭ್ಯಗಳ ಅಭಿವೃದ್ಧಿಗೆ ಶಾಸನ ಸಭೆಯಲ್ಲಿ ಕ್ರಮ ಬದ್ಧವಾಗಿ ಅವರು ಮತನಾಡಬೇಕು. ಅತೀ ಹೆಚ್ಚು ಅನುದಾನ ತರಲು ಪ್ರಯತ್ನ ಮಾಡಬೇಕು. ಅವರು ಇನ್ನೂ ಸಣ್ಣ ಪ್ರಾಯದವರು. ಉತ್ತಮ ಭವಿಷ್ಯವಿದೆ. ಅದನ್ನು ಕಳೆದುಕೊಳ್ಳಬಾರದು. ಎಲ್ಲ ಸಮುದಾಯದವರನ್ನೂ ಸಮಾನವಾಗಿ ಕಂಡು ಕೆಲಸ ಮಾಡಿಕೊಟ್ಟರೆ ಎಲ್ಲಾ ಟೀಕೆಗಳಿಗೆ ಅದುವೇ ಉತ್ತರವಾಗುತ್ತದೆ ಎಂಬುದನ್ನು ಅವರು ತಿಳಿಯಬೇಕು.


ಮುಂಡೂರು ಗ್ರಾಮದ ಮುಖ್ಯ ಸಮಸ್ಯೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಇದನ್ನು ಈಡೇರಿಸಿ:

ಸಂತೋಷ್ ಕುಮಾರ್ ಅಧ್ಯಕ್ಷರು ಶ್ರೀ ನಾಗಂಬಿಕಾ ಭಜನಾ ಮಂಡಳಿ ಮುಂಡೂರು

ಬೆಳ್ತಂಗಡಿ ಕ್ಷೇತ್ರದಲ್ಲಿ ಯುವಕ ಹರೀಶ್ ಪೂಂಜ ಶಾಸಕರಾಗಿರುವುದು ನಮಗೆ ಸಂತೋಷ ತಂದಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದು, ರಾಜ್ಯದಲ್ಲಿಯೂ ಈ ಸರಕಾರ ಬಂದರೆ ನಮಗೆ ಅಭಿವೃದ್ಧಿಗೆ ಒಳ್ಳೆಯದಾಗುತ್ತಿತ್ತು.
ನಮ್ಮ ಮುಂಡೂರು ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್‌ನ ಮುಖ್ಯ ಸಮಸ್ಯೆಯಿದೆ. ನಮ್ಮ ಗ್ರಾಮದ ಬೇಡಿಕೆ ಬಗ್ಗೆ ಈ ಮೊದಲೇ ಹರೀಶ್ ಪೂಂಜರಿಗೆ ಮೌಖಿಕವಾಗಿ ತಿಳಿಸಿದ್ದೇವೆ. ಅದನ್ನು ಈಡೇರಿಸುವರೆಂಬ ನಂಬಿಕೆ ಇಟ್ಟುಕೊಂಡಿದ್ದೇವೆ.
ನಮ್ಮ ಗ್ರಾಮದಲ್ಲಿ ಅನೇಕ ಮಂದಿ ವಿದ್ಯಾವಂತರಿದ್ದು, ಅವರಿಗೆ ಸರಿಯಾದ ಉದ್ಯೋಗ ದೊರೆಯದೆ ನಿರುದ್ಯೋಗಿಗಳಾಗಿದ್ದಾರೆ, ಅನೇಕರು ಗ್ರಾಮದಲ್ಲೇ ಕೂಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇಂತವರಿಗೆ ಉದ್ಯೋಗದ ವ್ಯವಸ್ಥೆಯಾಗಬೇಕು. ಮುಂಡೂರು ಗ್ರಾಮದಲ್ಲಿ ಸಣ್ಣ ಕೈಗಾರಿಕೆಗಳ ನಿರ್ಮಾಣಕ್ಕೆ ಅವಕಾಶವಿದ್ದು, ಇದರ ಬಗ್ಗೆಯೂ ನೂತನ ಶಾಸಕರು ಪ್ರಯತ್ನಿಸುವಂತೆ ವಿನಂತಿಸುತ್ತೇನೆ.

 

 


ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ:

ಶ್ರೀಮತಿ ವಿಮಲ ಮಾಲಕರು ಶ್ರೀ ರಕ್ತೇಶ್ವರಿ ಪ್ಲವರ್& ಜನರಲ್‌ಸ್ಟೋರ್, ಗುರುವಾಯನಕೆರೆ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಚುನಾಯಿತರಾದ ಹರೀಶ್ ಪೂಂಜ ಈ ತಾಲೂಕಿನ ಮೂಲಭೂತ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ಸೇರಿದಂತೆ ಮೂಲಭೂತ ಸಮಸ್ಯೆಗಳು ಕಾಡುತ್ತಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಥಮ ಆದ್ಯತೆಯಲ್ಲಿ ಕೆಲಸ ಮಾಡಬೇಕು.
ನೂತನ ಶಾಸಕರು ತಮ್ಮ ಶಾಸಕ ನಿಧಿಯಿಂದ ಅಥವಾ ಸರಕಾರದಿಂದ ಮಂಜೂರು ಮಾಡಿಸಿಕೊಂಡು ತರುವ ಅನುದಾನದಿಂದ ಗ್ರಾಮಗಳಲ್ಲಿ ಕಾಮಗಾರಿ ಮಾಡುವ ಮೊದಲು ಇದರ ಮಾಹಿತಿಯನ್ನು ಆ ಗ್ರಾಮದ ಗ್ರಾಮ ಪಂಚಾಯತದ ಗಮನಕ್ಕೆ ತರಬೇಕು. ಅಲ್ಲದೆ ಸರಕಾರದ ಯಾವುದೇ ಯೋಜನೆಗಳು ಆದರೂ ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಗ್ರಾಮ ಪಂಚಾಯತು ಮೂಲಕ ವಿತರಿಸಿದರೆ ದೂರದ ಗ್ರಾಮಗಳ ಜನರಿಗೆ ಹೆಚ್ಚಿನ ಅನುಕೂಲ ವಾಗುತ್ತದೆ.

 

 


ದ್ವೇಷ ರಾಜಕಾರಣ ಯಾವತ್ತೂ ಬೇಡ:

ಡಾ. ಎಂ.ಎಂ ದಯಾಕರ್ ಉಜಿರೆ ವಿಭಾಗ ಮುಖ್ಯಸ್ಥರು. ಕೆ.ವಿ.ಜಿ ದಂತ ಮಹಾವಿದ್ಯಾಲಯ ಸುಳ್ಯ.

ಬೆಳ್ತಂಗಡಿ ತಾಲೂಕಿನ ಸರ್ವತೋಮುಖ ಅಭಿವೃದ್ದಿಗೆ ದೂರದೃಷ್ಟಿತ್ವಉಳ್ಳ ಕಾರ್ಯಕ್ರಮಗಳನ್ನು ಹರೀಶ್ ಪೂಂಜ ಅವರು ರೂಪಿಸಿ ಅನುಷ್ಠಾನಿಸುವಂತಾಬೇಕು. ವೈಯುಕ್ತಿಕ ಕಾರ್ಯಕ್ರಮಗಳಿಗಿಂತಲೂ ಮುಖ್ಯವಾಗಿ ಅವರು ಜಾತಿ ಮತ ಹಾಗೂ ಚುನಾವಣೆಯ ಮತಭೇದವಿಲ್ಲದೆ ಎಲ್ಲರಿಗೂ ಸುಲಭದಲ್ಲಿ ಲಭ್ಯರಾಗಿ ಎಲ್ಲರ ಕೆಲಸಗಳಿಗೆ ಸ್ಪಂದಿಸುವವರಾಗಬೇಕು. ತಾಲೂಕಿನ ಬೌಗೋಳಿಕ ದೃಷ್ಟಿಯಿಂದ ಪ್ರವಾಸೋದ್ಯಮ, ಆರೋಗ್ಯ ಪ್ರವಾಸೋದ್ಯಮ (ಹೆಲ್ತ್ ಟೂರಿಸಂ) ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿ ಎಲ್ಲರಿಗೂ ಪ್ರಯೋಜನ ಆಗುವಂತೆ ಮಾಡಬೇಕು. ದ್ವೇಷ ರಾಜಕಾರಣ ಯಾವತ್ತೂ ಬೇಡ. ತಾಲೂಕಿನಲ್ಲಿ ಅರಣ್ಯ- ಪರಿಸರ ನಾಶ ತಡೆದು, ಸಂಪರ್ಕ ಸೇತುವೆಗಳ ಮೂಲಕ ಹತ್ತಿರದ ಜಿಲ್ಲೆ ರಾಜ್ಯಗಳಿಂದ ಸಂಪರ್ಕ ಅತ್ಯುತ್ತಮವಾಗುವತ್ತ ಗಮನಹರಿಸಬೇಕು. ಇನ್ನೊಂದು ಅತೀ ಮುಖ್ಯವಾಗಿ ನಮ್ಮ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರಿತವಾಗಿ ೭ ಮೆಡಿಕಲ್ ಕಾಲೇಜುಗಳಿದ್ದು, ಅಂತಹದ್ದೇ ಸರಕಾರಿ ಮೆಡಿಕಲ್ ಕಾಲೇಜು ಶೈಕ್ಷಣಿಕ ನಗರಿಯಾದ ನಮ್ಮ ತಾಲೂಕಿಗೂ ಬರುವಂತೆ ಅವರು ವಿಶೇಷ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಿದಲ್ಲಿ ಅವರ ಶಾಸಕತ್ವ ಅಜರಾಮರ ವಾಗುವುದರಲ್ಲಿ ಸಂದೇಹವಿಲ್ಲ.

 

 


 

 

ಗುರುವಾಯನಕೆರೆ-ಉಜಿರೆ ದ್ವಿಪಥ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು:

ಬೆಳ್ತಂಗಡಿ ಕ್ಷೇತ್ರದ ನೂತನ ಶಾಸಕ ಹರೀಶ್ ಪೂಂಜರು ಉತ್ತಮ ಆಡಳಿತ ನೀಡಿ ರಾಜ್ಯದಲ್ಲೇ ಮಾದರಿ ತಾಲೂಕು ಆಗಿ ಪರಿವರ್ತಿಸಲಿ. ತಾಲೂಕಿನ ಗುರುವಾಯನಕೆರೆ, ಗಡಾಯಿಕಲ್ಲು, ದಿಡುಪೆ, ಕಾಜೂರು ಸೇರಿದಂತೆ ಅನೇಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಬೇಕು.
ತಾಲೂಕು ಕಚೇರಿ ಸೇರಿದಂತೆ ಕೆಲ ಇಲಾಖೆಗಳಲ್ಲಿ ನಡೆಯುವ ಅವ್ಯವಹಾರ, ಲಂಚ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಎಲ್ಲಾ ಬಡವರಿಗೂ ಸಮರ್ಪಕ ಸೇವೆ ದೊರೆಯುವಂತೆ ಮಾಡಬೇಕು. ಸರಕಾರದ ಯಾವುದೇ ಸೌಲಭ್ಯಗಳು ಬಡವರಿಗೆ, ನಿರ್ಗತಿಕರಿಗೆ ನೇರವಾಗಿ ದೊರೆಯುವಂತೆ ನೋಡಿಕೊಳ್ಳಬೇಕು. ಗುರುವಾಯನಕೆರೆಯಿಂದ ಉಜಿರೆ ತನಕ ಪ್ರತಿ ದಿನ ಟ್ರಾಫಿಕ್ ಸಮಸ್ಯೆ ಕಾಡುತ್ತಿದ್ದು, ಇದರಿಂದ ಅನೇಕ ಮಂದಿಗೆ ವಿಮಾನಯಾನ ಮತ್ತು ರೈಲ್ವೆ ಸ್ಟೇಶನ್‌ಗೆ ಸಮಯಕ್ಕೆ ಸರಿಯಾಗಿ ಹೋಗಲು ಅಡ್ಡಿಯಾಗಿದೆ. ಅಲ್ಲದೆ ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ. ಇದನ್ನು ಸರಿಪಡಿಸಬೇಕು. ಗುರುವಾಯನಕೆರೆಯಿಂದ ಉಜಿರೆ ತನಕ ದ್ವಿಪಥ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
-ಲೋಕೇಶ್ ಕುಲಾಲ್
ನ್ಯೂಸಿಟಿ ಎಲೆಕ್ಟ್ರಾನಿಕ್ಸ್ ಗುರುವಾಯನಕೆರೆ


ಸಮಾನತೆ, ಸೌಹಾರ್ದತೆ ಉಳಿವಿಗಾಗಿ ಸಂವಿಧಾನ ಬದ್ಧವಾಗಿ ಕೆಲಸ ಮಾಡುವಂತಾಗಲಿ:

ಉಮರ್‌ಕುಂಞಿ ನಾಡ್ಜೆ, ಮಾಜಿ ನಿರ್ದೇಶಕರು ಎಪಿಎಂಸಿ ಬೆಳ್ತಂಗಡಿ.

ತಾಲೂಕಿನ ಎಲ್ಲಾ ವರ್ಗದ ಜನರನ್ನು ಸಂವಿಧಾನ ಬದ್ಧವಾಗಿ ಸೌಹಾರ್ದತೆಯಿಂದ, ಸಮಬಾಳ್ವೆಯಿಂದ, ಸಹೋದರತೆಯಿಂದ ಕೊಂಡೋಗುವ ಕೆಲಸ ಶಾಸಕರಿಂದ ನಾವು ನಿರೀಕ್ಷಿಸುತ್ತೇವೆ. ಹೊಸ ತಲೆಮಾರು, ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ಮಾರ್ಗದ ಕಲ್ಪಿಸಿಕೊಟ್ಟು, ವೃತ್ತಿ ಜೀವನದ ಮೂಲಕ ಅವರು ಸ್ವಂತ ನೆಲೆ ಪಡೆಯುವಲ್ಲಿ ಅವರು ಪ್ರಯತ್ನಗಳನ್ನು ಮಾಡಬೇಕು. ಮುಖ್ಯವಾಗಿ ಎಲ್ಲರನ್ನೂ ಒಟ್ಟಿಗೇ ಕೊಂಡೋಗುವ ಕೆಲಸ ಅವರಿಂದ ಆಗಬೇಕು ಎಂಬುದು ನನ್ನ ಆಶಯ.

 

 

 


ಸ್ವಚ್ಛ ಭಾರತ ನಿರ್ಮಾಣಕ್ಕೆ ಸ್ಫೂರ್ತಿ ನೀಡಬೇಕು:

ನಾರಾಯಣ ಕೊಳಂಬೆ ಉದ್ಯಮಿ ಮುಂಡಾಜೆ

ಪ್ರತಿ ಗ್ರಾಮಗಳ ಅಭಿವೃದ್ಧಿಯ ಜೊತೆಗೆ ರಸ್ತೆಗಳ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವುದು, ಅವುಗಳ ಜೊತೆಗೆ ಗ್ರಾಮ ಪಂಚಾಯತಗಳ ನೆರವಿನಿಂದ ಪ್ರತಿ ಗ್ರಾಮಗಳ ತ್ಯಾಜ ವಿಲೇವಾರಿಯೊಂದಿಗೆ ಸ್ವಚ್ಛತೆಯನ್ನು ಕಾಪಾಡಿ ಸ್ವಚ್ಛ ಭಾರತ ಸರ್ಕಾರ ನಿರ್ಮಾಣಕ್ಕೆ ಸ್ಫೂರ್ತಿಯನ್ನು ನೀಡುವುದು.
ನಮ್ಮ ತಾಲೂಕಿನ ಅನೇಕ ಪ್ರೇಕ್ಷಣಿಯ ಪ್ರದೇಶಗಳಿವೆ ಇದುವರೆಗೆ ಅವುಗಳ ಅಭಿವೃದ್ದಿ ಯಾಗದೆ ಇದ್ದು ಅದನ್ನು ಅಭಿವೃದ್ದಿಗೊಳಿಸಿ ಒಳ್ಳೆಯ ಪ್ರವಾಸೋದ್ಯಮ ತಾಣವಾಗಿ ಬೆಳ್ತಂಗಡಿ ತಾಲೂಕು ಮಾರ್ಪಾಡು ಹೊಂದಬೇಕು.
ಇದರಿಂದ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ನಿರುದ್ಯೋಗ ಮುಕ್ತ ತಾಲೂಕು ಬೆಳ್ತಂಗಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು, ಮತ್ತು ಅದರ ಅಭಿವೃದ್ಧಿಗೆ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡಬೇಕು. ತಾಲೂಕಿನಲ್ಲಿರುವ ಪ್ರತಿ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಗೊಳಿಸಿ ಅವುಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ, ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಶಿಕ್ಷಣ ಸೌಲಭ್ಯವನ್ನು ಅಗತ್ಯವಾಗಿ ಪೂರೈಸಬೇಕು. ನಮ್ಮ ತಾಲೂಕಿನಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ದಬ್ಬಾಳಿಕೆ ಹಾಗೂ ಜನರಿಂದ ಲಂಚವನ್ನು ಸ್ವೀಕರಿಸುವ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕಬೇಕು. ತಾಲೂಕಿನ ಕೃಷಿ ಮಾರುಕಟ್ಟೆ ಸಂಪೂರ್ಣವಾಗಿ ಹದಗೆಟ್ಟಿದ್ದು ಅದರ ಬದಲಾವಣೆಯಲ್ಲೂ ಬಹುಮುಖ್ಯ ಪಾತ್ರವಹಿಸಬೇಕು. ಮತ್ತು ಕೃಷಿಕರಿಗೆ ಸಿಗಬೇಕಾದ ಎಲ್ಲಾ ಮೂಲ ಸವಲತ್ತುಗಳನ್ನು ಒದಗಿಸಿಕೊಡಬೇಕು ಹಾಗೂ ಬಿತ್ತನಾ ಬೀಜಗಳು ಪೂರೈಕೆಯ ಸಮರ್ಪಕವಾಗಿ ಕಾಲಕಾಲಕ್ಕೆ ಆಗಬೇಕಿದ್ದು ಅವುಗಳ ಕಡೆ ಗಮನ ಹರಿಸಬೇಕಾಗಿದೆ ಮತ್ತು ಎಲ್ಲಾ ಬೆಳೆಗಳಿಗೆ ಉತ್ತಮ ಬೆಲೆ ಮಾರುಕಟ್ಟೆಯಲ್ಲಿ ಸಿಗುವಂತೆ ಮಾಡಬೇಕು. ಪರಿಸರ ಸಂರಕ್ಷಣೆಯ ಜೊತೆಗೆ ದಟ್ಟ ಗಣಿಕಾರಿಯನ್ನೂ ನಿಷೇಧಿಸಿ ಗೋವುಗಳ ರಕ್ಷಣೆಯನ್ನು ಮಾಡಬೇಕು. ಮತ್ತು ಯಾವುದೇ ಕೋಮುಗಲಬೆಗಳಿಗೆ ಎಡೆಮಾಡಿ ಕೊಡದೆ ಸಂಪೂರ್ಣವಾಗಿ ಸೌಹಾರ್ದತೆಯನ್ನು ಕಾಪಾಡಿಕೊಡಬೇಕು.


 

 

 

 

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.