ಅಡಕೆ ಬುಡ ಬಿಡಿಸುವ ಬದಲು ಮಲ್ಚಿಂಗ್.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಂದ್ರಹಾಸ ಚಾರ್ಮಾಡಿ

ಅಡಕೆ ಬುಡಬಿಡಿಸುವ ವಿಧಾನ ಎಲ್ಲೆಡೆ ಪ್ರಚಲಿತದಲ್ಲಿರುವ ಪುರಾತನ ವಿಧಾನ. ವರ್ಷದಲ್ಲೊಂದು ಬಾರಿ ಅಡಕೆ ಗಿಡಗಳ ಬುಡ ಬಿಡಿಸಿ ಸೊಪ್ಪು ಗೊಬ್ಬರವನ್ನು ನೀಡುವ ಪದ್ಧತಿ ಇಂದಿಗೂ ಹೆಚ್ಚಿನ ಕಡೆಗಳಲ್ಲಿದೆ. ಕೂಲಿಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ಬುಡ ಬಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮೂರ್‍ನಾಲ್ಕು ಎಕರೆ ತೋಟವಿದ್ದರಂತೂ ಅಸಾಧ್ಯದ ಮಾತೆ ಸರಿ. ಇನ್ನು ಒಂದು ಗಿಡದ ಬುಡ ಬಿಡಿಸಲು ಕಡಿಮೆಯೆಂದರೆ ಎಂಟರಿಂದ ಹತ್ತು ರೂಪಾಯಿ ಖರ್ಚು ತಗಲುತ್ತದೆಯಂತೆ. ಹಾಗಾದರೆ ಗಿಡಗಳನ್ನು ಬಿಡಿಸಲೇಬೇಕಾ? ಎಂಬುವುದು ಎಲ್ಲರನ್ನು ಕಾಡುವ ಪ್ರಶ್ನೆ. ಬುಡ ಬಿಡಿಸಿದರೆ ಬೇರುಗಳು ತುಂಡಾಗಿ ಗಿಡದ ಬೆಳವಣಿಗೆಗೆ ಮಾರಕವಾಗುತ್ತದೆ ಎಂಬ ಸತ್ಯವನ್ನು ಈಗಾಗಲೇ ಹಲವು ತೋಟಗಾರಿಕಾ ಇಲಾಖೆಗಳು ಖಚಿತಪಡಿಸಿವೆ. ಆದರೆ ಬೆಳೆಗಾರರು ಮಾತ್ರ ಸಾಂಪ್ರದಾಯಿಕ ಪದ್ಧತಿಯನ್ನೇ ಮುಂದುವರಿಸುತ್ತಲೆ ಬಂದಿದ್ದಾರೆ. ಪ್ರತಿ ಬುಡವನ್ನು ಬಿಡಿಸುವ ಬದಲು ಮಲ್ಚಿಂಗ್ ವಿಧಾನವನ್ನು ಕೈಗೊಂಡರೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದೆಂಬುವುದನ್ನು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಮಾದವಪುರದ ಪ್ರೇಮಾಮ್ಮರವರು ತೋರಿಸಿಕೊಟ್ಟಿದ್ದಾರೆ. ಅಡಕೆ ಬೆಳೆಗಾರರ ಪಾಲಿಗೆ ವರವಾಗಬಲ್ಲ ಈ ಮಲ್ಚಿಂಗ್ ವಿಧಾನದ ಪರಿಚಯ ಇಲ್ಲಿದೆ. ಇತರರು ಇತ್ತ ಕಡೆ ಒಲವು ತೋರಬಹುದಾಗಿದೆ.
ಮಲ್ಚಿಂಗ್ ಎಂದರೇನು? ಪ್ರೇಮಾಮ್ಮರವರ ಮೂರು ಎಕರೆಯಲ್ಲಿ ಎರಡು ಸಾವಿರ ಅಡಕೆ ಗಿಡಗಳು ಬೆಳೆದು ನಿಂತಿವೆ. ಗಿಡದಿಂದ ಗಿಡಕ್ಕೆ ಎಂಟು ಅಡಿ ಅಂತರವಿದೆ. ಇವರು ಅಡಕೆ ತೋಟಕ್ಕೆ ಕೊಟ್ಟಿಗೆ ಮತ್ತು ಎರೆಹುಳ ಗೊಬ್ಬರವನ್ನು ಹಾಕಿ ನಂತರ ಅಡಕೆ ಗಿಡಗಳ ಮಧ್ಯೆ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಿಸುತ್ತಾರೆ. ನಂತರ ತೋಟದಲ್ಲಿದ್ದ ಅಡಕೆ ಗರಿ, ಹಾಳೆಗಳನ್ನು ಕತ್ತರಿಸಿ ತೋಟಕ್ಕೆ ಹಾಕುತ್ತಿರುತ್ತಾರೆ. ಸೋಗೆ ತೋಟದಲ್ಲೆ ಕೊಳೆತು ಗೊಬ್ಬರವಾಗುತ್ತದೆ. ಈ ವಿಧಾನವನ್ನು ಮಲ್ಚಿಂಗ್ ವಿಧಾನ ಎನ್ನುತ್ತಾರೆ.
ಪ್ರಯೋಜನ : ಇದರಿಂದಾಗಿ ಸಾಮಾನ್ಯವಾಗಿ ಬುಡ ಬಿಡಿಸುವ ವಿಧಾನದಲ್ಲಿ ಬಳಕೆಯಾಗುವ ಅರ್ಧದಷ್ಟು ಗೊಬ್ಬರ ಇಲ್ಲಿ ಸಾಕಾಗುತ್ತದೆ. ಗಿಡಗಳಿಗೆ ಬೇಕಾದಷ್ಟೇ ಪ್ರಮಾಣದ ಗೊಬ್ಬರದ ಬಳಕೆ ಸಾಧ್ಯವಾಗುತ್ತದೆ. ಗಿಡದ ಬೇರುಗಳು ತುಂಡಾಗುವ ಸಾಧ್ಯತೆಗಳು ಇಲ್ಲಿಲ್ಲ. ತೋಟ ಕಳೆಗಳಿಲ್ಲದೆ ಫಲವತ್ತತೆಯಿಂದ ಕೂಡಿದ್ದು ಮಣ್ಣಿನಲ್ಲಿರುವ ನೀರಿನಾಂಶ ಬೇಸಿಗೆಗಾಲದಲ್ಲೂ ಕಡಿಮೆ ಯಾಗುವುದಿಲ್ಲ. ತೋಟದಲ್ಲಿ ತಿರುಗಾಡಲು ಸುಲಭವಾಗುತ್ತದೆ. ಗರಿಗಳನ್ನು ಹೆಕ್ಕಿ ರಾಶಿ ಹಾಕುವ ಪ್ರಮಯವು ತಪ್ಪುತ್ತದೆ. ಖರ್ಚು ಕಡಿಮೆ. ವರ್ಷದಲ್ಲಿ ಎರಡು ಬಾರಿ ಮಳೆಗಾಲದ ಕೊನೆಗೆ ಅಂದರೆ ಮೇ ಮತ್ತು ಅಕ್ಟೋಬರ್ ತಿಂಗಳಲ್ಲಿ ಇವರು ಈ ವಿಧಾನವನ್ನು ಕೈಗೊಳ್ಳುತ್ತಾರೆ. ಸ್ವತಹ ಟ್ರಾಕ್ಟರ್ ಇದ್ದರೆ ಮಲ್ಚಿಂಗ್ ಮಾಡುವುದು ಸುಲಭ. ಇಲ್ಲವಾದರೆ ಹಾರೆಯನ್ನು ಬಳಸಿ ಮಲ್ಚಿಂಗ್ ಮಾಡಬಹುದಾಗಿದೆ.
ನೀರಾವರಿ : ಸಾಮಾನ್ಯವಾಗಿ ತೋಟಗಳಿಗೆ ಪಂಪ್ ಮೂಲಕ ಅಥವಾ ನದಿ, ತೊರೆಗಳಿಂದ ಕಟ್ಟೆಗಳ ಮೂಲಕ ಬರುವ ನೀರನ್ನು ಹಾಯಿಸುವ ವಿಧಾನ ಎಲ್ಲೆಡೆ ಚಾಲ್ತಿಯಲ್ಲಿದೆ. ತೋಟಕ್ಕೆ ಹನಿನೀರಾವರಿ ವ್ಯವಸ್ಥೆಯನ್ನು ಕೈಗೊಂಡಲ್ಲಿ ಮಲ್ಚಿಂಗ್ ವಿಧಾನದಲ್ಲಿ ತೋಟದಲ್ಲಿ ಕತ್ತರಿಸಿ ಹಾಕಿದ ಹಾಳೆ, ಅಡಕೆ ಗರಿ ಬೇಗ ಕೊಳೆತು ಗೊಬ್ಬರವಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ನೀರಿನ ಬಳಕೆಯಾಗುತ್ತದೆ. ಮಲ್ಚಿಂಗ್ ವಿಧಾನ ಕೈಗೊಳ್ಳುವವರು ನೇರವಾಗಿ ತೋಟಕ್ಕೆ ನೀರಾಯಿಸುವ ವ್ಯವಸ್ಥೆಯ ಬದಲು ಹನಿ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ.
ಇಳುವರಿ : ಪ್ರೇಮಾರವರು ಕಳೆದ ಹದಿನೈದು ವರ್ಷಗಳಿಂದ ಈ ವಿಧಾನವನ್ನು ಕೈಗೊಳ್ಳುತ್ತಿದ್ದಾರೆ. ಇಲ್ಲಿ ಬಳಕೆಯಾಗುವ ಗೊಬ್ಬರದ ಪ್ರಮಾಣ ತುಂಬ ಕಡಿಮೆ. ಇವರು ಗೊಬ್ಬರವನ್ನು ಹೊರಗಿನಿಂದ ಖರೀದಿಸುವುದಿಲ್ಲ. ನಾಲ್ಕು ಎರೆಹುಳ ತೊಟ್ಟಿಗಳಿವೆ. ಒಂದು ಹಸುವನ್ನು ಸಾಕಿದ್ದಾರೆ. ಈ ಹಿಂದೆ ಇವರು ಕೂಡಾ ಬುಡ ಬಿಡಿಸುವ ವಿಧಾನವನ್ನು ಅನುಸರಿಸುತ್ತಿದ್ದರು.
ಇದೀಗ ಮಲ್ಚಿಂಗ್ ವಿಧಾನದಿಂದಾಗಿ ಇಳುವರಿಯು ಇಮ್ಮಡಿಗೊಂಡಿದೆ.
ಈ ಸರಳ ವಿಧಾನ ಕೂಲಿ ಸಮಸ್ಯೆಗೆ ಪರಿಹಾರ ಎನ್ನುವ ಜೊತೆಗೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಅಪ್ಪಟ ಸಾವಯವ ಭೂಮಿಯನ್ನಾಗಿ ಬಳಸಿ ಮುಂದಿನ ಪೀಳಿಗೆಗೂ ಉಳಿಸಬಹುದಾಗಿದೆ. ಇತರ ಬೆಳೆಗಾರರು ಇತ್ತ ಕಡೆ ಒಲವು ತೋರಬಹುದಾಗಿದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಪ್ರೇಮಾಮ್ಮರವರ ಮಗ ಎಸ್. ರಾಕೇಶ್ ( 9535339596) ರವರನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.