ಎಸ್ಸೆಸ್ಸೆಲ್ಸಿ : ತಾಲೂಕಿಗೆ ಶೇ.89.09

ರಚನಾ (620ಅಂಕ)
ಡೀನಾ ಮರಿಯಾ ಫ್ರಾಂಕ್ (618 ಅಂಕ) ಪ್ರದೀಪ್ ರಾವ್ ( 613 ಅಂಕ)

ಬೆಳ್ತಂಗಡಿ : 2017-18 ನೇ ಸಾಲಿಗೆ ನಡೆದ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಮೇ 8 ರಂದು ಎಲ್ಲಾ ಶಾಲೆಗಳಲ್ಲಿ ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಒಟ್ಟು 67 ಪ್ರೌಢ ಶಾಲೆಗಳ ಮೂಲಕ ಮತ್ತು ಮರು ಉತ್ತೀರ್ಣತೆ ಬಯಸಿ ಪರೀಕ್ಷೆ ಬರೆದ ಒಟ್ಟು 4009 ವಿದ್ಯಾರ್ಥಿಗಳ ಪೈಕಿ 3459 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಪ್ರಥಮ ಬಾರಿಗೆ ಪರೀಕ್ಷೆ ಬರೆದಿರುವ 3823ವಿದ್ಯಾರ್ಥಿಗಳ ಪೈಕಿ 3406 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ತಾಲೂಕಿಗೆ ಶೇ. 89.09 ಫಲಿತಾಂಶ ತಂದಿದ್ದಾರೆ. ಈ ಪೈಕಿ 1778 ಬಾಲಕರ ಪೈಕಿ 1527 ಮಂದಿ ಉತ್ತೀರ್ಣರಾದರೆ,1933 ಬಾಲಿಕೆಯರ ಪೈಕಿ 1761 ಮಂದಿ ಪಾಸಾಗಿದ್ದಾರೆ. ಈ ಫಲಿತಾಂಶದಿಂದ ಬೆಳ್ತಂಗಡಿ ತಾಲೂಕು ರಾಜ್ಯದ 204 ತಾಲೂಕುಗಳ ಫಲಿತಾಂಶಗಳ ಪಟ್ಟಿಯಲ್ಲಿ 24 ನೇ ಸ್ಥಾನ ಗಳಿಸುವಲ್ಲಿ ಕಾರಣವಾದುದು ಮಾತ್ರವಲ್ಲದೆ, ಕಳೆದ ಬಾರಿಯ ಫಲಿತಾಂಶಕ್ಕಿಂತ 5 ಶೇ. ಏರಿಕೆ ದಾಖಲಿಸಿದೆ. ಈ ಬಾರಿ ೪ ಸರಕಾರಿ ಶಾಲೆಗಳು ಶೇ. ೧೦೦ಫಲಿತಾಂಶ ಪಡೆದು ಕಳೆದ ಬಾರಿ ಇದ್ದ ೧ ನ್ನು ಮೀರಿ ಮೂರು ಹೆಚ್ಚುವರಿ ಪಡೆದುಕೊಂಡಿದ್ದರೆ, ಅನುದಾನ ರಹಿತ ಶಾಲೆಗಳ ಪೈಕಿ 7 ಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ.
ಶೇ. 100 ಫಲಿತಾಂಶ:
ತಾಲೂಕಿನ ಸರಕಾರಿ ಶಾಲೆಗಳಾದ ಸರಕಾರಿ ಪ್ರೌಢ ಶಾಲೆ ಕಲ್ಮಂಜ, ಸರಕಾರಿ ಪ್ರೌಢ ಶಾಲೆ ನಮ್ಮೂರ ಪ್ರೌಢ ಶಾಲೆ ಗುರುವಾಯನಕೆರೆ, ಸರಕಾರಿ ಪ್ರೌಢ ಶಾಲೆ ನೇಲ್ಯಡ್ಕ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಇವುಗಳು ಶೇ. 100 ಫಲಿತಾಂಶ ಪಡೆದಿವೆ. ಅನುದಾನ ರಹಿತ ಶಾಲೆಗಳ ಪೈಕಿ ಸೈಂಟ್ ಮೇರಿಸ್ ಆಂ. ಮಾ. ಶಾಲೆ ಲಾಯಿಲ, ವಾಣಿ ಆಂ. ಮಾಧ್ಯಮ ಶಾಲೆ ಹಳೆಕೋಟೆ ಬೆಳ್ತಂಗಡಿ, ಹೋಲಿ ರಿಡೀಮರ್ ಆಂ.ಮಾ. ಶಾಲೆ ಬೆಳ್ತಂಗಡಿ, ಸೈಂಟ್ ಸಾವ್ಯೋ ಆಂ. ಮಾ. ಶಾಲೆ ಬೆಂದ್ರಾಳ, ಸಂತ ತೆರೇಸಾ ಆಂ. ಮಾ. ಶಾಲೆ ಬೆಳ್ತಂಗಡಿ, ಮರಿಯಾಂಬಿಕಾ ಆಂ. ಮಾ. ಶಾಲೆ ಬೆದ್ರಬೆಟ್ಟು, ಮತ್ತು ಸೈಂಟ್ ಪೀಟರ್ ಕ್ಲೇವರ್ ಆಂ. ಮಾ. ಶಾಲೆ ಅಳದಂಗಡಿ ಈ ಶಾಲೆಗಳು ಶೇ. 100 ಫಲಿತಾಂಶ ಪಡೆದುಕೊಂಡು ದಾಖಲೆ ಬರೆದಿದೆ.
250 ವಿದ್ಯಾರ್ಥಿಗಳಿಗೆ ಎ+ ಶ್ರೇಣಿ:
ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 250 ವಿದ್ಯಾರ್ಥಿಗಳು ಎ+ ಶ್ರೇಣಿ, ೭೪೭ ವಿದ್ಯಾರ್ಥಿಗಳು ಎ ಶ್ರೇಣಿ ಪಡೆದುಕೊಂಡಿದ್ದಾರೆ. 964 ವಿದ್ಯಾರ್ಥಿಗಳು ಬಿ+, 846 ಬಿ ಶ್ರೇಣಿ ಪಡೆದಿದ್ದಾರೆ. 570 ವಿದ್ಯಾರ್ಥಿಗಳು ಸಿ+ ಮತ್ತು 82ವಿದ್ಯಾರ್ಥಿಗಳು ಸಿ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ರಚನಾ ತಾಲೂಕಿಗೆ ಪ್ರಥಮ, ಡೀನಾ ಮರಿಯಾ ಫ್ರಾಂಕ್ ತಾಲೂಕಿಗೆ ದ್ವಿತೀಯ :
ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರು ಇಲ್ಲಿನ ವಿದ್ಯಾರ್ಥಿನಿ ರಚನಾ ಅವರು ಈ ಬಾರಿ 620 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ. ಅಂತೆಯೇ 618 ಅಂಕ ಪಡೆದ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ವಿದ್ಯಾರ್ಥಿನಿ ಡೀನಾ ಮರಿಯಾ ಫ್ರಾಂಕ್ ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಅದರಲ್ಲೂ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯು ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ, ಹಿಂದಿ, ಸಮಾಜ, ಮತ್ತು ಗಣಿತ ಈ 4 ವಿಷಯಗಳಲ್ಲಿ ಶೇ. 100 ಅಂಕ ಪಡೆದ ಇತಿಹಾಸವೂ ದಾಖಲಾಗಿದೆ. ತೃತೀಯ ಸ್ಥಾನವನ್ನು 613 ಅಂಕಗಳನ್ನು ಪಡೆದ ಸೈಂಟ್ ಪಾವ್ಲ್ಸ್ ನಾರಾವಿಯ ವಿದ್ಯಾರ್ಥಿ ಪ್ರದೀಪ್ ರಾವ್ ಪಡೆದುಕೊಂಡಿದ್ದಾರೆ. ಕ್ರಮವಾಗಿ 612 ಅಂಕಗಳನ್ನು ಪಡೆದ ನಾಲ್ವರು ವಿದ್ಯಾರ್ಥಿಗಳಾದ ಮೋರಾರ್ಜಿ ದೇಸಾಯಿ ಮಚ್ಚಿನದ ಚರಣ್ ಕೆ, ಸರಕಾರಿ ಪ್ರೌಢ ಶಾಲೆ ಸವಣಾಲಿನ ಉಮಾಶಂಕರಿ, ಎಸ್‌ಡಿಎಂ ಸೆಕೆಂಡರಿ ಶಾಲೆ ಉಜಿರೆಯ ಪೂರ್ಣಿಮಾ ಎಂ. ಮತ್ತು ಸಂತ ಮೇರಿಸ್ ಪ್ರೌಢ ಶಾಲೆ ವಿದ್ಯಾರ್ಥಿನಿ ರಚನಾ ಆರ್ ಶೆಟ್ಟಿ ಅವರು ಚತುರ್ಥ ಸ್ಥಾನವನ್ನು ಹಂಚಿಕೊಂಡಿ ದ್ದಾರೆ. 610 ಅಂಕಗಳನ್ನು ಪಡೆದ ಸಂ. ಮೇರಿಸ್ ಪ್ರೌಢ ಶಾಲೆಯ ಆಝ್ವಿನಾ, ಅನುಗ್ರಹ ಆಂ. ಮಾ. ಶಾಲೆಯ ಲ್ಯಾರಿನ್ ತೆರೇಸಾ ಪಿರೇರಾ, ಸೇಕ್ರೆಡ್ ಹಾರ್ಟ್ ಆಂ. ಮಾ.ಶಾಲೆಯ ಫಾತಿಮಾ ಅಫ್ರೀನಾ ಮತ್ತು ರೀಮಾ ಜೈನ್, ಇವರು ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಸರಕಾರಿ ಆಂ. ಮಾಧ್ಯಮ ಶಾಲೆ ಅಳದಂಗಡಿಗೆ ಶೇ. 100 ಫಲಿತಾಂಶ:
ಸರಕಾರದ ವತಿಯಿಂದಲೇ ಅಳದಂಗಡಿಯಲ್ಲಿ ಪ್ರಾರಂಭಿಸಲಾಗಿದ್ದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪ್ರಥಮ ಬ್ಯಾಚ್‌ನ ಪರೀಕ್ಷೆ ಮೊದಲ ಬಾರಿಗೆ ನಡೆದಿದ್ದು ಎಲ್ಲಾ 17 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 100 ಫಲಿತಾಂಶದ ಆರಂಭ ಮಾಡಿದ್ದಾರೆ. ಇದು ಸರಕಾರದ ವಿನೂತನ ಪ್ರಯೋಗವಾಗಿದ್ದು ಮುಂದಕ್ಕೆ ಸರಕಾರವೇ ಈ ರೀತಿಯಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ಅಡಿಪಾಯಕ್ಕಾಗಿ ಮಾಡಿರುವ ಪ್ರಯತ್ನ ಎಂದೇ ವಿಶ್ಲೇಶಿಸಲಾಗಿರುವ ಈ ಪ್ರಯತ್ನದಲ್ಲಿ ಪ್ರಾರಂಭಿಕ ಯಶಸ್ಸು ದೊರೆತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.