ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳೇ…

ಯೋಗೀಶ್ ಬಿ.ಕೆ.ಬೆಳ್ತಂಗಡಿ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ನಿಮ್ಮ ಆಯ್ಕೆಯ ಸಂದರ್ಭದಲ್ಲಿ ನಮ್ಮ ಒಂದು ಮತದಾನ ಬಹು ಮುಖ್ಯ ಪಾತ್ರವಹಿಸುತ್ತದೆ. ನಮ್ಮ ಆಯ್ಕೆಯು ನಿಮ್ಮನ್ನು ಪ್ರತಿನಿಧಿಯನ್ನಾಗಿಸುತ್ತದೆ. ಅಂದ ಮಾತ್ರಕ್ಕೆ ತಾವು ಶಾಸಕರಾಗಿ ಮೆರೆದರೆ ತಾವು ನಮ್ಮ ತಾಲೂಕನ್ನು ಅಭಿವೃದ್ಧಿಗೊಳಿಸದೇ ಇದ್ದಲ್ಲಿ ನಮ್ಮ ಆಯ್ಕೆಯು ವ್ಯರ್ಥವಾಗುತ್ತದೆ. ಇಲ್ಲಿಯವರೆಗೆ ನಮ್ಮ ಮೇಲ್ನೋಟಕ್ಕೆ ಅಭಿವೃದ್ಧಿ ಹೊಂದಿದ್ದರೂ, ಇನ್ನೂ ಅಭಿವೃದ್ಧಿ ಹೊಂದಲು ಹಲವಾರು ಇದೆ.
ವೈದ್ಯಕೀಯ ವ್ಯವಸ್ಥೆ : ತಾಲೂಕು ಆಸ್ಪತ್ರೆಯು ಹಳೇಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಬದಲಾಯಿತೇ ಹೊರತು ಸುಸಜ್ಜಿತ ಆಧುನೀಕರಣ ವ್ಯವಸ್ಥೆಗಳಿಲ್ಲ. ಅಗತ್ಯತೆಗಾಗಿ ಖಾಸಗೀ ಆಸ್ಪತ್ರೆಗಳ ಮೊರೆ ಹೋಗಬೇಕು. ಇಲ್ಲವೇ ಮಂಗಳೂರಿಗೆ ಹೋಗಬೇಕು. ಹಾಗೆಯೇ ತಾಲೂಕು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆಯೂ ಸರಿಯಾದ ಸಮಯಕ್ಕೆ ನೀಡದೇ ಮಂಗಳೂರಿಗೆ ಹೋಗಿ ಅಂತಾ ಜಾಣತನದಿಂದ ಜಾರಿಕೊಳ್ಳುತ್ತಾರೆ. ಹಾಗೆಯೇ ಸಂಘಟಿತ ಕಾರ್ಮಿಕರ ಇSI ಮೂಲಕ ಚಿಕಿತ್ಸೆ ಹಾಗೂ ಅದರ ಅಲೆದಾಟಕ್ಕೆ ಮಂಗಳೂರಿಗೆ ಓಡಾಡಬೇಕಾದ ಪರಿಸ್ಥಿತಿ ಇದೆ. ಬೀಡಿ ಕಾರ್ಮಿಕರಾಗಲೀ, ಇತರೇ ಖಾಸಗೀ ಕಾರ್ಮಿಕರಿಗಾಗಲೀ, ಇತರೇ ಸರಕಾರ ಇಲಾಖೆಯ ಸಿಬ್ಬಂದಿಗಳಿಗಾಗಲೀ, ಪಿ.ಎಫ್ ಮತ್ತು ಇ.ಎಸ್.ಐ ಗಳಿಗೆ ಸೇವೆಗಳಿಗೆ ಮಂಗಳೂರಿಗೆ ಹೋಗಲೇಬೇಕಾದ ಅನಿವಾರ್ಯವಿದೆ. ಕಡು ಬಡವರಂತೂ ಹೇಳಲಾಗದ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ತಾಲೂಕು ಕೇಂದ್ರದಲ್ಲೇ ಇದಕ್ಕೆ ವ್ಯವಸ್ಥೆಯಾಗಲಿ. ಶೈಕ್ಷಣಿಕ ಕ್ಷೇತ್ರ : ಉದಾಹರಣೆಗೆ ಬೆಳ್ತಂಗಡಿ ನಗರದಲ್ಲೇ ಇರುವ ಅತ್ಯಂತ ಹಳೇಯ ಕಾಲೇಜು, ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪರವರು ಉದ್ಘಾಟಿಸಿದ ಸರಕಾರಿ ಪದವಿ ಪೂರ್ವ ಕಾಲೇಜು (ಜ್ಯೂನಿಯರ್ ಕಾಲೇಜು ಅಂತಲೇ ಪ್ರಸಿದ್ಧಿ) ತಾಲೂಕಿನ ಪ್ರತೀ ಕುಟುಂಬದಲ್ಲಿ ಒಬ್ಬನಾದರೂ ಈ ಕಟ್ಟಡದಲ್ಲಿ ವಿದ್ಯಾರ್ಜನೆ ಮಾಡಿರುತ್ತಾರೆ. ಇಲ್ಲಿ ಹಳೇಯ ಕಟ್ಟಡಗಳು ಸೋರುವುದು ಬಿಡಿ, ಅದರ ಜೊತೆಗೆ ಹೊಸದಾಗಿ ನಿರ್ಮಾಣಗೊಂಡ ಕಟ್ಟಡಗಳೂ ಸೋರುತ್ತಿವೆ. (ನಿಜ ತಿಳಿಯಲು ಮಳೆಗಾಲದಲ್ಲಿ ಯಾರೂ ಕೂಡಾ ಪರೀಕ್ಷಿಸಬಹುದು) ಬದಲಾಣೆಯ ಲವಲೇಷವೂ ಇಲ್ಲವಾಗಿದೆ. ಅದೇ ಹಳೇಯ ಕಟ್ಟಡಗಳು, ಅದೇ ಪೀಠೋಪಕರಣಗಳು, ಸುಮಾರು ೨೫-೩೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರು ಇನ್ನೂ ಅಲ್ಲೇ ಇದ್ದಾರೆ. ಲ್ಯಾಬ್‌ಗಳು, ಲೈಬ್ರೆರಿಗಳು, ಉಪಕರಣಗಳು, ಕಾಲೇಜು ಆವರಣ ಕೌಂಪೌಂಡ್ ಬದಲಾಗಬೇಕಿದೆ. ವಾರ್ಷಿಕ ಫಲಿತಾಂಶವನ್ನು ಕೆಳಗಿನಿಂದ ಮೇಲೆ ಹುಡುಕಬೇಕಾದ ಬೇಸರದ ಸಂಗತಿ ಎದುರಾಗುತ್ತದೆ. ಎಲ್ಲಾ ಶಿಕ್ಷಕರನ್ನು ವರ್ಗಾಯಿಸಿ, ಇಲ್ಲವಾದರೇ ತರಾಟೆಗೆ ತೆಗೆದುಕೊಳ್ಳಿ. ಯಾಕಂದರೆ ತಾಲೂಕಿನ ಕಡು ಬಡವರ ಮಕ್ಕಳೇ ಹೆಚ್ಚಾಗಿ ಬರುವುದರಿಂದ ತೇರ್ಗಡೆಯಾಗದೇ ಬಡವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ತಾವುಗಳು ತಿಂಗಳಿಗೊಮ್ಮೆಯಾದರೂ ಒಂದು ಬಾರಿಯಾದರೂ ಭೇಟಿ ನೀಡಬೇಕಾಗಿದೆ. ಹಾಗೆಯೇ ತಾಲೂಕಿನ ಪ್ರತಿಯೊಂದು ಸರಕಾರಿ ಶಾಲೆ ಮತ್ತು ಕಾಲೇಜು ಕೂಡಾ ಅಭಿವೃದ್ಧಿಯಾಗುವ ಹಾಗೆ ವ್ಯವಸ್ಥೆ ನಿರ್ಮಾಣ ಮಾಡಿ. ಹಾಗೆಯೇ ತಾಲೂಕಿನಲ್ಲಿ ಸರಕಾರಿ ತಾಂತ್ರಿಕ ಹಾಗೂ ವಿಜ್ಞಾನ ಕಾಲೇಜುಗಳ ನಿರ್ಮಾಣ ವಾಗಬೇಕಿದೆ. ಅಂತೆಯೇ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕಿದೆ.
ಬಸ್ ನಿಲ್ದಾಣ : ತಾಲೂಕಿನ ಕೇಂದ್ರದಲ್ಲೇ ಸುಸಜ್ಜಿತ ಬಸ್ ನಿಲ್ದಾಣದ ವ್ಯವಸ್ಥೆಯೇ ಇಲ್ಲ ಹಳೇಯ ಕಾಲದ ಜಾಗವೇ ಸ್ವಲ್ಪ ಅಗಲೀಕರಿಸಿ ಅಡ್ಜೆಸ್ಟೇಬಲ್ ಬಸ್ ಸ್ಟಾಂಡ್ ಅಂತಾ ಹೇಳಬಹುದಾದ ನಿಲ್ದಾಣವಿದೆ. ಇದರ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಯಾಕೆಂದರೆ ಪ್ರತಿ ನಿತ್ಯವೂ ನಾವು ನೀವು ನೋಡುವ ಪರಿಸ್ಥಿತಿ ನಿಮ್ಮ ಗಮನಕ್ಕೂ ಬಂದಿರಬಹುದು ಅದಕ್ಕಾಗಿ ಸುವ್ಯವಸ್ಥಿವಾದ ಬಸ್ ಸ್ಟಾಂಡ್ ಬೆಳ್ತಂಗಡಿ ತಾಲೂಕು ಕೇಂದ್ರಕ್ಕೆ ಅತೀ ಅವಶ್ಯಕವಾಗಿ ಬೇಕಾಗಿದೆ. ರಸ್ತೆ ಸಂಪರ್ಕ : ಬೆಳ್ತಂಗಡಿ ನಗರದ ರಸ್ತೆ ವ್ಯವಸ್ಥೆ ಕಂಡರೆ ನಿಜವಾಗಿಯೂ ಇಲ್ಲಿಯ ಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಬೇರೆ ಯಾವುದೇ ನಗರ ಪ್ರದೇಶಗಳಿಗೆ ಭೇಟಿ ನೀಡಲೇ ಇಲ್ಲ ಅಂತಾ ಭಾಸವಾಗುತ್ತದೆ. ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮುಖ್ಯ ರಸ್ತೆ ಅಂದರೆ, ಗುರುವಾಯನಕೆರೆ ಭಂಟರ ಭವನದಿಂದ ಬೆಳ್ತಂಗಡಿ ಸೇತುವೆವರೆಗೆ ರಸ್ತೆ ಅಗಲೀಕರಿಸಿ, ರಸ್ತೆ ವಿಭಜನೆ ನಿರ್ಮಿಸಲು ಇರುವುದು ಕೇವಲ ಕಿಲೋಮೀಟರ್ ಆಗಿದ್ದರೂ ಇದೂ ಇಲ್ಲಿಯವರೆಗೂ ಆಗಲೇ ಇಲ್ಲ. ಇದು ರಸ್ತೆ ಅಗಲವಾಗಿ ರಸ್ತೆ ವಿಭಾಜಕಗಳನ್ನು ಮಾಡಬೇಕಿದೆ. ಸದ್ಯದ ಪರಿಸ್ಥಿತಿ ಬೆಳ್ತಂಗಡಿ ನಗರದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದೆ.ಅದಕ್ಕೆ ಸರಿಯಾದ ರಸ್ತೆ ವಿಭಾಜಕರನ್ನು ಮಾಡಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಳ್ತಂಗಡಿ ನಗರದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದಕ್ಕೆ ಸರಿಯಾದ ರಸ್ತೆ ಅಗಲವಿಲ್ಲ ಅನ್ನುವುದು ಒಂದು ಕಾರಣವಾದರೇ, ಮಾರ್ಗದ ಬದಿಗಳಲ್ಲಿ ವಾಹನ ನಿಲ್ಲಿಸಲು ಸರಿಯಾದ ಜಾಗವಿಲ್ಲದಿರುವುದು ಇನ್ನೊಂದು ಕಾರಣವಾಗಿದೆ. ಬೆಳ್ತಂಗಡಿಗೆ ಬೈಪಾಸ್ ರಸ್ತೆ ನಿಜವಾಗಿಯೂ ಅಗತ್ಯತೆಗಳಲ್ಲಿ ಒಂದಾಗಿದೆ. ಇದರ ಜೊತೆಯಲ್ಲಿ ಪ್ರತಿಯೊಂದು ಗ್ರಾಮದ ಸಂಪರ್ಕ ರಸ್ತೆಗಳು ಅಭಿವೃದ್ಧಿಯಾಗಬೇಕು.
ಉದ್ಯೋಗ ನಿರೀಕ್ಷೆ : ಬೆಳ್ತಂಗಡಿ ಜನರು ಉದ್ಯೋಗಕ್ಕಾಗಿ ಹಲವಾರು ಊರುಗಳಿಗೆ ಹೋಗುವ ಅನಿವಾರ್ಯತೆ ಎದುರಾಗಿದೆ. ಹೆಚ್ಚಾಗಿ ಮಹಿಳೆಯರು ಬೀಡಿ ಕಾರ್ಮಿಕರಾಗಿದ್ದು, ಸದ್ಯದ ಪರಿಸ್ಥಿತಿ ಅದರಲ್ಲೂ ಕೆಲಸ ದಿನೇ ದಿನೇ ಕಡಿಮೆಯಾಗುತ್ತಿದೆ. ಬೇರೆ ಉದ್ಯೋಗ ಅನಿವಾರ್ಯವಾಗಿದೆ. ಅದಕ್ಕೆ ಪರ್ಯಾಯವಾಗಿ ಯಾವುದಾದರೂ ಖಾಸಗೀ\ ಸರ್ಕಾರಿ ಫ್ಯಾಕ್ಟರಿ, ಕಂಪನಿಗಳನ್ನು ನಿರ್ಮಿಸಬೇಕಾಗಿದೆ.
ಸುಸಜ್ಜಿತ ಕ್ರಿಂಡಾಂಗಣ : ಬೆಳ್ತಂಗಡಿಯಲ್ಲಿ ತಾಲೂಕು ಕ್ರೀಡಾಂಗಣವು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಹಾಗಾಗಿದೆ. ಅದರಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೇ ಯಾರೊಬ್ಬರೂ ಕ್ರೀಡಾ ಕಾರ್ಯಕ್ರಮಗಳನ್ನು ಅಲ್ಲಿ ಏರ್ಪಡಿಸದೇ ಇರುವುದು ಇದಕ್ಕೆ ಸಾಕ್ಷಿ. ಸಾಕಷ್ಟು ಭೂ ವಿಸ್ತಾರವಿದ್ದರೂ ಅಭಿವೃದ್ಧಿಯಿಂದ ವಂಚಿತವಾಗಿದೆ.
ನಗರ\ಪುರಭವನ :
ಯಾವುದೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಕಡಿಮೆ ದರ ಸಂಯೋಜನೆಯಲ್ಲಿ ಮಾಡಲು ಸರಕಾರದ ವತಿಯಿಂದ ಭವನ/ಹಾಲ್‌ಗಳು ಇಲ್ಲ. ಮದುವೆ ಹಾಗೂ ಇನ್ನಿತರ ಖಾಸಗೀ ಕಾರ್ಯಕ್ರಮಗಳನ್ನು ಮಾಡಲು ಇಲ್ಲವೇ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಗಳನ್ನು ನಡೆಸಲು ತಕ್ಕದಾದ ಸರಕಾರಿ ಸಮಾರಂಭ ಭವನಗಳು ಇಲ್ಲವಾಗಿದೆ. ಪ್ರತಿಯೊಂದಕ್ಕೂ ಖಾಸಗಿ ಹಾಲ್‌ಗಳನ್ನೇ ಅವಲಂಬಿಸಬೇಕಾಗಿದೆ.
ಪಾರ್ಕ್\ವಿಹಾರಧಾಮ, ಮನೋರಂಜನಾ ಕೇಂದ್ರ : ಬೆಳ್ತಂಗಡಿ ನಗರದ ಜೀವನ ಶೈಲಿ ಪಟ್ಟಣಕ್ಕೆ ಬದಲಾಗುತ್ತಿರುವ ಸಂದರ್ಭದಲ್ಲಿ ಸಾಯಂಕಾಲದ ವೇಳೆ, ಇಲ್ಲವೇ ವಾರಾಂತ್ಯದಲ್ಲಿ ಸುಸಜ್ಜಿತ ಪಾರ್ಕ್ ಅಥವಾ ವಿಹಾರಧಾಮ, ಚಿಣ್ಣರ ಆಟದ ಮೈದಾನ, ಹಿರಿಯರಿಗೆ ವಾಕಿಂಗ್. ವ್ಯಾಯಾಮ ಮಾಡುವ ಸ್ಥಳ, ಅವಶ್ಯಕತೆ ಇದೆ. ಗುರುವಾಯನಕೆರೆಯಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರವನ್ನಾಗಿಸಿ, ಬೋಟಿಂಗ್ ಹಾಗೂ ವಿಹಾರಧಾಮ ವನ್ನಾಗಿಸಬಹುದು. ನೀರು ಸರಬರಾಜು : ಬೆಳ್ತಂಗಡಿ ನಗರದ ಸೀಮೆಯೇ ಬೆಳ್ತಂಗಡಿಯ ನದಿಯಾಗಿದೆ. ಅಲ್ಲಲ್ಲಿ ಚಿಕ್ಕ ಚಿಕ್ಕ ವೆಂಟೆಡ್ ಡ್ಯಾಂ ಗಳನ್ನು ಕಟ್ಟುವ ಮೂಲಕ ನೀರು ನಿಲ್ಲಿಸಿ ನೀರು ಇಂಗಿಸಬಹುದು . ಹತ್ತಿರದ ಕೃಷಿಕರೂ ಪ್ರಯೋಜನ ಮತ್ತು ಕುಡಿಯುವ ನೀರನ್ನಾಗಿ ಪರಿವರ್ತಿಸಹುದು. ಬೆಳ್ತಂಗಡಿ ಹಲವಾರು ಕಡೆಗಳಲ್ಲಿ ಝರಿಗಳು ಹರಿಯುತ್ತಿದ್ದು ಇವುಗಳನ್ನೆಲ್ಲಾ ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಬಹುದು. ಅದರಲ್ಲೂ ಅಲ್ಲಲ್ಲಿ ಹಲವಾರು ನದಿ ತೊರೆಗಳು ಇರುವುದರಿಂದ ಕೃಷಿ ಚಟುವಟಿಕೆಗಳಿಗೆ ಪ್ರಯೋಜನ ವಾಗುವಂತೆ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮಾಡಲೇಬೇಕಾಗಿದೆ. ಕೃಷಿ\ ಹೈನುಗಾರಿಕೆ : ಬಹು ಮುಖ್ಯವಾಗಿ ಹೆಚ್ಚಿನವರು ಕೃಷಿಯನ್ನೇ ಅವಲಂಬಿಸಿ ರುವುದರಿಂದ ಕೃಷಿಕರಿಗೆ ವೈಜ್ಞಾನಿಕವಾಗಿ ಮತ್ತು ಹೈನುಗಾರಿಕೆಯ ಆಧುನಿಕತೆಯ ಹಾಗೂ ಪಶುಸಂಗೋಪಣೆಯ ಬಗ್ಗೆ ಮಾಹಿತಿ ನೀಡುವ ಕೇಂದ್ರದ ಕಟ್ಟಡದ ಅವಶ್ಯಕತೆ ಬೇಕಾಗಿದೆ. ಇದರಿಂದ ನಿರುದ್ಯೋಗಿಗಳನ್ನು ಸ್ವಾವಲಂಬಿಗಳನ್ನಾಗಿ ಪರಿವರ್ತಿಸಬಹುದು.
ಆರ್.ಟಿ.ಸಿ (ಪಹಣಿ ಪತ್ರ) :
ಪ್ರತಿಯೊಂದು ಗ್ರಾಮ ಪಂಚಾಯತ್‌ನಲ್ಲಿ ಲಭ್ಯವಾಗಬೇಕಿದೆ. ಒಂದು ಆರ್.ಟಿ.ಸಿ ಗಾಗಿ ಮೂರು ನಾಲ್ಕು ದಿನ ಬೆಳ್ತಂಗಡಿ ಕೇಂದ್ರದಲ್ಲಿ ಅಲೆದಾಡುವುದು ತಪ್ಪುತ್ತದೆ.
ಜನ ಸಂಪರ್ಕ ಸಭೆ :
ತಿಂಗಳಿಗೆ ಒಮ್ಮೆಯಾದರೂ ಪ್ರತೀ ಗ್ರಾಮಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ಜನ ಸಂಪರ್ಕ ಸಭೆ ನಡೆಸಿ ಕುಂದುಕೊರತೆಗಳನ್ನು ಸಂಬಂಧಪಟ್ಟ ಎಲ್ಲಾ ಅಧಿಕಾರಿ ಗಳನ್ನು ಕರೆಸಿ ಸಮಸ್ಯೆ ಅವಲೋಕಿಸಬೇಕು. ಪಂಚಾಯತ್‌ನ ಅಧ್ಯಕ್ಷರು ಯಾವ ರಾಜಕೀಯ ಪಕ್ಷದವರೇ ಆಗಿರಲಿ, ತರಾಟೆಗೆ ತೆಗೆದುಕೊಳ್ಳುವುದು ಅನಿವಾರ್ಯ ವಾಗಿರುತ್ತದೆ.
ಕೇಂದ್ರ ಸ್ಥಾನದ ಅಭಿವೃದ್ಧಿ :
ಬೆಳ್ತಂಗಡಿ ನಗರವು ಕೇಂದ್ರ ಸ್ಥಾನವಾಗಿದ್ದು ಅದರ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ನಿಗಾ ಇರಲಿ. ಇದನ್ನು ಮಾದರಿ ನಗರವನ್ನಾಗಿಸಿ ನಗರದ ಸೌಂದರ್ಯವನ್ನು ಹೆಚ್ಚಿಸಿ, ಜನರು ಆಕರ್ಷಿತರಾಗುವಂತೆ ಅಭಿವೃದ್ಧಿಗೊಳಿಸಿ ಕೊನೆಯದಾಗಿ ನಿಮ್ಮ ರಾಜಕೀಯ ಪಕ್ಷವು ನಿಮ್ಮ ಆಯ್ಕೆಗಾಗಿ ಇರುವುದೇ ಹೊರತು, ನಿಮ್ಮ ಜೀವನ ನಿರ್ವಹಣೆಗಂತೂ ಖಂಡಿತಾ ಅಲ್ಲ. ಆಯ್ಕೆಯಾದ ನಂತರ ನೀವು ಪಕ್ಷಭೇಧ ಮರೆತು ಕಾರ್ಯ ನಿರ್ವಹಿಸಬೇಕಾಗಿದೆ. ಹೀಗೆ ಮಾಡಿದರೆ ಅದು ನಿಮ್ಮ ಮುಂದಿನ ಚುನಾವಣೆಯ ಮರು ಆಯ್ಕೆಗೆ ಸುಲಭ ದಾರಿಯಾಗುತ್ತದೆ.
ಕೇವಲ ಜಾತಿ, ಧರ್ಮ, ಕುಟುಂಬ, ಪಕ್ಷ ಅಂತಾ ನೋಡಿದರೆ ಮುಂದಿನ ಚುನಾವಣೆಗೆ ಪಶ್ಚಾತಾಪ ಪಡಬೇಕಾಗುತ್ತದೆ. ಇಲ್ಲಿ ಪ್ರತಿಯೊಬ್ಬರೂ ಕೂಡಾ ಬುದ್ಧಿವಂತರೆ ಆಗಿರುವುದರಿಂದ ಯಾರನ್ನೂ ಎಲ್ಲಿ ಕೂರಿಸಬೇಕು ಅನ್ನುವುದು ಪ್ರತೀಯೊಬ್ಬ ಮತದಾರನಿಗೂ ಗೊತ್ತಿರುವ ವಿಷಯವಾಗಿದೆ. ಕೇಂದ್ರದಲ್ಲಿ ಯಾವುದೇ ಆಡಳಿತ ಬರಲಿ, ರಾಜ್ಯದಲ್ಲಿ ಯಾವುದೇ ಆಡಳಿತ ಬರಲಿ, ನಿಮ್ಮ ಆಯ್ಕೆ ನಮ್ಮ ಕೈಯಲ್ಲಿದೆ ನೆನಪಿರಲಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.