ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ಹಣಾಹಣಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜಕಾರಣಿಗಳ ಪ್ರತಿಷ್ಠಿತ ಪೈಪೋಟಿಯ ಕಣವಾಗಿ ಹಲವು ಬಾರಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದು ಅಚ್ಚರಿಯ ಫಲಿತಾಂಶಗಳನ್ನು ನೀಡಿದ್ದ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಇನ್ನು ಕೇವಲ ಎರಡು ದಿನಗಳಿರುವಂತೆ ಅಭ್ಯರ್ಥಿಗಳ ನಡುವೆ ಕೊನೆಯ ಹಂತದ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿ ಶಾಸಕ ಕೆ.ವಸಂತ ಬಂಗೇರ ತಮ್ಮ ಕಾರ್ಯ ಕರ್ತರ ಜೊತೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಆರನೇ ಅವಧಿಗೆ ಈ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಲೇ ಬೇಕು ಎಂಬ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ನಡಿಗೆ ಮತದಾರನ ಕಡೆಗೆ ಎಂಬ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಸರಕಾರದ ಸಾಧನೆ ಮತ್ತು ಶಾಸಕ ಬಂಗೇರರ ಸಾಧನೆಯ ಜೊತೆಗೆ ಕಾಂಗ್ರೆಸ್‌ನ ಈ ಬಾರಿಯ ಪ್ರಣಾಳಿಕೆಯನ್ನು ಪ್ರತಿ ಮತದಾರನ ಮನೆ, ಮನೆಗೆ ತಲುಪಿಸಿದೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ವಿವಿಧ ಸಚಿವರನ್ನು ಬೆಳ್ತಂಗಡಿಗೆ ಕರೆಸಿ ಬೃಹತ್ ಸಭೆಗಳನ್ನು ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಂಗೇರ ಅವರು ಪ್ರತಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಸಭೆಯನ್ನು ನಡೆಸಿ ಮತಯಾಚನೆ ನಡೆಸುತ್ತಿದ್ದಾರೆ. ರಾಜ್ಯ ಇಂಧನ ಸಚಿವ ಡಿ.ಕೆ
ಶಿವಕುಮಾರ್ ಬೆಳ್ತಂಗಡಿಗೆ ಆಗಮಿಸಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದು, ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ. ಗಂಗಾಧರ ಗೌಡ ಹಾಗೂ ಬೆಂಬಲಿಗರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಸೇರಿರುವುದು ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟೂ ಬಲಪಡಿಸಿದೆ.
ಶಾಸಕ ವಸಂತ ಬಂಗೇರ ಐದು ವರ್ಷದ ಅವಧಿಯಲ್ಲಿ ಸುಮಾರು ಒಂದು ಸಾವಿರ ಕೋಟಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ. ಪ್ರತಿ ಗ್ರಾಮದಲ್ಲಿ ಕೆಲಸಗಳು ನಡೆದಿದೆ. ಅವರು ತನ್ನ ಆಡಳಿತಾವಧಿಯಲ್ಲಿ ಒಂದಿಲ್ಲೊಂದು ಯೋಜನೆಯನ್ನು ಪ್ರತಿ ಗ್ರಾಮಕ್ಕೆ ತಲುಪುವಂತೆ ಮಾಡಿದ್ದಾರೆ. ಜೊತೆಗೆ ಸರಕಾರದ ವಿವಿಧ ಯೋಜನೆಗಳ ಭಾಗ್ಯ ಜನರಿಗೆ ತಲುಪಿದೆ. ಇದರ ಜೊತೆಗೆ ಗಂಗಾಧರ ಗೌಡ ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರಿರುವುದು, ಬಿ.ಎಂ ಭಟ್ ನೇತೃತ್ವದ ಕಮ್ಯೂನಿಸ್ಟ್ ಪಕ್ಷ ಮತ್ತು ಎಸ್.ಡಿ.ಪಿ.ಐ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದು
ಕಾಂಗ್ರೆಸ್ ಅಭ್ಯರ್ಥಿ ಕೆ. ವಸಂತ ಬಂಗೇರರ ಗೆಲುವಿಗೆ ಪೂರಕವಾಗಲಿದೆ ಎಂಬ ಚರ್ಚೆ ಕಾರ್ಯಕರ್ತರ ನಡುವೆ ನಡೆಯುತ್ತಿದೆ. ಬಡಜನರ ಕಷ್ಟಗಳಿಗೆ ಸ್ಪಂದಿಸುವ ಗುಣವುಳ್ಳವರು ಎಂದು ಕಾರ್ಯಕರ್ತರಿಂದ ಹೆಗ್ಗಳಿಕೆಯನ್ನು ಹೊಂದಿರುವ ಬಂಗೇರರಿಗೆ ಪಕ್ಷದ ಮತಗಳಲ್ಲದೆ, ವೈಯಕ್ತಿಕ ವರ್ಚಸ್ಸಿನ ಅಧಿಕ ಮತಗಳಿವೆ. ತಾಲೂಕಿನಲ್ಲಿ ಅನೇಕ ಗ್ರಾ.ಪಂಗಳು ಜೊತೆಗೆ ನ.ಪಂ, ಎ.ಪಿ.ಎಂ.ಸಿ ಕಾಂಗ್ರೆಸ್ ಕೈಯಲ್ಲಿರುವುದು, ಅಲ್ಪಸಂಖ್ಯಾತರ ಒಲವು ಬಂಗೇರರು ಐದು ವರ್ಷದಲ್ಲಿ ಮಾಡಿದ ಸಾಧನೆ ಅವರನ್ನು ಗೆಲುವಿನ ದಡ ದಾಟಿಸಬಹುದು ಎಂದು ಲೆಕ್ಕಾಚಾರಗಳು ಕಾಂಗ್ರೆಸ್ ಕಾರ್ಯಕರ್ತರು ನಡುವೆ ನಡೆಯುತ್ತಿದೆ.

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಹಾಗೂ ಅವರ ಕಾರ್ಯ ಕರ್ತರು, ಬೆಂಬಲಿಗರು ಈ ಬಾರಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕತ್ವವನ್ನು ಪಡೆದು ವಿಜಯ ಪಾತಕೆ ಹಾರಿಸಿಯೇ ಸಿದ್ಧ ಎಂಬ ಪಣದೊಂದಿಗೆ ಹೋರಾಟ ನಡೆಸುತ್ತಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ. ಹರೀಶ್ ಪೂಂಜರು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಪೂಂಜರ ಅಭಿಮಾನಿಗಳು ಪ್ರತಿ ಮತದಾರರ ಮನೆ, ಮನೆಗಳಿಗೆ ಭೇಟಿ ನೀಡಿ, ಕೇಂದ್ರದ ಮೋದಿ ಸರಕಾರದ ಸಾಧನೆ, ಹಿಂದೆ ಯಡಿಯೂರಪ್ಪ ನೇತೃತ್ವದ ಸರಕಾರ ಮಾಡಿದ ಜನಪರ ಕಾರ್ಯಕ್ರಮಗಳು ಹಾಗೂ ಈ ಬಾರಿಯ ಚುನಾವಣಾ ಪ್ರಣಾಳಿಕೆಯನ್ನು ಮನೆ, ಮನೆಗೆ ತಲುಪಿಸುವ ಕಾರ್ಯನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬೃಹತ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವುದು, ಜೊತೆಗೆ ಕೇಂದ್ರದ ಸಚಿವೆ ಸ್ಮೃತಿ ಇರಾನಿ, ರಾಜ್ಯದ ಹಾಗೂ ಜಿಲ್ಲೆಯ ನಾಯಕರು ತಾಲೂಕಿಗೆ ಆಗಮಿಸಿ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಹುರಿದುಂಬಿಸಿರುವುದು ಬಿಜೆಪಿಗೆ ಹೆಚ್ಚಿನ ಬಲ ಬಂದಿದೆ. ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಗೌಡ ಮತ್ತು ಮಾಜಿ ಸಚಿವ ಗಂಗಾಧರ ಗೌಡ ಬಿಜೆಪಿಯಿಂದ ದೂರ ಸರಿದರೂ, ಪಕ್ಷದ ಹಿರಿ-ಕಿರಿಯ ನಾಯಕರು ಅಪೂರ್ವ ಬೆಂಬಲ ನೀಡಿರುವುದು ಈ ಕೊರತೆಯನ್ನು ನೀಗಿಸಿದೆ. ಅನೇಕ ಗ್ರಾಮ ಪಂಚಾಯತು ಆಡಳಿತ, ಸೊಸೈಟಿ ಆಡಳಿತ ಬಿಜೆಪಿ ಕೈಯಲ್ಲಿರುವುದು ಬಿಜೆಪಿಗೆ ಅನುಕೂಲವಾಗಲಿದೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಬಿಜೆಪಿ ಬೂತು ಮಟ್ಟದಲ್ಲಿ ತನ್ನ ಶಕ್ತಿಯನ್ನು ಬಲ ಪಡಿಸಿದೆ. ಪ್ರತಿ ಬೂತ್‌ನಲ್ಲಿ ಪೆಜ್‌ಪ್ರಮುಖ್‌ರನ್ನು ನೇಮಿಸಿ ಮತದಾರರನ್ನು ಸಂಪರ್ಕಿಸುವ, ಸೆಳೆಯುವ ಕೆಲಸವನ್ನು ಆರಂಭದಿಂದಲೂ ಮಾಡುತ್ತಿದೆ. ಪ್ರತಿ 30 ಮನೆಗೆ ಒಬ್ಬರನ್ನು ನೇಮಿಸಿ ಮನೆ ಸಂಪರ್ಕ ಕಾರ್ಯವನ್ನು ಇನ್ನೊಂದು ಕಡೆ ನಡೆಸುತ್ತಿದೆ. ಇದು ಬಿಜೆಪಿಗೆ ಹೆಚ್ಚಿನ ಲಾಭತರಲಿದೆ ಎಂಬ ಲೆಕ್ಕಾಚಾರ ಕಾರ್ಯಕರ್ತರ ನಡುವೆ ನಡೆಯುತ್ತಿದೆ.
ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಅನೇಕ ಹೋರಾಟಗಳನ್ನು ಸಂಘಟಿಸಿದವರು. ಜೊತೆಗೆ ತಾಲೂಕಿನ ಅನೇಕ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ನಿಂತವರು ಅಲ್ಲದೆ ಸಾಮಾನ್ಯ ಕಾರ್ಯಕರ್ತನನ್ನು ಮಾತನಾಡಿಸಿ ಅವರೊಡನೆ ಬೆರೆಯುವ ದೊಡ್ಡ ಗುಣ ಅವರಲ್ಲಿರುವುದು, ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಕ್ಷೇತ್ರಕ್ಕೆ ಆಗಮಿಸಿ ಅವರಿಗೆ ಬೆಂಬಲ ಸೂಚಿಸಿರುವುದು, ಜೊತೆಗೆ ಯುವಕರ ದೊಡ್ಡ ಪಡೆ ಅವರ ಬೆಂಬಲಿಗರಾಗಿ ನಿಂತು ಹಗಳಿರುಳು ದುಡಿಯುತ್ತಿರುವುದು ಬಿಜೆಪಿಗೆ ವರದಾನವಾಗಲಿದೆ ಎಂಬ ತರ್ಕಗಳು ನಡೆಯುತ್ತಿದೆ. ಬಿಜೆಪಿಗೆ ಪಕ್ಷಾಧಾರಿತ ಮತಗಳ ಜೊತೆಗೆ ಪೂಂಜ ಅಭಿಮಾನಿಗಳ ಅಧಿಕ ಮತಗಳಿದ್ದು, ಹರೀಶ್ ಪೂಂಜ ಈ ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿಯೇ ಸಾಧಿಸುತ್ತಾರೆ ಎಂಬ ಬಲವಾದ ನಂಬಿಕೆ ಬಿಜೆಪಿ ಕಾರ್ಯಕರ್ತರಲ್ಲಿದೆ.

ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೆ. ವಸಂತ ಬಂಗೇರ, ಬಿಜೆಪಿಯಿಂದ ನ್ಯಾಯವಾದಿ ಹರೀಶ್ ಪೂಂಜ, ಜೆಡಿಎಸ್‌ನಿಂದ ಬಹುಜನ ಸಮಾಜವಾದಿ ಬೆಂಬಲಿತ ಸುಮತಿ ಎಸ್.ಹೆಗ್ಡೆ, ಎಂ.ಇ.ಪಿಯಿಂದ ಜಗನ್ನಾಥ್, ಪಕ್ಷೇತರರಾಗಿ ವೆಂಕಟೇಶ ಬೆಂಡೆ ಮತ್ತು ಯು.ಎಂ. ಸೈಯ್ಯದ್ ಹಸನ್ ಚುನಾವಣಾ ಅಖಾಡದಲ್ಲಿ ಸಮರ ನಿರತರಾಗಿದ್ದು, ತಮ್ಮ ಗೆಲುವಿಗಾಗಿ ಹರ ಸಾಹಸ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ಎಂಟು ಬಾರಿ ಚುನಾವಣೆಯನ್ನು ಎದುರಿಸಿ ಐದು ಬಾರಿ ಶಾಸಕರಾಗಿ ಅನುಭವವನ್ನು ಪಡೆದವರು, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ, ಜೆಡಿಎಸ್ ಅಭ್ಯರ್ಥಿ ಸುಮತಿ ಹೆಗ್ಡೆ, ಎಂ.ಇ.ಪಿ ಅಭ್ಯರ್ಥಿ ಜಗನ್ನಾಥ್, ಪಕ್ಷೇತರರಾದ ಸಯ್ಯದ್ ಹಸನ್ ಪ್ರಥಮ ಬಾರಿಗೆ ಈ ಕ್ಷೇತ್ರದಲ್ಲಿ ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಪಕ್ಷೇತರರಾಗಿರುವ ವೆಂಕಟೇಶ ಬೆಂಡೆ ಈ ಹಿಂದೆ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.