ಸುಳ್ಳು ಹೇಳುವುದು ಕಾಂಗ್ರೆಸ್ ರಕ್ತದಲ್ಲೇ ಹರಿದು ಬಂದಿದೆ: ಸ್ಮೃತಿ ಇರಾನಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ನಾಲ್ಕು ತಲೆಮಾರಿನವರು ಚುನಾವಣೆಗೆ ನಿಂತು ಆಯ್ಕೆಯಾಗಿ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಅಲ್ಲಿಯ ಜನರ ಬೇಡಿಕೆಗಳು ಈಡೇರಿದ್ದು, ಮೋದಿಯವರು ಪ್ರಧಾನಿಯಾದ ಬಳಿಕ. ಜನರಿಗೆ ನಿರಂತರ ಸುಳ್ಳು ಹೇಳಿ ವಂಚಿಸುವುದು ಕಾಂಗ್ರೆಸ್ ರಕ್ತದಲ್ಲೇ ಹರಿದು ಬಂದಿದೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದರು.
ಅವರು ಮೇ 7 ರಂದು ಅಳದಂಗಡಿ ಪೇಟೆಯಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ನಡೆದ ಬೃಹತ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹಿಂದಿನ ಯು.ಪಿ.ಎ. ಸರಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಅಮೇಠಿ ಕ್ಷೇತ್ರದಲ್ಲಿ ನೆಹರು ಬಳಿಕ ಇಂದಿರಾ ಗಾಂಧಿ, ನಂತರ ರಾಜೀವ ಗಾಂಧಿ ಈಗ ರಾಹುಲ್ ಗಾಂಧಿ ಹೀಗೆ ನಾಲ್ಕು ತಲೆಮಾರು ಇಲ್ಲಿಗೆ ಲೋಕಸಭಾ ಚುನಾವಣೆಗೆ ನಿಂತಿದ್ದರು. ನೆಹರುನಿಂದ ಹಿಡಿದು ರಾಹುಲ್ ತನಕ ಎಲ್ಲರೂ ಈ ಕ್ಷೇತ್ರಕ್ಕೆ ರೈಲು ತರುತ್ತೇನೆಂದು ಭರವಸೆ ನೀಡಿದ್ದೆ, ನೀಡಿದ್ದು, ಆದರೆ ೬೦ ವರ್ಷ ಕಳೆದರೂ ರೈಲು ಬರಲಿಲ್ಲ, ಆದರೆ ಮೋದಿ ಪ್ರಧಾನಿಯಾದ ಬಳಿಕ ಅಮೇಠಿ ತನಕ ರೈಲು ಸಂಚಾರ ವ್ಯವಸ್ಥೆಯನ್ನು ಮಾಡಿದರು. ಮೊದಲ ಮಣ್ಣು ಪರೀಕ್ಷಾ ಕೇಂದ್ರವನ್ನು ಸಹ ಮೋದಿಯವರು ಅಮೇಠಿಯಲ್ಲಿ ಸ್ಥಾಪಿಸಿದ್ದಾರೆ ಎಂದು ತಿಳಿಸಿದರು.
ನರೇಂದ್ರ ಮೋದಿಯವರು ದೇಶದಲ್ಲಿ ಪ್ರಧಾನಿಯಾದ ಬಳಿಕ ಸ್ವಚ್ಛತಾ ಕಾರ್ಯಕ್ರಮ, ಶೌಚಾಲಯಗಳ ನಿರ್ಮಾಣ, ಹೆಣ್ಣು ಮಕ್ಕಳಿಗೆ ಉಚಿತ ಗ್ಯಾಸ್ ಸೌಲಭ್ಯ, ಮುದ್ರಾ ಯೋಜನೆ, ರೈತರಿಗೆ ಫಸಲ್ ಭೀಮಾಯೋಜನೆ, ಜನ್‌ಧನ್ ಮೊದಲಾದ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಇದರಿಂದ ದೇಶಾದ್ಯಂತ ಕೋಟ್ಯಾಂತರ ಬಡವರಿಗೆ, ಸಾಮಾನ್ಯ ಜನರಿಗೆ, ಮಹಿಳೆಯರಿಗೆ ಪ್ರಯೋಜನವಾಯಿತು. ದೇಶದೊಳಗೆ ಭಯೋತ್ಪಾದಕರನ್ನು ಪ್ರೇರೆಪಿಸುತ್ತಿದ್ದ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್
ಮೂಲಕ ತಕ್ಕ ಪಾಠ ಕಲಿಸಿದರು. ಆದರೆ ಈ ಎಲ್ಲಾ ಯೋಜನೆಗಳು, ಕಾರ್ಯಕ್ರಮಗಳು ರಾಹುಲ್ ಗಾಂಧಿಗೆ ಮಾತ್ರ ಸಮಸ್ಯೆಯಾಗಿ, ಚಿಂತೆಗೆ ಕಾರಣವಾಯಿತು ಎಂದು ಟೀಕಿಸಿದರು.
ಹರೀಶ್ ಪೂಂಜ ಕೆಲವು ನಿಮಿಷಗಳ ಕಾಲ ತನ್ನ ಹೃದಯಾಂತರಾಳದ ಮಾತುಗಳನ್ನು ಯಾವುದೇ ಚೀಟಿ, ಕಾಗದದಲ್ಲಿ ಬರೆದಿಟ್ಟು ಕೊಳ್ಳದೆ ನಿರ್ಗಳವಾಗಿ ಹೇಳಿದರು. ಮೋದಿಯವರು ರಾಹುಲ್ ಗಾಂಧಿಯವರಿಗೆ 15 ನಿಮಿಷ ಭಾಷಣ ಮಾಡಲು ಸವಾಲು ಹಾಕಿದ್ದರು. ಆದರೆ ರಾಹುಲ್, ಮೋದಿಯವರ ಮುಂದೆ ಬರುವುದು ಬಿಡಿ, ಹರೀಶ್ ಪೂಂಜರ ಎದುರು ಅವರಿಗೆ ಬರಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.
ಭವ್ಯ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ
ಅಭ್ಯರ್ಥಿ ಹರೀಶ್ ಪೂಂಜ ಮಾತನಾಡಿ ಬಿಜೆಪಿ ಸಾಮಾನ್ಯ ಕಾರ್ಯಕರ್ತನಾದ ನನಗೆ ಸ್ಪರ್ಧಿಸಲು ಅವಕಾಶ ನೀಡಿರುವುದು ತಾಲೂಕಿನ ಸಮಸ್ತ ಯುವ ಕಾರ್ಯಕರ್ತರಿಗೆ ನೀಡಿದ ಅವಕಾಶವಾಗಿದೆ. ನಾವಿಂದು ಬದಲಾವಣೆಯ ಪರ್ವಕಾಲದಲ್ಲಿದ್ದೇವೆ. ಭವ್ಯ ಸಶಕ್ತ ಭಾರತದ ನಿರ್ಮಾಣದ ಪ್ರಧಾನಿ ಮೋದಿಯವರ ಕನಸು ನನಸಾಗಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವ ಮೂಲಕ ನಾವು ಕೈ ಜೋಡಿಸಬೇಕಾಗಿದೆ ಎಂದು ಹೇಳಿದರು.
ಭ್ರಷ್ಟಾಚಾರ ಹಾಗೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಸರಕಾರವನ್ನು ಕಿತ್ತೊಗೆದು, ಹಿಂದೂ ಸಮಾಜದ ರಕ್ಷಣೆಗೆ ಕಂಕಣ ಬದ್ಧರಾದ ಭಾಜಪಕ್ಕೆ ಅಧಿಕಾರ ಕೊಡಿ, ನವ ಕರ್ನಾಟಕ ನಿರ್ಮಾಣಕ್ಕೆ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಬೇಕು ಅದಕ್ಕಾಗಿ ನಿಮ್ಮ ಮನೆ ಮಗ, ಸಹೋದರ ಎಂಬ ಭಾವನೆಯಿಂದ ನನಗೆ ಮತ ನೀಡಿ ಎಂದು ಮತದಾರರಲ್ಲಿ ವಿನಂತಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಈ ಚುನಾವಣೆ ಭಾರತೀಯ ಸಂಸ್ಕೃತಿ ಮತ್ತು ಕಾಂಗ್ರೆಸ್ ಸಂಸ್ಕೃತಿಯ ನಡುವಿನ ಚುನಾವಣೆಯಾಗಿದೆ. ನಾವೆಲ್ಲ ಭಾರತೀಯರು ಎಂಬುದು ನಮ್ಮ ಸಂಸ್ಕೃತಿ ಆದರೆ ಜಾತಿ, ಧರ್ಮವನ್ನು ವಿಭಜಿಸುವುದು, ಜಾತಿ ಆಧಾರಿತ ರಾಜಕೀಯ ಕಾಂಗ್ರೆಸ್ ಸಂಸ್ಕೃತಿಯಾಗಿದೆ. ದೇವಿ ಮಹಾತ್ಮೆ ಯಕ್ಷಗಾನದಲ್ಲಿ ಮಹಿಸಾಸುರನನ್ನು ವಧೆ ಮಾಡಿದಂತೆ ಮೇ 12 ಕ್ಕೆ ಕಾಂಗ್ರೆಸ್ ಎಂಬ ಮಹಿಸಾಸುರನನ್ನು ವಧೆ ಮಾಡಬೇಕು. ನೀವು ಭಾಜಪಕ್ಕೆ ನೀಡುವ ಒಂದೊಂದು ಮತ ಭವ್ಯ ಭಾರತ ಕಟ್ಟುವ ಮೋದಿಯವರ ಕನಸಿಗೆ ಶಕ್ತಿ ನೀಡುತ್ತದೆ ಎಂದರು.
ಕಾರ್ಕಳ ಶಾಸಕ ಸುನೀಲ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿ ಇಂತಹ ದುರಾಂಕಾರಿ ಮುಖ್ಯ ಮಂತ್ರಿ ಬಂದಿಲ್ಲ. ರಾಜ್ಯದಲ್ಲಿ ಅನೇಕ ಹಿಂದೂಗಳ ಹತ್ಯೆಯಾದರೂ ಸರಕಾರ ಮಾತನಾಡುವುದಿಲ್ಲ. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ಬರುವ ಅನೇಕ ಘಟನೆಗಳು ನಡೆದರೂ ಇದಕ್ಕೆ ಸರಕಾರ ಸ್ಪಂದಿಸಿಲ್ಲ, ಸ್ವಾಭಿಮಾನಿ ಹಿಂದೂಗಳು ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಗೋ ಮಾಂಸ ತಿನ್ನುವುದಾಗಿ ಘೋಷಿಸಿದ್ದಾರೆ. ನಿಮಗೆ ಗೋ ಮಾಂಸ ತಿನ್ನುವ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಬೇಕಾ ಅಥವಾ ಗೋ ಪೂಜೆ ಮಾಡುವ ಮುಖ್ಯ ಮಂತ್ರಿ ಯಡಿಯೂರಪ್ಪ ಬೇಕಾ ಎಂದು ನೀವೇ ಆಲೋಚಿಸಿ ಮತ ಚಲಾಯಿಸಿ ಎಂದು ಹೇಳಿದರು.
ಕುಂಟಾರು ರವೀಶ್ ತಂತ್ರಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಧ್ಯಕ್ಷೆಯನ್ನು ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯೆ ಸುನೀತಾ, ಉಮೇಶ್ ಪೂಜಾರಿ, ಅಣ್ಣಿ ಮೊದಲಾದವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್‍ಪಡೆಗೊಂಡರು. ವೇದಿಕೆಯಲ್ಲಿ ಬಂಗಾರಡ್ಕ ವಿಶ್ವೇಶ್ವರ ಭಟ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಮಹಿಳಾ ಮೋರ್ಚಾದ ಅಧ್ಯಕ್ಷೆ ಧನಲಕ್ಷ್ಮೀ, ಎಸ್.ಸಿ. ಮೋರ್ಚಾದ ಅಧ್ಯಕ್ಷ ಸದಾಶಿವ, ತಾ.ಪಂ. ಸದಸ್ಯರಾದ ಸುಧೀರ್ ಸುವರ್ಣ, ಶಶಿಧರ ಕಲ್ಮಂಜ, ಗ್ರಾ.ಪಂ. ಸದಸ್ಯ ಸತೀಶ್, ಜಿಲ್ಲಾ ಉಪಾಧ್ಯಕ್ಷೆ ಶಾರದಾ ರೈ ಉಪಸ್ಥಿತರಿದ್ದರು.
ಮೈತ್ರಿ ಗುರುಕುಲದ ಗಾಯತ್ರಿ ಅಠವಳೆ ಇವರ ಪ್ರಾರ್ಥನೆ ಬಳಿಕ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಸ್ವಾಗತಿಸಿದರು. ಮೋಹನ್‌ದಾಸ್ ಕಾರ್ಯಕ್ರಮ ನಿರೂಪಿಸಿ, ವಿಜಯಕುಮಾರ್ ಬಿಜೆಪಿಗೆ ಸೇರ್‍ಪಡೆಗೊಂಡವರ ವಿವರ ನೀಡಿದರು. ಮಂಡಲ ಸಮಿತಿ ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.