ಬೆಳ್ತಂಗಡಿ: ಕಳೆದ ನಾಲ್ಕು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ಜನಪರ ಯೋಜನೆಗಳಿಂದ ಜನತೆ ಸಂತೃಪ್ತಗೊಂಡಿದ್ದು, ಮೇ 12 ರ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹಾಗೂ ಬೆಳ್ತಂಗಡಿ ತಾಲೂಕಿನಲ್ಲೂ ಜನತೆ ಬದಲಾವಣೆ ನಿರೀಕ್ಷಿಸಿದ್ದು, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಭಾರೀ ಅಂತರದಿಂದ ಗೆಲವು ಸಾಧಿಸಲಿದ್ದಾರೆಂಬ ವಿಶ್ವಾಸವನ್ನು ಬೆಳ್ತಂಗಡಿ ಬಿಜೆಪಿಯ ಎಸ್.ಸಿ ಮತ್ತು ಎಸ್.ಟಿ ಮೋರ್ಚಾದ ಪರವಾಗಿ ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಮೇ.9 ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಂಡಲದ ಕಾರ್ಯದರ್ಶಿ ಲಿಂಗಪ್ಪ ನಾಕ ಹೇಳಿದರು.
ಕಳೆದ 5 ವರ್ಷ ಆಡಳಿತ ನಡೆಸಿದ ಕಾಂಗ್ರೇಸ್ ಸರ್ಕಾರದಿಂದ ಜನತೆ ರೋಸಿ ಹೋಗಿದ್ದು, ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಹಾಗೂ ಅರಾಜಕತೆ ರಾಜ್ಯದೆಲ್ಲೆಡೆ ತಾಂಡವಾಡುತ್ತಿದೆ, ಹಿಂದುಳಿದ ವರ್ಗದವರ ಅಭಿವೃದ್ಧಿ ಹರಿಕಾರರೆಂದು ಘೋಷಿಸಿಕೊಂಡ ರಾಜ್ಯದ ಮುಖ್ಯಮಂತ್ರಿಗಳೇ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಸಮಾಜ ಕಲ್ಯಾಣ ಮಾಡಬೇಕಾಗಿದ್ದ ಸಚಿವರು ಸಮಾಜ ಕಲ್ಯಾಣದ ಬದಲಾಗಿ ಸ್ವಕಲ್ಯಾಣ ಮಾಡಿಕೊಂಡ ಸಚಿವ ಹೆಚ್. ಆಂಜನೇಯ ಎಸ್.ಸಿ ಮತ್ತು ಎಸ್.ಟಿ ಹಾಸ್ಟೆಲ್ಗಳ ಹಾಸಿಗೆ ಮತ್ತು ದಿಂಬು ಖರೀದಿಯಲ್ಲಿ ಹಗರಣ. ಗಂಗಾಕಲ್ಯಾಣ ಯೋಜನೆಯಲ್ಲಿ ಬೋರ್ ವೆಲ್ಗಳನ್ನು ಕೊರೆಸಿರುವುದಾಗಿ ನಕಲಿ ಬಿಲ್ ಸೃಷ್ಟಿಸಿರುತ್ತಾರೆ. ಹಿಂದುಳಿದ ವರ್ಗದ ವಸತಿ ನಿಲಯದ ಹಗರಣದಲ್ಲಿ ಬಾಗಿಯಾಗಿ ಸ್ವಕಲ್ಯಾಣ ಮಾಡಿ ಕೊಂಡಿದ್ದಾರೆ. ಪ.ಜಾತಿ ಪ.ಪಂಗಡ ಡಿ.ಸಿ. ಮನ್ನಾ ಜಾಗ ಅಶ್ವಾಸನೆಯಾಗಿಯೇ ಉಳಿದರೆ ಬೆಳ್ತಂಗಡಿಯಲ್ಲಿ ಈ ಎಲ್ಲಾ ವೈಫಲ್ಯ ಗಳು ಎದ್ದು ಕಾಣುತ್ತಿದ್ದು, ಈ ಬಾರಿ ಜನತೆಯ ಮನಸ್ಸು ಬದಲಾವಣೆಗಾಗಿ ತುಡಿಯುತ್ತಿದೆ. ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ಹಾಗೂ ಸಹಬಾಳ್ವೆಯ ಹೊಸ ಪರಿವರ್ತನೆಯ ಸಕಾರಕ್ಕಾಗಿ ಎಲ್ಲ ವರ್ಗದ ಜನತೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರನ್ನು ಭಾರೀ ದೊಡ್ಡ ಪ್ರಮಾಣದಲ್ಲಿ ತಾಲೂಕಿನಾದ್ಯಂತ ಬೆಂಬಲಿಸುತ್ತಿರುವುದು ಕಂಡು ಬಂದಿದ್ದು, ಈ ಬಾರಿ ಬೆಳ್ತಂಗಡಿಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು, ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬಿ.ಎಸ್, ಕಾರ್ಯದರ್ಶಿ ರಾಘವ ಕಲ್ಮಂಜ, ಜಿ.ಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ, ಮಾಧ್ಯಮ ಪ್ರಮುಖ್ ರಾಜೇಶ್ ಪೆರ್ಮುಡ ಉಪಸ್ಥಿತರಿದ್ದರು.