ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಫಲಿತಾಂಶ ವೀಕ್ಷಿಸುವ ವೇಳೆ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸಮಸ್ಯೆಯಿಂದ ಫಲಿತಾಂಶ ಸಿಗುತ್ತಿಲ್ಲ ಎಂಬ ಕಿರಿಕಿರಿ ಇಲ್ಲ. ಏಕೆಂದರೆ ಈ ಬಾರಿ ವಿದ್ಯಾರ್ಥಿಗಳ ಬಳಿಯಿರುವ ಮೊಬೈಲ್ಗೆ ಎಸ್.ಎಂ.ಎಸ್ ಅಲರ್ಟ್ ಮೂಲಕ ಫಲಿತಾಂಶ ನೀಡುವ ಕೆಲಸಕ್ಕೆ ಕರ್ನಾಟಕ ಪರೀಕ್ಷಾ ಮಂಡಳಿ ಇಳಿದಿದೆ.
ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೊದಲು ಅರ್ಜಿಯೊಂದನ್ನು ಭರ್ತಿ ಮಾಡಬೇಕಿತ್ತು. ಈ ಸಮಯದಲ್ಲಿ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕೂಡಾ ಕಡ್ಡಾಯವಾಗಿತ್ತು ಈ ಮೂಲಕ ಶಿಕ್ಷಣ ಇಲಾಖೆ ಈ ಸಂಖ್ಯೆಗಳನ್ನು ಪಡೆದುಕೊಂಡು ಫಲಿತಾಂಶ ನೀಡುವ ಕೆಲಸಕ್ಕೆ ಈ ಬಾರಿ ಮುಂದಾಗಿದೆ. ಈ ಕಾರಣದಿಂದ ಮೇ.7 ರಂದು ಬೆಳಿಗ್ಗೆ 11.00 ರಿಂದ 11.30ರೊಳಗೆ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಒಂದೇ ಬಾರಿ ವಿದ್ಯಾರ್ಥಿಗಳು ನೀಡಿದ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಅಲರ್ಟ್ ಗಳು ಬರುತ್ತದೆ.
ಎಸ್.ಎಂ.ಎಸ್ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದ ವಿಚಾರಗಳು, ಅದರಲ್ಲಿ ಸಿಕ್ಕಿರುವ ಅಂಕಗಳು ಹಾಗೂ ಒಟ್ಟು ಮೊತ್ತ, ಉತ್ತೀರ್ಣ ಹಾಗೂ ಅನುತ್ತೀರ್ಣ ವಿಚಾರಗಳು ಇದರಲ್ಲಿ ಅಡಕವಾಗಿರುತ್ತದೆ. ಇದರ ಜತೆಯಲ್ಲಿ ಇಲಾಖೆ ನೀಡುವ ಆನ್ಲೈನ್ನಲ್ಲೂ ಈ ಮಾಹಿತಿಗಳು ಸಿಗಲಿದೆ. ವಿದ್ಯಾರ್ಥಿಗಳಿಗೆ ಫಲಿತಾಂಶ ನೋಡುವ ವಿಧಾನ ಬಹಳಷ್ಟು ಸುಲಭ ಮಾಡುವ ದೃಷ್ಟಿಯಿಂದ ಇಂತಹ ಮಾದರಿ ಯತ್ನಕ್ಕೆ ಇಲಾಖೆ ಮುಂದಾಗಿದೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲ ರವರು ಹೇಳಿದ್ದಾರೆ.
ಮಾ.23 ರಿಂದ ಎ.6 ರವರೆಗೆ ರಾಜ್ಯದ 2817 ಸೆಂಟರ್ ಗಳಲ್ಲಿ 8.35 ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದಿರುತ್ತಾರೆ.