ಸಮಾಜದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸದ ಜೀವನ ಅಗತ್ಯ: ಬಿಷಪ್

 ಉಜಿರೆ: ಪವಾಡ ಪುರುಷ ಸಂತ ಅಂತೋನಿಯವರಿಗೆ ಸಮರ್ಪಿಸಿದ ಉಜಿರೆಯ ಸಂತ ಅಂತೋಣಿ ಚರ್ಚ್ ಇದರ ಸುವರ್ಣ ಮಹೋತ್ಸವ ಉದ್ಘಾಟನೆ ಮತ್ತು ಸುಮಾರು ರೂ. 2ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಎಲ್ಲಾ ಸೌಲಭ್ಯಗಳಿರುವ ಅನುಗ್ರಹ ಸಭಾಭವನ ಇದರ ಲೋಕಾರ್ಪಣೆ ಕಾರ್ಯಕ್ರಮ ಮೇ 1 ರಂದು ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಸಂತ ಅಂತೋಣಿ ಚರ್ಚ್ ಉಜಿರೆ ಇದರ ಸುವರ್ಣ ಮಹೋತ್ಸವದ ಉದ್ಘಾಟನೆ ಹಾಗೂ ಕೃತಜ್ಞತಾ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ|ರೆ| ಡಾ. ಅಲೋಶಿಯಸ್ ಪಾವ್ಲ್ ಡಿ’ ಸೋಜ ಅವರು ನೂತನ ಅನುಗ್ರಹ ಸಭಾಭವನವನ್ನು ಲೋಕಾರ್ಪಣೆಗೈದರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟು ಅನ್ಯೋನ್ಯತೆಯಿಂದ ಬಾಳುವ ವಾತಾವರಣ ನಿರ್ಮಾಣವಾಗಲಿ, ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ನೆಮ್ಮದಿಯಿಂದ ಎಲ್ಲರೂ ಸೌಹಾರ್ದ ಯುತವಾಗಿ ಜೀವನ ಮಾಡುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.
ಉಜಿರೆ ಚರ್ಚ್‌ಗೆ ಸಭಾಭವನ ವೊಂದು ಬೇಕೆಂದು ಹಲವು ವರ್ಷಗಳ ಆಶಯ, ಅದು ಇಂದು ಈಡೇರಿದೆ. ಈ ಸಭಾಂಗಣ ಎಲ್ಲಾ ಜಾತಿ, ಮತ ಧರ್ಮದವರಿಗೂ ಉಪಯೋಗಕ್ಕೆ ಅವಕಾಶ ಇದೆ. ಇಂದು ಸೀಮಿತ ಜಾಗದಲ್ಲಿ ಮನೆಗಳಿರುವುದರಿಂದ ದೊಡ್ಡ ಕಾರ್ಯಕ್ರಮಗಳನ್ನು ಮಾಡಲು ಸ್ಥಳಾವಕಾಶದ ಕೊರತೆಯಿದೆ. ಅದಕ್ಕಾಗಿ ಇಂತಹ ಸಭಾಭವನಗಳು ಎಲ್ಲರಿಗೂ ಅವಶ್ಯ ಎಂದರು. ಇಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸುವ ಮೊದಲು ಆಗಿನ ಬಿಷಪರಾದ ಬಾಸಿಲ್ ಡಿ’ ಸೋಜ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಧೀರ್ಘ ಚರ್ಚೆ ಬಳಿಕ ಒಪ್ಪಿಗೆ ಸಿಕ್ಕಿತ್ತು. ಆಗ ಬಿಷಪರೇ ಕಾಲೇಜಿಗೆ `ಅನುಗ್ರಹ’ ಎಂದು ಹೆಸರು ಸೂಚಿಸಿದರು ಇಂದು ದೇವರ ಅನುಗ್ರಹದಿಂದ ಸಭಾಭವನವೂ ಅದೇ ಹೆಸರಿನಲ್ಲಿ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯರು ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ಉಜಿರೆ ಬೆಳೆಯುತ್ತಿರುವ ನಗರ ಇಂತಹ ನಗರಗಳಿಗೆ ಎಲ್ಲಾ ಸೌಕರ್ಯಗಳಿರುವ ಸಭಾ ಭವನದ ಅಗತ್ಯವಿದೆ ಅದು ಇಂದು ಈಡೇರಿದೆ. ಉಜಿರೆಯಲ್ಲಿ ಪ್ರಥಮವಾಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಮೂಲಕ ಕ್ರೈಸ್ತ ಸಮಾಜದವರು ಉಜಿರೆಗೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ ಇದು ಎಲ್ಲರೂ ನೆನಪಿಡುವ ಕಾರ್ಯ ನಾವು ಎಲ್ಲಾ ಜಾತಿ, ಮತ, ಧರ್ಮದವರು ಭಾರತೀಯರು ಎಂಬ ಭಾವನೆಯಲ್ಲಿ ಒಂದೇ ಸೂರಿನಡಿಯಲ್ಲಿ, ಸಹೋದರಂತೆ ಬಾಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು, ಉಜಿರೆ ಚರ್ಚ್‌ನ ಮುಖ್ಯ ಗುರು ಫಾ| ಜೋಸೆಫ್ ಮಸ್ಕರೇನ್ಹಸ್, ಸಹಾಯಕ ಗುರು ಫಾ| ಜೋಸೆಫ್ ಉದಯ ಫೆರ್ನಾಂಡೀಸ್, ಉಪಾಧ್ಯಕ್ಷ ಅರುಣ್ ರೆಬೆಲ್ಲೊ, ಕಾರ್ಯದರ್ಶಿ ವಲೇರಿಯನ್ ರೊಡ್ರಿಗಸ್, ಗುತ್ತಿಗೆದಾರ ಅನಿಲ್ ಡಿ’ಸೋಜಾ, ಲಾರೆನ್ಸ್ ಕುಟಿನ್ಹೋ, ಸಿಲ್ವೆಸ್ಟರ್ ಮೋನಿಸ್ ಹಾಗೂ ಚರ್ಚ್ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು, ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಮೇಸ್ತ್ರಿ ಹಾಗೂ ಇತರ ಸಹಾಯಕರನ್ನು ಚರ್ಚ್ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯನ್ನು ಬಿಷಪರು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಶಾಸಕ ಕೆ. ವಸಂತ ಬಂಗೇರ, ಉಜಿರೆ ತಾ.ಪಂ. ಸದಸ್ಯ ಶಶಿಧರ ಎಂ., ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಸಿ| ಗ್ರೇಸಿ ಜಾರ್ಜ್, ಬೆಳ್ತಂಗಡಿ ವಿಕಾರ್ ವಂ.ಫಾ. ಬೊನೆವೆಂಚರ್ ನಜ್ರೆತ್, ಸಹಾಯಕ ಧರ್ಮಗುರು ಜೋಸೆಫ್ ಉದಯ ಫೆರ್ನಾಂಡಿಸ್, ಉಪಾಧ್ಯಕ್ಷ ಅರುಣ್ ರೆಬೆಲ್ಲೊ, ಕಾರ್ಯದರ್ಶಿ ವಲೇರಿಯನ್ ರೊಡ್ರಿಗಸ್ ಉಪಸ್ಥಿತರಿದ್ದರು.
ಸ್ವಾಗತ ನೃತ್ಯದ ಬಳಿಕ ಮುಖ್ಯ ಗುರುಗಳಾದ ಫಾ| ಜೋಸೆಪ್ ಮಸ್ಕರೇನ್ಹಸ್ ಸ್ವಾಗತಿಸಿದರು. ಕಾರ್ಯ ದರ್ಶಿ ವಲೇರಿಯನ್ ರೊಡ್ರಿಗಸ್ ವರದಿ ವಾಚಿಸಿದರು. ಪ್ರವೀಣಾ, ಹಿಲ್ಡಾ ಪಿಂಟೋ ದಾನಿಗಳ ವಿವರ ನೀಡಿದರು. ಪ್ರಭಾಕರ ಶೆಟ್ಟಿ ಹಾಗೂ ಮೋಲಿವಾಸ್ ಕಾರ್ಯಕ್ರಮ ನಿರೂಪಿಸಿ, ಸಹಾಯಕ ಗುರುಗಳಾದ ಜೋಸೆಫ್ ಉದಯ ಫೆರ್ನಾಂಡಿಸ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.