ಮಳೆ ಗಾಳಿಗೆ ಅಂಜದ ಭದ್ರಕೋಟೆ ಗಡಾಯಿಕಲ್ಲು

Advt_NewsUnder_1
Advt_NewsUnder_1
Advt_NewsUnder_1

 ಕರಾವಳಿ ಜಿಲ್ಲೆಯೆಂದೇ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯು ಹಲವಾರು ವಿಸ್ಮಯಗಳ ತವರೂರಾಗಿದ್ದು, ಈ ಜಿಲ್ಲೆಯು ತನ್ನೊಡಲಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹುದುಗಿಕೊಂಡಿದೆ. ಈ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲೊಂದು ಇಂತಹ ವೈಶಿಷ್ಟ್ಯತೆಯ ಸ್ಥಳವಿದೆ. ಮಂಗಳೂರು, ಉಪ್ಪಿನಂಗಡಿ ಅಥವಾ ಮೂಡಬಿದ್ರೆಯಿಂದ ಧರ್ಮಸ್ಥಳಕ್ಕೆ ಸಾಗುವ ಮಾರ್ಗದಲ್ಲಿ ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ರಸ್ತೆಯ ಎಡ ಭಾಗದಲ್ಲಿ ರಸ್ತೆಯುದ್ದಕ್ಕೂ ಕಾಣುವ ಒಂಟಿಯಾಗಿ ನಿಂತಿರುವ ಬೃಹತ್ ಕರಿದಾದ ಬೆಟ್ಟವೊಂದು ಪ್ರಯಾಣಿಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇದುವೇ ಬೆಳ್ತಂಗಡಿಯಿಂದ ಕಿಲ್ಲೂರು ರಸ್ತೆಯಲ್ಲಿ ಎಂಟು ಕಿ.ಮೀ ಚಲಿಸಿ ಮಂಜೊಟ್ಟಿಯಿಂದ ಒಂದು ಕಿ.ಮೀ ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲು.
ಗಡಾಯಿಕಲ್ಲು ಇತಿಹಾಸದಲ್ಲಿ ಉಲ್ಲೇಖಿಸಲ್ಪಟ್ಟ ಬೆಟ್ಟದ ಕೋಟೆಯಾಗಿ ರುವುದು ಇಲ್ಲಿನ ವಿಶೇಷತೆಗಳಲ್ಲೊಂದು. ಇದು ಕುದುರೆಮುಖ ಪರ್ವತ ಶ್ರೇಣಿಯ ಒಂದು ಭಾಗವೇ ಆಗಿದ್ದು, ಸಮುದ್ರ ಮಟ್ಟದಿಂದ ಸುಮಾರು 1200 ಅಡಿ ಎತ್ತರವನ್ನು ಹೊಂದಿದೆ. ಪ್ರಾದೇಶಿಕವಾಗಿ ಇಲ್ಲಿನಜನರು ಈ ಕೋಟೆಯನ್ನು ಗಡಾಯಿಕಲ್ಲು, ಜಮಲಾಬಾದ್, ಜಮಲಾಗದ್ದ ಮತ್ತು ನರಸಿಂಹಗಢ ವೆಂದು ಕರೆಯುತ್ತಾರೆ. ಈ ಬೆಟ್ಟದ ಮೇಲ್ಭಾಗದಲ್ಲಿ ಸುಸಜ್ಜಿತವಾದ ಕೋಟೆಯನ್ನು ಮೈಸೂರು ಹುಲಿ ಯೆಂದೇ ಹೆಸರುವೆತ್ತ ಟೀಪು ಸುಲ್ತಾನ್ ಕ್ರಿ.ಶ 1794ರಲ್ಲಿ ತನ್ನ ತಾಯಿಯಾದ ಜಮಲಾಬಿಯ ಮರಣಾನಂತರ ಆಕೆಯ ನೆನಪಿಗಾಗಿ ಇಲ್ಲಿನ ಬೃಹತ್ ಕರಿಯಕಲ್ಲನ್ನು ಕಂಡ ಈತನು ಇದುವೇ ತನ್ನ ಬಲಿಷ್ಟ ಕೋಟೆಯ ನಿರ್ಮಾಣಕ್ಕೆ ಪ್ರಶಸ್ತವಾದ ಸ್ಥಳವೆಂದು ಈ ಕೋಟೆಯನ್ನು ನಿರ್ಮಿಸಿದನೆಂದು ಹೇಳಲಾಗಿದೆ. ಈ ಕೋಟೆಯನ್ನು ಟಿಪ್ಪುವಿನೊಂದಿಗಿದ್ದ ಫ್ರೆಂಚ್ ಇಂಜಿನಿಯರ್‌ಗಳು ನಿರ್ಮಿಸಿರು ವುದರಿಂದ ಇಲ್ಲಿ ಮುಸ್ಲಿಂ ವಾಸ್ತುಶಿಲ್ಪ ಶೈಲಿ ಹಾಗೂ ಫ್ರೆಂಚ್ ಮಾದರಿಯನ್ನು ಇಲ್ಲಿನ ಕೋಟೆಯ ಅವಶೇಷಗಳಲ್ಲಿ ಕಾಣಬಹುದಾಗಿದೆ.
ಈ ಕೋಟೆಯನ್ನು ಏರಲು ಪ್ರಾರಂಭಿಸುವ ಮೊದಲೇ ಕಲ್ಲಿನಿಂದಲೇ ನಿರ್ಮಿಸಲಾದ ಸುಮಾರು ಹದಿನೈದರಿಂದ ಇಪ್ಪತ್ತು ಅಡಿ ಎತ್ತರದ ಬೃಹತ್ ಪ್ರವೇಶದ್ವಾರವೊಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಪ್ರಾರಂಭದಲ್ಲಿ ಕಾಡಿನ ಕಡಿದಾದ ದಾರಿಯಲ್ಲಿ ನಂತರದಲ್ಲಿ ಕಲ್ಲಿನ ಮೆಟ್ಟಿಲು ಹಾಗೂ ಕಲ್ಲನ್ನೇ ಕೆತ್ತಿ ನಿರ್ಮಿಸಿದ ಸುಮಾರು 1876 ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಬೇಕು. ದಾರಿಯ ಮಧ್ಯದಲ್ಲಿ ಅಲ್ಲಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಿಶ್ರಾಂತಿಯ ಸ್ಥಳಗಳನ್ನು ಅರಣ್ಯ ಇಲಾಖೆಯು ನಿರ್ಮಿಸಿದೆ. ಚಾರಣದ ಕೆಲವೊಂದು ಸ್ಥಳಗಳು ಅತ್ಯಂತ ಅಪಾಯಕಾರಿಯಾದ ಮೆಟ್ಟಿಲುಗಳಿಂದ ಕೂಡಿರುವುದರಿಂದ ಚಾರಣಿಗರು ಅತ್ಯಂತ ಎಚ್ಚರದಿಂದಿರಬೇಕು. ಇಲ್ಲವಾದಲ್ಲಿ ಪ್ರಾಣಕ್ಕೇ ಸಂಚಕಾರ ಸಂಭವಿಸುವ ಸಾಧ್ಯತೆಗಳಿವೆ. ಕೋಟೆಯ ತಳವು ಸುಮಾರು ೪ ರಿಂದ ೫ ಕಿ.ಮೀಯಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, ಕೋಟೆಯ ಮೇಲ್ಭಾಗದ ಸುಮಾರು ಒಂದರಿಂದ ಎರಡು ಎಕರೆಯಷ್ಟು ವಿಶಾಲವಾದ ಪ್ರಸ್ಥಭೂಮಿಯಂತಹ ಪ್ರದೇಶಕ್ಕೆ ಸುತ್ತಲೂ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ. ಈ ಜಾಗವು ಬೃಹತ್ ಗಾತ್ರದ ಮರಗಳು ಹಾಗೂ ಕುರುಚಲು ಗಿಡಗಳಿಂದ ಕೂಡಿದೆ. ಬೆಟ್ಟದ ಶೃಂಗದ ಮಧ್ಯದಲ್ಲಿ ಕಲ್ಲಿನಲ್ಲೇ ನಿರ್ಮಾಣಗೊಂಡ ಕೆರೆಯೊಂದಿದ್ದು, ಎಂತಹ ಬೇಸಿಗೆಯಲ್ಲೂ ಈ ಕೆರೆಯು ಬತ್ತದೇತನ್ನೊಡಲಲ್ಲಿ ನೀರನ್ನು ಉಳಿಸಿಕೊಳ್ಳುವುದು ಈ ಕೆರೆಯ ವಿಶೇಷತೆಗಳಲ್ಲೊಂದು.
ಬೆಟ್ಟದ ಮೆಲ್ಭಾಗದ ಆಯಕಟ್ಟಿನ ಸ್ಥಳದಿಂದ ಬೆಳ್ತಂಗಡಿ ಮತ್ತು ಉಜಿರೆ ಪಟ್ಟಣಗಳ ವಿಹಂಗಮ ನೋಟವು ಕಣ್ಮನಗಳನ್ನು ಸೆಳೆಯುತ್ತದೆ. ಕೋಟೆಯ ಕೊನೆಯ ಭಾಗದಲ್ಲಿ ಸಂಪೂರ್ಣ ಶಿಥಿಲಗೊಂಡ ಫಿರಂಗಿ ಮನೆಯೊಂದಿದ್ದು, ಇದು ಇನ್ನೇನು ಬೀಳುವ ಸ್ಥಿತಿಯಲ್ಲಿದೆ. ಇಲ್ಲಿಯೇ ಟೀಪ್ಪು ಸುಲ್ತಾನ್‌ನ ಸೈನಿಕರು ಫಿರಂಗಿಗಳಿಗೆ ಅವಶ್ಯವಿರುವ ಮದ್ದು ಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದರೆಂದು ಹೇಳಲಾಗಿದೆ. ಈ ಕೋಟೆಯು ಟಿಪ್ಪುವಿನ ಸೈನ್ಯಕ್ಕೆ ಬ್ರಿಟೀಷರೊಂದಿಗೆ ಹಾಗೂ ಸ್ಥಳೀಯ ರಾಜರೊಂದಿಗಿನ ಯುದ್ಧಗಳ ಸಂದರ್ಭದಲ್ಲಿ ಆಯಕಟ್ಟಿನ ಸ್ಥಳವಾಗಿ ಗುರುತಿಸಲ್ಪಟ್ಟಿದ್ದು, ಕೋಟೆಯ ಪ್ರಮುಖ ಸ್ಥಳಗಳಲ್ಲಿ ಅಲ್ಲಲ್ಲಿ ಫಿರಂಗಿಗಳನ್ನು ಜೋಡಿಸಿಡಲಾಗಿದೆ. ಇಲ್ಲಿಂದಲೇ ಕೋಟೆಯೆಡೆಗೆ ಧಾವಿಸಿ ಬರುವ ಶತ್ರು ಸೈನಿಕರನ್ನು ಫಿರಂಗಿಗಳಿಂದ ಗುಂಡು ಹಾರಿಸಿ ಅವರನ್ನು ಹಿಮ್ಮೆಟ್ಟಿಸುತ್ತಿದ್ದನೆಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. ಈ ಕೋಟೆಗೆ ಬರಲು ಕೇವಲ ಒಂದೇ ಕಡಿದಾದ ದಾರಿಯಿದ್ದು ಮೇಲ್ಗಡೆಯಿಂದ ಅತ್ಯಂತ ಸಣ್ಣ ಸೈನ್ಯದ ಸಹಾಯದಿಂದ ಕೋಟೆಯ ಮೇಲೇರಿ ಬರುವ ಬೃಹತ್ ಸೈನ್ಯವನ್ನು ಸುಲಭವಾಗಿ ಹಿಮ್ಮೆಟ್ಟಿಸಲು ಸಾಧ್ಯವಾಗುತ್ತಿದ್ದುದು ಇಲ್ಲಿನ ವಿಶೇಷತೆ. ಇಂದು ಕೋಟೆಯ ಬಹುತೇಕ ಭಾಗಗಳು ಶಿಥಿಲಗೊಂಡು ಬಿದ್ದಿದ್ದು ಕೇವಲ ಕೋಟೆಯ ಕುರುಹುಗಳಷ್ಟೇ ಕಾಣಸಿಗುತ್ತದೆ. ಈ ಕೋಟೆಯು ಕ್ರಿ.ಶ ೧೭೯೯ರ ಮೈಸೂರುಯುದ್ಧದಲ್ಲಿ ಬ್ರಿಟೀಷರ ವಶವಾಯಿತೆಂದು ಹೇಳಲಾಗಿದೆ. ಈ ಕೋಟೆಯಲ್ಲಿ ಅತ್ಯಂತ ಕಡಿದಾದ ಪಾಶಿಸ್ಥಳವೊಂದಿದ್ದು, ಇದು ತೀರಾ ಕಡಿದಾದ ಕೊರಕಲು ಕಂದಕ ವಾಗಿರುವುದರಿಂದ ತನ್ನ ಶತ್ರು ಯುದ್ಧ ಖೈದಿಗಳನ್ನು ಮತ್ತು ಅಪರಾಧಿಗಳನ್ನು ಈ ಕೊರಕಲಿಗೆ ತಲೆ ಕೆಳಗಾಗಿ ಎಸೆದು ಕೊಲ್ಲುತ್ತಿದ್ದನೆಂದು ಸ್ಥಳ ಪುರಾಣದಿಂದ ತಿಳಿದು ಬರುತ್ತದೆ. (ಇದನ್ನೇ ಟಿಪ್ಪು ಡ್ರಾಪ್ ಎಂದು ಕರೆಯಲಾಗುತ್ತದೆ.) ಈ ಕೋಟೆಗೆ ಪ್ರವೇಶಿಸುವ ಸಂದರ್ಭದಿಂದ ಕೋಟೆಯ ತುದಿಯನ್ನು ತಲುಪುವವರೆಗಿನ ಎಲ್ಲಾ ದಾರಿಗಳನ್ನೂ ಕೋಟೆಯ ಆಯಕಟ್ಟಿನ ಸ್ಥಳದಲ್ಲಿ ನಿಂತು ವೀಕ್ಷಿಸಬಹುದಾದ್ದರಿಂದ ಟೀಪ್ಪು ಸುಲ್ತಾನ್ ಕೋಟೆಯ ಮೇಲಿನಿಂದಲೇ ವೈರಿಗಳನ್ನು ಬಹುತೇಕವಾಗಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗುತ್ತಿದ್ದನೆಂದು ಹೇಳಲಾಗಿದೆ.
ಕೋಟೆಯ ಮೇಲ್ಭಾಗದಲ್ಲಿ ಸದಾ ತುಂಬಿರುವ ಕೆರೆಯೇನೋ ಇದೆ, ಆದರೆ ಈ ನೀರು ಕುಡಿಯಲು ಯೋಗ್ಯವಾಗಿಲ್ಲವಾದ್ದರಿಂದ ಅವಶ್ಯವಿರುವ ನೀರು ಹಾಗೂ ಆಹಾರವನ್ನು ಉಜಿರೆ ಅಥವಾ ಬೆಳ್ತಂಗಡಿ ಪಟ್ಟಣಗಳಿಂದ ಪಾರ್ಸೆಲ್ ತೆಗೆದುಕೊಂಡು ಹೋಗುವುದು ಸೂಕ್ತ. ಮಳೆಗಾಲದಲ್ಲಿ (ಜೂನ್‌ನಿಂದ ಸೆಪ್ಟೆಂಬರ್ ತಿಂಗಳು) ನಿರಂತರವಾಗಿ ಮಳೆ ಬೀಳುವುದರಿಂದ ಹಾಗೂ ದಟ್ಟ ಮಂಜು ಆವರಿಸಿರುವುದರಿಂದ ಇಲ್ಲಿನ ಚಾರಣವು ಅಷ್ಟೊಂದು ಸೂಕ್ತವಲ್ಲ. ಮಳೆಗಾಲದಲ್ಲಿ ಇಲ್ಲಿನ ಕಲ್ಲಿನ ಮೆಟ್ಟಿಲುಗಳು ಪಾಚಿಗಟ್ಟಿಕೊಂಡು ವಿಪರೀತ ಜಾರುವುದರಿಂದ ಅತ್ಯಂತ ಅಪಾಯಕಾರಿ ಯಾಗಿರುತ್ತದೆ. ಕೋಟೆಯ ಅಳಿದುಳಿದ ಕೋಣೆಗಳು ಇಂದಿಗೂ ಅತ್ಯಂತ ಭಲಿಷ್ಠವಾಗಿ ಮಳೆ ಗಾಳಿಯನ್ನೂ ಲೆಕ್ಕಿಸದೇ ನಿಂತಿದ್ದು ಇಲ್ಲಿ ಉತ್ತಮವಾದ ಗಾಳಿ ಬೆಳಕಿನ ವ್ಯವಸ್ಥೆಯಿರುವಂತೆ ನಿರ್ಮಿಸಲಾಗಿದೆ. ಇಲ್ಲಿನ ಕೋಣೆಗಳನ್ನು ಗಮನಿಸಿದಾಗ ಇವುಗಳು ಗುಲಾಮರನ್ನು ಹಾಗೂ ಯುದ್ಧ ಖೈದಿಗಳನ್ನು ಬಂಧಿಸಿಡುವ ಕೋಣೆಗಳಾಗಿ ಗೋಚರಿಸುತ್ತವೆ. ಪ್ರವಾಸಿಗರು ಇಲ್ಲಿನ ಎಲ್ಲಾ ಸ್ಥಳಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಇಲ್ಲಿನ ಸೈನ್ಯ ವಾಸ್ತುಶಿಲ್ಪವನ್ನು ವಿಶೇಷವಾಗಿ ಗಮನಿಸಬಹುದಾಗಿದ್ದು, ಕೋಟೆ ಹಾಗೂ ರಕ್ಷಣಾ ವ್ಯವಸ್ಥೆಗೆ ಅವಶ್ಯವಿರುವ ಎಲ್ಲಾ ಪ್ರಾಕೃತಿಕ ಅಂಶಗಳನ್ನೂ ಇಲ್ಲಿ ಕಾಣಬಹುದಾಗಿದೆ.
ಇಲ್ಲಿಗೆ ಆಗಮಿಸುವ ಕೆಲವೊಂದು ವಿಕೃತ ಮನಸ್ಸಿನ ಚಾರಣಿಗರು ಇಲ್ಲಿನ ಐತಿಹಾಸಿಕ ಕುರುಹು ಹಾಗೂ ಸ್ಮಾರಕಗಳ ಮೇಲೆ ಚಿತ್ರ ವಿಚಿತ್ರವಾದ ಬರಹಗಳನ್ನು ಬರೆದು, ಚಿತ್ರಗಳನ್ನು ಬಿಡಿಸಿ ಅವುಗಳನ್ನು ಅತ್ಯಂತಗರಿಷ್ಠ ಮಟ್ಟದಲ್ಲಿ ಹಾಳುಗೆಡ ವಿರುವುದು ಅತ್ಯಂತ ಹೇಯ ವಿಚಾರವಾಗಿದೆ. ಚಾರಣಕ್ಕೆ ತೆರಳುವ ಕೆಲವು ಕಿಡಿಗೇಡಿಗಳು ಇಲ್ಲಿನ ಹುಲ್ಲಿನ ಗುಡ್ಡಕ್ಕೆ ಬೆಂಕಿಯನ್ನು ಹಚ್ಚಿ ಇಡೀಯ ಅರಣ್ಯ ಸಂಪತ್ತು ಬೆಂಕಿಗಾಹುತಿ ಯಾಗುವಂತೆ ಮಾಡುತ್ತಿರುವುದು ನಿಜಕ್ಕೂ ಶೋಚನೀಯ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಮೋಜು ಮಸ್ತಿಯ ಹೆಸರಿನಲ್ಲಿ ಪ್ಲಾಸ್ಟಿಕ್ ಚೀಲಗಳು, ನೀರಿನ ಮತ್ತು ಮದ್ಯದ ಬಾಟಲಿಗಳನ್ನು ಅಲ್ಲಲ್ಲಿ ಎಸೆದು ಈ ಪ್ರದೇಶದ ಸ್ವಚ್ಛತೆಯನ್ನು ಹಾಳುಗೆಡವಿದ್ದಾರೆ. ಕೋಟೆಗೆ ಚಾರಣ ತೆರಳುವ ಚಾರಣಿಗರನ್ನು ಪ್ರಾರಂಭದ ಪ್ರವೇಶದ್ವಾರದಲ್ಲೇ ಪರಿಶೀಲಿಸಿ ತಮ್ಮೊಂದಿಗೆ ಕೊಂಡೊಯ್ಯುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ರಿಜಿಸ್ತ್ರಿಯಲ್ಲಿ ನಮೂದಿಸಿ ಅಲ್ಲಿಂದ ವಾಪಾಸು ಬರುವಾಗ ಅಷ್ಟೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಾಪಾಸು ಗೇಟ್‌ನಲ್ಲೇ ನೀಡುವಂತೆ ಕಠಿಣ ನಿಯಮವನ್ನು ಜಾರಿಗೆ ತರಬೇಕು. ತಪ್ಪಿದಲ್ಲಿ ಕಠಿಣ ದಂಡನಾ ಶುಲ್ಕಗಳನ್ನು ವಿಧಿಸಿದಲ್ಲಿ ಸ್ವಲ್ಪ ಮಟ್ಟಿಗಾದರೂ ಪರಿಸರದ ಸ್ವಚ್ಛತೆಯನ್ನು ಕಾಪಾಡಬಹುದಾಗಿದೆ. ಈ ಪ್ರದೇಶವು ಕೇಂದ್ರೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದ್ದು, ಇಲ್ಲಿನ ಹಳೆಯ ವೈಭವಗಳನ್ನು ಮತ್ತೆ ಪ್ರವಾಸಿಗರು ಕಣ್ಣು ತುಂಬಿಕೊಳ್ಳುವಂತೆ ನವೀಕರಿಸ ಬೇಕಾದ ಅವಶ್ಯಕತೆಯೂ ಇದೆ. ಒಟ್ಟಿನಲ್ಲಿ ಚಾರಣಿಗರು ಅಥವಾ ಪ್ರವಾಸಿಗರು ಪುರಾತನ ಅಥವಾ ಐತಿಹಾಸಿಕ ಸ್ಮಾರಕಗಳ ರಕ್ಷಣೆಯ ಮನೋಧರ್ಮವನ್ನು ತೋರಿದಾಗ ಮಾತ್ರ ನಮ್ಮ ಇತಿಹಾಸದ ಗತ ವೈಭವವು ಮತ್ತೆ ಮರುಕಳಿಸಿ ಮುಂದಿನ ತಲೆಮಾರುಗಳಿಗೂ ಉಳಿಯಲು ಸಾಧ್ಯ. ಹೆಚ್ಚಿನ ವಿವರಗಳಿಗೆ ಚಾರಣಿಗರು ಅರಣ್ಯ ಇಲಾಖೆಯ ಬೆಳ್ತಂಗಡಿ ವಿಭಾಗವನ್ನು 08256-233189 ಮೂಲಕ ಸಂಪರ್ಕಿಸ ಬಹುದಾಗಿದೆ.

                                                                                                                                 ಸಂತೋಷ್ ರಾವ್, ಪೆರ್ಮುಡ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.