ಬಂಡವಾಳ ಬಿಚ್ಚಬೇಕೆ….?

Advt_NewsUnder_1
Advt_NewsUnder_1
Advt_NewsUnder_1

 ಶಿವರಾಮ ಶಿಶಿಲ

ಕ್ರಿಶ್ಚನ್ ಬಾಬು ಎಂದೊಡನೆ, ಅವರ ಅಭಿಮನ್ಯು, ಬಭ್ರುವಾಹನ, ಶ್ರೀಕೃಷ್ಣ, ಚಂಡ-ಮುಂಡ ಇಂತಹ ಪಾತ್ರ ಚಿತ್ರಣಗಳ ವೈಭವ ಕಣ್ಮುಂದೆ ಬಂದು, ಆ ಸೊಬಗನ್ನು ನೆನಪಿಸುತ್ತದೆ. ಐವತ್ತರಿಂದ ಎಂಬತ್ತನೇ ದಶಕದ ತನಕ ಮೂವತ್ತು ವರುಷಗಳ ಕಾಲ ವಿಜೃಂಭಿಸಿದ ಈ ಮೇರು ಕಲಾವಿದ ಅನಂತರ ದಕ್ಷಿಣ ಕನ್ನಡದ ಯಕ್ಷಗಾನ ಮೇಳಗಳನ್ನು ತೊರೆದು, ಮುಂಬೈಗೆ ಹೋಗಿ ಅಲ್ಲಿಯ ಮೇಳಗಳಲ್ಲಿ ಗೌರವ ಕಲಾವಿದರಾಗಿ ರಾರಾಜಿಸತೊಡಗಿದರು. ದ.ಕ. ಜಿಲ್ಲೆಯ ಕುಂಡಾವು, ಕರ್ನಾಟಕ, ಕಲಾವಿಹಾರ ಮೇಳಗಳಲ್ಲಿದ್ದಾಗ ಅವರ ಪಾತ್ರಗಳನ್ನು ನೋಡಲಿಕ್ಕಾಗಿ ಬರುತ್ತಿದ್ದ ಮಂದಿ ಅಸಂಖ್ಯ! ಪಾತ್ರ ಚಿತ್ರಣದಲ್ಲಾಗಲೀ, ನೃತ್ಯಾಭಿನಯದಲ್ಲಾಗಲೀ ಅವರಿಗೆ ತನ್ನದೇ ಆದ ಸ್ವಂತಿಕೆ ಶ್ರೀಮಂತಿಕೆ ಇರುತ್ತಿತ್ತು.
ಅವರ ಮಾತೃಭಾಷೆ ಕೊಂಕಣಿಯಾಗಿದ್ದರೂ, ತುಳು, ಕನ್ನಡ, ಮಲಯಾಳ, ಮರಾಠಿ ಭಾಷೆಗಳನ್ನೂ ಚೆನ್ನಾಗಿ ಬಲ್ಲವರಾಗಿದ್ದರು. ಪ್ರಾರಂಭದ ದಿನಗಳಲ್ಲಿ ಕುಂಡಾವು ಮೇಳದಲ್ಲಿದ್ದಾಗ ಮಲ್ಪೆ ಶಂಕರನಾರಾಯಣ ಸಾಮಗರನ್ನು ಗುರುಗಳಾಗಿ ಕಂಡು, ಅವರಿಂದ ಪುರಾಣ ಸನ್ನಿವೇಶಗಳನ್ನು ಮತ್ತು ಭಾಷಾ ಶುದ್ಧಿಯನ್ನು ಕರಗತ ಮಾಡಿಕೊಂಡು ಬರಬರುತ್ತಾ ನುರಿತ ಪುಂಡುವೇಷಧಾರಿಯಾದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಮೇರು ಕಲಾವಿದ ಅಳಿಕೆ ರಾಮಯ್ಯ ರೈಗಳ ಚಂಡನಿಗೆ ಸಮಜೋಡಿಯಾದ ಮುಂಡನಾಗಿ ಕ್ರಿಶ್ಚನ್ ಬಾಬು ಮಿಂಚತೊಡಗಿದರು. ರಂಗಸ್ಥಳದಲ್ಲಿ ಕೈ ಬೀಸಿ ನಡೆವ ಅವರ ಬೀಸುನಡಿಗೆ, ಅತ್ಯಂತ ಎತ್ತರದ ಗುತ್ತುಗಳು, ವೇಗವಾಗಿ ತಿರುಗುವ ಸುತ್ತುಗಳು, ಲಾಲಿತ್ಯ ಪೂರ್ಣ ಅಭಿನಯ, ನಾಟ್ಯ – ಇತ್ಯಾದಿಗಳಲ್ಲಿ ಅವರದೇ ಆದ ಗತ್ತುಗಾರಿಕೆ ಎದ್ದು ಕಾಣುತ್ತಿತ್ತು.
ಅಂದಾಜು 1980-81 ರ ಸುಮಾರಿಗೆ ಮುಂಬೈ ಮೇಳದಲ್ಲಿ ಇದ್ದಾಗ ಭಾಗವತ ಕೊಕ್ಕಡ ಸುಬ್ರಾಯ ಆಚಾರ್‍ಯರನ್ನು ಕಾಣಬಂದಿದ್ದ ಅವರು, ಶಿಶಿಲದಲ್ಲಿ ಆದಿನ ಜರಗಲಿದ್ದ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳ ಭಂಡಿಹೊಳೆ- ಇದರ ತ್ರಿಜನ್ಮ ಮೋಕ್ಷ ಪ್ರಸಂಗದ ಭಾಗವತಿಕೆಗೆ ಹೊರಟಿದ್ದ ಆ ಭಾಗವತರೊಂದಿಗೆ ಶಿಶಿಲಕ್ಕೂ ಬಂದರು. ಅಪೂರ್ವವಾಗಿ ಆಗಮಿಸಿದ್ದ ಈ ಮೇರು ಕಲಾವಿದರಿಂದ ಒಂದು ಪಾತ್ರ ಮಾಡಿಸಬೇಕೆಂಬುದು ನಮ್ಮೆಲ್ಲರ ತವಕ! ಭಾಗವತ ಆಚಾರ್‍ಯರ ಮೂಲಕ ಇದಕ್ಕೆ ಬಾಬುರವರನ್ನು ಒಪ್ಪಿಸಲಾಯಿತು. ಅದಕ್ಕಾಗಿ ಜಯ ಮತ್ತು ಶಿಶುಪಾಲ ಪಾತ್ರಗಳನ್ನು ನಿರ್ವಹಿಸಬೇಕಿದ್ದ ಮೇಳದ ಪ್ರಧಾನ ಕಲಾವಿದ ದಾಮ್ಲೆ ಶ್ರೀರಾಮ ಭಟ್ಟರು ಶಿಶುಪಾಲನ ಪಾತ್ರವನ್ನು ಬಾಬುರವರಿಗೆ ಒಪ್ಪಿಸಿಬಿಟ್ಟರು.
ನಮ್ಮ ಒತ್ತಾಯದ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಅವರು ವೇಷ ಮಾಡಲು ಸಮ್ಮತಿಸಿದ್ದರೂ, ಅವರ ಮೆಚ್ಚಿನ ಚೆಂಡೆವಾದಕ ಗೋಪಾಲಕೃಷ್ಣ ಕುರುಪರ ಅನುಪಸ್ಥಿತಿಯಲ್ಲಿ ತಾನು ಹೇಗಪ್ಪಾ ಅಲ್ಲಿಗೆ ಹೊಂದಿಕೊಳ್ಳುವುದು ಎಂದು ಅವರು ಕಸಿವಿಸಿಗೊಂಡರು. ಕೊನೆಗೆ ಕುರುಪರ ಶಿಷ್ಯ ಮಹಾದೇವ ಅಭ್ಯಂಕರು ಚೆಂಡೆಗೆಂದು ತಿಳಿದಾಗ, ಚೆಂಡೆ ಪೆಟ್ಟಿನ ಆ ನಡೆ-ನುಡಿ ಇವರಿಗೂ ತಿಳಿದಿರಬಹುದೆಂದು ಸಮಾಧಾನಪಟ್ಟುಕೊಂಡು ವೇಷಕ್ಕೆ ಕುಳಿತರು.
ಶ್ರೀಕೃಷ್ಣ ಪಾತ್ರ ಮಾಡುತ್ತಿದ್ದ ಪುಂಡುವೇಷಧಾರಿಯಾದ ಅವರನ್ನು ಶಿಶುಪಾಲನ ಪಾತ್ರಕ್ಕೆ ಒಪ್ಪಿಸಿದಾಗ, ಅವರೆದುರು ಶ್ರೀಕೃಷ್ಣ ಪಾತ್ರ ಮಾಡುವಂತಹ ಸಮರ್ಥರಾರು? ಎಂಬ ಕಗ್ಗಂಟಿನ ಪ್ರಶ್ನೆ ಎದುರಾಯಿತು. ಶ್ರೀಕೃಷ್ಣನ ಪಾತ್ರ ಮೊದಲೇ ನನಗೆ ನಿಗದಿಯಾಗಿದ್ದುದರಿಂದ ನಾನು ಸಿದ್ಧತೆ ನಡೆಸಿ ಬಂದಿದ್ದೆ. ಆದರೆ, ಅದು ಮಿತ್ರ ಶ್ರೀರಾಮ ಭಟ್ಟರ ಶಿಶುಪಾಲನಿಗೆ! ಈಗ ನನ್ನೆದುರಿರುವುದು ಮೇರು ಕಲಾವಿದ ಕ್ರಿಶ್ಚನ್ ಬಾಬಣ್ಣನ ಶಿಶುಪಾಲ! ಹೀಗಾಗಿ ನಾನದರಿಂದ ನುಣುಚಿಕೊಳ್ಳಬಹುದಾಗಿದ್ದರೂ, ಅದನ್ನು ನಿರ್ವಹಿಸುವವರು ನಮ್ಮಲ್ಲಿ ಬೇರೆ ಯಾರೂ ಇರಲಿಲ್ಲ.
ನನಗೆ ಕ್ರಿಶ್ಚನ್ ಬಾಬುರವರ ಒಡನಾಟ, ಪರಿಚಯ ಈ ಮೊದಲೇ ಆಗಿತ್ತು. ಅಣ್ಣ ರಜೆಯಲ್ಲಿ ಬಂದಿದ್ದಾಗ ಶಂಕರನಾರಾಯಣ ಮತ್ತು ಚಿತ್ತೂರುಗಳ ಕ್ಯಾಂಪಿನಲ್ಲಿ ಕಲಾವಿಹಾರ ಚಂದ್ರಾವಳಿ ವಿಲಾಸದ ಮತ್ತು ಶ್ರೀಕೃಷ್ಣ ಪಾರಿಜಾತದ ಅವರ ಶ್ರೀಕೃಷ್ಣನ ಪಾತ್ರಕ್ಕೆ ನಾನು ಹಿಮ್ಮೇಳ ನುಡಿಸಿದ್ದೆ.
ಹಾಗಾಗಿ ಆ ಪರಿಚಯದ ಹುಂಬ ಧೈರ್ಯ! ಆದರೆ ಅಲ್ಲಿ ನನ್ನ ಕಾರ್ಯ ಹಿಮ್ಮೇಳ ನುಡಿಸಿದ್ದು, ಇಲ್ಲಿ ಹಾಗಲ್ಲವಲ್ಲ!. ಬಾಬಣ್ಣ, ನೀವು ಗಜಕಲಾವಿದ, ನಾನಾದರೋ ಅಜಕಲಾವಿದನೂ ಅಲ್ಲದೆ ಹವ್ಯಾಸಿ ಕಲಾವಿದ, ಆದುದರಿಂದ ರಂಗಸ್ಥಳದಲ್ಲಿ ನನ್ನನ್ನು ಕೆಣಕಬೇಡಿ, ಸುಧಾರಿಸಿಕೊಳ್ಳಿ ಎಂದು ಅವರಲ್ಲಿ ವಿನಂತಿಸಿಕೊಂಡೆ. ಮಾಸ್ಟ್ರೆ, ಇಲ್ಲಿ ಗಜ-ಅಜಗಳ ಮಾತೆಲ್ಲಿ ಬರುತ್ತದೆ? ನಿಮ್ಮಂತಹ ಹವ್ಯಾಸಿಗಳು ಖಂಡಿತ ಮುಂದೆ ಬರಬೇಕು. ಅದಕ್ಕೆ ನಮ್ಮಂತಹ ವೃತ್ತಿಕಲಾವಿದರ ಪ್ರೋತ್ಸಾಹ ಇರಬೇಕೇ ಹೊರತು, ಕೆಣಕಹೋಗುವುದು ಪ್ರಮಾದವಾದೀತು. ನೀವೇನೂ ಅಂಜುವ ಅಗತ್ಯವಿಲ್ಲ. ಎಂದು ಬೆನ್ನು ತಟ್ಟಿ ಧೈರ್‍ಯ ತುಂಬಿದರು.
ರಾಜ ಸೂಯಾಧ್ವರ ಪ್ರಸಂಗ ಶುರುವಾಯಿತು. ಶಿಶುಪಾಲ ಪ್ರವೇಶ, ಕುಣಿತ, ಅಭಿನಯ, ಅಟ್ಟಹಾಸ, ಕ್ರೋದಾಗ್ನಿಯ ಮಾತುಗಳು ಎಲ್ಲರಲ್ಲೂ ದಿಗ್ಭ್ರಮೆಯುಂಟುಮಾಡಿತು. ಶ್ರೀಕೃಷ್ಣನನ್ನು ಅಗ್ರಪೀಠಕ್ಕೆ ಏರಿಸಲು ಸೂಚಿಸಿದ ಭೀಷ್ಮಪಿತಾಮಹ, ಅಗ್ರಪೀಠವೇರಿಸಿದ ಸಹದೇವ ಇದಕ್ಕೆ ಬೆಂಬಲವಿತ್ತ ಪಾಂಡವರು, ಈ ಎಲ್ಲರನ್ನೂ ಭೀಷಣವಾದ ಚುಚ್ಚುಮಾತುಗಳಿಂದ ಜರೆಜರೆದ ಶಿಶುಪಾಲ ಕೊನೆಗೆ ಕೃಷ್ಣನತ್ತ ತಿರುಗಿಬಿದ್ದು, ಅವನ ಸಂಸ್ಕಾರಕ್ಕೆ ತಕ್ಕ ಬಿರುನುಡಿಗಳಿಂದ ನಿಂದಿಸತೊಡಗಿದ.
ಆಗ ಶ್ರೀಕೃಷ್ಣ ಸಭಾಸದರಿಗೆ ಆತನ ಜನ್ಮ ವೃತ್ತಾಂತವನ್ನು ವಿವರಿಸಿ, ಅವನ ತಾಯಿ ಹಾಗೂ ತನ್ನ ಸೋದರತ್ತೆಯ ವಿನಂತಿಗೆ ಗೌರವ ಕೊಟ್ಟು ನಿಮ್ಮ ಮಗ ನೂರು ತಪ್ಪುಗಳನ್ನೂ ಮಾಡಿದರೂ, ಸಹಿಸಿಕೊಳ್ಳುತ್ತೇನೆ ಎಂಬ ಭಾಷೆಗಾಗಿ ಸುಮ್ಮನಿದ್ದೇನೆ, ಹೀಗಾಗಿ ಎಲೈ ಶಿಶುಪಾಲ, ಬೈಬೈಯ್ಯಾ ಸಹಿಸುವೆಂ ನೂರುವರಂ ಎಂದು ಕೃಷ್ಣ ಹೇಳುತ್ತಲೇ, ಅದನ್ನು ಕೇಳಿ ಧಗಧಗಿಸಿ ದಳ್ಳುರಿಯಾದ ಶಿಶುಪಾಲನ ನಟನೆ, ವರ್ತನೆ, ಮಾತು, ಭಾವಭಂಗಿಗಳನ್ನು ಕಂಡು ಸಭೆ ಬೆಕ್ಕಸ ಬೆರಗಾಯಿತು! ಅನಂತರ ಯುದ್ಧದ ಸನ್ನಿವೇಶ! ಮಾತಿಗೆ ಮಾತು ಬೆಳೆದಾಗ ನಾನು ಶಿಶುಪಾಲನ ಅವಹೇಳನದ ಬಗೆಗೆ ಪುರಾಣನಾಮ ಚೂಡಾಮಣಿಯ ಒಂದು ಸನ್ನಿವೇಶವನ್ನು ಹೇಳಿದಾಗ ಕೆರಳಿದ ಆತ ಎಲವೋ ಗೋಪಕುಮಾರ ನಿನ್ನ ಬಂಡವಾಳವನ್ನು ಅಲ್ಲಿಗೆ ನಿಲ್ಲಿಸು, ಇಲ್ಲವಾದರೆ ನಗ್ನ ಬಂಡವಾಳ ಬಿಚ್ಚಬೇಕಾಗುತ್ತದೆ ಎಂದಾಗ ನಾನು ಕಂಗಾಲು! ಶಿಶುಪಾಲ ವಧಾನಂತರ ವಿಚಾರಿಸಿದಾಗ, ಮಾಸ್ಟ್ರೇ ಅದೆಲ್ಲ ನಮ್ಮ ಚಾತುರ್ಯದ ಒಗಟು. ಬಂಡವಾಳವೇನೂ ಇಲ್ಲ ಎಂದುಬಿಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.