ಮೇ2: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ಗೆ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮ

ಮಡಂತ್ಯಾರು: ಮಡಂತ್ಯಾರಿನ ಪ್ರಗತಿ ಮತ್ತು ಫಲವತ್ತತೆಗೆ ಮುಕುಟವೆಂಬಂತೆ ಕಂಗೊಳಿಸುವ ಪವಿತ್ರ ಧರ್ಮಕ್ಷೇತ್ರವೇ ಶತಮಾನೋತ್ತರ ಬೆಳ್ಳಿಹಬ್ಬ ೧೨೫ ವರ್ಷ ಆಚರಿಸುತ್ತಿರುವ ಪವಿತ್ರ ತಿರುಹೃದಯ ದೇವಾಲಯ ಅಂದರೆ ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು. ಮಂಗಳೂರಿನ ಅತೀ ವಂದನೀಯ ಬಿಷಪ್ ನಿಕೊಲಸ್ ಪಗಾನಿಯವರ ಅನುಮತಿಯ ಮೇರೆಗೆ ೧೮೮೯ರಲ್ಲಿ ಮಡಂತ್ಯಾರು ಸ್ವತಂತ್ರ ಧರ್ಮಕ್ಷೇತ್ರ ವಾಗಿ ಅಗ್ರಹಾರ ಧರ್ಮಕ್ಷೇತ್ರದಿಂದ ಬಿಡುಗಡೆಗೊಂಡು ಅಸ್ತಿತ್ವಕ್ಕೆ ಬಂತು. ಪೂಜ್ಯ ರೋಜಾರಿಯೊ ಡಿಸೋಜ ಅವರು ಪ್ರಥಮ ಧರ್ಮಗುರುಗಳಾಗಿ ನೇಮಕಗೊಂಡರು. ಗುಡಿಸಲಿನಲ್ಲಿ ಪೂಜೆ ಸಲ್ಲಿಸಿ, ಜನರ ಆತ್ಮಿಕ ಅಗತ್ಯತೆ ಪೂರೈಸುತ್ತಿರುವ ಇವರು ಜನಾನುರಾಗಿಯಾಗಿದ್ದರು. ೧೮೯೦ರಲ್ಲಿ ಧರ್ಮಕ್ಷೇತ್ರಕ್ಕೆ ವಂದನೀಯ ಫಾ.ಜೇಕಬ್ ಸಿಕ್ವೇರಾರವರು ಧರ್ಮಗುರುಗಳಾಗಿ ಅಧಿಕಾರ ವಹಿಸಿಕೊಂಡು, ಧರ್ಮಕ್ಷೇತ್ರದ ಸ್ಥಾಪಕ ಗುರುವಾದರು. ೧೮೯೦ರಲ್ಲಿ ಇಗರ್ಜಿಯ ಶಂಕುಸ್ಥಾಪನೆ ಮಾಡಿದ ಇವರು ೧೮೯೩ರಲ್ಲಿ ಕೆಲಸ ಪೂರ್ತಿಗೊಳಿಸಿ ಈ ದೇವಾಲಯವನ್ನು ಜೇಸುನಾಥರ ತಿರುಹೃದಯಕ್ಕೆ ಸಮರ್ಪಿಸಿದರು.
ಮಂಗಳೂರು ಧರ್ಮಪ್ರಾಂತ್ಯದ ಅತೀ ಶ್ರೇಷ್ಠ ಧರ್ಮಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಮಡಂತ್ಯಾರಿನಲ್ಲಿ ಹುಟ್ಟುಹಾಕಿದ ಶೈಕ್ಷಣಿಕ ಕ್ರಾಂತಿ ಒಂದು ಅದ್ಭುತ ಪವಾಡವೇ ಸರಿ. ೧೮೯೮ರಲ್ಲಿ ಗಾರ್ಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಯಾಯಿತು. ಬಳಿಕ ಬಂದ ಫಾ.ಎಲೋಶಿಯಸ್ ಮಿನೇಜಸ್‌ರವರು ಈ ಶಾಲೆಗೆ ಸರಕಾರದ ಅನುದಾನವನ್ನು ತರುವಲ್ಲಿ ಯಶಸ್ವಿಯಾದರು. ಹಾಗೂ ಶ್ರದ್ಧಾವಂತ ಗುರುಗಳಾಗಿ ಮೆರೆದರು. ೧೯೪೨ರಲ್ಲಿ ಫಾ.ಗಾಸ್ಫರ್ ಬ್ಯಾಪ್ಟಿಸ್ಟ್ ಪಿಂಟೋ ಧರ್ಮ ಕ್ಷೇತ್ರದ ಅಧಿಕಾರ ವಹಿಸಿ ಇಗರ್ಜಿಯ ಕಟ್ಟಡದ ಕೆಲಸ ಪೂರ್ತಿಗೊಳಿಸಿದರು.
ಬಳಿಕ ಬಂದ ಫಾ| ವಿಲಿಯಂ ವೇಗಸ್ ಜನಪ್ರಿಯ ಗುರುಗಳಾಗಿ ಚರ್ಚ್‌ನ್ನು ಮುನ್ನಡೆಸಿದರು. ೧೯೭೨ರಲ್ಲಿ ಫಾ. ಲಿಗೋರಿ ಡಿಸೋಜರವರ ಆಗಮನದಿಂದಾಗಿ ಮೂಡಣದಿಂದ ಸೂರ್ಯನ ಪ್ರಗತಿಪರ ಹೊಂಗಿರಣಗಳು ಮಡಂತ್ಯಾರಿನ ಪವಿತ್ರ ಮಣ್ಣಿಗೆ ಬೀರತೊಡಗಿದವು. ಮಡಂತ್ಯಾರಿನ ಶಿಲ್ಪಿ ಇವರೆನಿಸಿಕೊಂಡರು. ೧೯೭೮ರಲ್ಲಿ ನೈನಾಡಿನ ಸಂತ ಜೋಸೆಪ್ ಮತ್ತು ಗರ್ಡಾಡಿಯ ಸಂತ ಅಂತೋನಿ ಶಾಲೆಗಳು, ಮಡಂತ್ಯಾರು ಶಾಲೆಗೆ ಸುಂದರವಾದ ಹೊಸ ಕಟ್ಟಡ, ಉನ್ನತ ಶಿಕ್ಷಣಕ್ಕಾಗಿ ಪ್ರೌಢಶಾಲೆ, ಪದವಿಪೂರ್ವ ಶಾಲೆ ಮತ್ತು ಪದವಿ ಕಾಲೇಜನ್ನು ಸ್ಥಾಪಿಸಲು ಮುಂದಾಗಿ ಯಶಸ್ವಿಯಾದರು. ಬಡವರಿಗೆ ಸಾಮೂಹಿಕ ವಿವಾಹವನ್ನು ನೆರವೇರಿಸಿದರು. ಇವರ ೧೧ ವರ್ಷಗಳ ಕಾಲಾವಧಿ ಮತ್ತು ಬೃಹತ್ ಗಾತ್ರದ ಕಾರ್ಯಗಳು, ಅದ್ಭುತ ಸಾಧನೆಗಳು ಇಂದಿಗೂ ಅಚ್ಚಳಿಯದೆ ಉಳಿದಿದೆ. ಇವರೇ ಮಡಂತ್ಯಾರಿನ ಶಿಲ್ಪಿ ಫಾ. ಲಿಗೋರಿ ಡಿಸೋಜ. ೧೯೮೩ರಂದು ಶರವೇಗದಲ್ಲಿ ದಾಪುಗಾಲು ಇಡುತ್ತಿರುವ ಮಡಂತ್ಯಾರಿನ ಅಭಿವೃದ್ಧಿಯ ವೇಗಕ್ಕೆ ಪುಷ್ಠಿ ತುಂಬಿಸಿ ಸುಯೋಗ ಕಲ್ಪಿಸಿದ ಮಹಾನುಭಾವರೇ ಫಾ. ಡಾ. ಫ್ರೆಡ್ ವಿ.ಪಿರೇರಾರವರು ಸೇಕೆಡ್ ಹಾರ್ಟ್ ಕಾಲೇಜಿನ ಮೂರು ಅಂತಸ್ತುಗಳ ಕಟ್ಟಡ ಒಂದೇ ವರ್ಷದಲ್ಲಿ ಇದನ್ನು ಪೂರ್ಣಗೊಳಿಸಿದ ಕೀರ್ತಿ ಇವರದಾಗಿದೆ. ಹಾಗೆಯೇ ಪದವಿ ಪೂರ್ವ ಕಾಲೇಜಿಗೂ ಸ್ವತಂತ್ರ ಕಟ್ಟಡದ ಭಾಗ್ಯವು ದೊರೆಯಿತು. ಈ ಮೂಲಕ ಮಡಂತ್ಯಾರಿನ ಅಭಿವೃದ್ಧಿಯ ನಿರ್ಮಾತ್ ಎಂದೆನಿಸಿಕೊಂಡರು. ಬಳಿಕ ಬಂದ ಶಿಸ್ತಿನ ಸಿಪಾಯಿ ಫಾ. ಅಲೆಕ್ಸಾಂಡರ್ ಡಿಸೋಜ, ಧರ್ಮಗುರುಗಳ ಮನೆ ಮತ್ತು ಮಡಂತ್ಯಾರು ಪೇಟೆಯಲ್ಲಿ ವಾಣಿಜ್ಯ ಸಂಕೀರ್ಣ ರಚನೆಗೆ ಕಾರಣೀಭೂತರಾದ ಶ್ರಮಜೀವಿ ಫಾ.ಚಾರ್ಲ್ಸ್ ನೊರೊನ್ಹಾ, ಕನಸುಗಾರ ಫಾ. ಹೆರಾಲ್ಡ್ ಮಸ್ಕರೇನ್ಹಸ್, ಸೇಕ್ರೆಡ್ ಹಾರ್ಟ್ ಇಂಗ್ಲೀಷ್ ಮೀಡಿಯಂ ಶಾಲೆ ನಿರ್ಮಾಣಕ್ಕೆ ಕಾರಣರಾದ ಶಾಂತಿದೂತ ಫಾ. ವಲೇರಿಯನ್ ಫ್ರಾಂಕ್ ಮತ್ತು ಸೇಕ್ರೆಡ್ ಹಾರ್ಟ್ ವಾಣಿಜ್ಯ ಸಂಕೀರ್ಣ ೨, ಹೈಸ್ಕೂಲ್ ಕಟ್ಟಡ, ಇಗರ್ಜಿಯ ನವೀಕರಣ, ಇಗರ್ಜಿ ರಸ್ತೆಗಳ ಡಾಮರೀಕರಣ, ಕ್ರೀಡಾ ಮೈದಾನ, ಇಂಡೋರ್ ಸ್ಟೇಡಿಯಂ, ಇಂಗ್ಲೀಷ್ ಮೀಡಿಯಂ ಕೊಠಡಿ ವಿಸ್ತರಣೆ, ನೀರಾವರಿ ವ್ಯವಸ್ಥೆ ಹಾಗೂ ಸೇಕ್ರೆಡ್ ಹಾರ್ಟ್ ಸಮುದಾಯ ಭವನ ನಿರ್ಮಿಸಿ ಮಡಂತ್ಯಾರಿನ ಚಿತ್ರಣವನ್ನು ಬದಲಾಯಿಸಿದ ಕೀರ್ತಿಗೆ ಪಾತ್ರರಾದ ಮಡಂತ್ಯಾರಿನ ಬದಲಾವಣೆಯ ಹರಿಕಾರ ಫಾ. ಲಾರೆನ್ಸ್ ಮಸ್ಕರೇನ್ಹಸ್, ಹಾಗೂ ಕಳೆದ ಒಂದು ವರ್ಷದಿಂದ ಧರ್ಮಕ್ಷೇತ್ರಕ್ಕೆ ಆಗಮಿಸಿದ ಆಧ್ಯಾತ್ಮಿಕ ಚಿಂತಕ, ಸ್ನೇಹಪರಜೀವಿ ಫಾ.ಬೇಸಿಲ್ ವಾಸ್‌ರವರು ಮಡಂತ್ಯಾರಿನ ಧರ್ಮಕ್ಷೇತ್ರವನ್ನು ಪುಣ್ಯಕ್ಷೇತ್ರವನ್ನಾಗಿ ಬದಲಾಯಿಸಲು ಪೂರಕವಾದ ಆಧ್ಯಾತ್ಮಿಕ ಧ್ಯಾನಗುಹೆ ನಿರ್ಮಾಣ ಮಾಡಿ ಪ್ರಭು ಏಸುವಿನ ದೈವಿಕ ಕೃಪೆಯನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡಿರುತ್ತಾರೆ. ಹಾಗೂ ಸಮುದಾಯ ಭವನದ ಕೆಳಮಹಡಿಯ ಕೆಲಸ, ಪುಟಾಣಿ ಮಕ್ಕಳಿಗಾಗಿ ಬಾಲವನ ನಿರ್ಮಾಣ ಹಾಗೂ ಸ್ಮರಣೆ, ಸಂಸ್ಕಾರ, ಸಂಬಂಧ, ಸೇವೆ ಮತ್ತು ಸಂಭ್ರಮ ಎಂಬ ಉದ್ದೇಶಗಳೊಂದಿಗೆ ಶತಮಾನೋತ್ತರ ಬೆಳ್ಳಿ ವರ್ಷದ ವೈಭವವನ್ನು ಸಾರುವ ವಿಶಿಷ್ಟ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಧರ್ಮಕ್ಷೇತ್ರದ ಜನರ ಒಗ್ಗಟ್ಟಿಗಾಗಿ ಮತ್ತು ಪ್ರೀತಿ ಸಹಬಾಳ್ವೆಯ ಜೀವನಕ್ಕಾಗಿ ಪ್ರಯತ್ನಿಸುತ್ತಿರುವ ಕರ್ಮಯೋಗಿ ಯಾಗಿರುತ್ತಾರೆ. ೧೨೫ ವರ್ಷಗಳ ಹಿಂದೆ ೨೪೪ ಕುಟುಂಬಗಳನ್ನು ಹೊಂದಿದ್ದ ನಮ್ಮ ಧರ್ಮಕ್ಷೇತ್ರ ಇಂದು ೮೦೦ ಕುಟುಂಬಗಳನ್ನು ಹೊಂದಿದೆ. ಇಂದು ೨೨ ವಾಳೆಗಳಿವೆ. ಚರ್ಚ್‌ನ ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಯು ಎಂತವರಿಗೂ ಪೈಪೋಟಿ ನೀಡುವ ಹಂತದಲ್ಲಿದೆ. ಧರ್ಮಕ್ಷೇತ್ರದ ಅಭಿವೃದ್ಧಿಯಲ್ಲಿ ಸಲೇಶಿಯನ್ ಸಿಸ್ಟರ್ಸ್ ಆಫ್ ಡಾನ್ ಬಾಸ್ಕೊ, ಆರ್ಸೋಲೈನ್ ಸಿಸ್ಟರ್ಸ್, ಆಶಾ ದೀಪ, ಕಾರ್ಮೆಲೈಟ್ ಗುರುಗಳ ಆಶ್ರಮದವರು ಸಹಕಾರ ನೀಡುತ್ತಿದ್ದರು.
ಶಿಕ್ಷಣಕಾಶಿ ಮಡಂತ್ಯಾರು: ಏ.ಉ.ಯಿಂದ P.ಉ.ವರೆಗೆ ಸುಮಾರು ೪೫೦೦ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯಾದ್ಯಂತ ಮಡಂತ್ಯಾರಿಗೆ ಬಂದು ಶಿಕ್ಷಣ ಪಡೆಯುತ್ತಿರುವುದು ರೋಚಕ ಸಂಗತಿಯಾಗಿದೆ.
ಈ ವಿದ್ಯಾರ್ಥಿಗಳಿಗೆ ಶಿಸ್ತಿನ ಜೀವನ ಶೈಲಿಗೆ ಪ್ರೇರಣೆ ನೀಡುವ ಹಾಸ್ಟೆಲ್‌ಗಳು ಮತ್ತು ಸರ್ವರೀತಿಯಿಂದ ಮೇಲ್ವಿಚಾರಣೆ ನಡೆಸುವ ಶಿಸ್ತುಬದ್ಧ ವ್ಯವಸ್ಥೆ ಕಾರಣವಾಗಿದೆ.
ವಿದ್ಯಾಸಂಸ್ಥೆ ಗಳಲ್ಲಿ ಉನ್ನತ ಫಲಿತಾಂಶ ಲಭಿಸುತ್ತಿದ್ದು, ಪದವಿಪೂರ್ವ ವಿದ್ಯಾಲಯ, ಪಿ.ಯು.ಶಿಕ್ಷಣ ಇಲಾಖೆಯಿಂದ ಎ ಗ್ರೇಡ್‌ಮಾನ್ಯತೆ ಪಡೆದರೆ, ಪದವಿ ಕಾಲೇಜು ನ್ಯಾಕ್ ವತಿಯಿಂದ ಎ ಗ್ರೇಡ್ ಮಾನ್ಯತೆ ಪಡೆದಿದೆ. ಇದೀಗ ಪುಂಜಾಲಕಟ್ಟೆಯ ಸರಕಾರಿ ಕಾಲೇಜು ಸಹ ಮಡಂತ್ಯಾರಿನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ.
ಬರಹ: ಶ್ರೀ ವಿವೇಕ್ ವಿ. ಪಾಸ್, ಅರ್ತಿಲ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.