ಬೆಳ್ತಂಗಡಿಯಲ್ಲಿ ರಂಗೇರಿದ ಚುನಾವಣಾ ಕಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿ ಅಧಿಕೃತ ಘೋಷಣೆಯಾಗುತ್ತಿರುವಂತೆಯೇ ಬೆಳ್ತಂಗಡಿಯ ಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ ವಸಂತ ಬಂಗೇರ ಅವರು ಈ ಬಾರಿ ಮತ್ತೆ ಅಭ್ಯರ್ಥಿಯಾಗಿ ಈಗಾಗಲೇ ಘೋಷಿಸಲ್ಪಟ್ಟು ಚುನಾವಣಾ ಪ್ರಚಾರ ಆರಂಭಿಸಿದ್ದರೆ, ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ಯುವ ರಾಜಕಾರಣಿ, ಹಾಗೂ ಉದ್ಯಮಿ ಹರೀಶ್ ಪೂಂಜ ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಬೆಳ್ತಂಗಡಿಯ ಪಾಲಿಗೆ ಇದು ಹಳೆ ಬೇರು ಹೊಸ ಚಿಗುರು ನಡುವೆ ಸ್ಪರ್ಧೆ ಎಂಬಂತೆ ವಿಶ್ಲೇಷಣೆಗೊಳಗಾಗಿದೆ. ಈ ಹಿಂದೆ ಜೆಡಿಎಸ್‌ನಿಂದ ಶಾಸಕರನ್ನು ವಿಧಾನ ಸಭೆಗೆ ಆರಿಸಿ ಕಳುಹಿಸಿರುವ ಕೀರ್ತಿ ಹೊತ್ತಿರುವ ಈ ಕ್ಷೇತ್ರದಿಂದ ಈ ಬಾರಿ ಜೆಡಿಎಸ್‌ನಿಂದ ಸುಮತಿ ಎಸ್ ಹೆಗ್ಡೆ ನಿಟ್ಟಡೆ ವೇಣೂರು ಇವರು ಕಣಕ್ಕಿಳಿಯುವುದು ಬಹುತೇಕ ಖಚಿತಗೊಂಡಿದೆ.
ಕಾಂಗ್ರೆಸ್ ಪಕ್ಷದ ಚಟುವಟಿಕೆ:
ತಿಂಗಳುಗಳ ಹಿಂದೆ ಬೆಳ್ತಂಗಡಿ ಆಶಾ ಸಾಲಿಯಾನ ಸಭಾಂಗಣದಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ವಿಷ್ಣುನಾಥನ್ ಮೊದಲಾದ ನಾಯಕರ ಎದುರು, ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ ಆರೋಗ್ಯ ಸರಿ ಇಲ್ಲ, ನನಗೆ 2008 ಮತ್ತು 2013ರಲ್ಲಿ ಹರೀಶ್ ಕುಮಾರ್ ಅವರು ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದರು. ಈ ಬಾರಿ ಅವರಿಗೆ ಅವಕಾಶ ಆಗಬೇಕು ಎಂದು ಹಾಲಿ ಶಾಸಕ ವಸಂತ ಬಂಗೇರ ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದು ಕಾರ್ಯಕರ್ತರಲ್ಲಿ ಭಾರೀ ನಿರಾಶೆಗೂ ಕಾರಣವಾಗಿತ್ತು. ಆದರೆ ಕಳೆದ ಬಾರಿ ಮಿನಿ ವಿಧಾನ ಸೌಧ ಉದ್ಘಾಟನೆಗಾಗಿ ತಾಲೂಕಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿ ಬೆಳ್ತಂಗಡಿಗೆ ಮತ್ತೆ ವಸಂತ ಬಂಗೇರರೇ ಬೆಳ್ತಂಗಡಿಯಿಂದ ಕಾಂಗ್ರೆಸ್ ಅಭ್ಯರ್ಥಿ ಎಂಬುದಾಗಿ ವೇದಿಕೆಯಲ್ಲೇ ಬಹಿರಂಗವಾಗಿ ಹೇಳುವ ಮೂಲಕ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದರು.
ಬಿಜೆಪಿ ಪಕ್ಷದ ಚಟುವಟಿಕೆ:
ಬಿಜೆಪಿ ಟಿಕೇಟ್‌ಗಾಗಿನ ಅಮಿತ್ ಪರೀಕ್ಷೆಯಲ್ಲಿ ಪಾಸಾದ ಪೂಂಜ:
ಈ ಬಾರಿ ಬಿಜೆಪಿಯಲ್ಲಿ ಟಿಕೇಟ್ ಯಾರಿಗೆ ಎಂಬ ಬಗ್ಗೆ ಕಳೆದ ಮೂರು ವಾರಗಳಿಂದ ಕಾರ್ಯಕರ್ತರ ನಡುವೆ ಇದ್ದ ಪ್ರಶ್ನೆಗೆ ಎ. 16 ರಂದು ಉತ್ತರ ಸಿಕ್ಕಿದೆ. ಕೊನೆಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಆಂತರಿಕ ಟಿಕೇಟ್ ಪರೀಕ್ಷೆಯಲ್ಲಿ ತಾಲೂಕಿನ ಯುವ ಉದ್ಯಮಿ, ಹೈಕೋರ್ಟ್ ನ್ಯಾಯವಾದಿ ಯೂ ಆಗಿರುವ ಗರ್ಡಾಡಿ ಹರೀಶ್ ಪೂಂಜ ಅವರು ಜಿಲ್ಲೆಯಲ್ಲೇ ಅತೀ ಹೆಚ್ಚು ಅಂಕ ಪಡೆದು ಪಾಸಾಗಿದ್ದಾರೆ.
ಆ ಮೂಲಕ ಜನನಾಯಕನಾಗಿರುವ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಸ್ಪರ್ಧಾ ಅವಕಾಶ ದೊರೆತಿದೆ. ಬಿಜೆಪಿ ಟಿಕೇಟ್ ರೇಸ್‌ನಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ರಂಜನ್ ಜಿ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಎಬಿವಿಪಿ ರಾಜ್ಯ ಸಂಘಟಕ ಕೇಶವ ಬಂಗೇರ ಕಳಿಯ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂಪತ್ ಬಿ ಸುವರ್ಣ ಅವರ ಹೆಸರು ಕೇಳಿಬಂದಿತ್ತು. ಕೊನೆ ಗಳಿಗೆಯಲ್ಲಿ ಮಾಜಿ ಸಚಿವ ಗಂಗಾಧರ ಗೌಡ ಅವರ ಹೆಸರೂ ಕೇಳಿ ಬಂದಿತ್ತಾದರೂ ಕೊನೆ ಗಳಿಗೆಯಲ್ಲಿ ಹರೀಶ್ ಪೂಂಜ ಅವರು ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಜೆಡಿಎಸ್ ಸ್ಪರ್ಧೆ ಬಗ್ಗೆ:
ಜನತಾ ದಳ ಜಾತ್ಯತೀತ ಪಕ್ಷದಿಂದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಐದು ಮಂದಿಯ ಹೆಸರನ್ನು ಕಾರ್ಯಕರ್ತರ ಆಯ್ಕೆಯಂತೆ ಮೇಲ್ಘಟಕಕ್ಕೆ ಕಳುಹಿಸಿಕೊಡಲಾಗಿದೆ. ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ. ಸದಾಶಿವ, ಪಕ್ಷದ ತಾ| ಅಧ್ಯಕ್ಷ ಪ್ರವೀಣ್ಚಂದ್ರ ಜೈನ್, ಅರಸಿನಮಕ್ಕಿ ಜೆಡಿಎಸ್ ಬೆಂಬಲಿತ ಗ್ರಾ.ಪಂ. ಅಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಎಸ್. ಹೆಗ್ಡೆ ಮತ್ತು ಯುವ ಜನತಾ ದಳ ಅಧ್ಯಕ್ಷ ಸೂರಜ್ ವಳಂಬ್ರ ಇವರು ಕಾರ್ಯಕರ್ತರು ಸಲ್ಲಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದಿರುವವರು. ಆದರೆ ಈ ಪೈಕಿ ಜಿಲ್ಲಾ ಮಹಿಳಾ ಜೆಡಿಎಸ್ ಅಧ್ಯಕ್ಷೆಯಾಗಿರುವ ಸುಮತಿ ಎಸ್. ಹೆಗ್ಡೆ ಅವರ ಹೆಸರು ಅಂತಿಮಗೊಳ್ಳುವುದು ಬಹುತೇಕ ಖಚಿತವಾಗಿದೆ. ಎ. ೧೯ ರಂದು (ಇಂದು) ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಲಿದ್ದು ಅದರಲ್ಲಿ ಅವರ ಹೆಸರು ಘೋಷಣೆಯಾಗಲಿದೆ ಎಂದೇ ನಂಬಲಾಗಿದೆ. ಸುಮತಿ ಎಸ್. ಹೆಗ್ಡೆ ಅವರು ಬೆಳ್ತಂಗಡಿ ತಾಲೂಕು ವೇಣೂರು ನಿಟ್ಟಡೆ ಗ್ರಾಮದವರಾಗಿದ್ದು, ನಿವೃತ್ತ ಅಬಕಾರಿ ಸುಪರಿಡೆಂಟ್ ಸದಾಶಿವ ಹೆಗ್ಡೆ ಅವರ ಪತ್ನಿ, ಕಳೆದ ೯ ವರ್ಷಗಳಿಂದ ಜನತಾ ದಳ (ಜಾ) ಪಕ್ಷದಲ್ಲಿ ಗುರುತಿಸಿಕೊಂಡಿರುವ ಅವರು ಸ್ಥಳೀಯ ಮಟ್ಟದಿಂದ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿ ಪ್ರಸ್ತುತ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿದ್ದಾರೆ. ಪದವೀಧರೆಯಾಗಿರುವ ಅವರು ಈಗಾಗಲೇ ಕ್ಷೇತ್ರದಲ್ಲಿ ಗ್ರಾಮಗಳ ಭೇಟಿ ಪ್ರಾರಂಭಿಸಿದ್ದಾರೆ.
ಎಸ್‌ಡಿಪಿಐ ತೀರ್ಮಾನ ವಾಪಾಸಾತಿ ಸಾಧ್ಯತೆ:
ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತಾಲೂಕಿನಾಧ್ಯಂತ ಸುಮಾರು 10 ರಿಂದ 15 ಸಾವಿರ ಮತದಾರ ಸಕ್ರೀಯ ಸದಸ್ಯರನ್ನು ಹೊಂದಿದೆ. ಪಕ್ಷದ ಕಡೆಯಿಂದ ಈ ಬಾರಿ ಬೆಳ್ತಂಗಡಿ ಕ್ಷೇತ್ರದಿಂದ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಸಕ್ರೀಯವಾಗಿ ರಾಜಕಾರಣದಲ್ಲಿರುವ, ಸೋಜಾ ಎಲೆಕ್ಟ್ರಾನಿಕ್ಸ್ ಮಾಲಕ ಅಲ್ಫೋನ್ಸ್ ಫ್ರಾಂಕೋ ಅವರು ಸ್ಪರ್ಧಿಸುವುದೆಂದು ತೀರ್ಮಾನವಾಗಿದೆ. ಅಂತೆಯೇ ಅವರು ಈ ವಾರ ಪೂರ್ತಿ ಗ್ರಾಮಗಳ ಭೇಟಿ, ಘಟಕಗಳ ಸಂಪರ್ಕ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ಬಿಜೆಪಿಯಿಂದ ಹರೀಶ್ ಪೂಂಜ ಅವರು ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗುತ್ತಿರುವಂತೆ ಎಸ್‌ಡಿಪಿಐ ಪಕ್ಷದಲ್ಲೂ ಸಂಚಲನ ಮೂಡಿದೆ. ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಅಧಿಕೃತವಾಗಿ ಧ್ವನಿ ಎತ್ತುತ್ತಿರುವ ಎಸ್‌ಡಿಪಿಐ ತಾಲೂಕಿನಲ್ಲಿ ಮತ ವಿಭಜನೆಯನ್ನು ತಪ್ಪಿಸಲು ತಮ್ಮ ಸ್ಪರ್ಧಾ ನಿರ್ಧಾರದಿಂದ ವಾಪಾಸಾಗುವ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ಎ.20: ವಸಂತ ಬಂಗೇರರಿಂದ ನಾಮಪತ್ರ ಸಲ್ಲಿಕೆ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ:
ರಂಗೇರಿದ ಚುನಾವಣಾ ಕಣದಂತೆ ಎ. 20 ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಸಂತ ಬಂಗೇರ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಮಧ್ಯಾಹ್ನ ೧೨.೧೫ಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಅದಕ್ಕೂ ಪೂರ್ವಭಾಗಿ ಯಾಗಿ ಅಂದು ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿ ಅಂಬೇಡ್ಕರ್ ಭವನದದ ಬಳಿಯ ಮೈದಾನದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ಕೂಡ ಇಟ್ಟುಕೊಂಡಿದೆ. ಇಲ್ಲಿ ಸಭೆ ನಡೆಸಿದ ಬಳಿಕ ಮಿನಿ ವಿಧಾನ ಸೌಧದ ಚುನಾವಣಾ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ಪ್ರಚಾರ ಕಾರ್ಯ ನಡೆಯುತ್ತಿದ್ದು, ಬಹುತೇಕ ಎಲ್ಲಾ 241 ಬೂತ್‌ಗಳಿಂದಲೂ ಕಾರ್ಯಕರ್ತರು, ಮತದಾರರು, ಕಾಂಗ್ರೆಸ್ ಅಭಿಮಾನಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಎ.23 ರಂದು ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ:
ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ನಾಮಪತ್ರ ಸಲ್ಲಿಕೆಗೆ ಎ.23 ರಂದು ದಿನ ನಿಗಧಿಪಡಿಸ ಲಾಗಿದೆ. ಅಂದು ಕಾರ್ಯಕರ್ತರ ಬೃಹತ್ ಸಮಾವೇಶ ಕೂಡ ನಡೆಯಲಿದೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ. ಎಲ್ಲಾ ಬೂತ್‌ಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತ ರು, ಅಭಿಮಾನಿಗಳು, ಮತದಾರರು ಭಾಗಿಯಾಗಲಿದ್ದಾರೆ. ಗ್ರಾಮಾಂತರ ಮಟ್ಟದಿಂದ ಯುವ ಕಾರ್ಯಕರ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎನ್ನಲಾಗಿದೆ.

ಶಾಸಕ ಕೆ. ವಸಂತ ಬಂಗೇರ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ಅವರು ತಾಲೂಕಿನ ಪ್ರತಿಷ್ಠಿತ ಮುಗ್ಗ ಗುತ್ತು ಕೇದೆ ಸುಬ್ಬ ಪೂಜಾರಿ ಅವರ ಪುತ್ರರಾಗಿದ್ದು, ರಾಜ್ಯ ವಿಧಾನ ಸಭೆಗೆ ೫ ಬಾರಿ ಶಾಸಕರಾಗಿ ಆರಿಸಿ ಬಂದವರಾಗಿದ್ದಾರೆ. ಒಂದೇ ಮನೆತನದಿಂದ ೩ ಮಂದಿ ಶಾಸಕರನ್ನು ಈ ತಾಲೂಕಿಗೆ ಕೊಟ್ಟ ಕೀರ್ತಿ ಹೊತ್ತಿರುವ ಅವರು ೧೯೮೩ ರಲ್ಲಿ ಬಿಜೆಪಿ ಪಕ್ಷದ ಮೂಲಕ ವಿಧಾನ ಸಭೆ ಪ್ರವೇಶಿಸಿದ ಅವರು ೧೯೮೫ ಮತ್ತೆ ಬಿಜೆಪಿಯಿಂದ ಎರಡನೇ ಬಾರಿಗೆ ಶಾಸಕರಾಗಿ, ೧೯೯೪ರಲ್ಲಿ ಜನತಾ ಪಕ್ಷದಿಂದ ಮೂರನೇ ಬಾರಿಗೆ ಶಾಸಕರಾಗಿ, ಬಳಿಕ ನಡೆದ ರಾಜಕೀಯ ಸ್ಥಿತ್ಯಂತರದಿಂದಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಅವರು ಎರಡು ಮೂರು ಅವಧಿಯ ಸೋಲಿನ ಬಳಿಕ ೨೦೦೮ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಜಯ ತಂದುಕೊಟ್ಟಿದ್ದರು. ಆ ಬಳಿಕದ ೨೦೧೩ರ ಚುನಾವಣೆಯಲ್ಲಿ ಮತ್ತೊಮ್ಮೆ ಶಾಸಕರಾಗಿ ಆರಿಸಿ ಬರುವ ಮೂಲಕ ಒಟ್ಟು ೫ ಬಾರಿ ವಿಭಿನ್ನ ಪಕ್ಷಗಳಿಂದ  ಶಾಸಕರಾಗಿ ಆಯ್ಕೆಯಾಗಿ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಜೆಡಿಎಸ್ ಪಕ್ಷದಲ್ಲಿದ್ದ ಸಂದರ್ಭ ಅವರು ರಾಜ್ಯ ವಿಧಾನ ಸಭೆಯ ಮುಖ್ಯ ಸಚೇತಕರಾಗಿ ತಾಲೂಕಿಗೆ ಎರಡನೇ ಬಾರಿಗೆ ಗೂಟದ ಕಾರು ತಂದಿದ್ದರು. ಕೊನೆಯ ಅವಧಿಯಲ್ಲಿ ಇದೀಗ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ. ತಾಲೂಕಿನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದಾಗ ಅದರ ವಿರುದ್ಧ ವಿಧಾನ ಸೌಧದ ಒಳಗೆ ಮತ್ತು ಹೊರಗೆ ವಿಶಿಷ್ಟ ರೀತಿಯಲ್ಲಿ ಹೋರಾಟ ಸಂಘಟಿಸಿ ಪರಿಹಾರ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಕೊನೆಯ ಅವಧಿಯಲ್ಲಿ ಬೆಳ್ತಂಗಡಿಗೆ ಮಿನಿ ವಿಧಾನ ಸೌಧ ಕಟ್ಟಡ, ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ, ತಾಲೂಕಿನ ಪ್ರಮುಖ ಭಾಗಗಳಲ್ಲಿ ಸೇತುವೆಗಳ ನಿರ್ಮಾಣ, ಎಸ್.ಸಿ/ಎಸ್.ಟಿ ಕಾಲನಿ ಸೇರಿದಂತೆ ಹಲವೆಡೆಗೆ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ೯೪ ಸಿ ಮತ್ತು ಸಿ.ಸಿ ಯೋಜನೆಯಡಿ ಸಾವಿರಾರು ಕುಟುಂಬಕ್ಕೆ ಹಕ್ಕುಪತ್ರ ಒದಗಣೆ, ಬಿಪಿಎಲ್ ಕುಟುಂಬಗಳಿಗೆ ಕಾರ್ಡ್ ವಿತರಣೆ, ಹೀಗೆ ಅವರೇ ಹೇಳುವಂತೆ ಸುಮಾರು ೧ಸಾವಿರ ಕೋಟಿ ರೂ. ಗೂ ಮಿಕ್ಕಿದ ಅನುದಾನ ತಂದಿದ್ದು ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದೀಗ ಅವರು ಮತ್ತೆ ಜನತೆಯ ಮುಂದೆ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಚಾರದಲ್ಲಿ ನಿರತರಾಗಿದ್ದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 

ನ್ಯಾಯವಾದಿ ಹರೀಶ್ ಪೂಂಜ

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುತ್ತಣ್ಣ ಪೂಂಜ ಮತ್ತು ನಳಿನಿ ಪೂಂಜ ದಂಪತಿ ಪುತ್ರ ಹರೀಶ್ ಪೂಂಜ ಅವರ ಹೆಸರು ತಾಲೂಕು ಮಾತ್ರವಲ್ಲ ಜಿಲ್ಲೆಯಲ್ಲೂ ಈಗ ಪರಿಚಿತ. ಆರ್.ಎಸ್.ಎಸ್. ಹಾಗೂ ಸಂಘ ಪರಿವಾರದ ಎಲ್ಲ್ಲಾ ರಂಗಗಳಲ್ಲೂ ಗುರುತಿಸಿ ಕೊಂಡಿರುವ ಅವರು ಧಾರ್ಮಿಕ ಅಖಾಡಕ್ಕೂ ಇಳಿದು ಯಶಸ್ಸಿನ ಹೆಜ್ಜೆ ಇಡುತ್ತಾ ಈಗ ಪ್ರವೇಶಿಸಿದ್ದು ರಾಜಕೀಯ ಕ್ಷೇತ್ರಕ್ಕೆ.
ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಪದವಿಯ ಜೊತೆಗೆ, ಕಾನೂನು ಅಭ್ಯಾಸ ನಡೆಸಿ ರಾಜ್ಯ ಉಚ್ಚನ್ಯಾಯಾಲಯದಲ್ಲಿ ವಕೀಲರಾಗಿ, ಜೊತೆಗೆ ಓರ್ವ ಉದ್ಯಮಿಯಾಗಿಯೂ ಬೆಳೆದು ಬಂದಿದ್ದು ಧಾರ್ಮಿಕ ಕ್ಷೇತ್ರದ ಮೂಲಕ ದೇವಸ್ಥಾನ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಾಲೂಕಿನ ಮೂಲೆ ಮೂಲೆಗಳಲ್ಲೂ ತನ್ನದೇ ಆದ ಯುವ ಪಡೆ ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ.
ಎಬಿವಿಪಿ ಮೂಲಕ ವಿದ್ಯಾರ್ಥಿ ಹೋರಾಟ ಕ್ಷೇತ್ರದಲ್ಲಿ ಸಂಘಟನಾ ಚತುರತೆ ಮೆರೆದಿರುವ ಅವರು ಇಂದು ಹಲವಾರು ದೇವಸ್ಥಾನಗಳ ಜೀರ್ಣೋ ದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ. ಎ.ಬಿ.ವಿ.ಪಿ ತಾಲೂಕು ಪ್ರಮುಖ್ ಆಗಿ, ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಹ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್‍ಯಕಾರಿಣಿ ಸದಸ್ಯರಾಗಿ, ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವ ಸಮಿತಿ ಬೆಳ್ತಂಗಡಿ ಇದರ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮಂಗಳೂರು ವಿವಿ ಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸಂಚಾಲಕರಾಗಿ, ಬೆಳಗಾವಿ ನಗರ ಸಂಘಟನಾ ಕಾರ್ಯದರ್ಶಿಯಾಗಿ, ಲಿವ್ಡೋ ಆಯೋಗದ ಮುಂದೆ ಶಾಲಾ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯ ಮಹತ್ವದ ಕುರಿತು ವಾದ ಮಂಡಿಸಿ ವಿಜಯಿಯಾಗಿದ್ದರು.
ಗರ್ಡಾಡಿ ನಂದಿಬೆಟ್ಟ ದೇವಸ್ಥಾನ ಜೀರ್ಣೋದ್ಧಾರದ ಸಂದರ್ಭ ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರದ ಕೈಂಕರ್ಯಕ್ಕೆ ಅಡಿಯಿಟ್ಟ ಅವರು ಬಳಿಕ ಡೆಂಜೋಳಿ ಮಹಾಲಿಂಗೇಶ್ವರ ದೇವಸ್ಥಾನ, ಬಳೆಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾಗಿ, ಬೆಳ್ತಂಗಡಿ ಸಾರ್ವಜನಿಕ ಶ್ರೀ ಕೃಷ್ಣೋತ್ಸವ ಸಮಿತಿ, ಶಿಶಿಲ ಓಟ್ಲ ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಇಳಂತಿಲ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಪಡಂಗಡಿ ಶ್ರೀ ಸತ್ಯಸಾರ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಯಶಸ್ವಿ ಸಂಘಟಕ ಎಂಬ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಉತ್ತಮ ವಾಗ್ಮಿಯೂ ಆಗಿರುವ ಅವರು ಸಂಘ ಪರಿವಾರದ ಮೂಲಕ ಸ್ವಂತ ಪರಿಶ್ರಮದಿಂದ ಬೆಳೆದು ಬಂದಿದ್ದಾರೆ. ಇದೀಗ ಅವರ ಆಯ್ಕೆಯ ಮೂಲಕ ಯುವ ಸಮೂಹದಲ್ಲಿ ಹೊಸ ಉತ್ಸಾಹ ಮತ್ತು ಹುರುಪು ಬಂದಿದ್ದು ಮುಂದಕ್ಕೆ ಇದು ಅವರ ಸಂಘಟನಾತ್ಮಕ ಹೋರಾಟಗಳಿಗೆ, ರಾಜಕೀಯ ಭವಿಷ್ಯಕ್ಕೆ ಉತ್ತಮ ಭಾಷ್ಯ ಬರೆಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.