ಕುಸಿಯುತ್ತಿರುವ ಮೌಲ್ಯ, ಬದುಕಾಗುತ್ತಿದೆ ಅಸಹನೀಯ

ಬಾಬುಶೆಟ್ಟಿ .ಎಮ್.ನಾರಾವಿ

 ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಾಲ್ಕು ಮಂದಿ ಆದಾಯಕ್ಕಿಂತ ಹೆಚ್ಚು ವರಮಾನ ಹೊಂದಿರುವ ಉನ್ನತಾಧಿಕಾರಿಗಳ ಮನೆ ಕಛೇರಿ, ಇನ್ನಿತರ ಅವರಿಗೆ ಸಂಬಂಧಿಸಿದ ಸ್ಥಳಗಳಿಗೆ ದಾಳಿ ನಡೆಸಿದರು. ಕೋಟಿಗಟ್ಟಲೆ ಅಕ್ರಮ ಸಂಪತ್ತು ಪತ್ತೆಯಾಯಿತು. ಇದು ನಮ್ಮ ದೇಶದ ಎಲ್ಲೆಡೆ ನಿತ್ಯ ನಿರಂತರ ನಡೆಯುವಂತಹ ಕ್ರಿಯೆಯೇ ಆದರೂ ಭ್ರಷ್ಟಾಚಾರದ ಹಾವಳಿ, ಅಕ್ರಮ ಸಂಪತ್ತು ಗಳಿಕೆಯ ಮೋಹ ದಿನೇ ದಿನೇ ಹೆಚ್ಚುತ್ತಿದೆಯೇ ಹೊರತು ನಿಯಂತ್ರಣಕ್ಕೆ ಬರುತ್ತಿಲ್ಲ. ಮಾನವನ ದುರಾಸೆಯ ಪಿಡುಗಿನ ಬೃಹತ್ ರೂಪ ಇಂತಹ ದಾಳಿಗಳಲ್ಲಿ ಸುವ್ಯಕ್ತವಾಗುತ್ತದೆ. ಈ ಎಲ್ಲಾ ಉನ್ನತಾಧಿಕಾರಿಗಳು ಲಕ್ಷಗಟ್ಟಲೆ ಸಂಬಳ ಪಡೆಯುತ್ತಿದ್ದು ಅದರಲ್ಲಿಯೇ ವೈಭವದ ಜೀವನ ನಡೆಸಲು ಧಾರಾಳ ಅನುಕೂಲತೆಗಳಿವೆ. ಆದರೂ – ಇನ್ನೂ ಬೇಕು, ಸಾಲದು ಎಂಬ ಅತೃಪ್ತಿಯ ಆಮಿಷದ ತುಡಿತ ಅವರ ಬದುಕನ್ನು ದುರಂತಕ್ಕೆ ತಳ್ಳಿದೆ. ಸರ್ ಎಂ. ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿರುವಾಗ ಅವರ ಹತ್ತಿರದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಬಂಧುವೊಬ್ಬರು ತಮಗೊಂದು ಸರಕಾರದ ಕೆಲಸ ಕೊಡಿಸುವಂತೆ ಶಿಫಾರಸು ಮಾಡಬೇಕೆಂದು ಬೇಡಿಕೊಂಡರು. ಆದರೆ ಸ್ವಜನ ಪಕ್ಷಪಾತಕ್ಕೆ ದಿವಾನರ ಆತ್ಮಸಾಕ್ಷಿ ಅಡ್ಡಿಯಾಯಿತು. ಆದುದರಿಂದ ಅವರು ಕೆಲಸ ಕೊಡಿಸುವ ಪ್ರಯತ್ನ ಮಾಡದೆ, ಆ ಬಂಧುವಿನ ಬ್ಯಾಂಕ್ ಖಾತೆಗೆ ತನ್ನ ಸಂಬಳದಿಂದ ಪ್ರತಿ ತಿಂಗಳು ಐನೂರು ರೂಪಾಯಿ ಜಮೆಯಾಗುವಂತೆ ವ್ಯವಸ್ಥೆ ಮಾಡಿದರು. ಲಾಲ್ ಬಹದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದೂ ಬಾಡಿಗೆ ಮನೆ ವಾಸದಲ್ಲಿ ಸುಖ ಕಂಡರು. ತನ್ನ ಆರ್ಥಿಕ ಸ್ಥಿತಿಯನ್ನು ಉನ್ನತ ಮಟ್ಟಕ್ಕೇರಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಇಂತಹ ನಿಸ್ಪೃಹರು ದುಡಿದು ಬಾಳಿದ ನೆಲದಲ್ಲಿ ಇಂದು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ರಾರಾಜಿಸುತ್ತಿದ್ದು ಮೌಲ್ಯಗಳೆಲ್ಲ ನೆಲಕಚ್ಚಿರುವುದು ಎಂತಹ ವಿಪರ್ಯಾಸ!.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಫೋಷಣೆಯಾಗಿದೆ. ಇಂದು ಚುನಾವಣೆ ಎಂದರೆ ಹಣ, ಹೆಂಡ, ಆಮಿಷಗಳ ಸುರಿಮಳೆ! ಪ್ರತಿಯೊಬ್ಬ ಅಭ್ಯರ್ಥಿಗೆ 28 ಲಕ್ಷದ ಮಿತಿಯನ್ನು ಚುನಾವಣಾ ಆಯೋಗ ನಿಗದಿಪಡಿಸಿದೆ. ಆದರೆ ಈ ಮಿತಿಯೊಳಗೆ ನಿಲ್ಲುವವರು ಯಾರೂ ಇಲ್ಲ. ಹತ್ತು ಕೋಟಿಗೂ ಮಿಕ್ಕಿ ಹಣವನ್ನು ಓಟು ಖರೀದಿಸಲು ರಾಜಕೀಯ ಮುಂದಾಳುಗಳು ವ್ಯಯ ಮಾಡಲು ಸಿದ್ಧರಾಗಿದ್ದಾರೆ. ಓಟಿಗಾಗಿ ಹಣದ ಆಮಿಷ ಒಡ್ಡುವುದು, ಹಣ ಪಡೆದು ಅಥವಾ ಇನ್ನಿತರ ಲಾಭ ಪಡೆದು ಮತ ಹಾಕುವುದು ಎರಡೂ ಅಪರಾಧಗಳೇ. ಆಮಿಷಗಳಿಗೆ ಮನ ಸೋಲುವವರು ತಮ್ಮ ಮತದಾನದ ಪವಿತ್ರವಾದ ಹಕ್ಕನ್ನು ನಿಷ್ಪಕ್ಷಪಾತವಾಗಿ ನಿಭಾಯಿಸಲು ಸಾಧ್ಯವೆ? ಓಟಿಗಾಗಿ ನೋಟು ಕೊಟ್ಟು ಗೆದ್ದವರು ಉತ್ತಮ ಆಡಳಿತ ನಡೆಸಲು ಸಮರ್ಥರಾದಾರೆ? ಈ ಎಲ್ಲಾ ಕಾರಣಗಳಿಂದಲೇ ಅಯೋಗ್ಯರೂ, ಭ್ರಷ್ಟರೂ, ನೀತಿ ನಿಷ್ಠೆಯಿಲ್ಲದವರು ಆಯ್ಕೆಯಾಗಿ ಬರುತ್ತಾರೆ. ನಮ್ಮ ರಾಜಕೀಯ ರಂಗದಲ್ಲಿ ಈ ದುರಂತವನ್ನು ನಾವು ಅನುಭವಿಸುತ್ತಲೇ ಇದ್ದೇವೆ. ಯಾವುದೇ ಆಮಿಷಕ್ಕೂ ಆಕರ್ಷಿತರಾಗದೆ, ತಲೆಬಾಗದೆ, ತಮ್ಮದೇ ಆದ ನೀತಿ ನಿಷ್ಠೆಯಿಂದ ವಿಚಾರ ಜಾಗೃತಿಯುಳ್ಳವರು ಬಹು ಸಂಖ್ಯಾತರಾದಾಗ ಯೋಗ್ಯ ನಾಯಕರ ಆಯ್ಕೆ ಸಾಧ್ಯವಾಗಬಹುದು. ಹಾಗಾದಾಗ ಸ್ವಾರ್ಥಿ, ಅಯೋಗ್ಯ ರಾಜಕಾರಣಿಗಳ ಕಪಿಮುಷ್ಟಿಯಿಂದ ರಾಜಕೀಯ ಕ್ಷೇತ್ರವನ್ನು ಪಾರುಮಾಡಬಹುದು.
ಮುಖ್ಯವಾಗಿ ಯುವಜನತೆ ಈ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕಾಗಿದೆ. ಯುವಜನತೆ ಚಾರಿತ್ರ್ಯ ಶುದ್ಧರಾಗಿ ದೇಶ ನಿಷ್ಠೆಯ ವ್ರತಧಾರಿಗಳಾಗಿ ರಾಜಕೀಯಕ್ಕೆ ಇಳಿದರೆ ಆಶಾದಾಯಕ ಪರಿಸ್ಥಿತಿ ಮೂಡಬಹುದು. ಜಗತ್ತಿನ ಅತ್ಯಂತ ದೊಡ್ಡ ಯುವ ದೇಶ ಭಾರತ! ದೇಶದ ಒಟ್ಟು ಜನ ಸಂಖ್ಯೆಯಲ್ಲಿ ಯುವಜನರ ಪ್ರಮಾಣ ಶೇ.50ಕ್ಕಿಂತಲೂ ಹೆಚ್ಚು. ದೇಶದ ಭವಿಷ್ಯ ಈ ಯುವ ಜನರ ಮೇಲೆ ನಿಂತಿದೆ. ಆದರೆ ಯುವ ಜನತೆ ದುಷ್ಟ ಚಟ, ದುಷ್ಟ ಕೂಟಗಳಲ್ಲಿ ಸೇರಿಕೊಂಡು ತಮ್ಮ ಬದುಕನ್ನು ದಿಕ್ಕು ತಪ್ಪಿಸುತ್ತಿರುವುದು ಇಂದು ಕಂಡುಬರುತ್ತಿದೆ. ಒಂದು ಆಶ್ಚರ್ಯವೆಂದರೆ ಅಮೇರಿಕ ಇಂಗ್ಲೆಂಡಿನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರದ ಯುವಕ ಯುವತಿಯರು ಭಾರತದ ಯೋಗ ಧ್ಯಾನಗಳಲ್ಲಿ ಆಕರ್ಷಿತರಾದರೆ ಭಾರತೀಯ ಯುವಕ ಯುವತಿಯರು ಧೂಮಪಾನ, ಕುಡಿತ, ಡ್ರಗ್ಸ್ ಸೇವನೆ ಮುಂದಾಗುತ್ತಿದ್ದಾರೆ. ಆದುದರಿಂದ ಯುವ ಜನತೆಯ ಮೇಲೆ ವಿಶೇಷವಾದ ನಿಗಾ ಇಡಬೇಕಾಗಿದೆ. ಅವರಿಗೆ ಯೋಗ್ಯವಾದ ಮಾರ್ಗದರ್ಶನ, ನಮ್ಮ ದೇಶದ ನಿಜವಾದ ಪರಿಸ್ಥಿತಿಯ ಯಥಾದರ್ಶನ ಇವು ಅಗತ್ಯವಾಗಿ ಲಭ್ಯವಾಗಬೇಕಾಗಿದೆ. ಸ್ವಾಮೀಜಿಯೊಬ್ಬರ ಮಾತಿನಂತೆ ಜೀವನವೆಂದರೆ ಹೋರಾಟ! ಹೋರಾಟ ಯಾವುದಕ್ಕೆ? ತಮಗೆ ವಿರುದ್ಧವಾದ ಪರಿಸ್ಥಿತಿಗಳನ್ನು ಎದುರಿಸಿ ತಾವು ಬೆಳೆಯಬೇಕು, ಅದಕ್ಕಾಗಿ ಹೋರಾಡಬೇಕು.
ಸ್ವಾಮಿ ವಿವೇಕಾನಂದರ ಮಾತೊಂದು ಈ ಸಂದರ್ಭಕ್ಕೆ ಹೊಂದಿಕೆಯಾಗುತ್ತದೆ. “Whatever you shall be in the future, will be the result of what you think and do now” –  ಇಂದು ನೀನು ಏನು ಮಾಡುತ್ತಿ ಮತ್ತು ಏನು ಯೋಚಿಸುತ್ತಿ ಎಂಬುದರ ಪರಿಣಾಮವೇ ಭವಿಷ್ಯದಲ್ಲಿ ನಿನ್ನ ಜೀವನ ದಿನನಿತ್ಯದ ಜೀವನದಲ್ಲಿ ನಮ್ಮ ಆಲೋಚನೆ ಮತ್ತು ನಮ್ಮ ಕಾರ್ಯಾಚರಣೆ ಇವೇ ನಮ್ಮನ್ನು ರೂಪಿಸುವ ಪ್ರಧಾನ ಅಂಶಗಳು. ಸ್ವಾಮಿ ವಿವೇಕಾನಂದರು ನಮ್ಮ ಯುವ ಜನತೆಯ ಮೇಲೆ ಅಪಾರ ಭರವಸೆ ಇಟ್ಟಿದ್ದರು. ತಾರುಣ್ಯಮೇವ ಜೀವಸ್ಯ ಜೀವಿತಂ – ತರುಣಾವಸ್ಥೆಯೇ ಬದುಕಿನ ಸಾಧನೆಯ ವಸಂತಕಾಲ. ಬದುಕಿನ ಮೂರು ಅವಸ್ಥೆಗಳಾದ ಬಾಲ್ಯ, ಯೌವನ, ವೃದ್ಧಾಪ್ಯ- ಇವುಗಳಲ್ಲಿ ಉತ್ಸಾಹ, ಕ್ರಿಯಾಶೀಲತೆಯ ಪ್ರತೀಕವೇ ಯೌವನ. ಜೀವನದಲ್ಲಿ ಏನಾದರೂ ಸಾಧನೆ ಮಾಡುವುದಿದ್ದರೆ ಅದು ಈ ಹಂತದಲ್ಲಿಯೇ ಸಾಧ್ಯ.
ಆದುದರಿಂದ ಪ್ರಸ್ತುತ ಹತ್ತು ಹಲವು ಬಗೆಯ ಸಮಸ್ಯೆಗಳಿಂದ ದೇಶದ ಶಾಂತಿ, ನೆಮ್ಮದಿ ಹದಗೆಡುತ್ತಿರುವ ವಿಷಮ ವಾತಾವರಣದಲ್ಲಿ ಯುವ ಜನತೆ ಸಮಸ್ಯೆಯನ್ನು ಕೈಗೆತ್ತಿಕೊಂಡರೆ, ಪ್ರಯತ್ನಶೀಲತೆಯಿಂದ ಮುಂದುವರಿದರೆ ದೇಶಕ್ಕೆ ಅದೊಂದು ಹೊಸ ಬೆಳಕಾಗಿ ಪರಿಣಮಿಸುವುದು ನಿಶ್ಚಿತ!. ಕಟ್ಟುವೆವು ನಾವು ಹೊಸತು ನಾಡೊಂದನು, ರಸದ ಬೀಡೊಂದನು. ಎಂದು ಕವಿವರ್ಯ ದಿ. ಗೋಪಾಲಕೃಷ್ಣ ಅಡಿಗರು ಉದ್ಗರಿಸಿದಂತೆ ಯುವ ಶಕ್ತಿಯಿಂದ ಹೊಸ ನಾಡು ಕಟ್ಟುವ ಯಜ್ಞಕ್ಕೆ ಚಾಲನೆ ದೊರೆಯಲಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.