ನಕ್ಸಲ್ ಪೀಡಿತ ಮತಗಟ್ಟೆಗಳಿಗೆ ಡಿಸಿ, ಎಸ್ಪಿ ಭೇಟಿ.

 ದಿಡುಪೆ-ಎಳನೀರು ರಸ್ತೆ ಸಮಸ್ಯೆ ಪರಿಹಾರಕ್ಕೆ ಭರವಸೆ

ಬೆಳ್ತಂಗಡಿ : ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ನಕ್ಸಲ್ ಪೀಡಿತ ಮತಗಟ್ಟೆಗಳಿಗೆ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ ಎ.10ರಂದು ಭೇಟಿ ನೀಡಿ ಮತಗಟ್ಟೆಯಲ್ಲಿ ಮೂಲ ಸೌಕರ್ಯಗಳು ಹಾಗೂ ಜನರ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶಗಳಾದ ನಾರಾವಿ, ಕುತ್ಲೂರು, ನಾವರ, ಕರಿಯಾಲ, ದಿಡುಪೆ ಪ್ರದೇಶಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜನರ ಜೊತೆ ಮಾತುಕತೆ ನಡೆಸಿ ಮತದಾನಕ್ಕೆ ಬರುವಂತೆ ಸೂಚಿಸಿದರು. ಮಲವಂತಿಗೆ ಖಾಸಗಿ ಹಿ.ಪ್ರಾ ಶಾಲೆಗೆ ಭೇಟಿ ನೀಡಿದ ವೇಳೆ ಸಾರ್ವಜನಿಕರು ದಿಡುಪೆ-ಎಳನೀರು-ಸಂಸ್ಥೆ ರಸ್ತೆಯ ಬೇಡಿಕೆಯನ್ನು ಮುಂದಿಟ್ಟರು. ಮಲವಂತಿಗೆ ಗ್ರಾ.ಪಂ.ನ ಎಳನೀರು, ಗುತ್ಯಡ್ಕ, ಬಡಾಮನೆ ಪ್ರದೇಶವು ಕುದುರೆಮುಖ ರಾಷ್ಟ್ರೀಯ ವನ್ಯಜೀವಿ ವಲಯದಲ್ಲಿದ್ದು, ಮೂಲ ಸೌಕರ್ಯದಿಂದ ವಂಚಿತವಾಗಿದೆ. ಗ್ರಾ.ಪಂ.ಗೆ ಕೇವಲ 7 ಕಿ.ಮೀ ದೂರದಲ್ಲಿರುವ ಈ ಪ್ರದೇಶದ ಜನರು ಗ್ರಾ.ಪಂಕ್ಕೆ ಬರಬೇಕಾದರೆ 120 ಕಿ.ಮೀ ಸುತ್ತು ಬಳಸಿ ಬರಬೇಕು. ಇಲ್ಲಿ ಕಚ್ಚಾರಸ್ತೆ ಇದ್ದರೂ ದುರಸ್ಥಿ ಮಾಡಲು ಅರಣ್ಯ ಇಲಾಖೆ ಅಡ್ಡಿಯಾಗುತ್ತಿದೆ. ಇಲ್ಲಿ ರಸ್ತೆಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ತಾಪಸ ಜಯರಾಮ ಅಲಂಗಾರು ಸೇರಿದಂತೆ ನಾಗರಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಎಳನೀರಿಗೆ ಭೇಟಿ : ಜನರ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿಯವರು ಎಳನೀರು ಜನತೆಗೆ ಸಂಪರ್ಕ ಕಲ್ಪಿಸುವ ದಿಡುಪೆ-ಎಳನೀರು-ಸಂಸೆ ಸಂಪರ್ಕ ರಸ್ತೆ ಕಲ್ಪಿಸಲು ಕಾನೂನಾತ್ಮಕ ಸಮಸ್ಯೆಗಳು ಉಂಟಾಗುತ್ತದೆ. ವಾರದೊಳಗೆ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಎಸ್ಪಿ ಜೊತೆ ಎಳನೀರಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು. ವಿದ್ಯುತ್, ಒಳರಸ್ತೆ ಮತ್ತು ನೀರಿನ ಸಮಸ್ಯೆ ಬಗ್ಗೆ ನಾಗರಿಕರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಕರಿಯಾಲು ಶಾಲೆಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಮತಗಟ್ಟೆ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರು ಮಕ್ಕಿ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳ ಸುಮಾರು 300 ಮತದಾರರು ಮತಗಟ್ಟೆಗೆ ಬರಲು ತುಂಬಾ ದೂರ ನಡೆಯಬೇಕು ಅದಕ್ಕಾಗಿ ಹತ್ತಿರದ ಪ್ರದೇಶದಲ್ಲಿ ಮತಗಟ್ಟೆ ತೆರೆಯುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸ್ಥಳೀಯವಾಗಿ ಸರಕಾರಿ ಕಚೇರಿ ಲಭ್ಯತೆ ಗಮನಿಸಿ ಮುಂದಿನ ಲೋಕಸಭೆ ಚುನಾವಣೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆಯಿತ್ತು, ವಹಿಸಬೇಕಾದ ಕ್ರಮಗಳ ಬಗ್ಗೆ ಪಿಡಿಒಗೆ ಸೂಚನೆ ನೀಡಿದರು.
ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಚುನಾವಣಾಧಿಕಾರಿಗಳು, ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.