ಪದ್ಮನಾಭ ಪೂಜಾರಿ ಕೊಲೆಗೈದ ಕೊಯ್ಯೂರಿನ ಸಂಜೀವ ಪೂಜಾರಿಗೆ ಜೀವಾವಧಿ ಜೈಲು ಶಿಕ್ಷೆ ಪ್ರಕಟ

Advt_NewsUnder_1
Advt_NewsUnder_1

ಕೊಯ್ಯೂರು: ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ಕ್ಷುಲ್ಲಕ ಧ್ವೇಷದಿಂದ ಪದ್ಮನಾಭ ಪೂಜಾರಿ ಎಂಬವರನ್ನು ಕಳೆದ ವರ್ಷ ಎ. 3 ರಂದು ಕತ್ತಿಯಿಂದ ಕಡಿದು ಅಮಾನುಷವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಬಜ ನಿವಾಸಿ ಸಂಜೀವ ಪೂಜಾರಿ ಅವರಿಗೆ ಜೀವಾವಧಿ ಜೈಲು ಶಿಕ್ಷೆ ಪ್ರಕಟಿಸಿ ಮಂಗಳೂರಿನ ಜಿಲ್ಲಾ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಮೃತರು ಬಂಟ್ವಾಳ ತಾಲೂಕು ಕಸ್ಬಾ ಗ್ರಾಮದ ದರ್ಬೆ ನಿವಾಸಿ ಪದ್ಮನಾಭ ಪೂಜಾರಿ (52 ವ.) ಎಂಬವರಾಗಿದ್ದರು.
ತೀರ್ಪಿನಲ್ಲಿ ಏನೇನಿದೆ:
ಪ್ರಕರಣದಲ್ಲಿ ಒಟ್ಟು 15 ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಆರೋಪಿ ಸಂಜೀವ ಪೂಜಾರಿ ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಜೈಲು ಶಿಕ್ಷೆ, 15 ಸಾವಿರ ರೂ. ದಂಡ, ದಂಡದ ಮೊತ್ತದಲ್ಲಿ 10 ಸಾವಿರ ರೂ. ಗಳನ್ನು ಮೃತ ಪದ್ಮನಾಭ ಪೂಜಾರ ಅವರ ಪತ್ನಿ ಗುಲಾಬಿ ಅವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಘಟನೆ ಹೇಗೆ ನಡೆದಿತ್ತು?
2016 ರ ಏ. 3 ರಂದು ರಾತ್ರಿ 8 ಗಂಟೆಯ ವೇಳೆಗೆ ಬಜೆ ತಿರುವು ರಸ್ತೆ ಬಳಿಯ ಮುಳಿಹುಲ್ಲಿನ ತಂಗುದಾಣದ ಬಳಿ ರಸ್ತೆಯಲ್ಲೇ ಪದ್ಮನಾಭ ಪೂಜಾರಿ ಅವರನ್ನು ತಡೆದು ನಿಲ್ಲಿಸಿದ ಸಂಜೀವ ಪೂಜಾರಿ ಕುಡಿದ ಮತ್ತಿನಲ್ಲಿ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ಈ ಸಂದರ್ಭ ಸದ್ರಿ ರಸ್ತೆಯ ಮೂಲಕ ವಾಹನದಲ್ಲಿ ಬಂದ ಕೃಷಿಕರೊಬ್ಬರು ಘಟನೆಯನ್ನು ನೋಡಿ ಅಲ್ಲಿಂದ ಹಿಂದುರುಗಿ ಆದೂರ್‌ಪೆರಾಲ್‌ಗೆ ಹೋಗಿ ಮತ್ತೊಬ್ಬರಿಗೆ ವಿಷಯ ತಿಳಿಸಿ ಇಬ್ಬರೂ ಜೊತೆಯಾಗಿ ಬಂದು ನೋಡಿದಾಗ ಕೊಲೆಯಾಗಿರುವ ವ್ಯಕ್ತಿ ಪದ್ಮನಾಭ ಪೂಜಾರಿ ಎಂದು ತಿಳಿದು ಬಂತು. ಅವರು ಕೆಲಸ ಮಾಡಿಕೊಂಡಿದ್ದ ಬಾಲಕೃಷ್ಣ ಪೂಜಾರಿ ಅವರಿಗೆ ವಿಷಯ ತಿಳಿಸಿ ಅವರು ದಂಪತಿ ಸಮೇತ ಸ್ಥಳಕ್ಕೆ ಬಂದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದರು.
ಪರಿಸರದಲ್ಲಿ ಸಂಜೀವ ಪೂಜಾರಿ ಅವರ ಬಗ್ಗೆ ಅಷ್ಟೊಂದು ಒಳ್ಳೆಯ ಅಭಿಪ್ರಾಯವಿರಲಿಲ್ಲ. ತಂದೆ, ತಾಯಿ, ಪತ್ನಿ, ಮಕ್ಕಳು ಎಲ್ಲರೂ ಇದ್ದರೂ ಅವರು ಮಾತ್ರ ಪ್ರತ್ಯೇಕ ಜೋಪಡಿ ನಿರ್ಮಿಸಿ ಬೇರೆಯೇ ನೆಲೆಸಿದ್ದರು. ಈ ಹಿಂದೆ ಕೂಡ ಹಲವರಿಗೆ ಅವರು ಬೆದರಿಕೆಯೊಡ್ಡುವುದು, ಆಗಾಗ ಗಲಾಟೆ ಮಾಡುವುದು ಇತ್ಯಾಧಿಯಾಗಿ ಜನರಲ್ಲಿ ಭಯ ಮೂಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದವರಾಗಿದ್ದರು. ಹಿಂದೊಮ್ಮೆ ಸಂಜೀವ ಪೂಜಾರಿ ಮತ್ತು ಕೊಲೆಯಾದ ಪದ್ಮನಾಭ ಪೂಜಾರಿ ಅವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಹಲ್ಲೆ ಕೂಡ ನಡೆದಿತ್ತೆಂದು ಹೇಳಳಾಗಿದೆ. ಆ ವೇಳೆ, ನೀನು ನನ್ನ ಜಾಗಕ್ಕೆ ಬಂದಾಗ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಅವರು ಸವಾಲು ಹಾಕಿದ್ದರು ಎಂದು ಜನ ಹೇಳಿದ್ದರು. ಅದೇ ದ್ವೇಷ ಇಟ್ಟುಕೊಂಡು ಈ ಕೃತ್ಯ ನಡೆದಿರಬಹುದೆಂದು ಪರಿಸರದ ಜನ ಹೇಳಿಕೊಂಡಿದ್ದರು.
ಕೊಲೆಯಾದ ಪದ್ಮನಾಭ ಪೂಜಾರಿ ಅವರು ಪತ್ನಿ ಗುಲಾಬಿ, ಏಕೈಕ ಪುತ್ರಿ, ವಿವಾಹಿತೆ ಶ್ವೇತಾ ಹಾಗೂ ಬಂಧುವರ್ಗದವರನ್ನು ಅಗಲಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.