HomePage_Banner_
HomePage_Banner_
HomePage_Banner_

ಸಾಹಿತ್ಯದಿಂದ ಪ್ರಜ್ಞಾವಂತ ನಾಗರಿಕರ ಸೃಷ್ಠಿ : ಡಾ. ಪುಂಡಿಕಾ ಗಣಪಯ್ಯ ಭಟ್

Advt_NewsUnder_1

ಬೆಳ್ತಂಗಡಿ ತಾಲೂಕು 15 ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಾನವೀಯ ಮೌಲ್ಯಗಳ ಉದ್ದೀಪನ ಸಾಹಿತ್ಯದ ಗುರಿ: ಬಾಬು ಶೆಟ್ಟಿ ನಾರಾವಿ

ಸಾಹಿತ್ಯ ಮಾನವ ಸಮಾಜಕ್ಕೆ ಆತ್ಮ, ಜೀವನದ ಉಸಿರು, ಬದುಕಿಗೆ ಅತ್ಯಮೂಲ್ಯವಾದ ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸುವುದೇ ಸಾಹಿತ್ಯದ ಗುರಿ. ಮಾನವೀಯತೆಯಿಂದಲೇ ದೈವತ್ವದ ಮಾರ್ಗ ಗೋಚರಿಸುತ್ತದೆ ಇದೇ ಸಂಸ್ಕೃತಿ ಎಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಂ. ಬಾಬು ಶೆಟ್ಟಿ ನಾರಾವಿ ಹೇಳಿದರು. ಸಮ್ಮೇಳನದ ಗೌರವ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು ಕಲಿಕೆಯಿಂದ ಸೃಜನಶೀಲತೆ, ಸೃಜನಶೀಲತೆಯಿಂದ ಚಿಂತನೆ, ಚಿಂತನೆಯಿಂದ ಜ್ಞಾನ, ಇಂತಹ ಜ್ಞಾನದಿಂದ ವ್ಯಕ್ತಿಯು ಅತ್ಯಂತ ಎತ್ತರದ ಸ್ಥಾನಕ್ಕೆ ಏರುವರು ಎಂದು ಅಭಿಪ್ರಾಯ ಪಟ್ಟರು.
ಸಾಹಿತ್ಯವು ಸಮಾಜದ ಪ್ರತಿಬಿಂಬವಾಗಿದ್ದು, ಸಮಾಜವನ್ನು ಜಾಗೃತಿಯಲ್ಲಿಡಲು ನೆರವಾಗಬೇಕು, ಸಾಹಿತಿಗಳಿಗೆ ಬರೆದಂತೆ ಬದುಕುವ ನಿಷ್ಠೆ ಬೇಕು, ದ್ವೇಷ, ಮತ್ಸರದಂತಹ ಸಣ್ಣತನಗಳು, ವರ್ಗಬೇಧ, ವರ್ಣಬೇಧದಂತಹ ಸಮಾಜ ವಿರೋಧಿ ಧೋರಣೆಗಳಿಂದ ಸಾಹಿತಿಗಳು ಮುಕ್ತರಾಗಬೇಕು, ಬದುಕು ಮತ್ತು ಬರವಣಿಗೆಯಲ್ಲಿ ಹೊಂದಾಣಿಕೆ ಇರದೆ ಹೋದರೆ ಅಂತಹ ಸಾಹಿತ್ಯದಿಂದ ಸಮಾಜದ ಸ್ವಾಸ್ಥ್ಯಕ್ಕೆ ಸಹಾಯಕವಾಗಲಾರದು ಎಂದು ತಿಳಿಸಿದರು. ಕನ್ನಡ ನಾಡಿನಲ್ಲಿಯೇ ಕನ್ನಡದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಆಂಗ್ಲ ಭಾಷೆಯ
ವ್ಯಾಮೋಹ ಮಾತೃಭಾಷೆ ಕನ್ನಡಕ್ಕೆ ದೊಡ್ಡ ಹೊಡೆತ ನೀಡಿದೆ. ಆಂಗ್ಲ ಭಾಷೆಯಲ್ಲಿ ಕಲಿತರೆ ಮಾತ್ರ ಉದ್ಯೋಗ, ಜೀವನದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂಬ ಭಾವನೆ ಪೋಷಕರಲ್ಲಿ ಬಂದಿದೆ. ಈ ಸ್ಥಿತಿ ಬದಲಾಗಬೇಕು,. ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು, ಇತರ ರಾಜ್ಯಗಳ ಜನರಂತೆ ಮಾತೃ ಭಾಷಾ ಪ್ರೇಮ ಹೆಚ್ಚಬೇಕು, ಕನ್ನಡ ಭಾಷೆಯ ಭವಿಷ್ಯ ನಮ್ಮ ವಿದ್ಯಾರ್ಥಿಗಳ ಮೇಲೆ, ಶಿಕ್ಷಣ ವ್ಯವಸ್ಥೆಯ ಮೇಲೆ ನಿಂತಿದೆ. ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯಾಭಿರುಚಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದು ಸಲಹೆಯಿತ್ತರು.

ಬೆಳ್ತಂಗಡಿ: ತುಳುನಾಡು ಬಹುಭಾಷಿಗರ ಬೀಡಾಗಿದ್ದರೂ, ಇಲ್ಲಿ ಕನ್ನಡ ಸಾಹಿತ್ಯ ಗಟ್ಟಿಯಾಗಿ ನೆಲೆಯಾಗಿದೆ. ಸಮಾಜ ಬಿಟ್ಟು ಸಾಹಿತ್ಯವಿಲ್ಲ, ಸಂಸ್ಕೃತಿ, ಕಲೆ, ಭಾಷೆ ಬೆಳೆಯಲು ಸಾಹಿತ್ಯ ಬೇಕು. ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆಯೂ ಸಾಧ್ಯವಿದೆ. ಪ್ರಜ್ಞಾವಂತ ನಾಗರಿಕರ ಸೃಷ್ಟಿ ಸಾಹಿತ್ಯ ಸಮ್ಮೇಳನಗಳ ಉದ್ದೇಶವಾಗಿದೆ ಎಂದು ಮೂಡಬಿದ್ರೆಯ ಹಿರಿಯ ಸಂಶೋಧಕರಾದ ಡಾ. ಪುಂಡಿಕಾ ಗಣಪಯ್ಯ ಭಟ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆ ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನ ಸಂಯೋಜನಾ ಸಮಿತಿ ಇದರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ.25 ರಂದು ಶ್ರೀ ಮಂಜುನಾಥ ಸ್ವಾಮಿ ಕಲಾ ಭವನ ಬೆಳ್ತಂಗಡಿಯ `ಸೂರ್ಯನಾಥ ಕಾಮತ್ ವೇದಿಕೆ’ಯಲ್ಲಿ ಅದ್ದೂರಿಯಾಗಿ ನಡೆಯಿತು.
ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಪುಂಡಿಕಾ ಗಣಪಯ್ಯ ಭಟ್ ಅವರು ನಮ್ಮ ನಾಡು ಬಹುಭಾಷಿಕರ ನಾಡಾಗಿದ್ದು, ನಮ್ಮ ಭಾಷೆಯನ್ನು ಗೌರವಿಸುವುದರ ಜೊತೆಗೆ ಇತರ ಭಾಷಿಕರಿಗೂ ಅವಕಾಶ ನೀಡಿದ್ದೇವೆ. ಇಡೀ ದೇಶಕ್ಕೆ ಮಾದರಿಯಾದ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದೆ. ತುಳುನಾಡಿನಲ್ಲಿ ಕನ್ನಡ ಭಾಷೆ ಉಳಿಯುವಲ್ಲಿ ಯಕ್ಷಗಾನದ ಪಾತ್ರವೂ ಇದೆ. ಸಾಹಿತಿಗಳು, ಕವಿಗಳು ಯಾವುದೇ
ಧರ್ಮ, ಜಾತಿ, ಜನಾಂಗ, ಪಕ್ಷ, ಇದರ ಪ್ರತಿನಿಧಿಗಳಾಗಿ ವರ್ತಿಸಬಾರದು, ಸಮಾಜವೂ ಕೂಡಾ ಇವರನ್ನು ಈ ವರ್ಗದಲ್ಲಿ ನೋಡುವುದು ಕೆಟ್ಟ ಸಂಪ್ರಾದಾಯವಾಗಿದೆ ಇದು ಅತ್ಯಂತ ನೋವು ತರುವ ವಿಷಯವಾಗಿದೆ ಎಂದರು.
`ಚಾರುಮುಡಿ’ ಸಂಚಿಕೆ ಬಿಡುಗಡೆ
ಶಾಸಕ ಕೆ. ವಸಂತ ಬಂಗೇರ ಚಾರುಮುಡಿ ಸಂಚಿಕೆ ಮತ್ತು ನಿವೃತ್ತ ಅಧ್ಯಾಪಕ ಬಾಬಾ ಉಜಿರೆಯವರ `ಪೆದ್ದ ದೂಮನ ನೀತಿ ಶತಕ’ ಮತ್ತು ನಿವೃತ್ತ ಪ್ರಾಧ್ಯಾಪಕ ಸಾಹಿತಿ ಎನ್.ಜಿ ಪಟವರ್ಧನ್ ಅವರ `ಕೊರಡು ಕೊನರಿತು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಬೆಳೆಯಲು ಸರಕಾರ ವಿಶೇಷ ಪ್ರಯತ್ನಗಳನ್ನು ಮಾಡುತ್ತಿದೆ. ಸರಕಾರಿ ಕನ್ನಡ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು, ಕನ್ನಡ ಅಧ್ಯಯನ ಪೀಠಕ್ಕೆ ರೂ.5 ಕೋಟಿ ಅನುದಾನ ನೀಡಿದೆ ಎಂದು ತಿಳಿಸಿದರು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾತನಾಡಿ ಕನ್ನಡ ಭಾಷೆ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಬಹುದು. ಇಂದು ಐಟಿಬಿಟಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಸಂಸ್ಕೃತಿಯ ಭಾವನೆ ಬೆಳೆಯುತ್ತಿದೆ. ಪ್ರತಿ ತಾಲೂಕು ಸಮ್ಮೇಳನದಂತೆ ಪ್ರತಿ ಊರಿನಲ್ಲಿಯೂ ಗೃಹ ಸಮ್ಮೇಳನಗಳು ನಡೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಯಶೋವರ್ಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಸಾಫ್ಟ್‌ವೇರ್ ಕಂಪೆನಿಯವರು ಕನ್ನಡ ಮಾತನಾಡುತ್ತಾರೆ. ಒಂದಲ್ಲ ಒಂದು ದಿನ ನಾವು ನಮ್ಮ ಮೂಲಕ್ಕೆ ಬರಲೇ ಬೇಕಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ. ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಬರೆಯುವ ಹವ್ಯಾಸ ಬೆಳೆಯಬೇಕು ಎಂದು ಸಲಹೆಯಿತ್ತರು.
ಬೆಳ್ತಂಗಡಿ ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ರಾಷ್ಟ್ರಧ್ವಜಾರೋಹಣ ಮತ್ತು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬೆಳ್ತಂಗಡಿ ವಾಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ತಾಲೂಕು ಸಂಯೋಜಕ ಜಯಾನಂದ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಬಂಟ್ವಾಳ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋಹನ್ ರಾವ್, ಪ್ರಧಾನ ಸಂಯೋಜನಾ ಕಾರ್ಯದರ್ಶಿ ಡಾ| ಸುಧೀರ್ ಪ್ರಭು, ಕೋಶಾಧ್ಯಕ್ಷ ಯಶವಂತ ಪಟವರ್ಧನ್, ಪ್ರಧಾನ ಸಂಚಾಲಕ ಕೃಷ್ಣಪ್ಪ ಪೂಜಾರಿ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಎಂ.ಪಿ ಶ್ರೀನಾಥ್, ಗೌರವ ಕಾರ್ಯದರ್ಶಿ ಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿ, ಅಶ್ರಫ್ ಆಲಿ ಕುಂಞಿ ಉಪಸ್ಥಿತರಿದ್ದರು.
ಬೆಳ್ತಂಗಡಿ ವಾಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ಉಜಿರೆ ಶ್ರೀ ಧ.ಮಂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ ಸ್ವಾಗತಿಸಿದರು. ಉದ್ಘಾಟಕರನ್ನು ರಾಜೇಶ್ ಎಸ್‌ಕೆಡಿಆರ್‌ಡಿಪಿ ಮತ್ತು ಸಮ್ಮೇಳನಾಧ್ಯಕ್ಷರನ್ನು ಪ್ರೋ| ಗಣಪತಿ ಭಟ್ ಕುಳಮರ್ವ ಪರಿಚಯಿಸಿದರು. ಶಿಕ್ಷಕ ಅಜಿತ್‌ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ, ಪರಿಷತ್‌ನ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.