HomePage_Banner_
HomePage_Banner_
HomePage_Banner_

ವಿಧಾನಸಭಾ ಚುನಾವಣೆ: ರಂಗೇರುತ್ತಿರುವ ಕಣ

ಶಾಸಕ ವಸಂತ ಬಂಗೇರರ ಪ್ರಾಬಲ್ಯ ಬಿಜೆಪಿ ಅಭ್ಯರ್ಥಿಗೆ ಸವಾಲು – ಜೆಡಿಎಸ್, ಬಿಎಸ್‌ಪಿ, ಎಸ್.ಡಿ.ಪಿ.ಐಯಿಂದಲೂ ಸ್ಪರ್ಧೆ – ಸಿಪಿಐ(ಎಂ)ನಲ್ಲಿ ಮುಂದುವರಿದ ಗೊಂದಲ

ಬಿಜೆಪಿ ಪಕ್ಷದಲ್ಲಿ ಪೈಪೋಟಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ಟಿಕೇಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಇವರ ನಡುವೆ ಟಿಕೇಟ್‌ಗಾಗಿ ಮುಸುಕಿನ ಗುದ್ದಾಟ ಆರಂಭಗೊಂಡಿದೆ. ರಂಜನ್ ಜಿ. ಗೌಡ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಂಗೇರರ ಎದುರು ಸ್ಪರ್ಧಿಸಿದ್ದವರು. ಈ ಬಾರಿ ಮತ್ತೆ ಸ್ಪರ್ಧಾಕಾಂಕ್ಷಿ ಯಾಗಿದ್ದಾರೆ. ಬಿಜೆಪಿ ಮಂಡಲ ಅಧ್ಯಕ್ಷರಾಗಿರುವ ಇವರು ತಾಲೂಕಿನಾದ್ಯಂತ ಓಡಾಟ ನಡೆಸಿ ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ನಿರತರಾಗಿದ್ದು, ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಅವರು ಪಕ್ಷದ ಟಿಕೇಟ್‌ಗಾಗಿ ಪ್ರಯತ್ನವನ್ನು ನಡೆಸುತ್ತಿರುವುದರ ಜೊತೆಗೆ ಪಕ್ಷದ ವರಿಷ್ಠರ ಮೇಲೆ ಅವರ ಬೆಂಬಲಿಗ ಪಕ್ಷದ
ತಾಲೂಕು ನಾಯಕರು ಒತ್ತಡ ಹಾಕಿ ರಂಜನ್ ಗೌಡರಿಗೆ ಟಿಕೇಟು ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಕೂಡಾ ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸ್ಪರ್ಧಾ ಆಕಾಂಕ್ಷಿಯಾಗಿದ್ದಾರೆ. ಟಿಕೇಟ್‌ಗಾಗಿ ಜನಮನ ಗೆಲ್ಲುವ ಪ್ರಯತ್ನವನ್ನು ಅವರು ಹಲವು ಸಮಯಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಯುವ ಸಮುದಾಯ ಹರೀಶ್ ಪೂಂಜರತ್ತ ಒಲವು ಹೊಂದಿರುವುದನ್ನು ಪಕ್ಷದ ನಾಯಕರು ಗುರುತಿಸಿದ್ದಾರೆ, ಇದರಿಂದಾಗಿ ಅವರಿಗೆ ಟಿಕೇಟ್ ದೊರೆಯುವ ಎಲ್ಲಾ ಸಾಧ್ಯತೆಗಳಿವೆ ಎಂಬ ಚರ್ಚೆ ಯುವ ಕಾರ್ಯಕರ್ತರ ನಡುವೆ ನಡೆಯುತ್ತಿದೆ.
ಈ ಇಬ್ಬರ ನಾಯಕರ ಬೆಂಬಲಿಗ ಯುವಕರ ಬಣ ತಾಲೂಕಿನಲ್ಲಿ ಸೃಷ್ಟಿಯಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಟಿಕೇಟ್ ಯಾರಿಗೆ ನೀಡಬೇಕು ಎಂಬ ಬಗ್ಗೆ `ಓಟು’ ಮಾಡಿ ಎಂದು ಮನವಿ ಮಾಡಿ, ಫಲಿತಾಂಶವನ್ನು ಪ್ರಕಟಿಸಿ, ಜಿಲ್ಲೆ, ರಾಜ್ಯ ನಾಯಕರ ಗಮನವನ್ನು ಸೆಳೆಯುವ ಪ್ರಯತ್ನಗಳನ್ನು ಮಾಡುತ್ತಿದೆ. ಇಬ್ಬರು ಯುವ ನಾಯಕರ ನಡುವಿನ ಸ್ಪರ್ಧೆ ಬಿಜೆಪಿಯಲ್ಲಿ ಟಿಕೇಟ್ ಯಾರಿಗೆ ನೀಡಬೇಕು ಎಂಬುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ.
ಈ ನಡುವೆ ಯುವ ನಾಯಕರಿಬ್ಬರ ಪೈಪೋಟಿ ಮೂರನೇ ವ್ಯಕ್ತಿಗೆ ಲಾಭವಾಗುವುದನ್ನು ಅಲ್ಲಗಳೆಯುವಂತಿಲ್ಲ. ಈ ರೀತಿಯಾದರೆ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಭಾರಿ ಪ್ರತಾಪಸಿಂಹ ನಾಯಕ್ ಇವರಲ್ಲಿ ಒಬ್ಬರಿಗೆ ಟಿಕೇಟು ದೊರೆಯಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಈ ಬಾರಿ ಕಾರ್ಯಕರ್ತರ ಹಾಗೂ ಜನರ ಅಭಿಪ್ರಾಯ ಪಡೆದು ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿಯ ಆಯ್ಕೆ ನಡೆಸಲಾಗುವುದು ಎಂದು ಬಿಜೆಪಿ ವರಿಷ್ಠರು ಈಗಾಗಲೇ ಘೋಷಣೆ ಮಾಡಿದ್ದಾರೆ ಜೊತೆಗೆ ಆಂತರಿಕವಾಗಿ ಟಿಕೇಟು ನೀಡಿದರೆ ಯಾರು ಗೆಲ್ಲಬಹುದು ಎಂಬ ಸಮೀಕ್ಷೆಯನ್ನು ಈಗಾಗಲೇ ನಡೆಸಿರುವುದರಿಂದ ಬಿಜೆಪಿ ಪಕ್ಷದಲ್ಲಿ ಟಿಕೇಟ್ ಯಾರಿಗೆ? ಎಂಬ ಕುತೂಹಲ ಕಾರ್ಯಕರ್ತರನ್ನು ಕಾಡುತ್ತಿದೆ.

ಬೆಳ್ತಂಗಡಿ: ಮುಂದಿನ ಒಂದೆರಡು ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ರಂಗ ಬಿಸಿಯೇರಿದೆ. ಈ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಆಭ್ಯರ್ಥಿ ಎಂಬ ಬಗ್ಗೆ ಕಾರ್ಯಕರ್ತರ ನಡುವೆ ಬಿರುಸಿನ ಚರ್ಚೆ ಆರಂಭಗೊಂಡಿದೆ.
ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಳೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಬಂಗೇರರು ರಾಜ್ಯ ಮಂತ್ರಿ ಮಂಡಲದಲ್ಲಿ ಮಂತ್ರಿ ಪದವಿ ಅಲಂಕರಿಸಬಹುದು ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿತ್ತು. ಆದರೆ ಅವರು ಮಂತ್ರಿ ಪದವಿಯಿಂದ ವಂಚನೆಗೆ ಒಳಗಾಗಿ ಸ್ವಲ್ಪ ಸಮಯ ಮುನಿಸಿಕೊಂಡಿದ್ದರೂ, ನಂತರ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುದ್ದೆಯನ್ನು ಒತ್ತಾಯ ಪೂರ್ವಕವಾಗಿ ಅವರಿಗೆ ನೀಡಲಾಗಿತ್ತು. ಆರಂಭದಲ್ಲಿ ಇದನ್ನು ನಿರಾಕರಿಸಿದ ಬಂಗೇರರು ತನ್ನ ಕ್ಷೇತ್ರಕ್ಕೆ ರೂ.100 ಕೊಟಿ ಅನುದಾನ ನೀಡಬೇಕು ಎಂಬ ಬೇಡಿಕೆಯೊಂದಿಗೆ ಎಲ್ಲರ ಒತ್ತಾಯದಂತೆ ಹುದ್ದೆಯನ್ನು ಅಲಂಕರಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.
ಅವರ ರೂ.100 ಕೋಟಿ ಬೇಡಿಕೆಗೆ ಸ್ಪಂದಿಸಿದ ಮುಖ್ಯ ಮಂತ್ರಿಯವರು ಈಗಾಗಲೇ ರೂ.50 ಕೋಟಿ ಅನುದಾನವನ್ನು ಮಂಜೂರುಗೊಳಿಸಿರುವುದು ಬಂಗೇರರ ದಿಟ್ಟ ನಿಲುವಿಗೆ ಸಾಕ್ಷಿಯಾಗಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನಲ್ಲಿ ರೂ. 1ಸಾವಿರ ಕೋಟಿ ದಾಖಲೆ ಮೊತ್ತದ ಕಾಮಗಾರಿಯನ್ನು ನಿರ್ವಹಿಸಿರುವ ಶಾಸಕ ವಸಂತ ಬಂಗೇರ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದರು. ಆದರೆ ಕಾರ್ಯಕರ್ತರ ಒತ್ತಡ ಮತ್ತು ಸ್ವತಃ ಮುಖ್ಯ ಮಂತ್ರಿಯವರೇ ಸ್ಪರ್ಧಿಸುವಂತೆ ಒತ್ತಾಯಿಸಿದ್ದರಿಂದ ಅವರು ಅನಿವಾ ರ್ಯವಾಗಿ ತಮ್ಮ ನಿರ್ಧಾರವನ್ನು ಬದಲಾಯಿಸಿ ಮತ್ತೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಬಂಗೇರರನ್ನು ಮತ್ತೋಮ್ಮೆ ಈ ಕ್ಷೇತ್ರದಿಂದ ಶಾಸಕರಾಗಿ ವಿಧಾನ ಸಭೆಗೆ ಕಳುಹಿಸಿ ಕೊಡಿ ಎಂದು ಇತ್ತೀಚೆಗೆ ಮಿನಿ ವಿಧಾನ ಸೌಧ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯರು ಸಾರ್ವಜನಿಕ ವಾಗಿಯೇ ಘೋಷಣೆ ಯನ್ನು ಸಹ ಮಾಡಿದ್ದರು.
ಜೆಡಿಎಸ್, ಬಿಎಸ್‌ಪಿ ಸ್ಪರ್ಧೆ: ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಪಕ್ಷದ ತಾಲೂಕು ಅಧ್ಯಕ್ಷ ಪ್ರವೀಣ್ಚಂದ್ರ ಜೈನ್ ಹಾಗೂ ಜಿಲ್ಲಾ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ್ ಗೌಡ ಅವರ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಜೆಡಿಎಸ್ ತಾಲೂಕು ಸಮಿತಿ ಪದಾಧಿಕಾರಿಗಳು ಸಭೆ ನಡೆಸಿ ಇಬ್ಬರ ಹೆಸರನ್ನು ಆಯ್ಕೆ ಮಾಡಿ ರಾಜ್ಯ ಸಮಿತಿಗೆ ಕಳುಹಿಸಿ ಕೊಟ್ಟಿದ್ದಾರೆ.
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವೂ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಎಲ್ಲಾ ಸಿದ್ದತೆಯನ್ನು ನಡೆಸುತ್ತಿದೆ. ರಮೇಶ್ ರೆಂಕೆದಗುತ್ತು ಬಿಎಸ್‌ಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಎಸ್‌ಪಿ ಮೈತ್ರಿಯಾಗಿರುವುದರಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಈ ಎರಡು ಪಕ್ಷದಲ್ಲಿ ಯಾರಿಗೆ ಅವಕಾಶ ದೊರೆಯಬಹುದು ಎಂದು ಕಾದು ನೋಡಬೇಕಾಗಿದೆ.
ಎಸ್.ಡಿ.ಪಿ.ಐ ಸ್ಪರ್ಧೆ: ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕೂಡಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ನಡೆಸುತ್ತಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ತಾಲೂಕು ಅಧ್ಯಕ್ಷ ನವಾಜ್ ಪೆರಾಲ್ದರಕಟ್ಟೆ, ನಿಕಟಪೂರ್ವ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಇವರ ಹೆಸರು ಕೇಳಿ ಬರುತ್ತಿದ್ದು, ಅಧಿಕೃತ ಅಭ್ಯರ್ಥಿ ಯಾರೂ ಎಂಬುದು ಇನ್ನಷ್ಟೆ ಗೊತ್ತಾಗಬೇಕಾಗಿದೆ.
ಗೊಂದಲದ ಗೂಡಾದ ಕಮ್ಯೂನಿಸ್ಟ್: ತಾಲೂಕಿನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ( ಮಾರ್ಕ್ಸ್‌ವಾದಿ)ಈಗ ಗೊಂದಲದ ಗೂಡಾಗಿ ಪರಿಣಮಿಸಿದೆ. ಪಕ್ಷವನ್ನು ತಾಲೂಕಿನಲ್ಲಿ ಸಂಘಟಿಸಿದ ಬಿ.ಎಂ ಭಟ್‌ರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎನ್ನಲಾಗು ತ್ತಿದ್ದರೂ ಈ ಆದೇಶವನ್ನು ಅವರು ಒಪ್ಪದೆ ಅವರು ಎಂದಿನಂತೆ ವಿವಿಧ ಹೋರಾಟದ ಮೂಲಕ ಸುದ್ದಿಯ ಲ್ಲಿದ್ದಾರೆ. ಜನರಿಂದ ಆಯ್ಕೆಯಾದ ನನ್ನನ್ನು ಪಕ್ಷದಿಂದ ಉಚ್ಚಾಟಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಅವರು ಈಗಾಗಲೇ ಹೇಳಿಕೆಯನ್ನು ಸಹ ನೀಡಿದ್ದಾರೆ. ಇನ್ನೊಂದೆಡೆ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ನ್ಯಾಯವಾದಿ ಶಿವಕುಮಾರ್ ಅವರು ಕಾರ್ಯ ದರ್ಶಿಯಾಗಿ ಒಳಗೊಂಡ ಐದು ಮಂದಿಯ ಸಂಘಟನಾ ಸದಸ್ಯರಿರುವ ಭಾರತ ಕಮ್ಯೂನಿಸ್ಟ್ ಪಕ್ಷದ ಸಮಿತಿ ರಚನೆಯಾಗಿದೆ ಇದರಿಂದಾಗಿ ಕಮ್ಯೂನಿಸ್ಟ್ ಪಕ್ಷ ಈ ಬಾರಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆಯೇ ಎಂಬುದು ಮಾತ್ರ ನಿಗೂಢವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.