ಮಡಂತ್ಯಾರು-ಪಾಂಡವರಕಲ್ಲು ರೂ.4.03 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ರೂ.100 ಕೋಟಿ ಬೇಡಿಕೆಯಲ್ಲಿ ರೂ.50 ಕೋಟಿ ಮಂಜೂರು: ಬಂಗೇರ

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗೆ ತಾನು ಮುಖ್ಯಮಂತ್ರಿ ಸಿದ್ದರಾಮಯ್ಯರವರಲ್ಲಿ ರೂ.100 ಕೋಟಿ ನೀಡುವಂತೆ ಮಂಡಿಸಿದ ಬೇಡಿಕೆಗೆ ಅವರು ಸ್ಪಂದಿಸಿ ವಿಶೇಷ ಆಸಕ್ತಿಯಿಂದ ರೂ.50 ಕೋಟಿ ಅನುದಾನ ಮಂಜೂರು ಗೊಳಿಸಿದ್ದಾರೆ ಆದರೆ ಹಣಕಾಸು ಇಲಾಖೆ ರೂ.25 ಕೋಟಿಗೆ ಅನುಮತಿ ನೀಡಿದೆ ಈ ಕಾಮಗಾರಿಗಳ ಪಟ್ಟಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ ಎಂದು ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಫೆ.೨೦ರಂದು ಮಡಂತ್ಯಾರಿನಲ್ಲಿ ರೂ. 4.03 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಆಗಲಿರುವ ಮಡಂತ್ಯಾರು-ಪಾಂಡವರಕಲ್ಲು ರಕ್ತೇಶ್ವರಿಪದವು ಬಂಗೇರ ಕಟ್ಟೆ ರಸ್ತೆಗೆ ಶಿಲಾನ್ಯಾಸ ನೆರವೇರಿಸಿ ನಂತರ ಕೊರೆಯ ಕಂಪೌಂಡ್‌ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ಜನರಿಗೆ ಕೊಟ್ಟ ಭರವಸೆಯಂತೆ ಬೆಳ್ತಂಗಡಿ ತಾಲೂಕಿನಲ್ಲಿ ಈಗಾಗಲೇ 1ಸಾವಿರ ಕೋಟಿಯ ಅಭಿವೃದ್ಧಿ ಕಾಮಗಾರಿ ನಡೆಸಿ ಜನರು ಇಟ್ಟ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಂಡಿದ್ದೇನೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡಿಲ್ಲ. 21 ಸಾವಿರ ಮಂದಿಗೆ 94ಸಿ ಮತ್ತು 94ಸಿಸಿಯಲ್ಲಿ ಹಕ್ಕುಪತ್ರ ನೀಡಲಾಗಿದೆ. 35 ಸಾವಿರ ಮಂದಿಗೆ ಅಕ್ರಮ-ಸಕ್ರಮದಲ್ಲಿ ಹಕ್ಕುಪತ್ರ ನೀಡಲಾಗಿದೆ. ಕಳೆದ ವಾರ 7 ರಸ್ತೆ ಹಾಗೂ ಸೇತುವೆಗೆ ರೂ.17 ಕೋಟಿ ಮಂಜೂರಾಗಿದೆ. ಒಂದೇ ವರ್ಷದಲ್ಲಿ 23 ಸೇತುವೆಗಳ ನಿರ್ಮಾಣ, ಮಂಜೂರಾತಿ ನಡೆದಿದೆ. ಕೋಲೋಡಿ ರಸ್ತೆಗೆ ರೂ.11.50 ಕೋಟಿ ಮಂಜೂರಾಗಿ ಸೇತುವೆ ಮತ್ತು ರಸ್ತೆ ಕಾಮಗಾರಿ ನಡೆಯುತ್ತಿದೆ. ಬಾಂಜಾರು ಮಲೆಗೆ 1ಕಿ.ಮೀ ಕಾಂಕ್ರೀಟ್ ರಸ್ತೆಗೆ ನಿರ್ಮಾಣಕ್ಕೆ ಅನುದಾನ ದೊರಕಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಅವರು ಮಾತನಾಡಿ ಪಂಚಾಯತು ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಕೊಳವೆ ಬಾವಿಗಳ ಅಗತ್ಯತೆಯ ಬೇಡಿಕೆ ಇಟ್ಟರು. ಶಾಸಕರು ಎಷ್ಟು ಕೊಳವೆ ಬಾವಿಯ ಅಗತ್ಯತೆ ಇದೆ ಎಂದು ಕೇಳಿದಾಗ ಅಧ್ಯಕ್ಷರು ೫ ಬೇಕಾಗಿದೆ ಎಂದು ತಿಳಿಸಿದರು. ಶಾಸಕರು ಕೊಳವೆ ಬಾವಿಗೆ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿ ಪಂಪ್ ಪಂಚಾಯತ್‌ನಿಂದ ಅಳವಡಿಸಿ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಮಾಜಿ ಜಿ.ಪಂ. ಸದಸ್ಯ ಇಚ್ಚಿಲ ಸುಂದರ ಗೌಡ, ಗ್ರಾ.ಪಂ. ಸದಸ್ಯರಾದ ರಮೇಶ್ ಮೂಲ್ಯ, ಸತೀಶ್ ಶೆಟ್ಟಿ, ಸ್ಥಳೀಯರಾದ ಫಿಲೋಮಿನಾ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಸಾದ ಅಜಿಲ, ಇಂಜಿನಿಯರ್ ತೌಸೀಫ್ ಅಹಮ್ಮದ್, ತಾ.ಪಂ. ಮಾಜಿ ಸದಸ್ಯ ವಿನ್ಸೆಂಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಸತೀಶ್ಚಂದ್ರ, ಕಜೆಕಾರು ಸಿ.ಎ. ಬ್ಯಾಂಕ್ ಅಧ್ಯಕ್ಷ ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು ಉಪಸ್ಥಿತರಿದ್ದರು. ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ, ಅಭಿವೃದ್ಧಿ ಅಧಿಕಾರಿ ನಾಗೇಶ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಬಿ. ರಾಜಶೇಖರ ಶೆಟ್ಟಿ ಸ್ವಾಗತಿಸಿ, ಈ ಭಾಗದ ಜನರ ಬೇಡಿಕೆಗಳನ್ನು ಈಡೇರಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಪಾರೆಂಕಿ ದೇವಸ್ಥಾನದ ಅರ್ಚಕ ಟಿ.ಪಿ. ಶ್ರೀಧರ ರಾವ್ ಧಾರ್ಮಿಕ ವಿಧಿ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.