HomePage_Banner_
HomePage_Banner_

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ

ಪಡೀಲ್ ಮತ್ತು ಕನ್ನಡಿಕಟ್ಟೆಯವರಿಗೆ ಸುವರ್ಣ ರಂಗ ಸಮ್ಮಾನ್

 ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ ವತಿಯಿಂದ ಫೆ. 20 ರಂದು ಸುವರ್ಣ ಆರ್ಕೆಡ್ ಮುಂಭಾಗದಲ್ಲಿ ನಡೆದ 8ನೇ ವರ್ಷದ ಸುವರ್ಣಾಸ್ ಸಾಂಸ್ಕೃತಿಕ ಕಲಾವೈಭವ ಕಾರ್ಯಕ್ರಮದಲ್ಲಿ ತುಳು ರಂಗ ಭೂಮಿ ಮತ್ತು ಚಿತ್ರರಂಗದ ಮೇರು ಕಲಾವಿದ ನವೀನ್ ಡಿ ಪಡೀಲ್, ಖ್ಯಾತ ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರಿಗೆ 2018ನೇ ಸಾಲಿನ ಸುವರ್ಣ ರಂಗ ಸಮ್ಮಾನ್ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಬೃಹತ್ ವೇದಿಕೆಯಲ್ಲಿ ಭಾರೀ ಗಾತ್ರದ ಎಲ್‌ಇಡಿ ಪರದೆಯಲ್ಲಿ ಸನ್ಮಾನಿತರ ಸಾಧನೆಗಳ ತುಣುಕುಗಳು ಬಿತ್ತರಗೊಂಡು ಬಳಿಕ ಸನ್ಮಾನಿತರನ್ನು ಕೊಂಬು ಕಹಳೆಯ ನಿನಾದದೊಂದಿಗೆ ಗೌರವಯುತವಾಗಿ ವೇದಿಕೆಗೆ ಕರೆತರಲಾಯಿತು. ಆ ಬಳಿಕ ಅವರನ್ನು ವಿಶೇಷ ಸನ್ಮಾನ ಪೀಠದಲ್ಲಿ ಕುಳ್ಳಿರಿಸಿ ಶಾಲು, ಫಲ ಕಾಣಿಕೆ, ವರ್ಣರಂಜಿತ ಪೇಟಾ, ಸ್ಮರಣಿಕೆ ಮತ್ತು ಭಾರೀ ಗಾತ್ರದ ಸನ್ಮಾನಪತ್ರದೊಂದಿಗೆ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಕಲಾಭಿಮಾನಿಗಳು ಹಾಗೂ ಸನ್ಮಾನಿತರ ಅಭಿಮಾನಿಗಳ ಸಮ್ಮುಖ ಸನ್ಮಾನಿಸಿ ಪುರಸ್ಕರಿಸಲಾಯಿತು.
ಕನ್ನಡಿಕಟ್ಟೆ ಅವರ ಸನ್ಮಾನವನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಬಿಜೆಪಿ ವಿಭಾಗೀಯ ಪ್ರಭಾರಿ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಸುವರ್ಣ ಸಾಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಸುವರ್ಣ ಆರ್ಕೆಡ್ ಮಾಲಕ ವೈ ನಾಣ್ಯಪ್ಪ ಪೂಜಾರಿ ನೆರವೇರಿಸಿದರು.
ನವೀನ್ ಡಿ ಪಡೀಲ್ ಅವರ ಸನ್ಮಾನವನ್ನು ವಿಜಯರಾಘವ ಪಡುವೆಟ್ನಾಯರ ಸಹಿತ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ| ಹರ್ಷ ಸಂಪಿಗೆತ್ತಾಯ, ಧರ್ಮಸ್ಥಳ ಜಮಾಉಗ್ರಾಣದ ಹಿರಿಯ ಮುತ್ಸದ್ಧಿ ಭುಜಬಲಿ ಧರ್ಮಸ್ಥಳ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಇವರು ನಡೆಸಿಕೊಟ್ಟರು.
ನಾಲ್ಕು ಸಂಘಟನೆಗಳಿಗೆ ಸಾಂಸ್ಕೃತಿಕ ಗೌರವ ಸಮ್ಮಾನ್ : ಸಮಾರಂಭದಲ್ಲಿ ಕಳೆದ ದೀರ್ಘ
ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಕಲಾಸೇವೆ ಮತ್ತು ಸಾಧನೆಗಳನ್ನು ಮಾಡುತ್ತಿರುವ ಸಂಘಟನೆಗಳಾದ ಸಮೂಹ ಉಜಿರೆ, ಶ್ರೀಗುರು ಮಿತ್ರಸಮೂಹ ಬೆಳ್ತಂಗಡಿ, ಆಮಂತ್ರಣ ಪರವಾರ ಅಳದಂಗಡಿ ಮತ್ತು ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘ ಮುಂಡಾಜೆ ಇವರಿಗೆ ಸಾಂಸ್ಕೃತಿಕ ಗೌರವ ಸಮ್ಮಾನ್ ನಡೆಸಲಾಯಿತು. ಶಶಿ ಕೇಟರಿಂಗ್ ಸರ್ವಿಸ್ ಸಂಸ್ಥೆಯ ಮೂಲಕ ರಾಷ್ಟ್ರ ಮಾನ್ಯತೆ ಪಡೆದಿರುವ ಹೊಟೇಲ್ ಉದ್ಯಮಿ, ಗುರುವಾಯನಕೆರೆ ನಿವಾಸಿ ಶಶಿಧರ ಶೆಟ್ಟಿ ಅವರನ್ನು ಮತ್ತು ಬೆಳ್ತಂಗಡಿ ಉದಯವಾಣಿ ಹಿರಿಯ ವರದಿಗಾರರಾಗಿದ್ದು ಇದೀಗ ಕುಂದಾಪುರ ವಿಭಾಗಕ್ಕೆ ಪದೋನ್ನತಿಗೊಂಡು ವರ್ಗಾವಣೆಯಾಗುತ್ತಿರುವ ಲಕ್ಷ್ಮೀ ಮಚ್ಚಿನ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ದೇಶಾಭಿಮಾನ ಉಕ್ಕಿಸಿದ ಪುಣ್ಯಭೂಮಿ ಭಾರತ ನುಡಿನಾಡ ನಾಟ್ಯಾಮೃತ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾಷ್ಟ್ರದೇವೋಭವ ಖ್ಯಾತಿಯ ಮಂಗಳೂರು ಸನಾತನ ನಾಟ್ಯಾಲಯ ಅವರು ಪ್ರಸ್ತುತಪಡಿಸಿದ ಭಾರತ ನೆಲದ ಸೊಗಡಿನ ಪುಣ್ಯಭೂಮಿ ಭಾರತ ನುಡಿನಾಡ ನಾಟ್ಯಾಮೃತ ಕಾರ್ಯಕ್ರಮ ದೇಶಾಭಿಮಾನ ಉಕ್ಕಿಸುವ ರೀತಿಯಲ್ಲಿ ಸುಂದರವಾಗಿ ಮೂಡಿಬಂತು.
ವಿವಿಧ ವೇದಿಕೆಗಳಲ್ಲಿ ಮಿಂಚುತ್ತಿರುವ ಪುಟಾಣಿ ಪ್ರತಿಭೆಗಳಾದ ಕೃತಿ ಸನಿಲ್, ಕೃತಿ ಉಚ್ಚಿಲ್, ಮಾನಸ ಬೆಳ್ತಂಗಡಿ, ಮನೀಷಾ ಬೆಳ್ತಂಗಡಿ, ಸಾಕ್ಷಿ ಗುರುಪುರ, ಸಾನ್ವಿ, ಅಪೇಕ್ಷಾ ಮಂಗಳೂರು, ತೀರ್ಥ ಪೊಳಲಿ, ಅನ್ವಿಷಾ ವಾಮಂಜೂರು, ಸುಜ್ಞಾನ ಮೂಡಬಿದ್ರೆ, ಮಾನ್ವಿ ಮೂಡಬಿದ್ರೆ, ರಿತ್ವಿಕ್, ಪ್ರತೀಕ್ಷಾ ಇವರಿಂದ ಕಲಾ ಪ್ರೌಢಿಮೆಯ ಪ್ರದರ್ಶನ ಪ್ರಸ್ತುತಿಗೊಂಡವು.
ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಬಿಜೆಪಿ ತಾಲೂಕು ಯುವಮೋರ್ಚಾ ಅಧ್ಯಕ್ಷ ಸಂಪತ್ ಬಿ ಸುವರ್ಣ ಅವರ ಪರಿಕಲ್ಪನೆಯಂತೆ ಅವರ ಧರ್ಮಪತ್ನಿ ಸುಮಲತಾ ಎಸ್ ಸುವರ್ಣ ಅವರ ಪ್ರೋತ್ಸಾಹ, ತಂದೆ, ಖ್ಯಾತ ಬೀಡಿ ಉದ್ಯಮಿ ವೈ ನಾಣ್ಯಪ್ಪ ಪೂಜಾರಿ ಮತ್ತು ತಾಯಿ ಬೇಬಿ ಎನ್ ಪೂಜಾರಿ ಅವರ ಮಾರ್ಗದರ್ಶನದಂತೆ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ಹೊರತುಪಡಿಸಿ ಸನ್ಮಾನ ಮತ್ತು ಸಾಂಸ್ಕೃತಿಕ ಕಲಾವೈಭವಕ್ಕೇ ಮೊದಲ ಆದ್ಯತೆಯ ಮೂಲಕ ಮಾರ್ಗದರ್ಶಿ ಕ್ರಮ ಅನುಸರಿಸಲಾಗಿತ್ತು. ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಮತ್ತು ಚಂದ್ರಹಾಸ ಬಳೆಂಜ ಅವರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.