ಕುಡಿಯುವ ನೀರಿನ ಕಾಮಗಾರಿ ಪೂರ್ತಿಗೊಳ್ಳದಿದ್ದರೂ ಗುತ್ತಿಗೆದಾರನಿಗೆ ರೂ.30 ಲಕ್ಷ ಪಾವತಿ: ಸದಸ್ಯರ ಆಕ್ರೋಶ

ಕಳಪೆ ಮದ್ಯ ಮಾರಾಟ: ಪರಿಶೀಲನೆಗೆ ಸೂಚನೆ
ಬೆಳ್ತಂಗಡಿ ಸಂತೆಕಟ್ಟೆ ಸಮೀಪದ ಮದ್ಯದಂಗಡಿಯಲ್ಲಿ ಕಡಿಮೆ ದರ್ಜೆಯ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ವಸಂತ ಬಂಗೇರ ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿ ಬ್ಯಾಟರಿ ಹಾಕಿ ಕಡಿಮೆ ದರ್ಜೆಯ ಮದ್ಯ ತಯಾರಿಸಿ ಮಾರಾಟ ಮಾಡುತ್ತಿರುವ ದೂರುಗಳು ಬರುತ್ತಿದೆ. ಮದ್ಯ ಕುಡಿದ ಕೆಲವರಿಗೆ ಹೊಟ್ಟೆ ನೋವು ಪ್ರಾರಂಭವಾಗಿದೆ ಎಂದು ಹೇಳುತ್ತಿದ್ದಾರೆ. ಈ ರೀತಿ ಕಳಪೆ ಮದ್ಯ ತಯಾರಿಸಿ ಮಾರಾಟ ಮಾಡಿ ಯಾರನ್ನೂ ಕೊಲ್ಲುವ ಕೆಲಸ ಮಾಡುವುದು ಬೇಡ. ಇದರ ಬಗ್ಗೆ ಇಲಾಖೆ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಂಗೇರ ತಿಳಿಸಿದರು. ಈಗಾಗಲೇ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ ಎಂದು ಅಬಕಾರಿ ಇಲಾಖೆಯ ಸೌಮ್ಯಲತಾ ತಿಳಿಸಿದಾಗ ಏನಾದರೂ ಅನಾಹುತವಾದರೆ ನೀವೇ ಜವಾಬ್ದಾರಿ ಎಂದು ಶಾಸಕರು ಎಚ್ಚರಿಕೆ ನೀಡಿದರು.

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮ ಪಂಚಾಯತು ವ್ಯಾಪ್ತಿಯ ಕರಾಯ ಗ್ರಾಮದ ದೊಡ್ಡಕಲ್ಲು ಮತ್ತು ಮುಗ್ಗ ಎಂಬಲ್ಲಿ ಸುಮಾರು ರೂ.30 ಲಕ್ಷ ವೆಚ್ಚದ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಗುತ್ತಿಗೆದಾರರಿಗೆ ಪೂರ್ತಿ ಹಣ ಪಾವತಿಸಿರುವ ಬಗ್ಗೆ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಸೇರಿದಂತೆ ಸದಸ್ಯರು ಜ.17ರಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಕೆ. ವಸಂತ ಬಂಗೇರ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಉಪಸ್ಥಿತರಿದ್ದರು. ಸಭೆಯಲ್ಲಿ ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ಮಮತಾ ಶೆಟ್ಟಿ, ಸೌಮ್ಯಲತಾ, ನಮಿತಾ, ನಾಮನಿರ್ದೇಶನ ಸದಸ್ಯರಾದ ಅಭಿನಂದನ್, ಹರೀಶ್ ಬಂದಾರು, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
ಸಭೆಯಲ್ಲಿ ನೀರಾವರಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಶಾಹುಲ್ ಹಮೀದ್ ಅವರು ಮುಗ್ಗ ಮತ್ತು ದೊಡ್ಡಕಲ್ಲು ಎಂಬಲ್ಲಿ ಆ ಪ್ರದೇಶದ ನಾಗರಿಕರಿಗೆ ಕುಡಿಯುವ ನೀರಿಗಾಗಿ ರೂ.30 ಲಕ್ಷ ವೆಚ್ಚದ ಯೋಜನೆ ನಡೆದಿದೆ. ಆದರೆ ಜನರಿಗೆ ಒಂದು ಹನಿ ನೀರು ಇದುವರೆಗೂ ಸಿಕ್ಕಿಲ್ಲ. ಆದರೆ ಇದರ ಕಾಮಗಾರಿಯನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಕಾಮಗಾರಿಯ ಪೂರ್ತಿ ಹಣವನ್ನು ಪಾವತಿಸಲಾಗಿದೆ ಎಂದು ಇಲಾಖೆಯ ಸ.ಕಾ. ಇಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ಪೂರ್ತಿಯಾಗದೇ, ಕೆಲಸವೂ ಸಮರ್ಪಕವಾಗದೇ ಗುತ್ತಿಗೆದಾರಿಗೆ ಅಂತಿಮ ಬಿಲ್ಲು ನೀಡಿರುವುದು ಯಾಕೆ? ಎಂದು ಶಾಹುಲ್ ಹಮೀದ್ ಪ್ರಶ್ನಿಸಿದಾಗ ಮಾತನಾಡಿದ ಸ.ಕಾ. ಇಂಜಿನಿಯರ್ ಕಾಮಗಾರಿಯನ್ನು ಸರಿಪಡಿಸಿ ಗ್ರಾಹಕರಿಗೆ ನೀರು ಪೂರೈಕೆ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡುವುದಾಗಿ ಭರವಸೆಯಿತ್ತರು. ಶಾಸಕ ಕೆ. ವಸಂತ ಬಂಗೇರ ಮಾತನಾಡಿ ಗುತ್ತಿಗೆದಾರ ಸಮರ್ಪಕ ಕೆಲಸ ನಿರ್ವಹಿಸಿಲ್ಲ, ಇದನ್ನು ಶೀಘ್ರವಾಗಿ ಪೂರ್ತಿಗೊಳಿಸುವಂತೆ ಸೂಚಿಸಿದರು.
ಶಾಲೆಗಳಲ್ಲಿ ಕಾವಾಯತು: ತಾಲೂಕಿನ ಶಾಲೆಗಳ ವಾರ್ಷಿಕೋತ್ಸವದಲ್ಲಿ ಹೊರಗಿನಿಂದ ಜನ ಕೆರೆಸಿ ದಿಕ್ಸೂಚಿ ಭಾಷಣ ಮಾಡಿಸುವ ಅಗತ್ಯವೇನು? ಇದರ ಬಗ್ಗೆ ಶಿಕ್ಷಣ ಇಲಾಖೆ ಯಾವ ಕ್ರಮ ಜರುಗಿಸಿದೆ ಎಂದು ಶಾಹುಲ್ ಹಮೀದ್ ಕೇಳಿದಾಗ ಇದರ ಬಗ್ಗೆ ಸಂಬಂಧ ಪಟ್ಟ ಮುಖ್ಯ ಶಿಕ್ಷಕರಿಗೆ ನೋಟೀಸು ನೀಡಲಾಗಿದೆ ಎಂದು ಬಿಇಒ ಗುರುಪ್ರಸಾದ್ ತಿಳಿಸಿದರು. ಅಂಡಿಂಜೆ ಶಾಲೆಯಲ್ಲಿ ಕವಾಯತು ನಡೆದಿದೆ. ಇದಕ್ಕೆ ಅವಕಾಶ ಕೊಟ್ಟವರ ಮೇಲೆ ಕ್ರಮ ಜರುಗಿಸಿ, ತಾಲೂಕಿನ 50 ಶಾಲೆಗಳಲ್ಲಿ ಬೇರೆ, ಬೇರೆ ಚಟುವಟಿಕೆಗಳು ನಡೆಯುತ್ತಿದ್ದು, ಇದನ್ನು ಪರಿಶೀಲನೆ ನಡೆಸಿ ಎಂದು ಶಾಸಕ ಕೆ. ವಸಂತ ಬಂಗೇರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ರೇಷನ್ ಕಾರ್ಡ್ ಸಮಸ್ಯೆ: ಹೊಸಂಗಡಿಯಲ್ಲಿ ಅಂಚೆ ಪಿನ್‌ಕೋಡು ಬದಲಾವಣೆಯಾಗಿರುವುದರಿಂದ ಅನೇಕರಿಗೆ ರೇಷನ್ ಕಾರ್ಡ್ ದೊರೆತಿಲ್ಲ ಎಂದು ಧರಣೇಂದ್ರ ಕುಮಾರ್ ಮಾಹಿತಿ ನೀಡಿದರು. ಮುಂಡಾಜೆ ಸೇರಿದಂತೆ ತಾಲೂಕಿನ ಅನೇಕ ಸೊಸೈಟಿಗಳಲ್ಲಿ ಅಕ್ಕಿ ಪೂರೈಕೆ ಮಾಡುವಾಗ ಗೋಣಿಯಲ್ಲಿ 5 ಕೆ.ಜಿ.ಯಷ್ಟು ತೂಕದಲ್ಲಿ ಕಡಿಮೆ ಬರುತ್ತಿರುವುದು ನಿಂತಿಲ್ಲ ಎಂದು ಕೊರಗಪ್ಪ ನಾಯ್ಕ ತಿಳಿಸಿದಾಗ ಮಾತನಾಡಿದ ಶಾಸಕರು ಪ್ರತಿ ಸೊಸೈಟಿಗಳಿಗೆ ಹೋಗಿ ಚೆಕ್ ಮಾಡುವಂತೆ ಆಹಾರ ನಿರೀಕ್ಷಕರಿಗೆ ಸೂಚನೆ ನೀಡಿದರು. ಕೆಲವೊಂದು ಸೊಸೈಟಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಗ್ರಾಹಕರು ದಿನಗಟ್ಟಲೆ ಪಡಿತರಕ್ಕಾಗಿ ಕಾಯುವ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಎಲ್ಲರಿಗೂ ಈ ಹಿಂದಿನಂತೆ ಚೀಟಿ ಮಾಡಿ ಪಡಿತರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೆಸ್ಕಾಂಗೆ 366 ಟಿ.ಸಿ. ಮಂಜೂರಾಗಿದ್ದು, ಶಿಶಿಲ ಕಡೆಯಲ್ಲಿ ಲೋವೊಲ್ಟೆಜ್ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸ.ಕಾ. ಅಭಿಯಂತರ ಶಿವಶಂಕರ್ ಕೊರಗಪ್ಪ ನಾಯ್ಕ ಅವರ ಪ್ರಶ್ನೆಗೆ ಉತ್ತರಿಸಿದರು. ವೇಣೂರು ಮೆಸ್ಕಾಂ ಕೇಂದ್ರದ ಕಾಮಗಾರಿ ಇನ್ನೂ 15 ದಿನಗಳೊಳಗೆ ಪೂರ್ತಿಯಾಗಲಿದೆ ಎಂದು ಶಿವಶಂಕರ್ ಮಾಹಿತಿ ನೀಡಿದರು.
ಕೆ.ಎಸ್.ಆರ್.ಟಿ.ಸಿ. ಡಿಪ್ಪೋ: ಉಜಿರೆಯ ಅರಳಿ ಎಂಬಲ್ಲಿ ಕೆಎಸ್ಸಾರ್ಟಿಸಿ ಡಿಪ್ಪೋ ಜಾಗದ ಕುರಿತು ಇಂದಿನ ಸಭೆಯಲ್ಲೂ ಕೊರಗಪ್ಪ ನಾಯ್ಕ ವಿಷಯ ಪ್ರಸ್ತಾಪಿಸಿದರು. ಪ್ರಸ್ತಾಪಿತ ಜಾಗ ಅರಣ್ಯ ಇಲಾಖೆ ಎಂದು ಅಭಿಪ್ರಾಯಕ್ಕಾಗಿ ಪತ್ರ ಬರೆಯಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದಾಗ ಇದಕ್ಕೆ ಆಕ್ಷೇಪಿಸಿದ ಕೊರಗಪ್ಪ ನಾಯ್ಕ ಅವರು ಈ ಜಾಗ ಸರಕಾರಿ ಜಾಗ ನೆಡುತೋಪು ಎಂದು ದಾಖಲಾಗಿದೆ. ಇಲ್ಲಿ ಇಬ್ಬರಿಗೆ ಅಕ್ರಮ-ಸಕ್ರಮದಲ್ಲಿ ಜಾಗ ನೀಡಲಾಗಿದೆ ಎಂದು ಜಾಗದ ಆರ್.ಟಿ.ಸಿಯನ್ನು ಪ್ರದರ್ಶಿಸಿದರು. ನೆಡುತೋಪು ಅರಣ್ಯ ಜಾಗವಲ್ಲ ಇದು ಸರಕಾರಿ ಜಾಗ ಈ ಬಗ್ಗೆ ಪ್ರಸ್ತಾವನೆ ಕಳುಹಿಸಿ ಎಂದು ಶಾಸಕರು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದರೆ ಇದು ಅರಣ್ಯ ಇಲಾಖೆಗೆ ನೋಟೀಫೀಕೇಶನ್ ಆಗಿದೆ ಎಂದು ಬೆಳ್ತಂಗಡಿ ವಲಯಾರಣ್ಯಾಧಿಕಾರಿ ವಾದಿಸಿದರೂ ನಿರ್ಣಯ ಕೈಗೊಳ್ಳಲಾಯಿತು.
ಕುವೆಟ್ಟು ಗ್ರಾಮದ ಪುರಂದರ ಪೂಜಾರಿ ಎಂಬವರು ವಿದ್ಯುತ್ ಕಂಬದಿಂದ ಬಿದ್ದು ಈಗ ನಡೆದಾಡಲು ಸಾಧ್ಯವಿಲ್ಲದೆ ಮನೆಯಲ್ಲಿಯೇ ಇದ್ದಾರೆ ಇವರಿಗೆ ಇಲಾಖೆಯಿಂದ ಪರಿಹಾರ ನೀಡಬೇಕು ಎಂದು ಮಮತಾ ಶೆಟ್ಟಿ ಒತ್ತಾಯಿಸಿದರು. ಅವರು ಇಲಾಖೆಯ ಕೆಲಸ ಮಾಡುತ್ತಿದ್ದಾಗ ಬಿದ್ದದಲ್ಲ ಆದ್ದರಿಂದ ಇಲಾಖೆಯಿಂದ ಪರಿಹಾರ ಸಾಧ್ಯವಿಲ್ಲ ಎಂದು ಮೇಲಾಧಿಕಾರಿಗಳು ತಿಳಿಸಿರುವುದನ್ನು ಶಿವಶಂಕರ್ ಸಭೆಗೆ ವಿವರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಅವರಿಗೆ ಇಲಾಖೆಯಿಂದ ಪರಿಹಾರ ಕೊಡಿಸಲು ಆಗುವುದಿಲ್ಲ. ಅದಕ್ಕಾಗಿ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಪರಿಹಾರದ ಜೊತೆಗೆ ಅವರಿಗೆ ಇಲಾಖಾ ಕಛೇರಿಯಲ್ಲಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿದ್ದೇನೆ ಎಂದು ಭರವಸೆ ನೀಡಿದರು.
ಅರಣ್ಯ ಹಕ್ಕು ಸಮಿತಿಯಲ್ಲಿ ಧರ್ಮಸ್ಥಳದಲ್ಲಿ 6 ಮಂದಿಗೆ, ಕಳೆಂಜದಲ್ಲಿ 12 ಮಂದಿಗೆ, ಪಟ್ರಮೆಯಲ್ಲಿ 13 ಮಂದಿಗೆ ಹಕ್ಕುಪತ್ರಕ್ಕಾಗಿ ಸಲ್ಲಿಸಿದ ಅರ್ಜಿ ನಕ್ಷೆ ಇಲ್ಲ ಎಂದು ಹಿಂದೆ ಬಂದಿದೆ. ಇದಕ್ಕಾಗಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಅವರಿಗೆ ನಕ್ಷೆ ನೀಡಬೇಕು ಎಂದು ಕೊರಗಪ್ಪ ನಾಯ್ಕ ಆಗ್ರಹಿಸಿದರು. ಬಂದಾರಿನಿಂದ ಬೆಳಗ್ಗೆ 8 ಗಂಟೆ ಸರಿಯಾಗಿ ಬಸ್ಸು ಹೊರಡುವಂತೆ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಹುಲ್ ಹಮೀದ್ ತಿಳಿಸಿದರು. ಅನಾರು ಮತ್ತು ಕೊಯ್ಯೂರು ಉಣ್ಣಾಲು ಶಾಲೆಯ ಕೊಠಡಿ ಬೀಳುವ ಸ್ಥಿತಿಯಲ್ಲಿದ್ದು ಇದರ ದುರಸ್ಥಿ ಮಾಡಬೇಕು, ಬೆಳಾಲು ಸುರುಳಿ, ಸೌತಡ್ಕ ಮತ್ತು ಹಳ್ಳಿಂಗೇರಿ ಅಂಗನವಾಡಿಗಳ ಜಾಗದ ಆರ್.ಟಿ.ಸಿ.ಯಾಗಬೇಕು, ಶಿಕ್ಷಣ ಇಲಾಖೆಯ ಅತಿಥಿ ಶಿಕ್ಷಕರಿಗೆ ಗೌರವಧನ ಮಂಜೂರು ಮಾಡಬೇಕು, ಅರಸಿನಮಕ್ಕಿ ಸರಕಾರಿ ಆಸ್ಪತ್ರೆಯ ಸಮೀಪದ ಅಪಾಯಕಾರಿ ಮರಗಳನ್ನು 10 ದಿನಗಳ ಒಳಗೆ ತೆರವುಗೊಳಿಸಬೇಕು, ವೇಣೂರು ಅಂಬೇಡ್ಕರ್ ಭವನದ ಜಾಗದ ಆರ್‌ಟಿಸಿ ಮಾಡಿಕೊಡಬೇಕು, ಗುರುವಾಯನಕೆರೆ-ಉಜಿರೆ ತನಕದ ರಾಷ್ಟ್ರೀಯ ಹೆದ್ದಾರಿ ಬದಿಗೆ ಮಣ್ಣು ಹಾಕಬೇಕು ಎಂಬ ಬೇಡಿಕೆ ವ್ಯಕ್ತವಾಯಿತು.
ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಸ್ವಾಗತಿಸಿ, ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.