ಮಡಂತ್ಯಾರು ನವೀಕೃತ ಮಸೀದಿ ಉದ್ಘಾಟನೆ

ಎಲ್ಲ ಧರ್ಮಿಯರನ್ನೂ ಗೌರವಿಸುವ ಭಾರತದ ಬಲಿಷ್ಠ ಸಂವಿಧಾನವೇ ದೇಶದ ಶಕ್ತಿ : ಶಾಸಕ ಬಂಗೇರ

ಕ್ರೈಸ್ತ, ಹಿಂದೂ ಜಾಗದಲ್ಲಿ ಮಸೀದಿ ಕಾರ್ಯಕ್ರಮ
ದೀಪಕ್ ರಾವ್ ಕೊಲೆ ಕೃತ್ಯ ನಡೆದ ವಿಚಾರವಾಗಿ ಜ. ೪ ರಂದು ಜಿಲ್ಲೆಯಾದ್ಯಂತ ಪ್ರಕ್ಷುಬ್ಧ ವಾತಾವರಣ ನೆಲೆಸಿತ್ತು. ಆದರೆ ಮಡಂತ್ಯಾರಿನಲ್ಲಿ ಮಾತ್ರ ಮಸೀದಿ ಉದ್ಘಾಟನಾ ಕಾರ್ಯಕ್ರಮ, ಸೌಹಾರ್ದ ಸಂಗಮ, ಧಾರ್ಮಿಕ ಕಾರ್ಯಕ್ರಮಗಳು ಪರಸ್ಪರ ಎಲ್ಲ ಧರ್ಮಿಯರೂ ಒಂದು ಸೇರಿ ಸಾಂಗವಾಗಿ ನಡೆಯಿತು. ವಿಶೇಷವೆಂದರೆ ಮಸೀದಿಯ ಕಾರ್ಯಕ್ರಮದ ವೇದಿಕೆ ನಿರ್ಮಿಸಲು ಅನುವು ಮಾಡಿಕೊಟ್ಟವರು ಬಾಲಕೃಷ್ಣ ಶೆಟ್ಟಿ ಎಂಬವರು, ಮಹಿಳೆಯರಿಗೆ ಕುಳಿತುಕೊಳ್ಳಲು ಪ್ರತ್ಯೇಕವಾಗಿ ಅನುವು ಮಾಡಿಕೊಟ್ಟವರು ಜೋಜ್ ಅಂದ್ರಾದೆ ಅವರು. ಇದು ಸ್ಥಳೀಯವಾಗಿ ಭಾರೀ ಪ್ರಶಂಸೆಗೆ ಪಾತ್ರವಾಯಿತು. ಬಾಲಕೃಷ್ಣ ಶೆಟ್ಟಿ ಅವರನ್ನು ಶಾಸಕರ ಮೂಲಕ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಮಡಂತ್ಯಾರು: ಎಲ್ಲ ಧರ್ಮಗಳು ಒಳ್ಳೆಯದನ್ನೇ ಬೋಧಿಸುತ್ತದೆ, ಸುಂದರ ಭಾರತ ದೇಶದಲ್ಲಿ ಎಲ್ಲ ಜಾತಿ ಧರ್ಮ ಸಂಸ್ಕೃತಿ ಸಂಸ್ಕಾರದ ಜನ ಒಂದೇ ತಾಯಿಯ ಮಕ್ಕಳಂತೆ ಜೀವಿಸುತ್ತಿದ್ದಾರೆ. ಇದಕ್ಕೆ ಅವಕಾಶ ಇರುವ ಬಲಿಷ್ಠ ಸಂವಿಧಾನವೇ ಈ ದೇಶದ ಶಕ್ತಿ ಎಂದು ಶಾಸಕ ವಸಂತ ಬಂಗೇರ ಹೇಳಿದರು. ಮಡಂತ್ಯಾರಿನಲ್ಲಿ ಸುಸಜ್ಜಿತವಾಗಿ ನವೀಕರಣಗೊಂಡ ನೂರುಲ್ ಹುದಾ ಜುಮ್ಮಾ ಮಸೀದಿ ಮಡಂತ್ಯಾರು ಇದರ ಮಸೀದಿ ಉದ್ಘಾಟನೆ ನಿಮಿತ್ತ ಜ.4 ರಂದು ಹಮ್ಮಿಕೊಂಡಿದ್ದ ಸರ್ವಧರ್ಮಿಯರ ಸಮ್ಮಿಲನ ಮತ್ತು ಮಸೀದಿಯ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಜಿ.ಪಂ ಸದಸ್ಯ ಎಂ ತುಂಗಪ್ಪ ಬಂಗೇರ ಮಾತನಾಡಿ, ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಈ ದಿನ ಒಂದು ಕಡೆ ಪರಸ್ಪರ ಧರ್ಮದವರು ಓರೆಗಣ್ಣಿನಿಂದ ನೋಡುತ್ತಿರುವ ಸಂದರ್ಭದಲ್ಲಿ ಈ ಮಡಂತ್ಯಾರಿನಲ್ಲಿ ಈ ರೀತಿ ಎಲ್ಲ ಧರ್ಮಿಯರೂ ಒಂದೇ ವೇದಿಕೆಯಲ್ಲಿ ಕುಳಿತು ಪರಸ್ಪರ ಪ್ರೀತಿ ಹಂಚುವ ಕಾರ್ಯ ಮಾಡಬೇಕಾಗಿದ್ದರೆ ಈ ಮಸೀದಿಯಲ್ಲೀ ಏನೋ ಪವಾಡ ಇದೆ ಎಂದೇ ಅನಿಸುತ್ತಿದೆ ಎಂದರು. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಮಾತನಾಡಿ, ಭಾರತ ಎಂತಹಾ ಸೌಹಾರ್ದ ದೇಶ ಎಂಬುದನ್ನು ತಿಳಿಯಲು ಈ ದೇಶದಿಂದ ಹೊರ ಹೋದಾಗ ಗಮನಿಸಲು ಸಾಧ್ಯವಿದೆ, ಇದು ಎಲ್ಲ ಜಾತಿ ಧರ್ಮದವರಿಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟ ಅತ್ಯಂತ ಸುಂದರ ದೇಶ ಎಂದರು.
ಮುಖ್ಯ ಸಂದೇಶ ಭಾಷಣ ಮಾಡಿದ ಕಾರ್ಕಳ ಸರ್‌ಹಿಂದ್ ದಅವಾ ಕಾಲೇಜು ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಮಾತನಾಡಿ, ನಮಗೆ ಈಗ ನಮ್ಮ ಪ್ರದೇಶದಲ್ಲಿ ಭಯ ಇರೋದು ಯಾವುದೋ ಕಠೋರವಾದ ಕಾಡು ಪ್ರಾಣಿಯಿಂದಲ್ಲ, ನಮ್ಮಂತೆ ಇರುವ ಮನುಷ್ಯ ಪ್ರಾಣಿಯಿಂದ ಎಂಬುದು ಬೇಸರದ ಸಂಗತಿ, ನಮ್ಮೊಳಗೆ ಮಾನವೀಯತೆ ಜಾಗೃತಿಗೊಳ್ಳಬೇಕಿದೆ ಎಂದರು. ಮಡಂತ್ಯಾರು ಸೇಕ್ರಡ್ ಹಾರ್ಟ್ ಚರ್ಚ್‌ನ ಸಹಾಯಕ ಧರ್ಮ ಗುರು ರೆ. ಫಾ. ಆಲ್ವಿನ್ ಡಿಸೋಜಾ ಮಾತನಾಡಿ, ನಮ್ಮೊಳಗಿನ ಮಾನವೀ ಯತೆ ಹೊರ ಬರಬೇಕು. ಕ್ರೂರತ್ವ ನಾಶವಾಗಬೇಕು. ಅದಕ್ಕೆ ಮಡಂತ್ಯಾರಿನ ಈ ಮಸೀದಿ ಉದ್ಘಾಟನೆ ಕಾರ್ಯಕ್ರಮ ವೇದಿಕೆ ಯಾಗಿದೆ ಎನ್ನುವುದು ಸಂತೋಷ ಎಂದರು. ಮಡಂತ್ಯಾರು ಕಾಲೇಜಿನ ಪ್ರಾಧ್ಯಾಪಕ ಡಾ. ಎನ್.ಎಮ್. ಜೋಸೆಫ್ ಮಾತನಾಡಿ, ಧಾರ್ಮಿಕ ಕೇಂದ್ರಗಳು ನಮ್ಮೊಳಗೆ ನೈತಿಕ ಮೌಲ್ಯ ಗಳನ್ನು ಎತ್ತರಿಸು ಕೇಂದ್ರಗಳಾಗಬೇಕು. ಪರಸ್ಪರ ರನ್ನು ಪ್ರೀತಿಸಿ ಮುಂದುವರಿ ಯುವ ಸಾಮರಸ್ಯದ ಸಂದೇಶ ಇಲ್ಲಿ ದೊರೆಯ ಬೇಕು, ಒಳ್ಳೆಯವರಾಗುವ ಪ್ರಯತ್ನದ ಕರ್ಮಭೂಮಿ ಇದಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ, ಉದ್ಯಮಿ ನಝೀರ್ ವಹಿಸಿದ್ದರು.
ಅತಿಥಿಗಳಾಗಿದ್ದ ತಾ.ಪಂ. ಸದಸ್ಯ ಜೋಯೆಲ್ ಮೆಂಡೋನ್ಸಾ, ಪಾರೆಂಕಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಪ್ರ. ಅರ್ಚಕ ಶ್ರೀಧರ ರಾವ್ ಪೇಜಾವರ ಶುಭ ಕೋರಿದರು.
ವೇದಿಕೆಯಲ್ಲಿ ಮಾಲಾಡಿ ಗ್ರಾ.ಪಂ ಅಧ್ಯಕ್ಷ ಬೇಬಿ ಸುವರ್ಣ, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ, ಸಹಕಾರಿ ಸಂಘದ ಅಧ್ಯಕ್ಷ ಅರವೀಂದ ಜೈನ್, ಮಾಜಿ ಅಧ್ಯಕ್ಷ ಮಹಾವೀರ ಬಳ್ಳಾಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಬಿ. ರಾಜಶೇಖರ ಶೆಟ್ಟಿ ಮಡಂತ್ಯಾರು, ಗೋಪಾಲ ಶೆಟ್ಟಿ, ಜೆರಾಲ್ಡ್ ಕೊರೆಯ, ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು, ಮಾಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ ಪದ್ಮನಾಭ ಸಾಲ್ಯಾನ್, ಅಯ್ಯೂಬ್ ಮಹ್‌ಲರಿ, ಯಾಕೂಬ್ ಯೂಸುಫ್ ಹೊಸನಗರ, ನಝೀರ್ ಮದನಿ, ಉಪಸ್ಥಿತರಿದ್ದರು.
ಮಸೀದಿಯ ಪ್ರ. ಧರ್ಮಗುರು ಹಾಜಿ ಅಬ್ದುಲ್ ರಝಾಕ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಡಂತ್ಯಾರಿನಲ್ಲಿ ಎಲ್ಲ ಧರ್ಮಿಯರೂ ಒಂದೇ ತಾಯಿಯ ಮಕ್ಕಳಂತೆ ಜೀವಿಸುತ್ತಿದ್ದೇವೆ. ಇಸ್ಲಾಂ ಕೂಡ ಇದನ್ನೇ ಕಲಿಸುತ್ತದೆ. ಒಮ್ಮೆ ಪ್ರವಾದಿಯವರು ಮೃತದೇಹದ ಮೆರವಣಿಗೆಯೊಂದರ ವೇಳೆ ಎದ್ದು ನಿಂತು ಗೌರವ ಸಲ್ಲಿಸಿದರು. ಅವರ ಅನುಯಾಯಿಗಳು ಅದು ಹಿಂದೂವಿನ ಮೃತದೇಹ ಎಂದಾಗ, ಅದು ಮನುಷ್ಯನ ಮೃತದೇಹವಲ್ಲವೇ ಎಂಬುದಾಗಿ ಪ್ರತ್ಯುತ್ತ್ತರಿಸಿ ಗೌರವಿಸುವ ಸಂದೇಶವನ್ನು ಕಲಿಸಿಕೊಟ್ಟರು ಎಂದು ನೆನಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಾಸಕ ವಸಂತ ಬಂಗೇರರು, ಮಸೀದಿಗೆ ನಿರ್ಮಿಸಿಕೊಟ್ಟ ನೂತನ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆ ಗೊಳಿಸಿದರು.
ಬಳಿಕ ಮಸೀದಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾ ಯಿತು. ಮಸೀದಿ ಸಮಿತಿ ಪ್ರ. ಕಾರ್ಯ ದರ್ಶಿ, ನಿವೃತ್ತ ತಹಶೀಲ್ದಾರ್ ಅಬ್ದುಲ್ ರಹಿಮಾನ್ ಸಹಿತ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿದರು. ಲ| ಅಶ್ರಫ್ ಆಲಿಕುಂಞಿ ಮತ್ತು ಅಬ್ದುಲ್ ಬಶೀರ್ ಪರನೀರು ಕಾರ್ಯಕ್ರಮ ನಿರೂಪಿಸಿದರು. ರಶೀದ್ ಮಡಂತ್ಯಾರು ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.