HomePage_Banner_
HomePage_Banner_
HomePage_Banner_

ಲಾಯಿಲ ವೆಂಕಟರಮಣ ದೇವಸ್ಥಾನದಲ್ಲಿ `ಗುರುಸ್ಮರಣೆ’

ಗುರುಗಳ ನಿರಂತರ ಸೇವೆಯಿಂದ ಆತ್ಮೋನ್ನತಿ : ಶ್ರೀ ಕಾಶಿ ಮಠಾಧೀಶರು

ಬೆಳ್ತಂಗಡಿ: ನಮ್ಮ ಜೀವನಕ್ಕೆ ಬೇಕಾದ ಉತ್ತಮ ವಿಷಯಗಳನ್ನು, ಸಂಸ್ಕಾರ, ಮಾರ್ಗದರ್ಶನ ನೀಡಿದವರನ್ನು ನಾವು ಗುರುಗಳ ಸ್ಥಾನದಲ್ಲಿ ಕಾಣಬೇಕು. ಗುರುಗಳ ನಿರಂತರ ಸೇವೆಯಿಂದ ಕೈವಲ್ಯ ಪ್ರಾಪ್ತವಾಗುತ್ತದೆ ಎಂದು ಶ್ರೀ ಸಂಸ್ಥಾನ ಶ್ರೀ ಕಾಶೀ ಮಠಾಧೀಶರಾದ ಪುರಮಪೂಜ್ಯ ಶ್ರೀಮದ್ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದರು.
ಅವರು ಜ.5ರಂದು ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಸ್ತಿಕ ಸಮಾಜ ಬಾಂಧವರಿಂದ ನಡೆದ ಗುರು ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ನಮಗೆ ಶಿಕ್ಷಣ ನೀಡಿದವರು ಮಾತ್ರ ಗುರುಗಳಲ್ಲ, ನಮ್ಮ ಜೀವನಕ್ಕೆ ಸಂಸ್ಕಾರ ನೀಡಿದ ತಂದೆ, ತಾಯಿ ಹಾಗೂ ಉತ್ತಮ ವಿಚಾರಗಳನ್ನು ಕಲಿಸಿ ನಮ್ಮ ಬದುಕಿಗೆ ಪ್ರೇರಣೆ ನೀಡಿದ ಎಲ್ಲರೂ ಗುರುವಿನ ಸ್ಥಾನದಲ್ಲಿ ನಿಲ್ಲುತ್ತಾರೆ. ಗುರುಗಳ ನಿರಂತರ ಸೇವೆಯಿಂದ ಜೀವನದಲ್ಲಿ ಉನ್ನತ ಸ್ಥಾನಗಳು ದೊರೆತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಥಮ ಆಡಳಿತ ಮೊಕ್ತೇಸರರು ಹಾಗೂ 18 ವರ್ಷಗಳ ಕಾಲ ಶ್ರೀ ವೆಂಕಟರಮಣ ಸೇವಾ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಿ. ರಮೇಶ್ ಪೈ, ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ 10 ವರ್ಷ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಬಿ. ರಾಮದಾಸ ಪೈ, ಆಂತರಿಕ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸಿದ್ದ ಕಾಂತಾವರ ರಾಜೇಂದ್ರ ಕಾಮತ್, ಶ್ರೀ ವೆಂಕಟೇಶ ಭಜನಾ ಮಂಡಳಿಯ ಅಧ್ಯಕ್ಷರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಪಿ. ಸದಾಶಿವ ಕಾಮತ್ ಇವರನ್ನು ಸ್ವಾಮೀಜಿಯವರು ಅನುಗ್ರಹ ಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ವಿವೇಕಾನಂದ ಪ್ರಭು, ಭಜನೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಕಾಮತ್, ಸಂಚಾಲಕ ಗಣೇಶ್ ಪೈ, ಉಪಾಧ್ಯಕ್ಷ ಸದಾಶಿವ ಕಾಮತ್, ಕಾರ್ಯದರ್ಶಿ ಪ್ರಕಾಶ್ ಕುಡ್ವ, ಕನ್ನಾಜೆ ಲಕ್ಷ್ಮೀ ಮತ್ತು ರಾಯಪ್ಪ ಶ್ಯಾನುಭಾಗ್ ಟ್ರಸ್ಟ್‌ನ ಸುನಿಲ್ ಶೆಣೈ, ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ. ಸುಧೀರ್ ಭಟ್, ಶಶಿಧರ ಪೈ, ಗೋಕುಲ್‌ದಾಸ್ ಭಂಡಾರ್ಕರ್, ಕಾಂತಾವರ ಮಂಜುನಾಥ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಜಿಎಸ್‌ಬಿ ಪ್ರಮುಖ ವೇ| ಮೂ| ಚೇಂಪಿ ಶ್ರೀಕಾಂತ ಭಟ್, ವೇ| ಮೂ| ಶೃಂಗೇರಿ ಸುಧಾಕರ ಭಟ್, ಅರ್ಬೆಟ್ಟು ಮಾಧವ ಕಾಮತ್ ಗುರುಸ್ಮರಣೆ ಮಾಡಿದರು. ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ಪೂರ್ಣಕುಂಭ ಸ್ವಾಗತ: ಜ.4ರಂದು ಸಂಜೆ 7ಕ್ಕೆ ದೇವಸ್ಥಾನಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ಸಕಲ ಬಿರುದಾವಳಿ ಹಾಗೂ ಪೂರ್ಣ ಕುಂಭ ಸ್ವಾಗತದೊಂದಿಗೆ ದೇವಳಕ್ಕೆ ಬರಮಾಡಿಕೊಳ್ಳಲಾಯಿತು.
ಹತ್ತು ಸಮಸ್ತರಿಂದ ಶ್ರೀ ಗುರುವರ್ಯರ ಪಾದಪೂಜೆ, ಮಧ್ಯಾಹ್ನ ಸಂಸ್ಥಾನ ದೇವರಿಗೆ ಮಹಾಪೂಜೆ, ಶ್ರೀ ದೇವರಿಗೆ ಮಹಾಪೂಜೆ, ಗುರುಭಿಕ್ಷೆ, ಬ್ರಾಹ್ಮಣ
ಸಂತರ್ಪಣೆ ನಡೆಯಿತು.
ಜ.5ರಂದು ಬೆಳಗ್ಗೆ ಅಷ್ಟೋತ್ತರ ಶತನಾರಿಕೇಲ ಗಣಹವನ, ಮಧ್ಯಾಹ್ನ ಸ್ವಾಮೀಯವರ ದಿವ್ಯ ಹಸ್ತಗಳಿಂದ ಪೂರ್ಣಾಹುತಿ, ಪ್ರಸಾದ ವಿತರಣೆ ಶ್ರೀ ದೇವರಿಗೆ ಮಂಗಳಾರತಿ, ಗುರುಭಿಕ್ಷೆ ಬ್ರಾಹ್ಮಣ ಸಂತರ್ಪಣೆ ನಡೆಯಿತು. ಜ.6ರಂದು ಬೆಳಗ್ಗೆ ಶ್ರೀ ವೆಂಕಟರಮಣ ದೇವರಿಗೆ ಸ್ವಾಮೀಜಿಯವರಿಂದ ಪ್ರಸನ್ನ ಪೂಜೆ, ಮತ್ತು ಶತಕಲಶಾಭಿಷೇಕ ಮಧ್ಯಾಹ್ನ ಶ್ರೀ ದೇವರಿಗೆ ಮಂಗಳಾರತಿ ಗುರುಭಿಕ್ಷೆ ನಡೆಯಿತು. ಜ.7ರಂದು ಶ್ರೀದೇವಿ ಭೂದೇವಿ ಸಂಯೋಜನ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಸ್ವಾಮೀಜಿವರಿಂದ ತಪ್ತ ಮುದ್ರಾಧಾರಣೆ ಜ.೮ರಂದು ಬೆಳಗ್ಗೆ ದ್ವಾದಶ ಕಲಶಾಭಿಷೇಕ, ಸಾನ್ನಿಧ್ಯ ಹೋಮ, ಶ್ರೀದೇವರಿಗೆ ಮಹಾಮಂಗಳಾರತಿ, ಗುರುಭಿಕ್ಷೆ ಬ್ರಾಹ್ಮಣ ಸಂತರ್ಪಣೆ ನಡೆಯಿತು. ಮಧ್ಯಾಹ್ನ ಶ್ರೀ ಗುರುವರ್ಯರನ್ನು ಸಕಲ ಗೌರವಗಳೊಂದಿಗೆ ಬೆಂಗಳೂರು ಮೊಕ್ಕಾಮಿಗೆ ಬೀಳ್ಕೊಡಲಾಯಿತು.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.