ಎಲ್ಲಾ ಇಲಾಖೆಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅಧಿಕಾರಿಗಳಿಗೆ ಸೂಚನೆ

ಮುಖ್ಯ ಮಂತ್ರಿ ಹೆಲಿಕಾಪ್ಟರ್  ಮೂಲಕ ಬೆಳ್ತಂಗಡಿಗೆ
ಮುಖ್ಯಮಂತ್ರಿಯವರು ಶಿವಮೊಗ್ಗದಿಂದ ಬೆಳಗ್ಗೆ 10.40ಕ್ಕೆ ಹೆಲಿಕಾಪ್ಟರ್ ಮೂಲಕ ಬೆಳ್ತಂಗಡಿಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಯವರು ಸಭೆಗೆ ಮಾಹಿತಿ ನೀಡಿದರು.
ಅವರು ಪ್ರಥಮವಾಗಿ ನಗರ ಪಂಚಾಯತ್‌ನ ಕುಡಿಯುವ ನೀರಿನ ಕಾಮಗಾರಿಯನ್ನು ಉದ್ಘಾಟಿಸುವರು. ಬಳಿಕ ಬೆಳ್ತಂಗಡಿಯ ಮಿನಿ ವಿಧಾನ ಸೌಧ ಸೇರಿದಂತೆ ತಾಲೂಕಿನ ವಿವಿಧ ಕಡೆಗಳ ಒಟ್ಟು 76 ಕೋಟಿ ವೆಚ್ಚದ 17 ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ಒಂದೇ ಕಡೆ ನೆರವೇರಿಸುವರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ 1800 ಫಲಾನುಭವಿಗಳಿಗೆ ಸರಕಾರದ ವಿವಿಧ ಸೌಲಭ್ಯಗಳ ವಿತರಣೆಯನ್ನು ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ಬೆಳ್ತಂಗಡಿ : ಜ.7ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬೆಳ್ತಂಗಡಿಗೆ ಬರುವ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳು ತಮ್ಮ ಇಲಾಖೆಯ ಐದು ವರ್ಷದ ಕಾರ್ಯಕ್ರಮಗಳ ಸಿದ್ಧತೆ ಜೊತೆ ಎಲ್ಲಾ ಇಲಾಖೆಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು.
ಅವರು ಡಿ.30ರಂದು ಬೆಳ್ತಂಗಡಿ ತಾಲೂಕಿಗೆ ಭೇಟಿ ನೀಡಿ ಇಲ್ಲಿಯ ತಾಲೂಕು ಪಂಚಾಯತು ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿಗಳ ಸಭಾ ಕಾರ್ಯಕ್ರಮದ ವೇದಿಕೆ ರಚನೆ ಬಗ್ಗೆ ಲೋಕೋಪಯೋಗಿ ಇಲಾಖೆ ನೇತೃತ್ವ ವಹಿಸಿಕೊಳ್ಳಬೇಕು. ಸಭೆಗೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ನಗರ ಪಂಚಾಯತು ಮಾಡಬೇಕು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತು ಮಾಡಿ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳ ಬೇಕು. ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆಯ 94ಸಿ, 94ಸಿಸಿಯ ಫಲಾನುಭವಿಗಳು, ಶಿಕ್ಷಣ ಇಲಾಖೆ, ಬಿಸಿಎಂ ಇಲಾಖೆ, ಶಿಶುಅಭಿವೃದ್ಧಿ ಯೋಜನೆ, ತಾಲೂಕು ಪಂಚಾಯತು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಎಲ್ಲಾ ಇಲಾಖೆಗಳು ಸರಕಾರದ ಯೋಜನೆಗೆ ಫಲಾನುಭವಿಗಳ ಆಯ್ಕೆ
ಮಾಡಿ ಆ ದಿನ ಎಲ್ಲರಿಗೂ ಸೌಲಭ್ಯ ವಿತರಿಸಲು ವ್ಯವಸ್ಥೆ ಮಾಡಬೇಕು. ಫಲಾನುಭವಿಗಳು ವೇದಿಕೆಗೆ ಬಂದು ಮುಖ್ಯಮಂತ್ರಿಯವರಿಂದ ಸೌಲಭ್ಯ ಪಡೆಯಲು ಎಲ್ಲಾ ವ್ಯವಸ್ಥೆಯನ್ನು ಮಾಡಬೇಕು. ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಇಲಾಖೆಗಳು ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.
ಶಾಸಕ ಕೆ. ವಸಂತ ಬಂಗೇರ ಮಾತನಾಡಿ ಎಲ್ಲಾ ಇಲಾಖೆಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಎಲ್ಲಾ ಇಲಾಖೆಗಳ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ ಮೂರ್ತಿ, ತಹಶೀಲ್ದಾರ್ ಸಣ್ಣ ರಂಗಯ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ ಅಜಿಲ, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಆರ್. ನರೇಂದ್ರ, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ತಾಲೂಕು ಸಂಯೋಜಕ ಜಯಾನಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸ್ಥಳ ಪರಿಶೀಲನೆ: ಮುಖ್ಯ ಮಂತ್ರಿಯವರು ಶಿವಮೊಗ್ಗದಿಂದ ಹೆಲಿಕಾಪ್ಟರ್ ಮೂಲಕ ಬೆಳ್ತಂಗಡಿಯ ಜ್ಯೂನಿಯರ್ ಕಾಲೇಜು ಕ್ರೀಡಾಂಗಣಕ್ಕೆ ಬಂದು ಇಳಿಯಲಿರುವುದರಿಂದ ಜಿಲ್ಲಾಧಿಕಾರಿಯವರು ಕಾಲೇಜು ಕ್ರೀಡಾಂಗಣವನ್ನು ವೀಕ್ಷಿಸಿದರು. ನಂತರ ಬೆಳ್ತಂಗಡಿ ಕುಡಿಯುವ ನೀರಿನ ಕಾಮಗಾರಿ, ಬೆಳ್ತಂಗಡಿ ಮಿನಿ ವಿಧಾನ ಸೌಧದ ಕಾಮಗಾರಿಯ ಪರಿಶೀಲನೆ ನಡೆಸಿ, ಸಭಾ ಕಾರ್ಯಕ್ರಮ ನಡೆಯುವ ತಾಲೂಕು ಕ್ರೀಡಾಂಗಣವನ್ನು ವೀಕ್ಷಿಸಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.