ಪಿಲಿಚಂಡಿಕಲ್ಲಿನ ಅಪವಿತ್ರ: ತಾಲೂಕು ಕಛೇರಿ ಎದುರು ಧರಣಿ

ಜ.9 – `ನಮ್ಮ ನಡೆ ಪಿಲಿಚಂಡಿಕಲ್ಲಿನೆಡೆ’ ಪಾದಯಾತ್ರೆ

ಬೆಳ್ತಂಗಡಿ: ಅನಾದಿಕಾಲ ದಿಂದಲೂ ಹಿಂದುಗಳು ಆರಾಧಿಸಿ ಕೊಂಡು ಬರುತ್ತಿರುವ ಗುರುವಾಯನಕೆರೆ ಪಿಲಿಚಂಡಿಕಲ್ಲನ್ನು ಅಪವಿತ್ರ ಗೊಳಿಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳದ ಇಲಾಖೆ ವಿರುದ್ಧ ಹಾಗೂ ಪಿಲಿಚಂಡಿಕಲ್ಲಿನ ಪಾವಿತ್ರ್ಯತೆ ಉಳಿಸಿಕೊಳ್ಳುವ ಬಗ್ಗೆ ವಿಶ್ವಹಿಂದೂ ಪರಿಷತ್, ಭಜರಂಗದಳ ಮತ್ತು ಪಿಲಿಚಂಡಿಕಲ್ಲು ಕ್ಷೇತ್ರ ಸಂರಕ್ಷಣಾ ಸಮಿತಿ ಇವರ ನೇತೃತ್ವದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಧರಣಿ ಸತ್ಯಾಗ್ರಹ ಜ.1ರಂದು ಬೆಳ್ತಂಗಡಿ ತಾಲೂಕು ಕಛೇರಿ ಎದುರು ಆರಂಭಗೊಂಡಿತು.
ಧರಣಿಯನ್ನು ದೊಂಪದಬಲಿ ಉತ್ಸವ ಸಮಿತಿ ಗೌರವಾಧ್ಯಕ್ಷ ಪಾಡ್ಯಾರಬೀಡುವಿನ ಪ್ರವೀಣ್‌ಕುಮಾರ್ ಅಜ್ರಿ, ಪಿಲಿಚಂಡಿಕಲ್ಲು ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ವಿ.ಹಿಂ.ಪ ಜಿಲ್ಲಾ ಉಪಾಧ್ಯಕ್ಷ ಬೆಳಾಲು ತಿಮ್ಮಪ ಗೌಡ ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ತಿಮ್ಮಪ್ಪ ಗೌಡ ಅವರು ಪಿಲಿಚಂಡಿಕಲ್ಲು ದೊಂಪದ ಬಲಿ ಉತ್ಸವದ ಬಗ್ಗೆ ಚಿಂತನ ಪ್ರಶ್ನೆಯಲ್ಲಿ ಸ್ಥಳ ಅಶುದ್ಧವಾಗಿದೆ ಎಂದು ಕಂಡು ಬಂದ ಹಿನ್ನಲೆಯಲ್ಲಿ ಸ್ವಚ್ಛತೆಗಾಗಿ ಸಮಿತಿ ವತಿಯಿಂದ ಬೇಲಿಯನ್ನು ಹಾಕಲಾಗಿತ್ತು. ಇಲ್ಲಿ ಡಿ.16ರಂದು ನೇಮ ನಡೆದ ಮರುದಿನ ಕಿಡಿಗೇಡಿಗಳು ಕಲ್ಲಿನ ಮೇಲೆ ಬೇಡದ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸಿದ್ದಾರೆ. ಬೇಲಿಯನ್ನು ಕಿತ್ತು ಪಂಚಾಯತದಲ್ಲಿ ತಂದು ಹಾಕಿದ್ದಾರೆ. ಇದರಲ್ಲಿ ಷಡ್ಯಂತ್ರ ನಡೆದಿದೆ. ಈ ಪವಿತ್ರ ಸ್ಥಳಕ್ಕೆ ಕಾನೂನು ಪ್ರಕಾರ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಪಿಲಿಚಂಡಿಕಲ್ಲು ಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾಲಕ ಹಾಗೂ ಭಜರಂಗದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಮಾತನಾಡಿ ಸ್ವಚ್ಛತೆಗಾಗಿ ಹಾಕಿದ ಬೇಲಿಯನ್ನು 2ಗಂಟೆ ರಾತ್ರಿಗೆ ತೆಗೆದು ಪಂಚಾಯತು ಬಳಿ ಹಾಕಿರುವುದನ್ನು ಖಂಡಿಸಿ, ಪಿಲಿಚಂಡಿಕಲ್ಲಿಗೆ ರಕ್ಷಣೆ ಒದಗಿಸಬೇಕು. ಮುಂದಿನ ದಿನಗಳಲ್ಲಿ ಇಲ್ಲಿ ಪ್ರತಿ ದಿನ ಪೂಜೆ ಮತ್ತು ಸ್ವಚ್ಛತೆಯನ್ನು ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಪಿಲಿಚಂಡಿಕಲ್ಲು ಕ್ಷೇತ್ರ ಸಂರಕ್ಷಣಾ ಸಮಿತಿ ಕೋಶಾಧಿಕಾರಿ ಹಾಗೂ ಬಿಜೆಪಿ ಜಿಲ್ಲಾ ಯುವಮೋರ್ಛಾದ ಅಧ್ಯಕ್ಷ ಹರೀಶ್ ಪೂಂಜ ಅವರು ಮಾತನಾಡಿ, ಪಿಲಿಚಂಡಿಕಲ್ಲಿನ ರಕ್ಷಣೆ ಮತ್ತು ಸ್ವಚ್ಛತೆಗಾಗಿ ಹಾಕಿದ ಬೇಲಿಯನ್ನು ತೆಗೆಸಿದವರು, ತಾಲೂಕಿನಲ್ಲಿ ಅನೇಕ ಕಡೆಗಳಲ್ಲಿ ಮಸೀದಿ, ಮದರಸಗಳು ರಸ್ತೆ ಮಾರ್ಜಿನಲ್ಲೇ ಇವೆ. ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಕಟ್ಟಿದ್ದಾರೆ ತಾಕತ್ತು ಇದ್ದರೆ ಇದನ್ನು ತೆಗೆಸಲಿ ಎಂದು ಸವಾಲು ಹಾಕಿದರು. ಅಯೋಧ್ಯ ಕರೆ ಸೇವೆಯಂತೆ ಪಿಲಿಚಂಡಿಕಲ್ಲಿನಲ್ಲಿ ಹೋರಾಟ ನಡೆಯಲಿದೆ. ಜ. 9ಕ್ಕೆ ಹತ್ತು ಸಾವಿರ ಮಂದಿ ಕಾರ್ಯಕರ್ತರು `ನಮ್ಮ ನಡೆ ಪಿಲಿಚಾಮುಂಡಿಕಲ್ಲಿನೆಡೆ’ ಕಾರ್ಯಕ್ರಮದ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಮಾತನಾಡಿ, ಪಿಲಿಚಂಡಿಕಲ್ಲಿನಲ್ಲಿ ಸ್ವಚ್ಚತೆಗಾಗಿ ಹಾಕಿದ ಬೇಲಿಯನ್ನು ಯಾವುದೇ ದೂರು ಇಲ್ಲದೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇದರ ಹಿಂದೆ ರಾಜಕೀಯ ಕುಮ್ಮಕ್ಕು ಇದೆ. ಇದನ್ನು ತಾಲೂಕಿನ ನಾಗರಿಕರು ಗಮನಿಸಬೇಕು ಎಂದು ಹೇಳಿದರು.
ಮಾಜಿ ತಾ.ಪಂ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಉಮೇಶ್ ನಡ್ತಿಕಲ್ಲು ಮಾತನಾಡಿ ಘಟನೆಯನ್ನು ಖಂಡಿಸಿ, ಹಿಂದೂ ಸಮಾಜದ ಭಾವನೆಗಳಿಗೆ ಸವಾಲು ಹಾಕುವ ಈ ಕೃತ್ಯದ ವಿರುದ್ಧ ಹಿಂದೂ ಸಮಾಜ ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಸೋಮಶೇಖರ್, ಧರ್ಮಜಾಗರಣ ವೇದಿಕೆ ಸಂಚಾಲಕ ದಿನಕರ ಅದೇಲು, ಸುಧೀರ್ ಸುವರ್ಣ, ಉಮೇಶ್ ಗುರುವಾಯನಕೆರೆ, ಈಶ್ವರ ಭೈರ, ಜಯಂತ ಕೋಟ್ಯಾನ್, ಸದಾನಂದ ಪೂಜಾರಿ ಉಂಗಿಲಬೈಲು, ರಾಮಣ್ಣ ಶೆಟ್ಟಿ ಅಗರಿ ಮುಂಡಾಜೆ, ಹರೀಶ್ ಸಾಲ್ಯಾನ್ ನಾವೂರು, ಆನಂದ ಶೆಟ್ಟಿ ವಾತ್ಸಲ್ಯ, ಮಮತಾ ಶೆಟ್ಟಿ, ವಿಜಯ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ವಿ.ಹಿಂ.ಪ ಕಾರ್ಯದರ್ಶಿ ನವೀನ್ ನೆರಿಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.