ಕ್ಯಾಂಪ್ಕೋ ರೈತರ ವಿಶ್ವಾಸ-ನಂಬಿಕೆಯ ಸಂಸ್ಥೆ : ಶಾಸಕ ಬಂಗೇರ

Advt_NewsUnder_1
Advt_NewsUnder_1
Advt_NewsUnder_1

ಕ್ಯಾಂಪ್ಕೋ: ರೂ.1.30 ಕೋಟಿ ವೆಚ್ಚದ ನೂತನ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ ಎಪಿಎಂಸಿ ಪ್ರಾಂಗಣದಲ್ಲಿ ಕಟ್ಟಡ ರಚನೆಗೆ ಆಗಿನ ಅಧ್ಯಕ್ಷ ಕುಶಾಲಪ್ಪ ಗೌಡ ಒಪ್ಪಂದಕ್ಕೆ ಸಹಿ ಹಾಕಿದ್ದರು ಅದು ಈಗ ಸಾಕಾರಗೊಂಡಿದೆ. 44 ವರ್ಷಗಳ ಇತಿಹಾಸ ವಿರುವ ಕ್ಯಾಂಪ್ಕೋ ಸಂಸ್ಥೆಯಲ್ಲಿ 2500 ಮಂದಿ ಉದ್ಯೋಗಿಗಳಿದ್ದಾರೆ. ಹಿಂದೆ ಅಡಿಕೆ ಧಾರಣೆ ಬಹಳಷ್ಟು ಕುಸಿದಾಗ ಆಗಿನ ವಾಣಿಜ್ಯ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಅಡಿಕೆ ದರ ಏರಿಕೆಗೆ ನೆರವು ನೀಡಿದ್ದರು. ಅವರ ಕಾರ್ಯದಿಂದ ಇಂದು ಅಡಿಕೆಗೆ ಸ್ಥಿರತೆ ಬಂದಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಂದಿನ ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟಾಗಬೇಕು ಎಂದು ಆಶಿಸಿರುವ ಹಿನ್ನಲೆಯಲ್ಲಿ ಸಂಸ್ಥೆಯೂ ಆ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸಲಿದೆ. – ಎಸ್.ಆರ್ ಸತೀಶ್ಚಂದ್ರ

ಬೆಳ್ತಂಗಡಿ : ಕ್ಯಾಂಪ್ಕೊ ಮಂಗಳೂರು ಇದರ ವತಿಯಿಂದ ಬೆಳ್ತಂಗಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿಯಲ್ಲಿ ಸುಮಾರು ರೂ.1.30 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ಬೆಳ್ತಂಗಡಿ ಶಾಖೆಯ ನೂತನ ಕಟ್ಟಡವನ್ನು ಡಿ.25ರಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಲೋಕಾರ್ಪಣೆಗೈದರು.
ನಂತರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಕ್ಯಾಂಪ್ಕೋ ಸಂಸ್ಥೆ ರೈತರ ಕೃಷಿ ಉತ್ಪನ್ನಗಳಿಗೆ ಯೋಗ್ಯವಾದ ಬೆಲೆ ದೊರೆಕಿಸಿಕೊಡುವಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರ ಕೃಷಿ ಉತ್ಪನ್ನಗಳಿಗೆ ಭದ್ರತೆ ಒದಗಿಸಿ, ರಕ್ಷಣೆ ಮಾಡುವ ಸಂಸ್ಥೆಯಾಗಿ ಹೆಸರು ಪಡೆದಿದೆ. ಈ ಸಂಸ್ಥೆಯ ಮೇಲೆ ರೈತರಿಗೆ ನಂಬಿಕೆ, ವಿಶ್ವಾಸ ಬಂದಿದೆ. ಇದೀಗ ಎ.ಪಿ.ಎಂ.ಸಿಗೆ ಈ ಸಂಸ್ಥೆ ಬಂದಿರುವುದರಿಂದ ಇತರ ಸಂಸ್ಥೆಗಳು ಈ ವಾರ್ಡ್‌ಗೆ ಬಂದು ವ್ಯವಹಾರ ನಡೆಸುವಂತಾಗಲಿ ಎಂದು ಹಾರೈಸಿದರು. ಕ್ಯಾಂಪ್ಕೋ ಪುತ್ತೂರಿನಲ್ಲಿ ಅಡಿಕೆ ಬೆಳೆಗಾರರಿಗೆ ರೂ. ೫ ಹೆಚ್ಚುವರಿ ನೀಡುತ್ತಿದ್ದು, ಇದನ್ನು ಬೆಳ್ತಂಗಡಿ ತಾಲೂಕಿಗೂ ವಿಸ್ತರಿಸುವಂತೆ ಮನವಿ ಮಾಡಿಕೊಂಡರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ಎಪಿಎಂಸಿಯ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅವರು ಮಾತನಾಡಿ, ಎಪಿಎಂಸಿ ಪ್ರಾಂಗಣಕ್ಕೆ ಕ್ಯಾಂಪ್ಕೋ ಸಂಸ್ಥೆ ಬಂದಿರುವುದರಿಂದ ಎಪಿಎಂಸಿಗೆ ಬಲ ಹೆಚ್ಚಿದೆ. ಇಲ್ಲಿ ಈಗಾಗಲೇ 18 ಮಂದಿಗೆ ಸೈಟ್ ಕೊಟ್ಟಿದ್ದು, ಇಬ್ಬರ ಸೈಟ್ ರದ್ದುಗೊಂಡಿದೆ. ಉಳಿದ
ವರ್ತಕರೂ ಇಲ್ಲಿ ಮಳಿಗೆಯನ್ನು ತೆರೆದು ವ್ಯವಹಾರ ಮಾಡಬೇಕು ಎಂದರು. ಎಪಿಎಂಸಿಯಲ್ಲಿ ಅನೇಕ ಸೌಲಭ್ಯಗಳಿವೆ. 1 ಸಾವಿರ ಮೆಟ್ರಿಕ್ ಟನ್‌ನ ಗೋದಾಮು ನಿರ್ಮಿಸಲಾಗಿದ್ದು, ರೈತರು ತಮ್ಮ ಕೃಷಿ ಉತ್ಪನ್ನವನ್ನು ಇಲ್ಲಿ ಇಟ್ಟು ಮಾರಾಟ ಮಾಡಬಹುದು. 180 ದಿವಸಕ್ಕೆ ನಿಬಡ್ಡಿಯಲ್ಲಿ ರೂ.2 ಲಕ್ಷದವರೆಗೆ ಸಾಲವನ್ನು ಸಹ ಕೊಡುವ ಸೌಲಭ್ಯ ಇಲ್ಲಿದೆ ಎಂದು ವಿವರಿಸಿದರು.
ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅವರು ಮಾತನಾಡಿ, ಕ್ಯಾಂಪ್ಕೋ ದೇಶದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು ಬಂದಿದ್ದು, ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ಉತ್ತಮ ಗುಣಮಟ್ಟದ ಅಡಿಕೆಗೆ ಒಳ್ಳೆಯ ಧಾರಣೆ ನೀಡುತ್ತಿದೆ. ಬ್ರಾಹ್ಮಣ ಸಮಾಜದವರು ಕ್ಯಾಂಪ್ಕೋದಲ್ಲೇ ಹೆಚ್ಚು ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಮಾತನಾಡಿ, ಅಡಿಕೆ ಬೆಲೆ ಕುಸಿದಾಗ ಬೆಳೆಗಾರರನ್ನು ರಕ್ಷಿಸಿರುವುದು ಕ್ಯಾಂಪ್ಕೋ, ಈ ಸಂಸ್ಥೆಯಲ್ಲಿರುವ ಎಲ್ಲಾ ನಿರ್ದೇಶಕರು ಕೃಷಿಕರೇ, ಆದ್ದರಿಂದ ಇಲ್ಲಿ ನೀಡುವ ದರ ರೈತರೇ ನಿಗದಿಪಡಿಸಿದ ದರವಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ಕ್ಯಾಂಪ್ಕೋ ಅಥವಾ ಇತರ ವ್ಯಾಪಾರಿಗಳಿಗೆ ಮಾರಾಟ ಮಾಡುವಾಗ ಕಡ್ಡಾಯವಾಗಿ ರಶೀದಿಯನ್ನು ಪಡೆದುಕೊಳ್ಳಬೇಕು ಎಂದು ಸಲಹೆಯಿತ್ತರು.
ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಪಿಎಂಸಿಯಲ್ಲಿ 9500 ಚದರ ಅಡಿಯ ಕಟ್ಟಡವನ್ನು ರೂ.1.30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೇವಲ 13 ತಿಂಗಳಲ್ಲಿ ಕಟ್ಟಡ ನಿರ್ಮಾಣವಾಗಿರುವುದು ದಾಖಲೆಯಾಗಿದೆ. ನಮ್ಮ ಸಂಸ್ಥೆಯಲ್ಲಿ ಅಡಿಕೆ, ಕೊಕ್ಕೋ, ರಬ್ಬರ್ ಹಾಗೂ ಕಾಳುಮೆಣಸು ಖರೀದಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ತೆಂಗಿನಕಾಯಿ, ಗೇರುಬೀಜವನ್ನು ಖರೀದಿಸುವ ಯೋಜನೆಯಿದೆ. ಮಂಗಳೂರಿನಲ್ಲಿ ಕಾಳುಮೆಣಸು ಘಟಕ ತೆರೆದು ವಿದೇಶಗಳಿಗೆ ರಪ್ತು ಮಾಡುವ ಚಿಂತನೆ ನಡೆದಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಎಪಿಎಂಸಿ ಕಾರ್ಯದರ್ಶಿ ಶ್ರೀಮತಿ ವಿಮಲ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ನಿರ್ದೇಶಕರಾದ ಕೊಂಕೋಡಿ ಪದ್ಮನಾಭ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ, ಸತೀಶ್ಚಂದ್ರ ಭಂಡಾರಿ, ಬಾಲಕೃಷ್ಣ ರೈ, ಎಂ.ಕೆ. ಶಂಕರನಾರಾಯನ ಭಟ್, ಶಿವಕೃಷ್ಣ ಭಟ್, ಪದ್ಮರಾಜ ಪಟ್ಟಾಜೆ, ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಕ್ಯಾಂಪ್ಕೋ ಉದ್ಯೋಗಿಗಳಾದ ಪ್ರೇಮಾನಂದ ಶೆಟ್ಟಿಗಾರ್, ಶ್ರೀಧರ ಶೆಟ್ಟಿ, ಪಂಕಜಾಕ್ಷಣ್ ನಂಬಿಯಾರ್, ರಾಮಚಂದ್ರ ಕಾಮತ್, ಟಿ.ಯಸ್. ಭಟ್, ಉಣ್ಣಿಕೃಷ್ಣನ್, ರಾಘವೇಂದ್ರ, ಶ್ರೀಧರ ಭಟ್ ಬೆಳ್ತಂಗಡಿ, ಶಾಖೆಯ ಮ್ಯಾನೇಜರ್ ರಾಜೇಂದ್ರ ಎ.ಯಸ್, ಪುರುಷೋತ್ತಮ ಕೆ., ದಿನೇಶ್ ಕೆ, ಜನಾರ್ದನ ಪೂಜಾರಿ, ನವೀನ್ ಶ್ಯಾನುಭೋಗ್, ಉಮೇಶ್, ಪ್ರಶಾಂತ್, ಶ್ರೀನಿವಾಸ, ರವಿಚಂದ್ರ, ನಿತಿನ್, ಉಮಾಕಾಂತ, ಚಂದ್ರಕಾಂತ ರೈ ಮೊದಲಾದವರು ಸಹಕರಿಸಿದರು.
ಪ್ರಥಮ ಗ್ರಾಹಕರಾದ ಪ್ರಕಾಶ್ ಆಚಾರ್ ಮತ್ತು ಕೊಗಪ್ಪ ಗೌಡರಿಗೆ ಚೆಕ್ ವಿತರಿಸಲಾಯಿತು. ತೇಜಸ್ವಿ, ಪ್ರತೀಕ್ಷಾ ಪ್ರಾರ್ಥನೆ ಹಾಡಿದರು. ಟಿ.ಎಸ್. ಭಟ್ ಕಾರ್ಯಕ್ರಮ ನಿರ್ವಹಿಸಿ, ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಖಂಡಿಗ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.