ಜ.7 ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳ್ತಂಗಡಿಗೆ ಮಿನಿ ವಿಧಾನ ಸೌಧ ಸೇರಿದಂತೆ ರೂ.76 ಕೋಟಿಯ ವಿವಿಧ ಕಾಮಗಾರಿಗಳ ಉದ್ಘಾಟನೆ-ಶಿಲಾನ್ಯಾಸ : ಬಂಗೇರ

  • ಈಗಿನ ತಾಲೂಕು ಕಚೇರಿ 1918ರಲ್ಲಿ ನಿರ್ಮಿಸಲಾಗಿತ್ತು.
  • ಬ್ರಿಟೀಷ್ ಆಡಳಿತದಲ್ಲಿ ನ್ಯಾಯಾಲಯ ಮತ್ತು  ಬಂಧಿಖಾನೆಯಾಗಿತ್ತು.
  • ತಾಲೂಕು ಕಚೇರಿಗೆ ಈಗ 100 ವರ್ಷದ ಸಂಭ್ರಮ.
  • ಸ್ವಾತಂತ್ರ್ಯ ದೊರೆತು 70 ವರ್ಷದ ಬಳಿಕ ಬೆಳ್ತಂಗಡಿಗೆ ರೂ.8 ಕೋಟಿ ವೆಚ್ಚದ ಮಿನಿ ವಿಧಾನ ಸೌಧ.
  • ವಿವಿಧ ಇಲಾಖೆಗಳ 18 ಕಾಮಗಾರಿಗಳ  ಉದ್ಘಾಟನೆ – ಶಿಲಾನ್ಯಾಸ

ಬೆಳ್ತಂಗಡಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.7 ರಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಆಗಮಿಸಲಿದ್ದು, ಈ ಸಂದರ್ಭ ಅವರು ಬೆಳ್ತಂಗಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ರೂ.8 ಕೋಟಿ ವೆಚ್ಚದ ಮಿನಿ ವಿಧಾನ ಸೌಧ ಸೇರಿದಂತೆ ಒಟ್ಟು 76 ಕೋಟಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಡಿ. 22ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬೆಳ್ತಂಗಡಿ ತಾಲೂಕು 81 ಗ್ರಾಮಗಳನ್ನೊಳಗೊಂಡ ರಾಜ್ಯದ ಅತೀ ದೊಡ್ಡ ತಾಲೂಕಾಗಿದೆ. ಸ್ವಾತಂತ್ರ್ಯ ಪೂರ್ವ 1918ರಲ್ಲಿ ಈಗಿನ ತಾಲೂಕು ಕಛೇರಿಯನ್ನು ಕಟ್ಟಲಾಗಿದೆ. ಅಂದಿನ ಬ್ರಿಟೀಷ್ ಆಡಳಿತದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ನ್ಯಾಯಾಲಯ ಮತ್ತು ಬಂಧಿಖಾನೆ ಸಹಿತವಾಗಿ ಬಳಸುವಂತೆ ಇದನ್ನು ನಿರ್ಮಿಸಲಾಗಿದೆ. ನ್ಯಾಯಾಧೀಶರು ವಾರಕ್ಕೊಮ್ಮೆ ಮಂಗಳೂರಿನಿಂದ ಬಂದು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ 100 ವರ್ಷಗಳ ನಂತರ, ಸ್ವಾತಂತ್ರ್ಯ ದೊರೆತು 70 ವರ್ಷಗಳ ನಂತರ ಇದೀಗ ಮಿನಿ ವಿಧಾನ ಸೌಧ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಮಿನಿ ವಿಧಾನ ಸೌಧ ಕಟ್ಟಡವು ಒಟ್ಟು 1800 ಚ.ಮೀಗಳಿದ್ದು, ಬೇಸ್‌ಮೆಂಟ್, ನೆಲ, ಒಂದನೇ ಮತ್ತು 2ನೇ ಮಹಡಿ ಹೀಗೆ 4 ಅಂತಸ್ತಿನ ಕಟ್ಟಡವಾಗಿರುತ್ತದೆ. ಒಟ್ಟು ರೂ.8 ಕೋಟಿ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಒಟ್ಟು ರೂ.12 ಕೋಟಿ ವೆಚ್ಚದ ಈ ಕಟ್ಟಡಕ್ಕೆ ಇನ್ನೂ 4 ಕೋಟಿ ಬರಬೇಕಾಗಿದೆ. ಈ ಹೆಚ್ಚುವರಿ ಅನುದಾನದಲ್ಲಿ ಕಟ್ಟಡದ ವಿಸ್ತರಿತ ಕಾಮಗಾರಿ ನಡೆಯಲಿದ್ದು, ಈ ಸಮಯ ಎಲ್ಲಾ ಇಲಾಖೆಗಳಿಗೆ ಇಲ್ಲೇ ಕಛೇರಿ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಮಿನಿ ವಿಧಾನ ಸೌಧವಲ್ಲದೆ ಬೆಳ್ತಂಗಡಿ ನಗರೋತ್ಥಾನ (ಮುನ್ಸಿಪಾಲಿಟಿ) ಹಂತ-3ರ ವಿವಿಧ ಕಾಮಗಾರಿ ರೂ.2 ಕೋಟಿ, ಬೆಳ್ತಂಗಡಿ ನಗರಕ್ಕೆ ಸಮಗ್ರ ಕುಡಿಯುವ ನೀರು ಪೂರೈಕೆ ರೂ. 13 ಕೋಟಿ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಗುಂಡೂರಿ-ಅಂಗದಕರಿಯ ತುಂಬಿದಪಲ್ಕೆ ರಸ್ತೆಯಲ್ಲಿ ಸೇತುವೆ ರೂ. 4.74 ಕೋಟಿ, ಪಾಲೇದು ಕುದ್ರಡ್ಕ ರಸ್ತೆಯಲ್ಲಿ ಎರಡು ಸೇತುವೆ ರಚನೆ ರೂ. 2.13 ಕೋಟಿ, ಪಾಲೇದು-ಕುದ್ರಡ್ಕ ರಸ್ತೆ ಅಭಿವೃದ್ಧಿ ರೂ. 3.13 ಕೋಟಿ, ಇಂದಬೆಟ್ಟು ಗ್ರಾಮದ ಗುರಿಪಳ್ಳ ಬೊಲ್ಲಾಜೆ ರಸ್ತೆ ಅಭಿವೃದ್ಧಿ ರೂ. 3.71 ಕೋಟಿ, ಬಂದಾರು ಗ್ರಾಮದ ಬೋಲೋಡಿ-ನೈರೋಲ್ತಡ್ಕ-ಗೋಳಿತ್ತಾಡಿ ರಸ್ತೆಯಲ್ಲಿ ಎರಡು ಸೇತುವೆ ರಚನೆ ರೂ.3.87 ಕೋಟಿ, ನೆರಿಯದ
ಕೋಲೋಡಿ ಕೊಲ್ಮ ರಸ್ತೆಯಲ್ಲಿ ಐದು ಸೇತುವೆ ರಚನೆ ರೂ. 4.74 ಕೋಟಿ, ನಬಾರ್ಡ್ ಯೋಜನೆಯಲ್ಲಿ ಬಂದಾರು ಗ್ರಾಮದ ಪುತ್ತಿಲ ಮೈರೋಳ್ತಡ್ಕ ರಸ್ತೆಯ ಪುತ್ತಿಲ ಎಂಬಲ್ಲಿ ಹೊಸ ಸೇತುವೆ ರಚನೆ ರೂ. 1.25 ಕೋಟಿ, ಬೆಳ್ತಂಗಡಿ ಮೆಸ್ಕಾಂ ಉಪವಿಭಾಗ ಕಟ್ಟಡ ರೂ.78 ಲಕ್ಷ, ವೇಣೂರು ವಿದ್ಯುತ್ ಸಬ್‌ಸ್ಟೇಶನ್ ಕಟ್ಟಡ ರೂ. 10 ಕೋಟಿ, ಲಾಯಿಲ ರಾಘವೇಂದ್ರ ಮಠದ ಬಳಿ ಸೋಮಾವತಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ರೂ. 85 ಲಕ್ಷ, ಪುಂಜಾಲಕಟ್ಟೆ ಹೊಸ ಪೊಲೀಸ್ ಠಾಣಾ ಕಟ್ಟಡ ರೂ. 2.35 ಕೋಟಿ, ಎ.ಪಿ.ಎಂ.ಸಿ ಒಂದು ಸಾವಿರ ಮೆ.ಟನ್ ಸಾಮರ್ಥ್ಯದ ಗೋದಾಮು ಕಟ್ಟಡ ರೂ.1.79 ಕೋಟಿ, ಎ.ಪಿ.ಎಂ.ಸಿಯಲ್ಲಿ 250 ಮೆ.ಟನ್ ಸಾಮರ್ಥ್ಯದ ಎರಡು ಗೋದಾಮು ಕಟ್ಟಡ ರೂ. 1.20 ಕೋಟಿ, ಬೆಳ್ತಂಗಡಿ ನಗರ ಅಂಬೇಡ್ಕರ್ ಕಟ್ಟಡ ರೂ.1.50 ಕೋಟಿ, ಬೆಳ್ತಂಗಡಿ ವಕೀಲರ ಸಂಘದ ಕಟ್ಟಡ ರೂ. 84 ಲಕ್ಷ ಸೇರಿದಂತೆ ಒಟ್ಟು 76 ಕೋಟಿಗೂ ಮಿಕ್ಕಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ ಎಂದು ಹೇಳಿದರು.
ಈಗಾಗಲೇ ತಾಲೂಕಿನಲ್ಲಿ 35 ಸಾವಿರ ಮಂದಿಗೆ ಬಿಪಿಎಲ್ ಕಾರ್ಡ್, 35 ಸಾವಿರ ಮಂದಿಗೆ ಅಕ್ರಮ-ಸಕ್ರಮ ಮಂಜೂರಾತಿ, 21 ಸಾವಿರ ಮಂದಿಗೆ 94ಸಿ ಮತ್ತು 94ಸಿಸಿಯಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಬೆಳ್ತಂಗಡಿ ತಾ.ಪಂ.ಕ್ಕೆ ನೂತನ ಕಟ್ಟಡಕ್ಕಾಗಿ ರೂ.3.50 ಕೋಟಿಯ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ನಾರಾವಿಯಲ್ಲಿ ವಿದ್ಯುತ್ ಸಬ್‌ಸ್ಟೇಶನ್ ನಿರ್ಮಾಣಕ್ಕೆ ರೂ.8 ಕೋಟಿ ಅನುದಾನ ಮಂಜೂರಾಗಿದ್ದು, ಇದರ ನಿರ್ಮಾಣಕ್ಕೆ ಕೆಲವೊಂದು ಕಾನೂನು ತೊಡಕುಗಳು ಇದೆ. ಇದನ್ನು ನಿವಾರಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್‌ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶ್ರೀನಿವಾಸ ಕಿಣಿ, ನಗರ ಬ್ಲಾಕ್ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ, ರಾಮಚಂದ್ರ ಗೌಡ, ಸುಂದರ ಗೌಡ ಇಚ್ಚಿಲ, ಧರಣೇಂದ್ರ ಕುಮಾರ್, ಗ್ರೇಸಿಯನ್ ವೇಗಸ್, ಮುಗುಳಿ ನಾರಾಯಣ ರಾವ್, ಈಶ್ವರ ಭಟ್, ಪ್ರಮೋದ್‌ಕುಮಾರ್ ರೆಖ್ಯ, ಆಶ್ರಫ್ ನೆರಿಯ, ಯು.ಎ. ಹಮೀದ್, ರವೀಂದ್ರ ಪೂಜಾರಿ, ಸುಭಾಶ್ಚಂದ್ರ ರೈ, ವಿಜಯಕುಮಾರ್ ಹೆಚ್. ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.