ಸ್ವಯಂ ಸೇವಾ ಕಾರ್ಯಗಳಿಂದ ಜೀವನದಲ್ಲಿ ಉನ್ನತಿ : ಡಾ. ಹೆಗ್ಗಡೆ

2018 ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಒಂದು ವರ್ಷದ ಬಳಿಕ 2019 ಫೆಬ್ರವರಿಯಲ್ಲಿ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ. ಆ ವರ್ಷ ಜುಲೈಯಿಂದಲೇ ಎಲ್ಲಾ ತಯಾರಿ ನಡೆಯಲಿದೆ. – ಡಾ. ಹೆಗ್ಗಡೆ

ನಾನು ಅಲ್ಪಸಂಖ್ಯಾತ ಎಂಬ ಭಾವನೆಯನ್ನು ಹೊಂದದೆ ಕೆಲಸ ಮಾಡಿದ್ದರಿಂದ ಇಂದು ರಾಜ್ಯ ಮಟ್ಟದ ಸಂಸ್ಥೆಯ ಅಧ್ಯಕ್ಷನಾಗಲು ಕಾರಣವಾಗಿದೆ. ನಾವು ಅಲ್ಪಸಂಖ್ಯಾತರು ಎಂಬ ಕೀಳರಿಮೆ, ಸಂಕುಚಿತ ಮನೋಭಾವನೆಯನ್ನು ಇಟ್ಟುಕೊಂಡರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. – ಡಾ. ಎಂ.ಎನ್ ರಾಜೇಂದ್ರ ಕುಮಾರ್

ಕರ್ನಾಟಕ ರಾಜ್ಯಾದ್ಯಾಂತ ಸ್ವಯಂ ಸೇವಕರ ತಂಡಗಳನ್ನು ಕಟ್ಟಿ ಅದಕ್ಕೆ ಸಂಚಾಲಕರನ್ನು ನೇಮಿಸಿ ಜೈನ ಸಮಾಜದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಿತದೃಷ್ಟಿಯ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಮ್ಮ ತಂಡಗಳು ಸಕ್ರಿಯವಾಗಿ ಭಾಗವಹಿಸಿರುತ್ತದೆ. – ನೇಮಿರಾಜ ಆರಿಗ

ಬೆಳ್ತಂಗಡಿ : ನಮ್ಮ ಎಲ್ಲಾ ವ್ಯವಹಾರಗಳು ಧರ್ಮಕ್ಕಾನುಗುಣವಾಗಿ ಶಿಸ್ತಿನಿಂದ ನಡೆಯಬೇಕು. ಪ್ರಥಮವಾಗಿ ಸ್ವ ಅಭಿವೃದ್ಧಿ ನಂತರ ಸಮಾಜದ ಅಭಿವೃದ್ಧಿ ಎಂಬ ಮನೋಭಾವನೆ ಎಲ್ಲರೂ ಹೊಂದಿರಬೇಕು, ಸ್ವಯಂ ಸೇವೆಯಿಂದ ಮೋಕ್ಷ ಪಡೆಯಬಹುದು, ಪರಾವಲಂಬನೆಯಿಂದ ಇದು ಸಾಧ್ಯವಿಲ್ಲ. ದಿಗಂಬರ ಮುನಿಗಳು ತಮ್ಮ ತ್ಯಾಗ ಜೀವನದ ಮೂಲಕ ಸಮಾಜಕ್ಕೆ ಇದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ವಸಹಾಯ ಸಂಘದ ಸಮಾವೇಶ, ವಿವಿಧ ಸೌಲಭ್ಯಗಳ ವಿತರಣೆ, ಹಾಗೂ ಜೈನ ಸಮಾಜದವರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಡಿ. 16ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಕಲಾ ಭವನದಲ್ಲಿ ವಿಜೃಂಭಣೆಯಿಂದ ಜರುಗಿತು.
ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಡಾ. ಹೆಗ್ಗಡೆಯವರು ಮಾತನಾಡಿ, ಆತ್ಮಕಲ್ಯಾಣದ ಭಾಗವೇ ಧರ್ಮಾಂಗ, ಯಶಸ್ವಿ ಬದುಕಿನಿಂದ ಉತ್ತಮ ಭವ ಸಾಧ್ಯವಾಗುತ್ತದೆ. ಈ ಜನ್ಮದ ಶುಭ ಫಲಗಳು, ಸತ್ಕಾರ್ಯಗಳು ಪುನರ್‌ಜನ್ಮಕ್ಕೆ ಕಾರಣವಾಗುತ್ತದೆ. ಧರ್ಮ ಮತ್ತು ಶಿಸ್ತಿನ ವ್ಯವಹಾರದಿಂದ ಉತ್ತಮ ಸಾಧನೆ ಮಾಡಬಹುದು. ನೇಮಿರಾಜ ಆರಿಗ ಅವರು ಅಧ್ಯಕ್ಷರಾಗಿರುವ ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಉತ್ತಮ ಸೇವಾ ಕಾರ್ಯಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸ್ವಸಹಾಯ ಸಂಘದಲ್ಲಿ ಇರುವವರು ದುಶ್ಚಟ, ದುರ್ವ್ಯವಹಾರದಿಂದ ದೂರವಿದ್ದುಮ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆಯಿತ್ತರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ನಾನು
ಅಲ್ಪಸಂಖ್ಯಾತ ಎಂಬ ಭಾವನೆಯನ್ನು ಹೊಂದದೆ ಕೆಲಸ ಮಾಡಿದ್ದರಿಂದ ಇಂದು ರಾಜ್ಯ ಮಟ್ಟದ ಸಂಸ್ಥೆಯ ಅಧ್ಯಕ್ಷನಾಗಲು ಕಾರಣವಾಗಿದೆ. ನಾವು ಅಲ್ಪಸಂಖ್ಯಾತರು ಎಂಬ ಕೀಳರಿಮೆ, ಸಂಕುಚಿತ ಮನೋಭಾವನೆಯನ್ನು ಇಟ್ಟುಕೊಂಡರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ನಮ್ಮ ಸಮಾಜಕ್ಕೆ ಉತ್ತಮ ಗೌರವವಿದೆ. ಎಲ್ಲಾ ಸಮಾಜದವರನ್ನು ಹೊಂದಿಸಿಕೊಂಡು ಹೋಗುವ ಶಕ್ತಿ ಈ ಸಮಾಜಕ್ಕಿದೆ ಎಂದು ಹೇಳಿದರು.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ದ.ಕ. ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿಯವರು ಸರಕಾರದಿಂದ ಅಲ್ಪಸಂಖ್ಯಾತರಿಗೆ ದೊರೆಯುವ ವಿವಿಧ ಸೌಲಭ್ಯಗಳನ್ನು ವಿವರಿಸಿ, ಬಡಕುಟುಂಬದ ಜೈನ ಸಮುದಾಯದವರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಉಡುಪಿಯ ಅಜೇಯ್ ಡಿ’ಸೋಜಾ, ಅಬ್ದುಲ್ ಖಾದರ್, ಜೈನ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಎ.ವಿ. ಶೆಟ್ಟಿ ಧರ್ಮಸ್ಥಳ, ಶಮಂತ್ ಕುಮಾರ್ ಜೈನ್ ಬೆಳ್ತಂಗಡಿ, ಶ್ರೀಮತಿ ಸುಜಾತ ಎನ್. ಆರಿಗ ಕಾರ್ಕಳ, ಸ್ವಸಹಾಯ ಸಂಘ ಮೇಲ್ವಿಚಾರಕ ಶಿವರಾಜ್ ಜೈನ್, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಲಹಾ ಸಮಿತಿ ಅಧ್ಯಕ್ಷೆ ಆಶಾಲತಾ, ಮೂಡಿಗೆರೆ ಸಂಚಾಲಕ ಪ್ರಸಿದ್ಧ ಜೈನ್, ಮೈಸೂರು ಸಂಚಾಲಕಿ ಶ್ರೀಮತಿ ಸುಮಾ ದಯಾಕರ್, ಗದಗ ಸಂಚಾಲಕ ಪ್ರಕಾಶ್ ಮುತ್ತಿನ, ಬಾಗಲಕೋಟೆ ಸಂಚಾಲಕ ಪ್ರಕಾಶ್, ಧಾರವಾಡ ಸಂಚಾಲಕ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನೇಮಿರಾಜ ಆರಿಗ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ 18 ಜಿಲ್ಲೆಗಳಲ್ಲಿ ಜೈನ ಸ್ವಸಹಾಯ ಸಂಘಗಳು ಕಾರ್ಯನಿರತವಾಗಿದ್ದು, 22 ಸಾವಿರ ಸ್ವಸಹಾಯ ಸಂಘಗಳಿವೆ. ಒಟ್ಟು 8500 ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾವೇಶ ಮಾಡುವುದೇ ನಮ್ಮ ಉದ್ದೇಶವಲ್ಲ, ಸ್ವಚ್ಛತಾ ಅಭಿಯಾನ ಸೇರಿದಂತೆ ಅನೇಕ ಸೇವಾ ಚಟುವಟಿಕೆಗಳ ಮೂಲಕ ಸಮಾಜ ಕಟ್ಟುವ ಕಾರ್ಯವನ್ನು ಟ್ರಸ್ಟ್ ನಡೆಸುತ್ತಿದೆ ಎಂದು ತಿಳಿಸಿದರು. ಪದ್ಮಾವತಿ ತಂಡದವರ ಪ್ರಾರ್ಥನೆ ಬಳಿಕ ಟ್ರಸ್ಟಿ ಶಶಿಕಿರಣ್ ಜೈನ್ ಬೆಳ್ತಂಗಡಿ ಸ್ವಾಗತಿಸಿದರು. ಆಶಾಲತಾ ಆಟೋಟ ಸ್ಪರ್ಧಾ ವಿವರ ನೀಡಿದರು. ಶಿಕ್ಷಕ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಂಚಾಲಕ ವೃಷಭ ಆರಿಗ ಧನ್ಯವಾದವಿತ್ತರು. ಅದೃಷ್ಟ ಸಂಘ ನೇಮಿನಾಥ ಬೈಪಾಡಿ ಸಂಘ ಆಯ್ಕೆಯಾಗಿ ಬಹುಮಾನ ಪಡೆಯಿತು. ಭೋಜನ-ಉಪಹಾರ ವ್ಯವಸ್ಥೆ ಮಾಡಿದ ಶಮಂತ್ ಕುಮಾರ್ ಜೈನ್‌ರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ : ಮಧ್ಯಾಹ್ನ ಅಂತರಾಷ್ಟ್ರೀಯ ಕಲಾವಿದ ಅಶೋಕ್ ಪೊಳಲಿ ಮತ್ತು ಗಿನ್ನಿಸ್ ರೆಕಾರ್ಡ್ ನಾಮಿನಿ ಅಕ್ಷತಾ ಕುಡ್ಲ ನೇತೃತ್ವದಲ್ಲಿ ವಿಭಿನ್ನ ಶೈಲಿಯ ನೃತ್ಯ ಹಾಗೂ ಮಿಮಿಕ್ರಿಯನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.