ತಣ್ಣೀರುಪಂತ ಗ್ರಾಮದ ಕಲ್ಲೇರಿಯಲ್ಲಿ ನಡೆದ ಅಂಗಡಿಗೆ ಬೆಂಕಿ ಹಚ್ಚಿ ಕಳ್ಳತನ ನಡೆಸಿದ ಪ್ರಕರಣವನ್ನು ವಾರದೊಳಗೆ ಭೇದಿಸುವ ಮೂಲಕ ಊರಿನ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಂಡ ಪೊಲೀಸ್ ಇಲಾಖೆಗೆ ಕಲ್ಲೇರಿ ಹಾಗೂ ಕರಾಯ ಗ್ರಾಮಸ್ಥರ ವತಿಯಿಂದ ಡಿ. 7ರಂದು ಅಭಿನಂದನೆ ನಡೆಯಿತು.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು ಹಾಗೂ ಉಪ್ಪಿನಂಗಡಿ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಯನ್ನು ಅಭಿನಂದಿಸಿ ಮಾತನಾಡಿದ ತಣ್ಣೀರುಪಂತ ಸಿಎ ಬ್ಯಾಂಕ್ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟು ಉಪ್ಪಿನಂಗಡಿ ಪೊಲೀಸರು ಯಾವುದೇ ಉಹಾಪೋಹಗಳಿಂದ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗಲು ಅವಕಾಶ ನೀಡದೇ ವಾರದೊಳಗೆ ಈ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಮೂಲಕ ಸಮಾಜದ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷರ ಗೋಪಾಲ ನಾಯ್ಕ, ಕಳ್ಳತನ ನಡೆಸಿದ ಬಳಿಕ ಅಂಗಡಿಗೆ ಬೆಂಕಿ ಹಚ್ಚಿ ಅಂಗಡಿ ಸಂಪೂರ್ಣ ಭಸ್ಮಗೊಳಿಸುವ ಮೂಲಕ ಕಳ್ಳರು ಕಲ್ಲೇರಿಯಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ವಾರದೊಳಗೆ ಆರೋಪಿಗಳನ್ನು ಬಂಧಿಸಿದೆ ಎಂದರು.
ಉಪ್ಪಿನಂಗಡಿ ಠಾಣಾ ನಿರೀಕ್ಷಕ ನಂದ ಕುಮಾರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇಲ್ಲಿನ ಕರಾಯ ಗ್ರಾಮಕ್ಕೆ ಮೊದಲೇ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಇದೆ. ಆದರೆ ಕಲ್ಲೇರಿ ಘಟನೆ ನಡೆದಾಗ ಹಲವು ಉಹಾಪೋಹಗಳು ಕೇಳಿಬಂದರೂ ಇಲ್ಲಿನ ಜನತೆ ಯಾವುದಕ್ಕೂ ಕಿವಿಗೊಡದೇ ಶಾಂತಿ ಕಾಪಾಡಿದ್ದಾರೆ ಎಂದರು.
ತಣ್ಣೀರುಪಂಥ ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮಾತನಾಡಿದರು. ಅಭಿನಂದನೆ ಸಲ್ಲಿಸಿದರು. ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಹರಿಶ್ಚಂದ್ರ, ಇರ್ಷಾದ್ ಪಡಂಗಡಿ, ಪ್ರವೀಣ್ ರೈ, ಶೇಖರ ಗೌಡ, ಸಲೀಂ, ಜೀಪು ಚಾಲಕ ನಾರಾಯಣ ಗೌಡ ಅವರನ್ನು ಅಭಿನಂದಿಸಲಾಯಿತು. ತಾ.ಪಂ ಸದಸ್ಯೆ ಕೇಶವತಿ, ತಣ್ಣೀರುಪಂತ ಗ್ರಾ.ಪಂ ಸದಸ್ಯರಾದ ನವೀನ್ ಕುಮಾರ್, ಆದಂ ಕೆ., ಡಿ.ಕೆ ಅಯೂಬ್, ಸೂರಪ್ಪ ಬಂಗೇರ, ಅಬ್ದುರ್ರಹ್ಮಾನ್, ತಾಜುದ್ದೀನ್, ಸುಮ, ಗೀತಾ ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಸದಾನಂದ ಶೆಟ್ಟಿ ಮಡಪ್ಪಾಡಿ ಸ್ವಾಗತಿಸಿ, ಪಿಡಿಒ ಪೂರ್ಣಿಮಾ ವಂದಿಸಿದರು.