ಲಾಯಿಲ : ಪ್ರಸನ್ನ ಪ.ಪೂ.ಕಾಲೇಜಿನ ಪ್ರಾಂಶುಪಾಲರಾಗಿ ಮಡಂತ್ಯಾರಿನ ಫ್ರೇಂಕ್ ಹಿಲೆರಿ ಡಿ’ಸೋಜಾ ಅವರನ್ನು ಆಡಳಿತ ಮಂಡಳಿ ನೇಮಕಗೊಳಿಸಿದೆ.
ಮಂಗಳೂರಿನ ಕಥೋಲಿಕ್ ಶಿಕ್ಷಣ ಮಂಡಳಿಯ ವಿವಿಧ ಸಂಸ್ಥೆಗಳಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಅಪಾರ ಅನುಭವವನ್ನು ಪಡೆದಿದ್ದಾರೆ. ಸೇಕ್ರೆಡ್ ಹಾರ್ಟ್ ಮಡಂತ್ಯಾರು, ಕ್ರಿಸ್ತಜ್ಯೋತಿ ಅಗ್ರಾರ್ನಲ್ಲಿ 24 ವರ್ಷ ಶಿಕ್ಷಕರಾಗಿ, ಬಳಿಕ ಮಂಗಳೂರಿನ ಪೊಂಪೈ ಪ್ರೌಢ ಶಾಲೆಯಲ್ಲಿ 10 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು.
2008ರಲ್ಲಿ ದ.ಕ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಇವರು ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ಸಮಿತಿ ಸದಸ್ಯರಾಗಿದ್ದರು. ಇವರು ಪೊಂಪೈ ಪ್ರೌಢ ಶಾಲೆಯಲ್ಲಿ ತೃತೀಯ ಭಾಷೆ ತುಳು ಪ್ರಾರಂಭಿಸಿ 2015ರ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯದಲ್ಲೇ ತುಳು ಭಾಷೆಯಲ್ಲಿ ಪರೀಕ್ಷೆ ಬರೆದ ರಾಜ್ಯದ ಏಕೈಕ ಶಾಲೆ ಎಂಬ ಕೀರ್ತಿಗೂ ಪಾತ್ರರಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳುವೆರೆಂಕುಲು ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ತುಳು ಸಂಘಟನೆಗಳ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಮಡಂತ್ಯಾರು ಚರ್ಚ್ನ ಉಪಾಧ್ಯಕ್ಷರಾಗಿ, ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದರು. ಪ್ರಸ್ತುತ ಲಯನ್ಸ್ ಜಿಲ್ಲಾ ಸಂಪುಟ ಸದಸ್ಯರಾಗಿದ್ದಾರೆ.